ಮೂರು ವರ್ಷದ ಕಾಂಗ್ರೆಸ್ ಸರಕಾರ ಸೋತಿದೆ, ಸಿದ್ದರಾಮಯ್ಯ ಅಧಿಕಾರವನ್ನು ಅದೃಷ್ಟಬಲ ಗೆಲ್ಲಿಸಿದೆ!

ಪಿ. ತ್ಯಾಗರಾಜ್

ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆದದ್ದು ಅದೃಷ್ಟದಿಂದ. ಅವರು ಮೂರು ವರ್ಷ ಅಧಿಕಾರ ಪೂರೈಸಿರುವುದು ಅದೇ ಅದೃಷ್ಟದಿಂದ. ಉಳಿದ ಅವಧಿ ಪೂರೈಸಿದರೂ ಮತ್ತದೇ ಅದೃಷ್ಟದಿಂದ!

ಯಾವುದೇ ಸರಕಾರದಂತೆ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಕೂಡ ಒಳಿತು-ಕೆಡಕುಗಳ ಮಿಶ್ರಣವೇ. ಆದರೆ ಒಳಿತು ಮೀರಿದ ಕೆಡಕುಗಳೇ ವಿಜೃಂಭಿಸಿದ ಈ ಸರಕಾರದಲ್ಲಿ ಸಿದ್ದರಾಮಯ್ಯ ಅವರನ್ನು ಗೆಲ್ಲಿಸಿದ್ದು ಅದೃಷ್ಟವೇ ಹೊರತು ಇನ್ನೇನೂ ಅಲ್ಲ. ಸಿದ್ದರಾಮಯ್ಯ ಸರಕಾರ ಮೂರು ವರ್ಷ ಪೂರೈಸಿದ್ದು ಸಾಧನೆ ಅಲ್ಲವೇ ಅಲ್ಲ. ಬದಲಿಗೆ ಸಿದ್ದರಾಮಯ್ಯನವರು ಮೂರು ವರ್ಷ ಅಧಿಕಾರ ಪೂರೈಸಿದ್ದೇ ಸಾಧನೆ.

ರಾಜಕೀಯದ ಪರಮ ಗುರಿಯೇ ಅಧಿಕಾರ ಗಳಿಕೆ. ಒಬ್ಬ ವ್ಯಕ್ತಿ ಅಧಿಕಾರ ಸಿಗುವವರೆಗೆ ಕ್ರಮಿಸಿದ ಹಾದಿ ಹಾಗೂ ಅಧಿಕಾರ ಸಿಕ್ಕ ನಂತರ ವರ್ತಿಸಿದ ರೀತಿ – ಈ ಎರಡಕ್ಕೂ ತಾಳೆಯಾದರೆ ಆತ ಯಶಸ್ವಿ ನಾಯಕ ಎನಿಸುತ್ತಾನೆ. ಆದರೆ ಸಿದ್ದರಾಮಯ್ಯನವರ ವಿಚಾರದಲ್ಲಿ ಆ ಎರಡೂ ಅಂಶಗಳು ವಿರುದ್ಧ ದಿಕ್ಕಿನಲ್ಲಿ ಸಾಗಿದ್ದರಿಂದ ಯಶಸ್ಸು ಎಂಬುದು ಅವರಿಗೆ ಆರೋಪ ಎಂಬಂತಾಗಿದೆ.

