ಮೂರು ಶತಮಾನ ಕಂಡ ವಿಶ್ವದ ಹಿರಿಯಜ್ಜಿ ಸುಸಾನ್ ಮುಶಾಟ್ ವಿಧಿಬಲೆಗೆ..

ಡಿಜಿಟಲ್ ಕನ್ನಡ ಟೀಮ್

ಆಯಸ್ಸು ಗಳಿಸೋಕೆ ಆಗಲ್ಲ, ಪಡಕೊಂಡು ಬಂದಿರಬೇಕು ಅಂತಾರೆ. ಶಿಸ್ತುಬದ್ಧ ಜೀವನಶೈಲಿ ದೀರ್ಘಾಯುಷ್ಯ ಕೊಡುತ್ತದೆ ಅನ್ನೋದು ನಂಬಿಕೆ. ಈ ನಂಬಿಕೆಗೆ ಅಪವಾದವಾದ ಕೆಲ ನಿದರ್ಶನಗಳೂ ಇವೆ. ಒಟ್ಟಿನಲ್ಲಿ ಆಯುಷ್ಯ ಎಂಬೋದು ಕರಗಲೇಬೇಕಾದ ಬುತ್ತಿ. ಅದು ಒಬ್ಬೊಬ್ಬರಿಗೆ ಒಂದೊಂದು ರೀತಿ. ಇಷ್ಟೆಲ್ಲ ಪೀಠಿಕೆ ಯಾಕಪ್ಪಾ ಅಂತಂದ್ರೆ ಮೂರು ಶತಮಾನ ದರ್ಶಿಸಿದ ವಿಶ್ವದ ಅತ್ಯಂತ ಹಿರಿಯಜ್ಜಿ, ಅಮೆರಿಕದ ಸುಸಾನ್ ಮುಶಾಟ್ ಜೋನ್ಸ್ ವಿಧಿವಶರಾಗಿದ್ದಾರೆ. ಅವರಿಗೆ ಬರೋಬ್ಬರಿ 116 ವರ್ಷವಾಗಿತ್ತು!

ಸುಸಾನ್ 1899 ರ ಜುಲೈ 6 ರಂದು ಅಂದರೆ 19 ನೇ ಶತಮಾನದಲ್ಲಿ ನ್ಯೂಯಾರ್ಕ್ ನ ಬ್ರೂಕ್ಲಿನ್ ಅಲ್ಬಾಮ ಫಾರ್ಮ್ ನಲ್ಲಿ ಜನಿಸಿದವರು. 20 ನೇ ಶತಮಾನವನ್ನು ಸಂಪೂರ್ಣ ಕ್ರಮಿಸಿ, 21 ನೇ ಶತಮಾನದಲ್ಲಿ ಅಂದರೆ ಮೊನ್ನೆ ಗುರುವಾರ (ಮೇ 12) ಇಹಲೋಕ ಯಾತ್ರೆ ಮುಗಿಸಿದ್ದಾರೆ. ಅಬ್ಬಾ, ಮೂರು ಶತಮಾನ ದರ್ಶನ ಭಾಗ್ಯ ಯಾರಿಗುಂಟು ಯಾರಿಗಿಲ್ಲ. ಸುಸಾನ್ ಅಲ್ಬಾಮದಲ್ಲೇ ಹುಟ್ಟಿ, ಬೆಳೆದವರು. ಇವರ  ಪೂರ್ವಜರು ಇದೇ ಪ್ರದೇಶದಲ್ಲಿ ಜೀತದಾಳುಗಾಳಾಗಿ ಸೇವೆ ಸಲ್ಲಿಸಿದವರು. ರಟ್ಟೆ ಮುರಿದು ದುಡಿಯುವುದು ಬಿಟ್ಟು ಅವರಿಗೆ ಬೇರೇನೂ ಗೊತ್ತಿರಲಿಲ್ಲ. ಸುಸಾನ್ ತಂದೆ, ತಾಯಿ ಕೂಡ ಬೆಳೆ ಕಟಾವು ಕೆಲಸ ಮಾಡುತ್ತಿದ್ದರು. ಅವರ ಜತೆ ಜಮೀನಿನಲ್ಲೇ ಕೆಲಸ ಮಾಡುತ್ತಾ,  1922 ರಲ್ಲಿ ಕರಿಯ ಜನಾಂಗದ ಬಾಲಕಿಯರಿಗೆ ನಡೆಸಲಾದ ವಿಶೇಷ ಶಿಕ್ಷಣ ಕಾರ್ಯಕ್ರಮದಲ್ಲಿ ಪ್ರೌಢಶಾಲೆ ಮುಗಿಸಿದವರು. ಇದು ಅವರ ಕಿರುಪರಿಚಯ.

