ಸ್ಟಾರ್ ಡಂನ ಎಗ್ಗುಸಿಗ್ಗಿಲ್ಲದೆ ಅರಳಿರುವ ‘ತಿಥಿ’ ಕುರಿತ ಚರ್ಚೆಗೆ ಇನ್ನೂ ಕೆಲವು ನೆಲೆಗಳಿದ್ದರೆ ಒಳಿತು

sridharamurthyಎನ್.ಎಸ್.ಶ್ರೀಧರ ಮೂರ್ತಿ

ಸ್ವಿಟ್ಜರ್‍ ಲ್ಯಾಂಡಿನ ಪ್ರತಿಷ್ಠಿತ ‘ಲೋಕಾರ್ನೋ’ ಚಿತ್ರೋತ್ಸವದಲ್ಲಿ ಎರಡು ಗೌರವಗಳನ್ನು ಪಡೆದ ‘ತಿಥಿ’ಚಿತ್ರ ಹಲವು ನೆಲೆಯಲ್ಲಿ ನನ್ನಲ್ಲಿ ಕುತೂಹಲ ಹುಟ್ಟಿಸಿತ್ತು, ಮೊದಲನೆಯದು ಈ ಚಿತ್ರೋತ್ಸವದಲ್ಲೇ ನಲವತ್ತು ವರ್ಷದ ಹಿಂದೆ ಗೌರವ ಪಡೆದಿದ್ದ ‘ಸಂಸ್ಕಾರ’ ಮುಂದೆ ಕನ್ನಡ ಚಿತ್ರರಂಗದ ಮೈಲುಗಲ್ಲು ಅನ್ನಿಸಿಕೊಂಡಿತು. ಅಷ್ಟೇ ಅಲ್ಲ ಟ್ರೆಂಡ್ ಸೆಟರ್ ಕೂಡ ಆಯಿತು. ಎರಡನೆಯದು ಭಾರತೀಯ ನಂಬಿಕೆ ಜಗತ್ತನ್ನು ಪ್ರತಿಗಾಮಿ ಎಂದು ನೋಡುವ ಚಿತ್ರಗಳು ಜಾಗತಿಕವಾಗಿ ಮನ್ನಣೆಯನ್ನು ಪಡೆಯುವುದು ಎಂದಿನಿಂದಲೂ ನಡೆದ ಬಂದ ಪದ್ದತಿ. ಭಾರತೀಯರು ಎಂದರೆ ಹೀಗೆ ಎಂದು ಸಾಮಾಜಿಕ ತೀರ್ಮಾನಗಳಿಗೆ ಬರಲು ಕೂಡ ಇಂತಹ ಚಿತ್ರಗಳು ಕಾರಣವಾಗಿವೆ. ಈ ಚಿತ್ರ ಕೂಡ ನಮ್ಮ ಸಾಮಾಜಿಕ ಬದುಕಿನ ಕುರಿತು ಇಂತಹ ಅಪಾಯಕಾರಿ ಗ್ರಹಿಕೆಗೆ ಕಾರಣವಾದರೆ ಎನ್ನುವ ಆತಂಕ. ಅನುಮಾನಗಳೂ ಇದ್ದವು. ಆದರೆ ಚಿತ್ರವನ್ನು ನೋಡಿದ ನಂತರ ಅದು ಈ ಮಿತಿಯನ್ನು ಮೀರಿದೆ ಎನ್ನುವ ಸಮಾಧಾನ ಮೂಡಿತು. ಈ ಚಿತ್ರದ ಕುರಿತು ಈಗ ವ್ಯಾಪಕ ಚರ್ಚೆಗಳು ನಡೆಯುತ್ತಿವೆ. ಅದಕ್ಕೆ ಇನ್ನಷ್ಟು ಅಯಾಮಗಳು ಸೇರಬೇಕು ಎನ್ನುವುದು ನನ್ನ ನಂಬಿಕೆ.
