ಅರಬ್ಬರ ಪರ್ವತ ಸೃಷ್ಟಿ,  ಮರುಭೂಮಿಗೆ ಇಳಿಯುವುದೇ ವೃಷ್ಟಿ? ಪ್ರಕೃತಿ ಮಣಿಸಲು ಬಿಗಿಮುಷ್ಟಿ!

author-ananthramuಇತ್ತೀಚೆಗಷ್ಟೇ ವಲ್ರ್ಡ್ ಬ್ಯಾಂಕ್, ಅರಬ್ ದೇಶಗಳಿಗೆ ಎಚ್ಚರಿಕೆ ಕೊಟ್ಟಿದೆ. ಜಗತ್ತಿನ ಹವಾಗುಣ ಬದಲಾಗುತ್ತಿದೆ, ನಿಮ್ಮ ನೀರಿನ ಮ್ಯಾನೇಜ್‍ಮೆಂಟ್ ಬಗ್ಗೆ ಎಚ್ಚರಿಕೆ ಇರಲಿ. ಈ ಸಂದೇಶ, ಇಂದಿನ ಸ್ಥಿತಿಯಲ್ಲಿ ಇದು ಯಾವ ದೇಶಕ್ಕಾದರೂ ಅನ್ವಯಿಸಬಹುದು. ಆದರೆ ಅರಬ್ ರಾಷ್ಟ್ರಗಳಿಗೆ ಇದು ಹೆಚ್ಚು ಸಲ್ಲುತ್ತದೆ. ಯುನೈಟೆಡ್ ಅರಬ್ ಎಮಿರೇಟ್ಸ್ (ಯು.ಎ.ಇ.- ಏಳು ಷೇಕ್ ಪ್ರಾಂತ್ಯಗಳಿಂದಾದ ದೇಶ) ವಲ್ರ್ಡ್ ಬ್ಯಾಂಕ್ ಸಂದೇಶದಿಂದ ಗಾಬರಿಯಾಗುವ ಬದಲು ಹೊಸ ಹೊಸ ಐಡಿಯಾಗಳ ಮೊರೆಹೋಗುತ್ತಿದೆ. ಇದು ಹೊಸ ಪ್ರಯೋಗಗಳಿಗೂ ಖ್ಯಾತಿಯಾದ ದೇಶ. ಜಗತ್ತಿನ ಏಳನೆಯ ಅತಿ ದೊಡ್ಡ ತೈಲ ಸಂಪನ್ಮೂಲ ರಾಷ್ಟ್ರ, ಅದೇ ಸ್ಥಾನವನ್ನು ನೈಸರ್ಗಿಕ ಅನಿಲ ಉತ್ಪಾದನೆಯಲ್ಲೂ ಉಳಿಸಿಕೊಂಡಿದೆ.

