ಸಿದ್ದರಾಮಯ್ಯ ಜತೆ ರಾಜ್ಯಪಾಲರ ‘ಕುಸ್ತಿ’ ಮುಂದುವರಿಕೆ, ಪರಿಶಿಷ್ಟರಿಗೆ ಗುತ್ತಿಗೆ ಮೀಸಲು ಸುಗ್ರೀವಾಜ್ಞೆಯೂ ವಾಪಸ್!

ಡಿಜಿಟಲ್ ಕನ್ನಡ ಟೀಮ್

ರಾಜ್ಯಪಾಲ ವಜುಭಾಯಿ ರೂಢಬಾಯಿ ವಾಲಾ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಸರಕಾರದ ನಡುವಣ ಹಗ್ಗಜಗ್ಗಾಟ ಮುಂದವರಿದಿದ್ದು, ಪರಿಶಿಷ್ಟ ಸಮುದಾಯದ ಗುತ್ತಿಗೆದಾರರಿಗೆ ಮೀಸಲು ಕಲ್ಪಿಸುವ ಸುಗ್ರೀವಾಜ್ಞೆ ಪ್ರಸ್ತಾವನೆಯನ್ನು ರಾಜ್ಯಪಾಲರು ವಾಪಸ್ ಕಳುಹಿಸಿದ್ದಾರೆ. ಇದರಿಂದ ಸರಕಾರಕ್ಕೆ ಮಗದೊಮ್ಮೆ ಮುಖಭಂಗವಾಗಿದೆ.

ರಾಜ್ಯ ಸರ್ಕಾರದ ಎಲ್ಲ ಇಲಾಖೆಗಳಲ್ಲಿ 50 ಲಕ್ಷ ರುಪಾಯಿವರೆಗಿನ ಕಾಮಗಾರಿಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದ ಗುತ್ತಿಗೆದಾರರಿಗೆ ಜನಸಂಖ್ಯೆಗೆ ಅನುಗುಣವಾಗಿ ಶೇ. 24.1 ರಷ್ಟು ಮೀಸಲು ಕಲ್ಪಿಸುವ ಸಂಬಂಧ ಸುಗ್ರೀವಾಜ್ಞೆ ಹೊರಡಿಸಲೆಂದು ರಾಜ್ಯಪಾಲರಿಗೆ ಪ್ರಸ್ತಾವನೆ ಸಲ್ಲಿಸಲು ಸಂಪುಟ ಸಭೆಯಲ್ಲಿ ಕಳೆದ  ಏ.24 ರಂದು ನಿರ್ಣಯ ಕೈಗೊಳ್ಳಲಾಗಿತ್ತು. ರಾಜ್ಯ ಸರಕಾರದ ನಿರ್ಣಯದಿಂದ ಸುಮಾರು 20 ಸಾವಿರ ಗುತ್ತಿಗೆದಾರರ ಕುಟುಂಬಗಳು ನೇರ ಹಾಗೂ ಒಂದು ಲಕ್ಷ ಕುಟುಂಬಗಳು ಪರೋಕ್ಷ ಲಾಭ ಪಡೆಯಬಹುದಾಗಿದೆ.

ಆದರೆ ಪ್ರಸ್ತಾವನೆಗೆ ಸಹಿ ಹಾಕಲು ನಿರಾಕರಿಸಿರುವ ರಾಜ್ಯಪಾಲರು, ವಿಧಾನ ಮಂಡಲದ ಉಭಯ ಸದನಗಳಲ್ಲಿ ಈ ಬಗ್ಗೆ ಆಮೂಲಾಗ್ರ ಚರ್ಚೆ ಮಾಡಿ, ಸಾಧಕ-ಬಾಧಕಗಳ ಬಗ್ಗೆ ಪರಾಮರ್ಶಿಸಿ ವಿಧೇಯಕ ಅಂಗೀಕರಿಸಬೇಕು ಎಂದು ಸಲಹೆ ನೀಡಿದ್ದಾರೆ. ಅಲ್ಲದೇ ಇದನ್ನು ತರಾತುರಿಯಲ್ಲಿ ಜಾರಿಗೆ ತರುವ ಅನಿವಾರ್ಯತೆ ಇಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ ಎಂದು ಗೊತ್ತಾಗಿದೆ.

