ಸಾಧ್ವಿ ಪ್ರಗ್ಯಾ ಸಿಂಗ್ ಬಿಡುಗಡೆಯ ಹಾದಿ ಅಂತೂ ಸುಗಮ

ಡಿಜಿಟಲ್ ಕನ್ನಡ ಟೀಮ್

‘ಹಿಂದು ಭಯೋತ್ಪಾದನೆ’ ಎಂಬ ಚರ್ಚೆಗೆ ನಾಂದಿ ಹಾಡಿದ್ದ ಪ್ರಕರಣವಾಗಿತ್ತು ಸಾಧ್ವಿ ಪ್ರಗ್ಯಾ ಸಿಂಗ್ ಬಂಧನ. 2008ರ ಮಾಲೆಗಾಂವ್ ಸ್ಫೋಟ ಪ್ರಕರಣದ ಪ್ರಮುಖ ಆರೋಪಿಯಾಗಿದ್ದ ಸಾಧ್ವಿ ಪ್ರಗ್ಯಾ ಸಿಂಗ್ ಇದೀಗ ಬಿಡುಗಡೆ ಹೊಂದಬಹುದಾದ ಅವಕಾಶ ಕೂಡಿಬಂದಿದೆ. ಇಷ್ಟು ವರ್ಷಗಳ ಕಾಲ ಜೈಲಿನಲ್ಲಿದ್ದ ಸಾಧ್ವಿ, ಜಾಮೀನು ಕೋರುವುದಕ್ಕೆ ಅವಕಾಶವಾಗುವಂತೆ ಶುಕ್ರವಾರ ರಾಷ್ಟ್ರೀಯ ತನಿಖಾದಳವು ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದೆ. ಈ ದೋಷಾರೋಪಣೆ ಪಟ್ಟಿಯಲ್ಲಿ ಸಾಧ್ವಿ ಮೇಲೆ ಹೇರಿದ್ದ ಉಗ್ರ ಕಾನೂನು ‘ಮೋಕಾ’ವನ್ನು ತೆರವುಗೊಳಿಸಲಾಗಿದೆ. ಅಲ್ಲದೇ, ಸಾಧ್ವಿ ಸ್ಫೋಟದ ಸಂಚಿನಲ್ಲಿ ಭಾಗಿಯಾಗಿರುವುದಕ್ಕೆ ಅಗತ್ಯ ಸಾಕ್ಷ್ಯಗಳಿಲ್ಲ ಅಂತಲೂ ಹೇಳಿದೆ.

ಈ ಮೊದಲು ತನಿಖೆ ನಡೆಸಿದ್ದ ಮಹಾರಾಷ್ಟ್ರ ಭ್ರಷ್ಟ ನಿಗ್ರಹದಳವು ಸಾಧ್ವಿ ಪ್ರಜ್ಞಾ ಸಿಂಗ್, ಲೆಫ್ಟಿನೆಂಟ್ ಕರ್ನಲ್ ಪುರೋಹಿತ್ ಸೇರಿದಂತೆ ಹಲವರನ್ನು ಆರೋಪಿಗಳನ್ನಾಗಿಸಿತ್ತು. ಸಾಧ್ವಿ ವಿರುದ್ಧ ಆರೋಪ ಬರುವುದಕ್ಕೆ ಪ್ರಮುಖ ಕಾರಣ ಸ್ಫೋಟಕ್ಕೆ ಬಳಕೆಯಾದ ಬೈಕು ಸಾಧ್ವಿ ಪ್ರಗ್ಯಾ ಸಿಂಗ್ ಅವರದ್ದಾಗಿತ್ತು. ಆದರೆ ಈಗಿನ ತನಿಖೆಯಲ್ಲಿ ಪ್ರತಿಪಾದಿಸಲಾಗಿರುವ ಅಂಶ ಎಂದರೆ ಈ ಬೈಕು 2 ವರ್ಷಗಳಿಂದ ಸಾಧ್ವಿ ಬಳಿಯಲ್ಲಿರಲಿಲ್ಲ. ಇದೇ ಪ್ರಕರಣದಲ್ಲಿ ಆರೋಪಿಯಾಗಿ ತಲೆಮರೆಸಿಕೊಂಡಿರುವ ರಾಮಚಂದ್ರ ಎಂಬಾತನ ಬಳಿಯಲ್ಲೇ ಈ ಬೈಕು ಇತ್ತು ಅನ್ನೋದು ತನಿಖೆಯಿಂದ ತಿಳಿದುಬಂದಿದೆ. ಇದೇ ಆಧಾರದಲ್ಲಿ ಸಾಧ್ವಿ ವಿರುದ್ಧದ ಮೋಕಾ ಕೈಬಿಡಲಾಗಿದೆ. ಹೀಗಾಗಿ ಜಾಮೀನು ಅರ್ಜಿ ಸಲ್ಲಿಸುವುದು ಸುಸೂತ್ರವಾಗಲಿದೆ.

2008ರ ಮಾಲೆಗಾಂವ್ ಸ್ಫೋಟ 7 ಜನರನ್ನು ಬಲಿ ತೆಗೆದುಕೊಂಡಿತ್ತು. ವಿಚಾರಣಾಧೀನವಾಗಿರುವಾಗ ಜೈಲಿನಲ್ಲಿ ಅಮಾನವೀಯವಾಗಿ ನಡೆಸಿಕೊಳ್ಳಲಾಗಿದೆ ಎಂದೆಲ್ಲ ಸಾಧ್ವಿ ದೂರಿದ್ದರು. ಅವರ ಆರೋಗ್ಯವೂ ಕ್ಷೀಣಿಸಿರುವುದಾಗಿ ವರದಿಗಳಿವೆ. ಹಿಂದು ಭಯೋತ್ಪಾದನೆ ಇದೆ ಎಂಬುದಕ್ಕೆ ಪುರಾವೆಯಾಗಿ ಬಳಸಿಕೊಳ್ಳುತ್ತಿದ್ದ ಈ ಪ್ರಕರಣ ಯಾವೆಲ್ಲ ತಿರುವು ಪಡೆಯಲಿದೆ ಎಂಬುದರ ಬಗ್ಗೆ ಎಲ್ಲರಿಗೂ ಕುತೂಹಲವಿದೆ.

Leave a Reply