ಜಗತ್ತಿನ ಎಲ್ಲ ಕಡೆ ಮಳೆಯನ್ನು ಸೆಂಟಿಮೀಟರಿನಲ್ಲಿ ಅಳೆದರೆ, ಇಲ್ಲಿ ಮಿಲಿ ಮೀಟರ್‍ನಲ್ಲಿ ಅಳೆಯಬೇಕು. ಅರಬ್ ಮರುಭೂಮಿ ಇಲ್ಲಿನ ನಗರಗಳನ್ನು ಗುತ್ತಿಗೆಗೆ ತೆಗೆದುಕೊಂಡಿದೆ ಎಂಬ ಗುಮಾನಿ ಬರುವಷ್ಟು ಶುಷ್ಕ ಪ್ರಾಂತ್ಯ. ವರ್ಷದಲ್ಲಿ ಎಂಟು ಮಿಲಿ ಮೀಟರ್ ಮಳೆಬಿದ್ದದ್ದೂ ಉಂಟು. ಇನ್ನು ಕುಡಿಯಲು ನೀರು? ನಾವು ಇಂಗ್ಲಿಷ್‍ನ ನುಡಿಗಟ್ಟನ್ನು ಯಾವಾಗಲೂ ಬಳಸುತ್ತೇವಲ್ಲ? `ವಾಟರ್, ವಾಟರ್, ಎವ್ವೆರಿವೇರ್, ನಾಟ್ ಎ ಡ್ರಾಪ್ ಆಫ್ ವಾಟರ್ ಟು ಡ್ರಿಂಕ್’. ಹಾಗಾದರೆ ಅರಬ್ಬರು ಕುಡಿಯುವುದೇನು? ನೆಲದಲ್ಲಿ ನೀರು ಉಕ್ಕುವುದಕ್ಕಿಂತ ಪೆಟ್ರೋಲ್ ಉಕ್ಕುವುದೇ ಜಾಸ್ತಿ. ನೀರೆಂದರೆ ಅದು ದುಬಾರಿ ಬಾಬತ್ತು. ಸಾಗರದ ನೀರನ್ನು ನೀರ್ರ್ವಣೀಕರಣ ಮಾಡಿ ಕುಡಿಯಬೇಕು. ದುಬಾರಿ, ಆದರೇನಂತೆ, ಬದುಕಲು ಬೇಕಲ್ಲ ಈ ಜೀವಾಮೃತ. ಇಲ್ಲೂ ಇವರನ್ನು ಒಂದು ಅಂಶಕ್ಕೆ ಮೆಚ್ಚಬೇಕು. ಸಾಗರದ ನೀರನ್ನು ಉಪ್ಪಿಲ್ಲದಂತೆ ಮಾಡಲು ಕರೆಂಟ್ ಬೇಕಲ್ಲ, ಅಲ್ಲಿ ಸೌರಶಕ್ತಿ ಬಳಸುತ್ತಿದ್ದಾರೆ. ಜಗತ್ತು ಭೇಷ್ ಎಂದಿದೆ. ಸದ್ಯಕ್ಕೆ ಯಾವ ದುಬಾರಿ ಖರ್ಚು ಬಂದರೂ ಯು.ಎ.ಇ. ಸೊಪ್ಪು ಹಾಕುವುದಿಲ್ಲ-ಡೋಂಟ್ ಕೇರ್ ಮಾಸ್ಟರ್. ಪೆಟ್ರೋ ಡಾಲರ್ ಇದೆ, ಷೇಕ್‍ಗಳು ಹುಕುಂ ಕೊಟ್ಟರೆ ಸಾಕು, ಸ್ವರ್ಗವೇ ಇಳಿದು ಬಂದೀತು. ಅಂತಾರಾಷ್ಟ್ರೀಯ ಮಟ್ಟದಲ್ಲಿ ತಲಾ ವ್ಯಕ್ತಿ ನೀರಿನ ಬಳಕೆ ದಿನವಹಿ ಕನಿಷ್ಠ 100 ಲೀಟರ್ ಇದ್ದರೂ ಯು.ಎ.ಇ. 550 ಲೀಟರ್‍ಗೆ ಹೆಚ್ಚಿಸಿಕೊಂಡಿದೆ. ಏಕೆಂದರೆ ಏರ್ ಕಂಡೀಷನರ್‍ಗೆ ಬಹುತೇಕ ಖರ್ಚಾಗುತ್ತದೆ. ಉಳಿದದ್ದು ಬಾಟಲಿ ನೀರಿಗೆ.

ಅಲ್ಲಿನ ಭೂಮಿಯ ಚಹರೆಯನ್ನು ಬದಲಾಯಿಸುವಷ್ಟು ತಾಕತ್ತು ಯು.ಎ.ಇ.ಗೆ ಇದೆ. ದುಬೈ ತೀರದಿಂದ ನಾಲ್ಕು ಕಿಲೋ ಮೀಟರ್ ದೂರದ ಸಮುದ್ರದಲ್ಲಿ 300 ಕೃತಕ ದ್ವೀಪಸ್ತೋಮ(ಆರ್ಕಿಪಿಲ್ಯಾಗೋ) ನಿರ್ಮಿಸಿ ರೆಕಾರ್ಡ್ ಸ್ಥಾಪಿಸಿದೆ. ವ್ಯವಹಾರಕ್ಕೂ ಬಳಕೆ, ಟೂರಿಸಂಗೂ ಬಳಕೆ-ಬಿಗ್ ಐಡಿಯಾ. 321,000,000 ಘನ ಮೀಟರು ಮರಳು, 386 ಮಿಲಿಯನ್ ಟನ್ನು ಕಲ್ಲು ಬಳಸಿ ಇಡೀ ಭೂಪಟದಲ್ಲಿ ಕಾಣುವ ಎಲ್ಲ ದೇಶಗಳ ಸ್ವರೂಪವನ್ನು ಈ ದ್ವೀಪಗಳಲ್ಲಿ ಬಿಡಿಸಿದ್ದಾರೆ. ಖರ್ಚು ಮಾಡಿದ್ದು 14 ಬಿಲಿಯನ್ ಡಾಲರ್.