ಇನ್ನು ಅವರ ಸುದೀರ್ಘ ಆಯಸ್ಸಿನ ಗುಟ್ಟು ಅವರು ಚಿಕ್ಕ ವಯಸ್ಸಿನಿಂದಲು ಹಣ್ಣು, ತರಕಾರಿಗಳನ್ನು ಹೆಚ್ಚಾಗಿ ಸೇವಿಸುತ್ತಿದ್ದುದು. ಪ್ರಕೃತಿ ಮಡಿಲಲ್ಲಿ ಜೀವನ ಅರಳಿಸಿಕೊಂಡ ಸುಸಾನ್ ಗೆ ಹಸಿರೇ ಉಸಿರಾಗಿತ್ತು. ಮದ್ಯ, ಸಿಗರೇಟು ಮತ್ತಿತರ ಚಟಗಳಿಂದ ದೂರ. ಪಾರ್ಟಿಗೀರ್ಟಿ ಬಗ್ಗೆ ಆಸಕ್ತಿ ಇರಲಿಲ್ಲ ಅಂತ ವಿವರಿಸುತ್ತಾರೆ ಅವರ ಕುಟುಂಬ ಸದಸ್ಯರು.

ಸುಸಾನ್ ಹಿರೀಕರೂ ದೀರ್ಘಾಯುಷಿಗಳಂತೆ. ಅವರ ಅಜ್ಜಿಯದು ಒಂದು ಕೈ ಮೇಲು. ಆಕೆ 117 ವರ್ಷ ಬದುಕಿದ್ದರು ಅನ್ನುತ್ತದೆ ಅಮೆರಿಕದ ಸೆನ್ಸಸ್ ಅಂಕಿ ಅಂಶ. ಮೂರು ಶತಮಾನದಲ್ಸುಲಿ ವಿಶ್ವದ ಅನೇಕ ಮಹತ್ತರ ಘಟನೆಗಳಿಗೆ ಸಾಕ್ಷಿಯಾದವರು ಸುಸಾನ್. ಆರ್ ಟಿ ಆನ್ ಲೈನ್ ವರದಿ ಪ್ರಕಾರ, ಸುಸಾನ್ ತಮ್ಮ ಜೀವನಯಾನದಲ್ಲಿ ಅಮೆರಿಕದ 20 ಅಧ್ಯಕ್ಷರ ಆಡಳಿತ, ಎರಡೂ ವಿಶ್ವಯುದ್ಧ ಕಂಡಿದ್ದಾರೆ.

ಸುಸಾನ್ ನಂತರ ವಿಶ್ವದ ಹಿರಿಯ ವ್ಯಕ್ತಿ ಎಂಬ ಹೆಗ್ಗಳಿಕೆ ಇದೀಗ ಇಟಲಿಯ ಎಮ್ಮಾ ಮೊರಾನೊ ಅವರದು. ಅವರ ವಯಸ್ಸೂ 116 ವರ್ಷ. ಇವರು ಸುಸಾನ್ ದಾಖಲೆ ಮುರಿಯಲಿ. ಮುರಿದು ಸುದೀರ್ಘ ಕಾಲ ಬಾಳಲಿ.

Leave a Reply