ಜೈಲು ಪಾಲು ಬಿಜೆಪಿಯಿಂದ ಪಾಠ ಬೇಕಿಲ್ಲ ಅಂದ್ರು ಸಿದ್ರಾಮಯ್ಯ, ಅಣ್ವಸ್ತ್ರ ಪೂರೈಕೆ ಸಮೂಹದಲ್ಲಿ ಭಾರತ ಇರಲಿ ಅಂತು ಅಮೆರಿಕ, ತಮಿಳುನಾಡಿನ ಮೂರು ಟ್ರಕ್ ನಲ್ಲಿ ಸಿಕ್ತು 570 ಕೋಟಿ

ಡಿಜಿಟಲ್ ಕನ್ನಡ ಟೀಮ್

ಐದು ವರ್ಷ ಭ್ರಷ್ಟಾಚಾರದ ಆಡಳಿತ ನೀಡಿ ಜೈಲು ಪಾಲಾದ ಬಿಜೆಪಿ ಮುಖಂಡರಿಂದ ನಾನು ನೈತಿಕತೆ ಪಾಠ ಹೇಳಿಸಿಕೊಳ್ಳಬೇಕಿಲ್ಲ. ಅವರಂತೆ ಜೈಲಿಗೆ ಹೋಗದೆ, ಜಾಮೀನು ತೆಗೆದುಕೊಳ್ಳದೆ ಸರಕಾರ ನೀಡಿರುವುದೇ ನನ್ನ ಸಾಧನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬೆನ್ನು ತಟ್ಟಿಕೊಂಡಿದ್ದಾರೆ.

ಮೂರು ವರ್ಷ ಆಳ್ವಿಕೆ ಪೂರೈಸಿದ ಹಿನ್ನೆಲೆಯಲ್ಲಿ ತಮ್ಮ ಸಾಧನೆ ಕುರಿತ ಕಿರು ಹೊತ್ತಿಗೆ ‘ನಾಲ್ಕನೇ ವರ್ಷದೆಡೆಗೆ ಭರವಸೆಯ ನಡಿಗೆ’ ಬಿಡುಗಡೆ ಮಾಡಿ ಪತ್ರಿಕಾಗೋಷ್ಠಿಯಲ್ಲಿ ಶನಿವಾರ ಮಾತನಾಡಿದ ಅವರು, ಬಿಜೆಪಿಯವರು ಐದು ವರ್ಷ ಆಡಳಿತದಲ್ಲಿ ಖಜಾನೆ ಲೂಟಿ ಮಾಡಿದರು. ಆದರೆ, ನಾವು ಕಾರ್ಯಕ್ರಮಗಳ ಮೂಲಕ ಜನರನ್ನು ತಲುಪಿದ್ದೇವೆ ಎಂದರು.

ತಮ್ಮ ಅಧಿಕಾರದ ಅವಧಿಯಲ್ಲಿ ಆರೋಪಗಳು ಬಂದ ತಕ್ಷಣವೇ ಐದು ಪ್ರಕರಣಗಳನ್ನು ಸಿಬಿಐ ತನಿಖೆಗೆ ವಹಿಸಲಾಗಿದೆ. ಒಂದೊಮ್ಮೆ ತಾವು ಭ್ರಷ್ಟಾಚಾರ ಮಾಡಿದ್ದರೆ ಇಂಥ ಧೈರ್ಯ ಬರುತ್ತಿರಲಿಲ್ಲ. ಲಾಟರಿ ಪ್ರಕರಣದಲ್ಲಿ ನನ್ನ ಹಾಗೂ ಸಚಿವ ಜಾರ್ಜ್ ಮೇಲೆ ಆರೋಪ ಬಂತು. ಆದನ್ನು ಸಿಬಿಐಗೆ ವಹಿಸಲಾಯಿತು. ಆದರೆ, ಬಿಜೆಪಿ ಆಡಳಿತದಲ್ಲಿ 1 ಲಕ್ಷ ಕೋಟಿ ರುಪಾಯಿಗೂ ಅಧಿಕ ಗಣಿ ಹಗರಣ ನಡೆಯಿತು. ಇದನ್ನು ಸಿಬಿಐಗೆ ವಹಿಸಬೇಕು ಅಂತ 370 ಕಿ.ಮಿ ಪಾದಯಾತ್ರೆ, ಸದನದ ಒಳ, ಹೊರಗೆ ಹೋರಾಟ ಮಾಡಿದರೂ ಜಗ್ಗಲಿಲ್ಲ. ಇದಾದ ನಂತರ ಲೋಕಾಯುಕ್ತ ಕೂಡ ಗಣಿ ಹಗರಣ ವರದಿ ನೀಡಿತು. ಅದರೂ ಸಿಬಿಐಗೆ ವಹಿಸಲಿಲ್ಲ. ಬಿಜೆಪಿಯವರದು ಅಧಿಕಾರದಲ್ಲಿದ್ದಾಗ ಒಂದು ನೀತಿ, ಅಧಿಕಾರ ಕಳೆದುಕೊಂಡಾಗ ಇನ್ನೊಂದು ನೀತಿ ಎಂದು ಲೇವಡಿ ಮಾಡಿದರು.