ನಿಜ, ಸಿದ್ದರಾಮಯ್ಯನವರ ಸಮಾಜವಾದಿ ಹಿನ್ನೆಲೆ, ನಾಲ್ಕು ದಶಕದ ಅವರ ರಾಜಕೀಯ ಹೋರಾಟ, ಆ ಹೋರಾಟದಲ್ಲಿ ಬಿಂಬಿತವಾದ ಬಡವರು, ದೀನದಲಿತರು, ರೈತರು ಹಾಗೂ ಹಿಂದುಳಿದ ವರ್ಗ ಪರ ಕಾಳಜಿ, ರಾಮಕೃಷ್ಣ ಹೆಗಡೆ, ದೇವೇಗೌಡ, ಜೆ.ಎಚ್. ಪಟೇಲ್ ಅವರಂಥ ಧುರೀಣರ ಗರಡಿಯಲ್ಲಿ ಮಾಡಿದ ಸಾಮು, ಮಂತ್ರಿಯಾಗಿ, ಉಪಮುಖ್ಯಮಂತ್ರಿಯಾಗಿ ಮೂಡಿಸಿದ್ದ ಛಾಪು, ಆರ್ಥಿಕ ಖಾತೆ ನಿಭಾಯಿಸುವಲ್ಲಿ ಮೆರೆದ ನೈಪುಣ್ಯ  – ಇವೆಲ್ಲವೂ ಅವರು ಮುಖ್ಯಮಂತ್ರಿ ಆಗಿ ಅಧಿಕಾರ ಸ್ವೀಕರಿಸಿದ ದಿನ ನಾಡಿನ ಜನಮಾನಸದಲ್ಲಿ ನಿರೀಕ್ಷೆಯ ಸಾಗರವನ್ನೇ ಉಕ್ಕಿಸಿತ್ತು. ಈ ರಾಜ್ಯವನ್ನಾಳಿದ ಸಮರ್ಥ ಮುಖ್ಯಮಂತ್ರಿಗಳನ್ನೆಲ್ಲ ಸಾಧನೆಯಲ್ಲಿ ಹಿಂದಿಕ್ಕುತ್ತಾರೆ, ಸಾಕ್ಷಾತ್ ದೇವರಾಜ ಅರಸು ಅವರೇ ಸಿದ್ದರಾಮಯ್ಯನವರಲ್ಲಿ ಮತ್ತೊಮ್ಮೆ ಅವಿರ್ಭವಿಸುತ್ತಾರೆ ಎಂದೆಲ್ಲ ಕನಸು ಕಟ್ಟಿಸಿತ್ತು. ಅವರ ಹಿಂದಿನ ಸಾಧನೆಗಳೆಲ್ಲವೂ ಅವರ ಬಗ್ಗೆ ಅಮಿತ ನಿರೀಕ್ಷೆಯ ಸಾಧನವಾಗಿದ್ದವು.

ಆದರೆ..?!

ಅವೆಲ್ಲವೂ ಗಾಳಿ ಗೋಪುರವಾಗಿವೆ. ಕಾಗದದ ದೋಣಿಗಳಾಗಿವೆ. ನಿರೀಕ್ಷೆ ಇಟ್ಟುಕೊಂಡದ್ದು, ಕನಸು ಕಟ್ಟಿಕೊಂಡದ್ದು ಪ್ರಜೆಗಳ ತಪ್ಪೇ ಹೊರತು ತಮ್ಮದಲ್ಲ ಎನ್ನುವಷ್ಟರ ಮಟ್ಟಿಗೆ ಸಿದ್ದರಾಮಯ್ಯನವರು ನಿರಾಶೆ ಮೂಡಿಸಿದ್ದಾರೆ. ಮುಖ್ಯಮಂತ್ರಿ ಆಗುವವರೆಗೆ ಅವರು ನಡೆಸಿದ ಹೋರಾಟದ ಕೆಚ್ಚು, ಮುಖ್ಯಮಂತ್ರಿ ಆದ ನಂತರ ಅವರು ಶರಣಾಗಿರುವ ವಿರಾಮ ಸ್ಥಾಯಿಭಾವದಲ್ಲಿ ಕರಗಿ ಆವಿಯಾಗಿ ಹೋಗಿದೆ. ಹಿಂದುಳಿದ ವರ್ಗಗಳ ಬಗ್ಗೆ ಅಪಾರ ತುಡಿತವಿದ್ದ ಅರಸು ಅವರು, ಅದೇ ಕಾಲಕ್ಕೆ ಉಳಿದ ವರ್ಗವದರನ್ನೂ ಜತೆಯಲ್ಲಿ ಕೊಂಡೊಯ್ದಿದ್ದರು. ಆದರೆ ‘ಅಹಿಂದ’ ಪ್ರತಿಪಾದನೆ ಭರದಲ್ಲಿ ಮೇಲ್ವರ್ಗದವರನ್ನು ಮನಸಾರೆ ದ್ವೇಷಿಸಿದ ಸಿದ್ದರಾಮಯ್ಯನವರು ಇದೀಗ ಸ್ವಜನಪಕ್ಷಪಾತಕ್ಕೆ ‘ಅಹಿಂದ’ವನ್ನೂ ಬಲಿಗೊಟ್ಟಿದ್ದಾರೆ.