ಈ ದೇಶದ ಹೆಸರಿನಲ್ಲಿ ಇನ್ನೂ ಒಂದು ರೆಕಾರ್ಡ್ ಇದೆಯಲ್ಲ ‘ಬುರ್ಜ್ ಕಾಲಿಫ್’. ತೈಲಾಧಾರಿ ಆರ್ಥಿಕತೆಯನ್ನು ಟೂರಿಸಂ ಆರ್ಥಿಕತೆಗೆ ತಿರುಗಿಸಿದ ಕಥೆ ಇದು. ಬುರ್ಜ್ ಕಾಲಿಫ್, ಟೋಕಿಯೋ ಸ್ಕೈಟ್ರೀ (634 ಮೀ.) ಕಟ್ಟಡವನ್ನು ಹಿಂದಿಕ್ಕಿ ಈಗ ಜಗತ್ತಿನ ಅತಿ ಎತ್ತರದ ರಚನೆ ಎನ್ನಿಸಿಕೊಂಡಿದೆ. 154 ಅಂತಸ್ತಿರುವ, 828.8 ಮೀಟರ್ ಎತ್ತರದ ಬಹೂಪಯೋಗಿ ಕಟ್ಟಡ ಎಂದು ಹೆಮ್ಮೆಯಿಂದ ಸೆಟೆದು ನಿಂತು ಆಕಾಶವನ್ನೇ ತಿವಿಯುತ್ತಿರುವಂತೆ ಕಾಣುತ್ತಿದೆ. ದುಬೈ ಟೂರಿಸಮ್‍ನ ಪ್ರಮುಖ ಆಕರ್ಷಣೆ ಇದು. ಕೃತಕ ದ್ವೀಪಸ್ತೋಮ ನಿರ್ಮಾಣ ಮಾಡಿದ್ದ ಈ ದೇಶ ಬುರ್ಜ್ ಕಾಲಿಫ್ ಆವರಣದಲ್ಲೇ 12 ಹೆಕ್ಟೇರ್ ವಿಸ್ತೀರ್ಣದ ಕೃತಕ ಸರೋವರವನ್ನೂ ನಿರ್ಮಿಸಿದೆ.

ಈಗ ಜಗತ್ತೇ ಬೆರಗಾಗುವಂತೆ ಇನ್ನೊಂದು ಮಹಾಯೋಜನೆಯನ್ನು ಕೈಗೆತ್ತಿಕೊಳ್ಳಲು ಹೊರಟಿದೆ. ಬುರ್ಜ್ ಕಾಲಿಫ್ ಎತ್ತರವನ್ನೂ ಮೀರಿಸುವ ಪರ್ವತ ನಿರ್ಮಾಣ. ಉದ್ದೇಶ ಮನೋರಂಜನೆಗೂ ಅಲ್ಲ, ಪರ್ವತಾರೋಹಣಕ್ಕೂ ಅಲ್ಲ. ಬಾಯಾರಿ ಬೆಂದಿರುವ ಯು.ಎ.ಇ.ಗೆ ಹೇಗಾದರೂ ಮಾಡಿ ಮಳೆ ಸುರಿಸಬೇಕೆಂಬ ಹಠದಿಂದ ನಿಸರ್ಗವನ್ನು ಪಳಗಿಸಲು ಹೊರಟಿದೆ ಈ ದೇಶ. ಕೃತಕ ಪರ್ವತ ಎಲ್ಲಿ ನಿರ್ಮಾಣವಾಗುತ್ತದೆ, ಎಷ್ಟು ಎತ್ತರವಿರುತ್ತದೆ, ಗಾತ್ರವೆಷ್ಟು ಎನ್ನುವುದು ಇನ್ನೂ ನಿರ್ಧಾರವಾಗಿಲ್ಲ. ಈ ಮರುಭೂಮಿಯ ನಾಡಿನಲ್ಲಿ ಗಾಳಿ, ಮೋಡ, ಆದ್ರ್ರತೆ, ಉಷ್ಣತೆ ಎಲ್ಲವನ್ನೂ ಲೆಕ್ಕಹಾಕಿ `ನಮಗೆ ಪರ್ವತ ಕಟ್ಟಿಕೊಡಿ’ ಎನ್ನುತ್ತಿದ್ದಾರೆ ಅರಬ್ ಎಮಿರೇಟುಗಳು. ಇದಕ್ಕಾಗಿ `ಅಮೆರಿಕದ ಯೂನಿವರ್ಸಿಟಿ ಕಾರ್ಪೋರೇಷನ್ ಫಾರ್ ಅಟ್‍ಮಾಸ್ಪಿಯರಿಕ್ ರಿಸರ್ಚ್ ಸಂಸ್ಥೆ’ಯನ್ನು ಕೇಳಿಕೊಂಡಿದ್ದಾರೆ. ಜೊತೆಗೆ ತನ್ನದೇ ದೇಶದ ಮೀಟಿಯೋರಾಲಜಿ ಸಂಸ್ಥೆಯನ್ನು ಇದರಲ್ಲಿ ತೊಡಗುವಂತೆ ನಿರ್ದೇಶಿಸಿದ್ದಾರೆ. ಪರ್ವತ ನಿರ್ಮಾಣದ ಸಾಧ್ಯಾಸಾಧ್ಯತೆ ಪರಿಶೀಲಿಸಲು ಈಗಾಗಲೇ ನಾಲ್ಕು ಲಕ್ಷ ಡಾಲರನ್ನು ಬಿಡುಗಡೆಮಾಡಿದೆ.