‘ತಿಥಿ’ ಚಿತ್ರದ ನಿರ್ದೇಶಕ ರಾಮ್ ರೆಡ್ಡಿ ಪ್ರತಿಷ್ಠಿತ ಪ್ರಾಗ್‍ನ ಫಿಲಂ ಇನ್ಸಟ್ಯೂಟ್‍’ನಲ್ಲಿ ಕಲಿತ ಪ್ರತಿಭೆ. ಚಿತ್ರದ ಕಥೆಯನ್ನು ಕಟ್ಟಿದ ಈರೇಗೌಡರು ಮಂಡ್ಯದ ಗ್ರಾಮೀಣ ಹಿನ್ನೆಲೆಯವರು, ಆಧುನಿಕ ಸಂವೇದನೆಯಿಂದ ನಮ್ಮ ಸಂಪ್ರದಾಯಗಳನ್ನು ನೋಡುವುದು ಇದರಿಂದ ದೊರಕಿರುವ ವಿಶಿಷ್ಠ ಅಯಾಮ. ತಂತ್ರಜ್ಞಾನ ಇಲ್ಲಿ ಅಬ್ಬರ ಇಲ್ಲದಂತೆ ಬಳಕೆಯಾಗಿದೆ. ಅದರಂತೆ ಮಂಡ್ಯದ ಕನ್ನಡ ಅಥೆಂಟಿಕ್ ಆಗಿ ಬಳಕೆಯಾಗಿದೆ. ಅದು ಕೇವಲ ಬಳಕೆ ಮಾತ್ರವಾಗದೆ ಸಾಮಾಜಿಕ ಸ್ತರಗಳನ್ನೂ ಚಿತ್ರಕ್ಕೆ ನೀಡಿದೆ. ಸಾಂಸ್ಕೃತಿಕ ನೆಲೆಗಳು ಹೇಗೆ ಸಿನಿಮ್ಯಾಟಿಕ್ ಈಡಂ ಆಗಿ ಪರಿವರ್ತನೆಗೊಳ್ಳ ಬೇಕು ಎನ್ನುವುದಕ್ಕೆ ಹಲವು ಉದಾಹರಣೆಗಳು ಚಿತ್ರದಲ್ಲಿವೆ. ಚಿತ್ರದಲ್ಲಿ ಮೂರು ಪೀಳಿಗೆ ಕಥೆ ಇದೆ. ನೂರೊಂದು ವರ್ಷ ಬದುಕಿ ಸತ್ತ ಸೆಂಚುರಿ ಗೌಡನ ಸಾವಿನ ಬಳಿಕದ ಘಟನೆಗಳೇ ಚಿತ್ರದ ಹಂದರ. ಅವಧೂತನಂತಹ ಸೆಂಚೂರಿ ಗೌಡನ ಮಗ ಗಡ್ಡಪ್ಪ, ಭೂಮಿ ಕದಿಯಲು ಎಲ್ಲಾ ತಂತ್ರ ಬಳಸುವ ಅವನ ಮೊಮ್ಮಗ ತಮ್ಮಣ್ಣ, ಯುವ ಪೀಳಿಗೆಯ ಸುಖದ ಅಪೇಕ್ಷೆ ಹಿಡಿದಿಡುವಂತಿರುವ ಅವನ ಮರಿ ಮೊಮ್ಮಗ ಅಭಿ. ಈ ಮೂರು ತಲೆಮಾರು ಮೂರು ಸಾಮಾಜಿಕ ಧಾರೆಗಳಂತೆ ತಲೆಮಾರುಗಳನ್ನೂ ಬಿಂಬಿಸುತ್ತಾರೆ. ಇದನ್ನು ಬೆರೆಸಿರುವಲ್ಲಿ ಎಚ್ಚರಿಕೆ ಇದೆ. ಬಹಳ ಮುಖ್ಯವಾಗಿ ಯಾವ ನಂಬಿಕೆಯನ್ನೂ ಲೇವಡಿ ಮಾಡದೆ ನಿರುದ್ವಿಗ್ನತೆಯಲ್ಲಿ ಅದನ್ನು ಹೇಳುವ ಮನಸ್ಥಿತಿ ಇದೆ. ಇತ್ತೀಚೆಗೆ ಭಾರತೀಯ ಚಿತ್ರರಂಗದಲ್ಲಿ ಕೋರ್ಟ್‍, ಮಸಾನ್‍, ಯಲ್ಲೋದಂತಹ ಚಿತ್ರಗಳು ಅದನ್ನು ಸಾಧಿಸಿದ್ದವು. ಈ ಪರಂಪರೆಗೆ ‘ತಿಥಿ’ ಕೂಡ ಸೇರುತ್ತದೆ,