ಹೌದು, ಇವತ್ತು ಸಿದ್ದರಾಮಯ್ಯನವರ ಸರಕಾರದತ್ತ ಟೀಕಾಸ್ತ್ರ ಪ್ರಯೋಗಿಸುತ್ತಿರುವವನ್ನು ನೋಡಿದರೆ ಸಾಕು ಈ ಸರಕಾರದ ಸಾಧನೆ-ವೇದನೆ ಎಲ್ಲವೂ ವೇದ್ಯವಾಗಿ ಹೋಗುತ್ತದೆ. ಪ್ರತಿಪಕ್ಷಗಳನ್ನು ಮೀರಿಸುವ ಮಟ್ಟದಲ್ಲಿ ಅವರದೇ ಕಾಂಗ್ರೆಸ್ ಪಕ್ಷದ ನಾಯಕರು, ಶಾಸಕರು ಟೀಕೆ ಮಾಡುತ್ತಿದ್ದಾರೆ. ದೂರುಗಳ ಮಳೆಗರೆಯುತ್ತಿದ್ದಾರೆ. ಒಂದೊಮ್ಮೆ ಪ್ರತಿಪಕ್ಷಗಳು ಟೀಕೆ ಮಾಡಿದರೆ, ಪ್ರತಿಪಕ್ಷಗಳ ಕೆಲಸವೇ ಅದು, ಅವೇನು ಸರಕಾರವನ್ನು ಹೊಗಳಲು ಸಾಧ್ಯವೇ ಎಂದು ತಿಪ್ಪೆ ಸಾರಿಸಲಾಗುತ್ತದೆ. ಆದರೆ ಆಡಳಿತ ಪಕ್ಷದವರೇ ರುಬ್ಬುತ್ತಿರುವಾಗ ಈ ಸರಕಾರಕ್ಕೆ ಇನ್ನೆಲ್ಲಿಂದ ಸರ್ಟಿಫಿಕೇಟ್ ತರಬೇಕು? ಇನ್ನೆಲ್ಲಿಂದ ತರಲು ಸಾಧ್ಯ?

ಹಿರಿಯ ಮುಖಂಡರಾದ ಮಲ್ಲಿಕಾರ್ಜುನ ಖರ್ಗೆ, ಜನಾರ್ಧನ ಪೂಜಾರಿ, ಎಸ್.ಎಂ. ಕೃಷ್ಣ, ಜಾಫರ್ ಷರೀಫ್, ವೀರಪ್ಪ ಮೊಯ್ಲಿ, ಆಸ್ಕರ್ ಫರ್ನಾಂಡಿಸ್, ಕೆ.ಎಚ್. ಮುನಿಯಪ್ಪ, ಬಿ.ಕೆ. ಹರಿಪ್ರಸಾದ್ ಸತತವಾಗಿ ಸಿದ್ದರಾಮಯ್ಯ ಮತ್ತವರ ಸರಕಾರದ ಕಾರ್ಯವೈಖರಿಯನ್ನು ಆಗಿಂದ್ದಾಗ್ಗೆ ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ. ಅವರನ್ನು ಜೆಡಿಎಸ್ ನಿಂದ ಕಾಂಗ್ರೆಸ್ ಗೆ ಕರೆತಂದ ಎಚ್. ವಿಶ್ವನಾಥ್, ಎಚ್.