UAE

ಗಾಳಿಗೆ ಅಡ್ಡವಾಗಿ ಪರ್ವತವಿದ್ದಾಕ್ಷಣ ಅದು ಮೋಡವನ್ನು ಹಿಡಿದಿಟ್ಟು ವರ್ಷಧಾರೆಯನ್ನು ಸುರಿಸುವುದಿಲ್ಲ. ಮಳೆ ಮೋಡದ ನಿರ್ಮಾಣವೇ ಪ್ರಕೃತಿಯ ಅತ್ಯಂತ ಕುಶಲ ಕೆಲಸ. ಇಲ್ಲಿ ಪರ್ವತದ ಇಳಿಜಾರು, ವಕ್ರತೆ ಇಂಥ ಅನೇಕ ಅಂಶಗಳು ಕೆಲಸಮಾಡುತ್ತವೆ. ಇವೆಲ್ಲವನ್ನೂ ತಲೆಯಲ್ಲಿಟ್ಟುಕೊಂಡೇ ತಂತ್ರಜ್ಞರು ಈ ಯೋಜನೆಯನ್ನು ಪರಿಶೀಲಿಸುತ್ತಿದ್ದಾರೆ. ಇವರು ಯೋಚಿಸಿರುವುದಿಷ್ಟು: ಪರ್ವತಗಳಿಂದ ಶುಷ್ಕ ಮೋಡ ಮೇಲೇರಿ ತಂಪಾಗುತ್ತದೆ. ಅಂಥ ಪರಿಸ್ಥಿತಿ ನೋಡಿಕೊಂಡು ಮೋಡಗಳಿಗೆ ಬೀಜ ಬಿತ್ತುವುದು. ಅಂದರೆ ಸಾಮಾನ್ಯವಾಗಿ ಬೇರೆಡೆ ಕೃತಕ ಮಳೆ ತರಿಸಲು ವಿಶೇಷವಾಗಿ ಶೀತಲ ಪ್ರದೇಶದಲ್ಲಿ ಹಿಮದ ಬೀಜ (ಐಸ್ ನ್ಯೂಕ್ಲಿಯೈ) ಬಿತ್ತುವುದುಂಟು. ಇದು ಮೋಡದ ಘನೀಭವನಕ್ಕೆ ಸಹಕಾರಿ.