ಕನ್ನಡ ಚಿತ್ರರಂಗದಲ್ಲಿ ಸಂಪ್ರದಾಯಗಳ ಬಗ್ಗೆ ಬಂದ ಬಹುತೇಕ ಚಿತ್ರಗಳು ಬ್ರಾಹ್ಮಣ ಅಥವಾ ವೈದಿಕ ಸಮುದಾಯದ ನಂಬಿಕೆ ರಿವಾಜುಗಳನ್ನು ಗುರಿ ಆಗಿಸಿಕೊಂಡು ಅದರ ಟೊಳ್ಳುಗಳನ್ನು ಹಿಡಿಯುವ ಎಡಪಂಥೀಯ ನೆಲೆಯವು. ಆದರೆ ‘ತಿಥಿ’ಯಲ್ಲಿರುವುದು ಮಂಡ್ಯ ಸೀಮೆಯ ಗೌಡ ಸಂಸ್ಕೃತಿ. ಇದನ್ನು ಶೂದ್ರ ನೆಲೆ ಎಂದು ಬೇಕಾದರೂ ಕರೆಯಬಹುದು. ಇದೂ ಕೂಡ ತಿಥಿಯ ಬಾಡೋಣದ ರಿವಾಜಿನ ಕುರಿತೇ ಮಾತನಾಡಿದರೂ ಅದನ್ನು ಸಂಯಮದಿಂದಲೇ ಚಿತ್ರಿಸುತ್ತದೆ, ಇದು ಸಾವಿನ ಕುರಿತ ಚಿತ್ರವಾದರೂ ಇಲ್ಲಿರುವುದು ಅದಮ್ಯ ಜೀವನ ಪ್ರೀತಿ. ಪ್ರತಿಯೊಂದು ಜೀವಿಯೂ ತನ್ನ ಅನುಭವದ ನೆಲೆಯಲ್ಲಿ ಕಂಡ ಸತ್ಯವನ್ನು ಸಮುದಾಯದ ವಿಶಾಲ ಭಿತ್ತಿಯಲ್ಲಿ ಹಿಡಿಯುವ ಪ್ರಯತ್ನವಿರುವುದರಿಂದ ಸೈದ್ದಾಂತಿಕ ತೊಡಕನ್ನು ಬಿಡಿಸಿಕೊಳ್ಳಲಾಗಿದೆ. ಇದೊಂದು ರೀತಿಯ ಜಾಣ್ಮೆ ಕೂಡ ಹೌದು. ಆದರೆ ಅದು ಪಲಾಯನವನ್ನು ತರದೆ ಚಿತ್ರಕ್ಕೆ ಸಾಂಸ್ಕೃತಿಕ ನೆಲಗಟ್ಟನ್ನು ಒದಗಿಸಿಕೊಡ್ಡಿರುವುದರಿಂದ ಪೂರಕ ಅಂಶವಾಗುತ್ತದೆ.
‘ತಿಥಿ’ಯ ವಿಶೇಷತೆ ಎಂದರೆ ಇದು ಸಾಮಾಜಿಕ ನೆಲೆಯ ಚಿತ್ರವಾದರೂ ಸಂಬಂಧಗಳ ಸೂಕ್ಷ್ಮತೆಯನ್ನು ಸೊಗಸಾಗಿ ಹಿಡಿದಿಟ್ಟಿದೆ. ಕಾವೇರಿ ಚಿತ್ರದಲ್ಲಿ ಬಹುವಾಗಿ ಕಾಡುವ ಪಾತ್ರವಾಗುವುದು ಈ ಹಿನ್ನೆಲೆಯಲ್ಲಿ. ಚಿತ್ರದ ಮೂರನೇ ತಲೆಮಾರಿನ ಪ್ರತಿನಿಧಿ ಅಭಿ ಅವಳನ್ನು ಇಷ್ಟ ಪಟ್ಟಿದ್ದಾನೆ. ಅವನು ಹೇಳುತ್ತಾನೆ ‘ನೀನು ಚಂದ ಇದ್ದೀಯ ಮೂಗು ಚುಚ್ಚಿಸಿಕೊಂಡು ನತ್ತು ಹಾಕಿಸಿಕೋ ಇನ್ನೂ ಚಂದ ಕಾಣ್ತೀಯ’. ಮುಂದೊಂದು ದೃಶ್ಯದಲ್ಲಿ ಕಾವೇರಿ ಅಮ್ಮನ ಬಳಿ ಈ ವಿಷಯ ಪ್ರಸ್ತಾಪಿಸುತ್ತಾಳೆ. ಅವಳು ಮೂಗು ಚುಚ್ಚಿಸಿಕೊಳ್ಳುವ ಪ್ರಾತಿನಿಧಿಕ ದೃಶ್ಯವೂ ಮುಂದೆ ಬರುತ್ತದೆ. ಮುಂದೊಂದು ದೃಶ್ಯ ಕಾವೇರಿ ತನ್ನ ಬಳಗದವರೊಡನೆ ಕುರಿಮಂದೆ ಜೊತೆ ಹೋಗುತ್ತಿದ್ದಾಳೆ. ಅಭಿ ಅವಳನ್ನು ಸೆಳೆದು ಸನ್ನೆಯ ಮೂಲಕವೇ ಮೆಚ್ಚಿಗೆಯನ್ನು ವ್ಯಕ್ತಪಡಿಸುತ್ತಾನೆ. ಈ ಎಲ್ಲಾ ಸನ್ನಿವೇಶಗಳು ನವಿರಾದ ಎಳೆಯನ್ನು ಜೋಡಿಸುತ್ತವೆ. ಕಾವೇರಿಯ ಉಲ್ಲಾಸ ಉತ್ಸಾಹಗಳ ಜೊತೆ ಚಿತ್ರದ ಕೊನೆಯಲ್ಲಿ ಅವಳು ಗರಬಡಿದಂತೆ ಕುಳಿತು ಕೊಳ್ಳುವ ಚಿತ್ರಣ ಕೂಡ ಕಾಡುತ್ತದೆ.