ಎಂ. ರೇವಣ್ಣ ಅವರಂಥವರಿಗೂ ಸಿದ್ದರಾಮಯ್ಯನವರ ಬಗ್ಗೆ ವಿಶ್ವಾಸವಾಗಲಿ, ಭರವಸೆಯಾಗಲಿ ಉಳಿದಿಲ್ಲ. ಇನ್ನು ಅವರ ಸಂಪುಟದಲ್ಲೇ ಇರುವ ಶ್ರೀನಿವಾಸ ಪ್ರಸಾದ್, ಡಾ. ಜಿ. ಪರಮೇಶ್ವರ, ಸತೀಶ್ ಜಾರಕಿಹೊಳಿ, ರಾಮಲಿಂಗಾರೆಡ್ಡಿ, ದಿನೇಶ್ ಗುಂಡೂರಾವ್ ಅವಕಾಶವಾದಾಗಲೆಲ್ಲ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇನ್ನು ಸಿದ್ದರಾಮಯ್ಯನವರ ಸಂಪುಟದ ಸಾಮರ್ಥ್ಯದ ಬಗ್ಗೆ ಅವರ ಶಾಸಕರನ್ನೇ ಕೇಳಬೇಕು. ಎಸ್.ಟಿ. ಸೋಮಶೇಖರ್ ನೇತೃತ್ವದ ಸಮಾನ ಮನಸ್ಕ ಶಾಸಕರ ವೇದಿಕೆ ಈ ಸಂಪುಟದಲ್ಲಿ 25ಕ್ಕೂ ಹೆಚ್ಚು ಅಸಮರ್ಥ, ನಿಸ್ಪ್ರಯೋಜಕ ಮಂತ್ರಿಗಳಿದ್ದಾರೆ. ಅವರನ್ನೆಲ್ಲ ಬದಲಿಸಿ ಹೊಸಬರಿಗೆ ಅವಕಾಶ ನೀಡಬೇಕು ಎಂದು ಒತ್ತಾಯಿಸಿದೆ. ಈ ಆರೋಪ ಮಾಡಿರುವುದು ಪ್ರತಿಪಕ್ಷಗಳಲ್ಲ ಅಥವಾ ಮಾಧ್ಯಮದವರಲ್ಲ. ಬದಲಿಗೆ ಅವರದೇ ಪಕ್ಷದ ಶಾಸಕರು. ಬಹುಶಃ ಸಿದ್ದರಾಮಯ್ಯನವರ ಸರಕಾರಕ್ಕೆ ಇದಕ್ಕಿಂತ ಉತ್ತಮ ವಿಶ್ಲೇಷಣೆ ಬೇಕಿಲ್ಲವೇನೋ. ಇಂಥ ಅಸಮರ್ಥ ಮಂತ್ರಿಗಳನ್ನು ಇಟ್ಟುಕೊಂಡು ಸಿದ್ದರಾಮಯ್ಯನವರು ಈ ನಾಡಿಗೆ ಎಂಥ ಆಡಳಿತ ನೀಡಲು ಸಾಧ್ಯ? ನಿಸ್ಪ್ರಯೋಜಕ ಮಂತ್ರಿಗಳ ಕೂಟದ ನಾಯಕರಾಗಿರುವ ಅವರಿಂದ ತಾನೇ ಬೇರೇನು ನಿರೀಕ್ಷಿಸಲು ಸಾಧ್ಯ?

