ಐಎಎಸ್ ಪಾಸು ಆಗುತ್ತಿದ್ದಂತೆ ಈ ಶುಭಂ ಎನ್ನೋ ವ್ಯಕ್ತಿ ಅನ್ಸಾರ್ ಶೇಖ್ ಆಗಿದ್ದು ಯಾಕೆ ಗೊತ್ತಾ..?!

ಡಿಜಿಟಲ್ ಕನ್ನಡ ಟೀಮ್

ಮಹಾರಾಷ್ಟ್ರದ ಆಟೋ ಚಾಲಕನ ಮಗ ಈಗ ಕಲೆಕ್ಟರ್ ಆಗಿದ್ದಾನೆ. ಕಠಿಣ ಹಾದಿ ಕ್ರಮಿಸಿ ಗುರಿ ಮುಟ್ಟಿದ ಅನೇಕ ಯಶೋಗಾಥೆಗಳಲ್ಲಿ ಈತನದು ಹೊಸ ಸೇರ್ಪಡೆ. ಶುಭಂ ಎಂಬ ಹೆಸರಿನಲ್ಲಿ ಪರೀಕ್ಷೆಗೆ ತಯಾರಿ ನಡೆಸಿದ ಈತ ಐಎಎಸ್ ಪಾಸ್ ಆಗುತ್ತಿದ್ದಂತೆ ಅನ್ಸಾರ್ ಶೇಖ್ ಆಗಿದ್ದಾನೆ. ಹಾಗೆಂದು ಈತ ಹಿಂದು ಧರ್ಮ ತೊರೆದು ಮುಸ್ಲಿಂ ಆಗಿ ಮತಾಂತರ ಅಗಿಬಿಟ್ಟನೇ ಎಂದು ಭಾವಿಸಿದರೆ ಅದು ತಪ್ಪು. ಆತನ ಹೆಸರು ಬದಲಾದುದರ ಹಿಂದೆ ಒಂದು ಕತೆಯಿದೆ.

ಮೊನ್ನೆ ಪ್ರಕಟವಾದ ಕೇಂದ್ರ ಲೋಕಸೇವಾ ಆಯೋಗದ (ಯುಪಿಎಸ್ಸಿ) ಫಲಿತಾಂಶದಲ್ಲಿ ಈತ ಗಳಿಸಿದ್ದು 361ನೇ ಸ್ಥಾನ. ಫಲಿತಾಂತ ನೋಡಿದ ತಕ್ಷಣ ತಾಯಿಗೆ ಕರೆ ಮಾಡಿದವನೇ ‘ಅಮ್ಮಿ, ನಾನು ಕಲೆಕ್ಟರ್ ಆಗ್ತಿದ್ದೀನಿ’ ಅಂದ. ತಾಯಿಯ ಸಂತೋಷಕ್ಕೆ ಪಾರವೇ ಇರಲಿಲ್ಲ. ಇದಾದ ನಂತರ ಈತ ಮಾಡಿದ್ದೇನು ಗೊತ್ತೆ. ತನ್ನ ಹೆಸರನ್ನು ಶುಭಂನಿಂದ ಅನ್ಸಾರ್ ಶೇಖ್ ಎಂದು ಬದಲಾವಣೆ ಮಾಡಿಕೊಂಡದ್ದು. ಅದಕ್ಕೆ ಕಾರಣ ಇಲ್ಲಿದೆ ನೋಡಿ..

ಈತನಿಗೆ ಚಿಕ್ಕ ವಯಸ್ಸಿನಿಂದಲೂ ಏನಾದರೂ ಸಾಧನೆ ಮಾಡಬೇಕು, ಎತ್ತರಕ್ಕೆ ಬೆಳೆಯಬೇಕು ಎಂಬ ಅದಮ್ಯ ಬಯಕೆ. ಐಎಎಸ್ ಮಾಡಬೇಕು, ಕಲೆಕ್ಟರ್ ಆಗಬೇಕು ಎಂಬ ಕನಸು ಕಟ್ಟಿಕೊಂಡ. 2013 ರಲ್ಲಿ ಐಎಎಸ್ ತಯಾರಿಗಾಗಿ ಜಲ್ನಾದಿಂದ ಪುಣೆಗೆ ಆಗಮಿಸಿದ. ಸಾಧನೆಯ ಗುರಿಯೇನೋ ದೊಡ್ಡದಿತ್ತು. ಆದರೆ ಅದಕ್ಕೆ ಆತನ ಹೆಸರೇ ದೊಡ್ಡ ಅಡ್ಡಿಯಾಗಿತ್ತು.