ಆದರೆ ಯು.ಎ.ಇ. ಇರುವುದು ಮರುಭೂಮಿಯ ಕಪಿಮುಷ್ಟಿಯಲ್ಲಿ. ಇಲ್ಲಿ ಸಿಲ್ವರ್ ಅಯೋಡೈಡ್ ಅಥವಾ ಘನೀಕರಿಸಿದ ಕಾರ್ಬನ್ ಡೈ ಆಕ್ಸೈಡ್ ಅಥವಾ ಅಡುಗೆ ಉಪ್ಪಿನ ಪುಡಿಯನ್ನು ಚುಮುಕಿಸಿ ಮೋಡಕಟ್ಟುವಂತೆ ಮಾಡುವ ಉಪಾಯವಿದೆ. ಪರ್ವತದ ಒಂದು ಇಳಿಜಾರಿನಲ್ಲಿ ಮಾತ್ರ ಮಳೆಯಾಗುತ್ತದೆಯೇ ಹೊರತು ಎರಡೂ ಕಡೆಯಲ್ಲ. ಹೀಗಾಗಿ ಒಂದೆಡೆ ಮಳೆ ನೆರಳು ಪ್ರದೇಶ ಉಂಟಾಗುವ ಸಾಧ್ಯತೆ ಇದ್ದೇ ಇರುತ್ತದೆ. `ನೀವು ಪಿರಮಿಡ್ ರೂಪದಲ್ಲಿ ಪರ್ವತವನ್ನು ಕಟ್ಟಿದರೆ ಕಥೆ ಮುಗಿಯಿತು. ಮಳೆಮೋಡ ಕೆಳಗಿಳಿಯುವ ಬದಲು ಅದರ ಸುತ್ತಲೇ ಗಿರಿಕಿ ಹಾಕುತ್ತದೆ’ ಎಂದು ಹವಾಮಾನ ತಜ್ಞರು ಎಚ್ಚರಿಕೆ ಕೊಟ್ಟಿದ್ದಾರೆ. ಎಷ್ಟೋ ವೇಳೆ ಎಲ್ಲೋ ಮೋಡಕ್ಕೆ ಬೀಜ ಬಿತ್ತುವುದು, ಇನ್ನೆಲ್ಲೋ ಮಳೆಯಾಗುವುದು ಇವೆಲ್ಲವೂ ಸಹಜ.

ಈ ಬೆಂಗಾಡಿನ ಭೌಗೋಳಿಕ ಲಕ್ಷಣವನ್ನು ಬದಲಾಯಿಸಲು ಹೊರಟಿರುವ ಯು.ಎ.ಇ. ಕಳೆದ ವರ್ಷ ಕೃತಕ ಮಳೆ ಸೃಷ್ಟಿಸಲು 554,976 ಡಾಲರ್ ಖರ್ಚುಮಾಡಿ, ಇಡೀ ವರ್ಷದಲ್ಲಿ ಎಷ್ಟು ಮಳೆ ಬೀಳುತ್ತದೋ ಅಷ್ಟನ್ನು 24 ಗಂಟೆಯಲ್ಲೇ ಸುರಿಯುವಂತೆ ಮಾಡಿದ ಅಪರೂಪ ಪ್ರಯೋಗ ಮಾಡಿತ್ತು. ಈಗ ಪರ್ವತ ನಿರ್ಮಿಸಲು ಹೊರಟ ಅವರ ಪ್ರಯತ್ನ ಯಶಸ್ವಿಯಾದರೆ ಇದು ಮನುಕುಲದ ಮತ್ತೊಂದು ಮಹಾಹೆಜ್ಜೆಯಾಗುತ್ತದೆ. ಇಡೀ ಜಗತ್ತಿನಲ್ಲಿ ಒಂದು ವರ್ಷ ಉತ್ಪಾದಿಸುವ ಕಾಂಕ್ರೀಟಿನ ಕಾಲುಭಾಗ ಈ ಪರ್ವತ ನಿರ್ಮಾಣಕ್ಕೆ ಬೇಕಾಗುತ್ತದೆ ಎಂದು ಅಂದಾಜು. ಯು.ಎ.ಇ. ಇದಕ್ಕೆ ರೆಡಿ. `ಪ್ರಯೋಗ ಮಾಡಲು ಬಿಡಿ’ ಎಂದು ಹೇಳುತ್ತಿದೆ. ಮರುಭೂಮಿಯನ್ನು ಮರಭೂಮಿಯನ್ನಾಗಿಸಲು ಹೊರಟ ಅರಬ್ಬರನ್ನು ಅಭಿನಂದಿಸಲೇಬೇಕು. ಆಮೇಲೆ ಇದ್ದೇ ಇದೆ- ಬೇರೆ ದೇಶಗಳು ಈ ಯೋಜನೆಯನ್ನು ಕಾಪಿ ಮಾಡುವುದು.

1 COMMENT

Leave a Reply