ಹೋಗಲಿ ಹೈಕಮಾಂಡ್ ಗಾದರೂ ಸಿದ್ದರಾಮಯ್ಯನವರ ಸರಕಾರದ ಕಾರ್ಯವೈಖರಿ ಬಗ್ಗೆ ತೃಪ್ತಿ ಇದೆಯೇ? ರಾಜ್ಯದ ನಾಯಕರು ಮೂಲನಿವಾಸಿಗಳು, ವಲಸೆ ಬಂದವರು ಅಂಥ ತಾರತಮ್ಯ ಎಣಿಸುತ್ತಿರಬಹುದು, ನಿನ್ನೆ-ಮೊನ್ನೆ ಪಕ್ಷಕ್ಕೆ ಬಂದ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿರುವುದಕ್ಕೆ ಅವರಿಗೆಲ್ಲ ಸಂಕಟ ಇರಬಹುದು, ಹೀಗಾಗಿ ದ್ವೇಷಾಸೂಯೆಯಿಂದ ಕಿಡಿ ಕಾರುತ್ತಿರಬಹುದು ಎಂದಿಟ್ಟುಕೊಳ್ಳೋಣ. ಆದರೆ ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಮಾಡಿದ ಸೋನಿಯಾ ಗಾಂಧಿ ಅವರಿಗಾಗಲಿ, ಹೈಕಮಾಂಡ್ ನ ಬೇರೆ ಪ್ರತಿನಿಧಿಗಳಿಗಾಗಲಿ ಈ ರೀತಿಯ ಯಾವುದೇ ರಾಗ-ದ್ವೇಷ ಅಥವಾ ಅಧಿಕಾರ ಪೈಪೋಟಿ ಇಲ್ಲವಲ್ಲ. ಅವರಾದರೂ ಒಪ್ಪಿಕೊಂಡಿದ್ದಾರೆಯೇ? ಉಹುಂ ಇಲ್ಲ. ಸಿದ್ದರಾಮಯ್ಯನವರಿಗೆ ಹ್ಯೂಬ್ಲೋಟ್ ವಾಚ್ ಉಡುಗೊರೆ ಪ್ರಕರಣ ಬೆಳಕಿಗೆ ಬಂದಾಗ ವರಿಷ್ಠರು ಸಂಸತ್ತಿನಲ್ಲಿ ಭಾರೀ ಮುಜುಗರ ಅನುಭವಿಸಿದರು. ಸಿಎಂ ಪುತ್ರ ಪಾಲುದಾರ ಸಂಸ್ಥೆಗೆ ಡಯೋಗ್ನಾಸ್ಟಿಕ್ ಕೇಂದ್ರ ಸ್ಥಾಪನೆ ಟೆಂಡರ್ ನೀಡಿಕೆ ಹಗರಣ ಸ್ವರೂಪ ಪಡೆದಾಗ ಸ್ವತಃ ವರಿಷ್ಠರೇ ಸೂಚನೆ ಕೊಟ್ಟು ಸಿಎಂ ಪುತ್ರ ನಿರ್ದೇಶಕ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಮಾಡಿದರು. ಅಲ್ಲದೇ ಸಂಪುಟ ಪುನಾರಚನೆ ಸಂಬಂಧ ಚರ್ಚೆ ನೆಪದಲ್ಲಿ ಎರಡು ಬಾರಿ ತಮ್ಮನ್ನು ಭೇಟಿ ಮಾಡಲು ಯತ್ನಿಸಿದ ಸಿದ್ದರಾಮಯ್ಯನವರಿಗೆ ಸೋನಿಯಾ ಗಾಂಧಿ ಅವರು ಅವಕಾಶ ಮಾಡಿಕೊಟ್ಟಿಲ್ಲ. ಮೇಲಾಗಿ ಕರ್ನಾಟಕವನ್ನು ಕಾಡುತ್ತಿರುವ ಬರದ ಬಗ್ಗೆ ತಲೆ ಕೆಡಿಸಿಕೊಳ್ಳಿ, ಸಂಪುಟ ವಿಚಾರ ಅಮೇಲೆ ನೋಡೋಣ ಎಂದು ವಾಪಸ್ಸು ಕಳುಹಿಸಿದ್ದಾರೆ. ಸಿದ್ದರಾಮಯ್ಯನವರ ಬಗ್ಗೆ ಹೈಕಮಾಂಡ್ ಗಿರುವ ಪ್ರೀತಿ ಮತ್ತು ಗೌರವ ಎಂಥಹುದು ಎಂಬುದಕ್ಕೆ ಇದೊಂದು ನಿದರ್ಶನ. ಅವರದೇ ಪಕ್ಷದಲ್ಲಿ, ಇಲ್ಲಿಂದ ದಿಲ್ಲಿಯವರೆಗೂ ಸಿದ್ದರಾಮಯ್ಯನವರ ಬಗ್ಗೆ ಈ ರೀತಿಯ ಧೋರಣೆ, ಅಭಿಪ್ರಾಯ ಇರುವಾಗ ಬೇರೆಯವರು ಇನ್ನೇನು ಹೇಳಲು ಸಾಧ್ಯ?!