ಯಡಿಯೂರಪ್ಪ ಅವರಿಗೆ 2018 ರ ಚುನಾವಣೆಯಲ್ಲಿ ಮುಖ್ಯಮಂತ್ರಿಯಾದಂತೆ ಭ್ರಮೆ ಬಂದಿದೆ. ಆದರೆ ನಮ್ಮ ಸಾಧನೆ ನಮ್ಮ ಕೈ ಹಿಡಿಯುತ್ತದೆ. ಸೋನಿಯಾಗಾಂಧಿ , ರಾಹುಲ್ ಗಾಂಧಿ ಹಾಗೂ ನನ್ನ ನಾಯಕತ್ವದಲ್ಲೇ ಚುನಾವಣೆ ನಡೆಯುತ್ತದೆ. ಮತ್ತೆ ನಾವೇ ಅಧಿಕಾರಕ್ಕೆ ಬರುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ನಾನು ಅಧಿಕಾರಕ್ಕೆ ಬಂದ ನಂತರ ಕರ್ನಾಟಕವನ್ನು ಹಸಿವು ಮುಕ್ತ ರಾಜ್ಯ ಮಾಡಿದ್ದೇನೆ. ಮಕ್ಕಳ ಪೌಷ್ಠಿಕತೆಗೆ ಕ್ಷೀರ ಭಾಗ್ಯ, ಕೃಷಿ ಉತ್ಪನ್ನ ಹೆಚ್ಚಳಕ್ಕೆ ಕೃಷಿ ಭಾಗ್ಯ ಜಾರಿಗೆ ತಂದಿದ್ದೇನೆ ಎಂದು ತಮ್ಮ ಸರ್ಕಾರದ ಎಲ್ಲ ಭಾಗ್ಯಗಳ ಬಗ್ಗೆ ವಿವರಿಸಿದರು.

ತಾವು ಮುಖ್ಯಮಂತ್ರಿಯಾಗಿ ಅಧಿಕಾರದಲ್ಲಿರುವವರೆಗೂ ಲಾಭಾಂಶ ತರುವ ಯಾವುದೇ ಕಂಪನಿಗಳ ಆಡಳಿತ ಮಂಡಳಿ ಪ್ರತಿನಿಧಿಸದಂತೆ ಪುತ್ರ ಡಾ. ಯತೀಂದ್ರ ಅವರಿಗೆ ಸಲಹೆ ಮಾಡಿರುವುದಾಗಿ ಇದೇ ಸಂದರ್ಭದಲ್ಲಿ ತಿಳಿಸಿದರು.