‘’ತಿಥಿ’ಯ ಕುರಿತು ಹೇಳಲೇ ಬೇಕಾದ ಇನ್ನೂ ಕೆಲವು ಅಂಶಗಳಿವೆ. ಒಂದು ಕಾಲದಲ್ಲಿ ಭಾರತದಲ್ಲಿ ಗುಣಾತ್ಮಕ ಚಿತ್ರಗಳ ಪರಂಪರೆಗೆ ಕಾರಣವಾಗಿದ್ದ ಎನ್.ಎಫ್.ಡಿ.ಸಿ. ಈಗ ಚಿತ್ರ ನಿರ್ಮಾಣಕ್ಕೆ ಸಹಾಯಧನ ನೀಡುತ್ತಿಲ್ಲ. ಹಲವು ಪರೀಕ್ಷೆಗಳನ್ನು ನಡೆಸಿ ಹಣ ಹೂಡುವವರನ್ನು ಹುಡುಕಿ ಕೊಡುತ್ತಿದೆ. ಇಂತಹ ಪರೀಕ್ಷೆಯಲ್ಲಿ ‘ಸ್ಕೀನ್ ಲ್ಯಾಂಬ್‍’ನಲ್ಲಿ ತೇರ್ಗಡೆಯಾಗಿ ಬಂಡವಾಳ ಪಡೆದ ಚಿತ್ರ ‘ತಿಥಿ’. ಈ ಹಿಂದೆ ‘ಅತ್ತಿ ಹಣ್ಣು ಮತ್ತು ಕಣಜ’ ಇಂತಹ ಪ್ರೋತ್ಸಾಹವನ್ನು ಪಡೆದಿತ್ತು. ಕನ್ನಡದ ಉತ್ಸಾಹಿ ನಿರ್ದೇಶಕರು ಈ ಯೋಜನೆ ಲಾಭವನ್ನು ಪಡೆದುಕೊಳ್ಳಬೇಕು. ‘ತಿಥಿ’ಯ ಕುರಿತ ಚರ್ಚೆಗಳಲ್ಲಿ ಈ ಅಂಶ ಸೇರಿದರೆ ಕನ್ನಡಕ್ಕ ಇನ್ನಷ್ಟು ಗುಣಾತ್ಮಕ ಚಿತ್ರಗಳು ದೊರಕುತ್ತವೆ. ‘ತಿಥಿ’ ಚಿತ್ರದಲ್ಲಿ ಅಭಿನಯಿಸಿದ ಬಹುತೇಕರು ವೃತ್ತಿಪರರಲ್ಲದ ಕಲಾವಿದರು. ಇಂತಹವರಿಂದ ಅಭಿನಯ ತೆಗೆಸುವುದು ಕಷ್ಟವಾದರೂ ಅದರಿಂದ ಮುಕ್ತ ಶೈಲಿಯ ಅಭಿನಯ ದೊರಕುತ್ತದೆ. ಸ್ಟಾರ್ ಡಂನ ಅನಾಹುತಗಳನ್ನು ಕಾಣುತ್ತಿರುವ ಕನ್ನಡ ಚಿತ್ರರಂಗದಲ್ಲಿ ಇಂತಹ ಪ್ರಯೋಗಗಳು ಇನ್ನಷ್ಟು ನಡೆದರೆ ಹೊಸತನ ದೊರಕುತ್ತದೆ.
‘ತಿಥಿ’ ಸ್ವರ್ಣ ಕಮಲ ತರಬಹುದು ಎನ್ನುವ ನಿರೀಕ್ಷೆ ಇತ್ತು. ಆದರೆ ಈ ಸಲದ ರಾಷ್ಟ್ರಪ್ರಶಸ್ತಿಗಳ ಆಯ್ಕೆ ಸಮಿತಿಯ ಗೊಂದಲದಿಂದ ಅದು ತಪ್ಪಿ ಹೋಗಿದೆ. ಅಷ್ಟೇ ಅಲ್ಲ ಇನ್ನೂ ಪ್ರಮುಖ ಕನ್ನಡ ಚಿತ್ರಗಳು ಪ್ರಶಸ್ತಿಯಿಂದ ವಂಚಿತವಾಗಿದೆ. ಈ ಕುರಿತೂ ಚರ್ಚೆಗಳಾಗ ಬೇಕಾಗಿದೆ.

Leave a Reply