ಅದೆಲ್ಲ ಹಾಳಾಗಿ ಹೋಗಲಿ, ರಾಜ್ಯದ ಅಭಿವೃದ್ಧಿ ಮತ್ತು ಸಂಕಷ್ಟ ನಿರ್ವಹಣೆ ವಿಚಾರದಲ್ಲಾದರೂ ಸರಕಾರ ಯಶಸ್ಸು ಕಂಡಿದೆಯೇ? ಇಲ್ಲ. ಮುಖ್ಯಮಂತ್ರಿಯಾಗಿ ಏಕಾಂಗಿ ಪ್ರಮಾಣ ಸ್ವೀಕರಿಸಿದ ಸಂದರ್ಭ ಬಡವರಿಗೆ ತಿಂಗಳಿಗೆ 30 ಕೆ.ಜಿ. ಉಚಿತ ಅಕ್ಕಿ ಒದಗಿಸುವ ‘ಅನ್ನಭಾಗ್ಯ’ ಯೋಜನೆ ಪ್ರಕಟಿಸಿದ ಸಿದ್ದರಾಮಯ್ಯನವರ ಆ ಕ್ಷಣದ ನಿಲುವಿನಲ್ಲಿ ಇದ್ದದ್ದು ಭಾವೋದ್ವೇಗವೇ ಹೊರತು ಆರ್ಥಿಕ ಸಾಧಕ-ಬಾಧಕಗಳ ವಿವೇಕವಾಗಲಿ, ವಿಚಾರವಾಗಲಿ ಅಲ್ಲ. ತತ್ಪರಿಣಾಮವಾಗಿ ಯೋಜನೆ ಹಳ್ಳ ಹಿಡಿದಿದ್ದು, ದವಸ ವಿತರಣೆ 30 ರಿಂದ 3 ಕೆಜಿಗೆ ಕುಸಿದು ನಿಂತಿದೆ. ಅಷ್ಟೆಲ್ಲ ಬಜೆಟ್ ಮಂಡಿಸಿದ್ದ ಸಿದ್ದರಾಮಯ್ಯನವರಿಂದ ರಾಜ್ಯದ ಜನ ಇಂಥದೊಂದು ಬಳುವಳಿ ನಿರೀಕ್ಷಿಸಿರಲಿಲ್ಲ. ಇದೇ ರೀತಿ ಅನೇಕ ‘ಜನಪ್ರಿಯ ಭಾಗ್ಯ’ಗಳು ‘ಆರ್ಥಿಕ ಅಪ್ರಿಯ’ ಎನಿಸಿದವು. ಇನ್ನು ಭ್ರಷ್ಟಾಚಾರ ನಿಯಂತ್ರಣ ವ್ಯವಸ್ಥೆಯ ಪರಮೋಚ್ಚ ಸಂಸ್ಥೆ ಲೋಕಾಯುಕ್ತ ನಿರ್ಜೀವಗೊಳಿಸಲು ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ರಚಿಸಿದ್ದು, ಕೊನೆಗೆ ಲೋಕಾಯುಕ್ತ ಹಾಗೂ ಎಸಿಬಿ ಎರಡನ್ನೂ ನಿಷ್ಕ್ರಿಯ ಮಾಡಿಟ್ಟಿರುವುದು ಸರಕಾರದ ಸಾಧನೆಯ ಗರಿ. ಬರ, ವಿದ್ಯುತ್ ಸಮಸ್ಯೆ, ಕುಡಿಯುವ ನೀರು, ಜಾನುವಾರು ಮೇವು, ಸಮರ್ಪಕ ಭಿತ್ತನೆ ಬೀಜ, ರಸಗೊಬ್ಬರ, ಬೆಳೆಗೆ ಸೂಕ್ತ ಬೆಲೆ ಕೊರತೆ 1500 ಕ್ಕೂ ಹೆಚ್ಚು ರೈತರ ಆತ್ಮಹತ್ಯೆ ಪ್ರಕರಣಗಳಲ್ಲಿ ಅನುರಣಿಸುತ್ತಿದೆ.