ಅಣ್ವಸ್ತ್ರ ಪೂರೈಕೆ ಸಮೂಹದಲ್ಲಿ ಭಾರತ ಇರಲಿ ಅಂತು ಅಮೆರಿಕ

ಅಣ್ವಸ್ತ್ರ ಪೂರೈಕೆ ರಾಷ್ಟ್ರಗಳ ಸಮೂಹದಲ್ಲಿ ಭಾರತ ಸೇರ್ಪಡೆಗೆ ಚೀನಾ ಮತ್ತು ಪಾಕಿಸ್ತಾನ ವಿರೋಧದ ನಡುವೆ ಅಮೆರಿಕ ಬೆಂಬಲ ವ್ಯಕ್ತಪಡಿಸಿದೆ. ಇದರಿಂದ ಚೀನಾಕ್ಕೆ ಮತ್ತೆ ಹಿನ್ನಡೆ ಆಗುವ ಎಲ್ಲ ಲಕ್ಷಣಗಳಿವೆ.

ಭಾರತವನ್ನು ಈ ಗುಂಪಿಗೆ ಸೇರಿಸಬಾರದು ಎಂದು ಚೀನಾ ಶುಕ್ರವಾರ ತೀವ್ರ ವಿರೋಧ ವ್ಯಕ್ತಪಡಿಸಿತ್ತು. ಇದರ ಬೆನ್ನಲ್ಲೇ ಪ್ರತಿಕ್ರಿಯೆ ನೀಡಿರುವ ಅಮೆರಿಕ ಸರಕಾರ ಸಚಿವಾಲಯದ ವಕ್ತಾರ ಜಾನ್ ಕಿರ್ಬಿ, ‘ಈ ಗುಂಪು ಸೇರಲು ಭಾರತ ಎಲ್ಲ ಅರ್ಹತೆ ಹೊಂದಿದೆ ಎಂದಿದ್ದಾರೆ. 2015 ರಲ್ಲಿ ಅಧ್ಯಕ್ಷ ಒಬಾಮಾ ಹೇಳಿದ ಮಾತನ್ನು ನೆನಪಿಸಲಿಚ್ಛಿಸುತ್ತೇನೆ. ಭಾರತ ಈಗಾಗಲೇ ಕ್ಷಿಪಣಿ ತಂತ್ರಜ್ಞಾನ ನಿಯಂತ್ರಣ ವ್ಯವಸ್ಥೆ ಅಗತ್ಯಗಳನ್ನು ಪೂರೈಸಿದ್ದು, ಎನ್ಎಸ್ ಜಿಗೆ ಸೇರಲು ಅರ್ಹವಾಗಿದೆ ಎಂದು ಒಬಮಾ ಹೇಳಿದ್ದರು’ ಎಂದರು.

ತಮಿಳುನಾಡಲ್ಲಿ ಸಿಕ್ತು 3 ಟ್ರಕ್ ನಲ್ಲಿ 570 ಕೋಟಿ

ತಮಿಳುನಾಡು ವಿಧಾನಸಭೆ ಚುನಾವಣೆಗೆ ಕೆಲವೇ ದಿನ ಬಾಕಿ ಉಳಿದಿದೆ. ಈ ಸಂದರ್ಭದಲ್ಲಿ ಚುನಾವಣಾ ಆಯೋಗ ಶನಿವಾರ 3 ಟ್ರಕ್ ಗಳನ್ನು ನಿಲ್ಲಿಸಿ ಪರಿಶೀಲಿಸಿದಾಗ 570 ಕೋಟಿ ಸಿಕ್ಕಿದೆ. ಟ್ರಕ್ ಗಳ ಚಾಲಕರು ಹೇಳಿರುವ ಮಾಹಿತಿ ಪ್ರಕಾರ, ಇದು ಭಾರತೀಯ ಸ್ಟೇಟ್ ಬ್ಯಾಂಕ್ ಹಣವಾಗಿದ್ದು, ಕೊಯಂಬತ್ತೂರು ಶಾಖೆಯಿಂದ ವಿಶಾಖಪಟ್ಟಣ ಶಾಖೆಗೆ ವರ್ಗಾಹಿಸಲಾಗುತ್ತಿತ್ತು ಎಂದು ತಿಳಿದು ಬಂದಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ತಮಿಳುನಾಡು ಮುಖ್ಯ ಚುನಾವಣ ಅಧಿಕಾರಿ ರಾಜೇಶ್ ಲಖೋನಿ, ಈ ಟ್ರಕ್ ನ ಯಾವುದೇ ಹಣವನ್ನು ಮುಟ್ಟುಗೋಲು ಹಾಕಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ಲೈಂಕಿಗ ಕಿರುಕುಳ ಪ್ರಕರಣದಲ್ಲಿ ಆರ್.ಕೆ ಪಚೌರಿಗೆ ಸಮನ್ಸ್