ಏಕೆಂದರೆ ಆತ ಮುಸ್ಲಿಂ, ಆತನ ಹೆಸರು ಅನ್ಸಾರ್ ಶೇಖ್ ಎಂದು ಗೊತ್ತಾಗುತ್ತಿದ್ದಂತೆ ಪುಣೆಯಲ್ಲಿ ಉಳಿದುಕೊಳ್ಳಲು ಯಾರೂ ಬಾಡಿಗೆಗೆ ಮನೆಯನ್ನಾಗಲಿ, ಪಿಜಿಯಲ್ಲಾಗಲಿ ಅವಕಾಶ ಕೊಡಲಿಲ್ಲ. ಮುಸ್ಲಿಂ ಎನ್ನುವ ಏಕೈಕ ಕಾರಣಕ್ಕೆ ಎಲ್ಲರೂ ಅತನನ್ನು ಅನುಮಾನದಿಂದ ನೋಡುತ್ತಿದ್ದರು. ಎಲ್ಲಕ್ಕಿಂತ ಮಿಗಿಲಾಗಿ ಬೇರೆ ಊರಿನಿಂದ ಬಂದವನು, ಏನೋ ಎತ್ತೋ ಎಂಬ ಭಯ ಅವರಿಗಿತ್ತು. ಒಂದು ಸಣ್ಣ ನೆಲೆ ಹುಡುಕಿಕೊಳ್ಳುವಲ್ಲಿ ಹೈರಾಣಾಗಿ ಹೋದ ಅನ್ಸಾರ್ ಕೊನೆಗೊಂದು ಉಪಾಯ ಮಾಡಿದ. ತಾನು ಅನ್ಸಾರ್ ಶೇಖ್ ಅಂತ ನಿಜ ಹೆಸರು ಹೇಳಿದರೆ ತಾನೇ ಪ್ರಾಬ್ಲಂ, ಹೀಗಾಗಿ ಹೆಸರನ್ನೇ ಬದಲಿಸಿ ಹೇಳಿದರೆ ಹೇಗೆ ಎಂದು ಯೋಚಿಸಿದ. ಅಷ್ಟೇ ಅಲ್ಲ, ಮುಂದೆ ಮನೆ ಬಾಡಿಗೆಗೆ ಕೇಳುವಾಗ ತನ್ನ ಹೆಸರನ್ನು ಶುಭಂ ಎಂದು ಹೇಳಿಕೊಂಡ. ಬಾಡಿಗೆಗೆ ಮನೆ ಸಿಕ್ಕಿತು. ನಿಟ್ಟುಸಿರು ಬಿಟ್ಟು ಓದು ಮುಂದುವರಿಸಿದ. ನೆರೆಹೊರೆಯವರಿಗೆಲ್ಲ ಶುಭಂ ಹೆಸರಿನಿಂದಲೇ ಪರಿಚಿತನಾದ.

ಹಗಲು-ರಾತ್ರಿ ಕಷ್ಟಪಟ್ಟು ಓದಿದ ಅನ್ಸಾರ್ ತಯಾರಿಗೆ ಪೋಷಕರು ನೆರವಾದರು. ಆತನ ತಂದೆ ಯೂನಸ್ ಶೇಖ್ ಅಹ್ಮದ್ ಇದ್ದೊಂದು ಮನೆ ಮಾರಿ ಮಗನ ವ್ಯಾಸಂಗಕ್ಕೆ ಹೆಗಲು ಕೊಟ್ಟರು. ಮಕ್ಕಳು ಓದಿ ದೊಡ್ಡ ವ್ಯಕ್ತಿ ಆಗಬೇಕು ಎಂದು ಎಲ್ಲ ಪೋಷಕರು ಆಸೆಪಡುವಂತೆ ಇವರೂ ಕನಸು ಕಟ್ಟಿದ್ದರು. ಅನ್ಸಾರ್ ಪೋಷಕರನ್ನು ನಿರಾಸೆ ಮಾಡಲಿಲ್ಲ. ಶ್ರದ್ಧೆ ಮತ್ತು ಸತತ ಪರಿಶ್ರಮದಿಂದ ಗುರಿ ಮುಟ್ಟಿದ್ದಾರೆ. ಪೋಷಕರು ಹಿರಿಹಿರಿ ಹಿಗ್ಗಿದ್ದಾರೆ.

ಹೆಸರಿನ ಕಾರಣಕ್ಕೆ ತನಗೆ ಮನೆ ಕೊಡದೇ ಹೋದ ಜನರ ವರ್ತನೆ ಬಗ್ಗೆ ಪ್ರತಿಕ್ರಿಯಿಸಿರುವ ಅನ್ಸಾರ್, ‘ಜನರ ಈ ವರ್ತನೆ ನನಗೆಂದೂ ಕೋಪ ತರಲಿಲ್ಲ. ನಾನು ಅದನ್ನು ಸವಾಲಾಗಿ ಸ್ವೀಕರಿಸಿದೆ.  ಈ ಸಮಾಜದಲ್ಲಿ ಉನ್ನತ ಸ್ಥಾನ ಗಳಿಸಬೇಕು ಎಂಬ ಹಠವಾಗಿ ಪರಿವರ್ತಿಸಿಕೊಂಡೆ. ಗುರಿ ಮುಟ್ಟಿದೆ’ ಎಂದು ಹೇಳಿದ್ದಾರೆ.

1 COMMENT

Leave a Reply