ಮೊದಲೇ ಹೇಳಿದಂತೆ ಅದೃಷ್ಟ ಎಂಬುದು ಸಿದ್ದರಾಮಯ್ಯನವರ ಅಡಿಯಾಳಾಗಿದೆ. ಲೋಕಸಭೆಯಲ್ಲಿ ಅಧಿಕೃತ ಪ್ರತಿಪಕ್ಷ ಸ್ಥಾನಮಾನಕ್ಕೂ ಸಂಖ್ಯಾಬಲ ಇಲ್ಲದಂತೆ ನೆಲಕಚ್ಚಿದ ಕಾಂಗ್ರೆಸ್ ಹೀನಾಯಸ್ಥಿತಿ ಕರ್ನಾಟಕದಲ್ಲಿ ಸಿದ್ದರಾಮಯ್ಯನವರ ಸರ್ವಾಧಿಕಾರಿ ಧೋರಣೆಗೆ ಊರುಗೋಲಾಯಿತು. ಮಿಗಿಲಾಗಿ ಮುಖ್ಯಮಂತ್ರಿ ಸ್ಥಾನಕ್ಕೆ ಗಟ್ಟಿ ಸ್ಪರ್ಧಿಯಾಗಿದ್ದ ಮಲ್ಲಿಕಾರ್ಜುನ ಖರ್ಗೆ ಅವರ ಹೆಗಲಿಗೆ ಲೋಕಸಭೆ ಕಾಂಗ್ರೆಸ್ ನಾಯಕನ ಜವಾಬ್ದಾರಿ ಬಿದ್ದಿದ್ದರಿಂದ ಇಲ್ಲಿ ಸಿದ್ದರಾಮಯ್ಯ ಇನ್ನಷ್ಟು ನಿರಾಳರಾದರು. ಸಿಎಂ ಗಾದಿಗೆ ಪರಮೇಶ್ವರ್ ಹಾರಾಟ ಮಂತ್ರಿ ಸ್ಥಾನ ಸಿಕ್ಕರೆ ಸಾಕೆಂಬಲ್ಲಿಗೆ ಮಾರಾಟವಾಯಿತು. ಆಗಾಗ್ಗೆ ಕೇಳಿ, ಮಾಯವಾಗುತ್ತಿದ್ದ ದಲಿತ ಸಿಎಂ ಕೂಗು ಜಾತಿ ಜನಗಣತಿ ವರದಿ ಸೋರಿಕೆ ಹಿನ್ನೆಲೆಯಲ್ಲಿ ಮುನ್ನಲೆಗೆ ಬಂದಿತ್ತಾದರೂ, ಆಗಸ್ತಾ ವೆಸ್ಟ್ ಲ್ಯಾಂಡ್ ಹೆಲಿಕಾಪ್ಟರ್ ಹಗರಣದಲ್ಲಿ ಸೋನಿಯಾ ಗಾಂಧಿ ಮತ್ತಿತರ ವರಿಷ್ಠರು ತೇಲುಗಣ್ಣು-ಮಾಲುಗಣ್ಣು ಬಿಡುತ್ತಿರುವುದರಲ್ಲಿ ಕರಗಿ ಹೋಯಿತು. ಹೀಗೆ ಸಿದ್ದರಾಮಯ್ಯನವರು ಸಮಸ್ಯೆಗೆ ಸಿಕ್ಕಾಗಲೆಲ್ಲ ಅವರದೇ ಪಕ್ಷದ ದೊಡ್ಡ ಮಟ್ಟದ ಸಂಕಷ್ಟಗಳು ಅವರ ರಕ್ಷಣೆಗೆ ಬಂದಿವೆ. ಇಡೀ ದೇಶದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿರುವ ದೊಡ್ಡ ರಾಜ್ಯ ಕರ್ನಾಟಕ. ರಾಷ್ಟ್ರ ಮಟ್ಟದಲ್ಲಿ ಪಕ್ಷ ಸಾಕುವ ಜವಾಬ್ದಾರಿಯೂ ಇದರ ಮೇಲಿದೆ. ಜನಕ್ಕಲ್ಲದಿದ್ದರೂ ಪಕ್ಷದ ಒಳಿತಿಗಾಗಿ ಒಂದು ವ್ಯವಸ್ಥೆ ಸರಾಗವಾಗಿ ಸಾಗುತ್ತಿರುವಾಗ ನೀರು ಬಗ್ಗಡ ಮಾಡಿಕೊಳ್ಳುವುದು ಬೇಡ ಎಂಬ ನಿಲುವು ವರಿಷ್ಠರಿಗಿದ್ದಂತಿದೆ. ಎಲ್ಲಕ್ಕಿಂತ ಮಿಗಿಲಾಗಿ ಸಿಎಂ ಆಗಬೇಕೆಂಬ ವಾಂಛೆ ತೀರಿಸಿಕೊಂಡಿರುವ ಸಿದ್ದರಾಮಯ್ಯನವರೂ ಮುಂದಾವುದೇ ನಿರ್ದಿಷ್ಟ ರಾಜಕೀಯ ಮಹತ್ವಾಕಾಂಕ್ಷೆ ಇಟ್ಟುಕೊಳ್ಳದೇ ಎಲ್ಲಕ್ಕೂ ಸಜ್ಜಾಗಿ ನಿಂತಿದ್ದಾರೆ. ಮೂರು ವರ್ಷದ ಅವರ ಸರಕಾರಕ್ಕೆ ಶಹಬ್ಬಾಸ್ ಗಿರಿ ಇಲ್ಲದಿದ್ದರೂ, ಅಧಿಕಾರದ ಅದೃಷ್ಟಕ್ಕೆ ಅವರ ಭಂಡತನವೂ ಬಹುಪರಾಕ್ ಹೇಳುತ್ತಿದೆ.

1 COMMENT

Leave a Reply