ಲೈಂಗಿಕ ಕಿರುಕುಳ ಆರೋಪ ಎದುರಿಸುತ್ತಿರುವ ಇಂಧನ ಮತ್ತು ಸಂಪನ್ಮೂಲ ಸಂಸ್ಥೆ (ಟಿಇಆರ್ ಐ) ಮಾಜಿ ಅಧ್ಯಕ್ಷ ಆರ್.ಕೆ ಪಚೌರಿ ಅವರಿಗೆ ದೆಹಲಿ ನ್ಯಾಯಾಲಯ ಶನಿವಾರ ಸಮನ್ಸ್ ಜಾರಿ ಮಾಡಿದೆ. ಪಚೌರಿ ವಿರುದ್ಧ ಭಾರತೀಯ ದಂಡ ಸಂಹಿತೆ 354ಎ, 254ಬಿ, 354ಡಿ, 509 ಮತ್ತು 341 ರ ಅಡಿ ಆರೋಪ ಹೊರಿಸಲಾಗಿದ್ದು, ಸೂಕ್ತ ದಾಖಲೆ ಸಲ್ಲಿಸಲಾಗಿದೆ. ಹೀಗಾಗಿ ಜುಲೈ 11 ರಂದು ನಡೆಯುವ ವಿಚಾರಣೆಗೆ ಪಚೌರಿ ಹಾಜರಾಗಬೇಕು ಎಂದು ನ್ಯಾಯಾಲಯ ಸೂಚಿಸಿದೆ.

ಅಹಂಕಾರ, ಅಸಡ್ಡೆ, ಹಗರಣಗಳೇ ಸಾಧನೆ; ಸಿ.ಟಿ. ರವಿ

ದುರಹಂಕಾರ, ಅಸಡ್ಡೆ, ಹಗರಣಗಳು ಹಾಗೂ ಅಸೀಮ ನಿದ್ರೆಯೇ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಮೂರು ವರ್ಷಗಳ ಘನ ಸಾಧನೆ ಎಂದು ಬಿಜೆಪಿ ಮುಖಂಡ, ಮಾಜಿ ಸಚಿವ ಸಿ.ಟಿ.ರವಿ ವಾಗ್ದಾಳಿ ನಡೆಸಿದ್ದಾರೆ.

ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ನುಡಿದಂತೆ ನಡೆಯಲಿಲ್ಲ. ಯಾವುದೇ ಸಮುದಾಯಕ್ಕೂ ನ್ಯಾಯ ಒದಗಿಸಲಿಲ್ಲ. ಈ ಜನ್ಮದಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರುವುದಿಲ್ಲ. ಸಿದ್ದರಾಮಯ್ಯ ಮತ್ತೆ ಮುಖ್ಯಮಂತ್ರಿ ಆಗುವುದು ಕನಸೇ ಸರಿ. ಸಿದ್ದರಾಮಯ್ಯ ತಮ್ಮದು ಅಹಿಂದ ಸರಕಾರ, ತಮ್ಮದು ಸಾಮಾಜಿಕ ನ್ಯಾಯದ ಪರ ಅನ್ನುತ್ತಾರೆ. ಆದರೆ ಅದೆಲ್ಲ ಬರೀ ಬೊಗಳೆ. ತಮ್ಮ ಭಟ್ಟಂಗಿಗಳಿಗೆ ಮಾತ್ರ ಅನುಕೂಲ ಮಾಡಿಕೊಟ್ಟಿದ್ದಾರೆ. ಅವರ ಆತ್ಮಕ್ಕದು ಚೆನ್ನಾಗಿ ಗೊತ್ತು ಎಂದು ಬೆಂಗಳೂರಿನ ಪಕ್ಷದ ಕಚೇರಿಯಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಜನ್ಮದಿನಾಚರಣೆಯಲ್ಲಿ ಪಾಲ್ಗೊಂಡ ನಂತರ ಸುದ್ದಿಗಾರರೊಂದಿಗೆ ಶನಿವಾರ ತಿಳಿಸಿದರು.