ವಿಧಾನಮಂಡಲ ಅಧಿವೇಶನ ಸಮೀಪದಲ್ಲಿ ಇರದ ಸನ್ನಿವೇಶದಲ್ಲಿ ತುರ್ತು ನೀತಿ-ನಿರೂಪಕ, ಕಾನೂನು ಜಾರಿ ಅಗತ್ಯ ಎನಿಸಿದಾಗ ರಾಜ್ಯ ಸರ್ಕಾರ ಸಂವಿಧಾನದ 213 ನೇ ಪರಿಚ್ಛೇದದ ಪ್ರಕಾರ ಸುಗ್ರೀವಾಜ್ಞೆ ಹೊರಡಿಸಬಹುದಾಗಿದೆ. ಆದರೆ ಇದಕ್ಕೆ ರಾಜ್ಯಪಾಲರು ಅಂಕಿತ ಹಾಕುವುದು ಅಗತ್ಯ. ಮೇ 11 ರಂದು ರಾಜ್ಯಪಾಲರು ಸುಗ್ರೀವಾಜ್ಞೆ ಪ್ರಸ್ತಾವನೆಯನ್ನು ರಾಜ್ಯ ಹಣಕಾಸು ಇಲಾಖೆಗೆ ವಾಪಸ್ ಕಳುಹಿಸಿದ್ದಾರೆ. ಈಗ ಪ್ರಸ್ತಾವನೆಯನ್ನು ಪರಿಷ್ಕರಿಸಿ ಮತ್ತೊಮ್ಮೆ ರಾಜಭವನಕ್ಕೆ ಕಳಹಿಸಬೇಕೋ ಬೇಡವೊ ಎಂಬ ಜಿಜ್ಞಾಸೆಯಲ್ಲಿ ಸರ್ಕಾರ ಸಿಲುಕಿದೆ.

ರಾಜ್ಯಪಾಲ ವಿ.ಆರ್.ವಾಲಾ ಅವರು ರಾಜ್ಯ ಸರಕಾರಕ್ಕೆ ಈ ರೀತಿ ಮುಜುಗರ ಮಾಡಿರುವುದು ಇದೇ ಮೊದಲಲ್ಲ. ಹಿಂದೆ ಕರ್ನಾಟಕ ಲೋಕಸೇವಾ ಆಯೋಗಕ್ಕೆ (ಕೆಪಿಎಸ್ಸಿ) ಕಾಂಗ್ರೆಸ್ ಮುಖಂಡ ವಿ.ಆರ್.ಸುದರ್ಶನ್ ಮತ್ತಿತರ ಮೂವರ ನೇಮಕ, ಅಕ್ರಮ-ಸಕ್ರಮ ಯೋಜನೆಯ 94 ಸಿ ಅನುಬಂಧಕ್ಕೆ ತಿದ್ದುಪಡಿ ತರುವ ಸುಗ್ರೀವಾಜ್ಞೆ ಪ್ರಸ್ತಾವನೆಯನ್ನು ಹಿಂದಕ್ಕೆ ಕಳುಹಿಸಿದ್ದರು. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯನ್ನು (ಬಿಬಿಎಂಪಿ) ತ್ರಿಭಜಿಸುವ ಸಿದ್ದರಾಮಯ್ಯನವರ ಹಪಾಹಪಿಗೂ ಸಹಮತ ವ್ಯಕ್ತಪಡಿಸಿರಲಿಲ್ಲ. ವಿಧಾನಮಂಡಲದಲ್ಲಿ ಅಂಗೀತವಾದ ವಿಧೇಯಕವನ್ನು ರಾಷ್ಟ್ರಪತಿಯವರಿಗೆ ರವಾನಿಸಿ ಕೈ ತೊಳೆದುಕೊಂಡರು. ಅದೇ ರೀತಿ ಉಪಲೋಕಾಯುಕ್ತ ಮಜ್ಜಗೆ ನಿವೃತ್ತಿಯಿಂತ ತೆರವಾದ ಸ್ಥಾನಕ್ಕೆ ನ್ಯಾಯಮೂರ್ತಿ ಮಂಜುನಾಥ್ ಹಾಗೂ ಲೋಕಾಯುಕ್ತ ಸ್ಥಾನಕ್ಕೆ ಎಸ್.ಆರ್. ನಾಯಕ್ ಅವರ ನೇಮಕ ಸಂಬಂಧ ಸರಕಾರ ಮೂರು ಬಾರಿ ಕಳುಹಿಸಿದ ಪ್ರಸ್ತಾವನೆಯನ್ನು ಅಂಕಿತ ಹಾಕದೇ ಹಿಂದಕ್ಕೆ ಕಳುಹಿಸಿದ್ದಾರೆ. ಆ ಸಂಘರ್ಷ ಪರಂಪರೆ ಇದೀಗ ಪರಿಶಿಷ್ಟ ಸಮುದಾಯದ ಗುತ್ತಿಗೆದಾರರಿಗೆ ಮೀಸಲು ವಿಚಾರದಲ್ಲೂ ಮುಂದುವರಿದಿದೆ.

Leave a Reply