ಸರ್ಕಾರದ ವೈಫಲ್ಯಗಳ ಬಗ್ಗೆ ಮಾತನಾಡಿದ ಪ್ರತಿಪಕ್ಷಗಳನ್ನು ಜೈಲಿಗೆ ಹೋಗಿ ಬಂದಿದ್ದೀರಿ, ಭ್ರಷ್ಟಾಚಾರ ಮಾಡಿದ್ದೀರಿ ಎಂದು ಟೀಕಿಸುವುದು ಸರಿಯಲ್ಲ ಎಂದರು. ಹಿಂದೆ ಸಿದ್ದರಾಮಯ್ಯನವರೂ ಪ್ರತಿಪಕ್ಷದಲ್ಲಿದ್ದಾಗ ಆಡಳಿತಾರೂಢ ಸರ್ಕಾರಗಳ ವಿರುದ್ಧ ಟೀಕೆ ಮಾಡಿದ್ದಾರೆ. ಅದನ್ನವರು ನೆನಪಿಸಿಕೊಳ್ಳಲಿ. ಆಡಳಿತ ಸರಕಾರದ ಲೋಪದೋಷಗಳನ್ನು ಎತ್ತಿ ತೋರಿಸುವುದು ಪ್ರತಿಪಕ್ಷಗಳ ಕರ್ತವ್ಯ. ಅದನ್ನು ಸಕಾರಾತ್ಮಕವಾಗಿ ತೆಗೆದುಕೊಳ್ಳಬೇಕೇ ಹೊರತು ಪ್ರತಿಟೀಕೆ ಮಾಡುವ ಮೂಲಕ ಪಲಾಯನ ಮಾಡುವುದಲ್ಲ ಎಂದರು.

ವಿಜೇಂದರ್ ಮುಡಿಗೆ ಸತತ ಆರನೇ ಜಯ

ಭಾರತದ ಖ್ಯಾತ ಬಾಕ್ಸರ್ ವಿಜೇಂದರ್ ಸಿಂಗ್ ವೃತ್ತಿಪರ ಬಾಕ್ಸಿಂಗ್ ನಲ್ಲಿ ಜಯದ ನಾಗಾಲೋಟ ಮುಂದುವರಿಸಿದ್ದಾರೆ. ಶುಕ್ರವಾರ ರಾತ್ರಿ ನಡೆದ ತಮ್ಮ ಆರನೇ ಪಂದ್ಯದಲ್ಲಿ ವಿಜೇಂದರ್ ಪ್ರತಿಸ್ಪರ್ಧಿ ಪೊಲೆಂಡ್ ನ ಆಂಡ್ರೆಜ್ ಸೊಲ್ಡ್ರಾ ವಿರುದ್ಧ ಜಯ ಸಾಧಿಸಿದರು. ಎಂಟು ಸುತ್ತಿನ ಪಂದ್ಯದಲ್ಲಿ ಆಕ್ರಮಣಕಾರಿ ದಾಳಿ ನಡೆಸಿದ ವಿಜೇಂದರ್ ಮೂರನೇ ಸುತ್ತಿನ ವೇಳೆಗೆ ಆಂಡ್ರೆಜ್ ರನ್ನು ಹೊಡೆದು ಮಲಗಿಸಿದ್ದರು. ಎದುರಾಳಿ ಪಂದ್ಯದಲ್ಲಿ ಮುಂದುವರಿಯಲು ಸಾಧ್ಯವಾಗದ ಹಿನ್ನೆಲೆಯಲ್ಲಿ ವಿಜೇಂದರ್ ಜಯಶಾಲಿ ಎಂದು ಘೋಷಿಸಲಾಯಿತು.

Leave a Reply