ಯಡಿಯೂರಪ್ಪ-ಸಿದ್ದರಾಮಯ್ಯ ‘ಜಗಳ್ ಬಂಧಿ’ಗೆ ಅವರವರ ಸಂಪುಟ ಸಹೋದ್ಯೋಗಿಗಳದೇ ‘ಸಾಥ್’!

ಡಿಜಿಟಲ್ ಕನ್ನಡ ಟೀಮ್

ಮಂತ್ರಿ ಮಂಡಲದ ಮೇಲೆ ಯಾರಿಗೆ ಹಿಡಿತ ಇದೆ ಅನ್ನೋ ವಿಚಾರದಲ್ಲಿ ಹೀಗೊಂದು ಜುಗಲ್ ಬಂಧಿ. ಇದನ್ನು ನಡೆಸಿಕೊಟ್ಟವರು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಹಾಲಿ ಮುಖ್ಯಮಂತ್ರಿ ಸಿದ್ದರಾಮಯ್ಯ. ಇದಕ್ಕೆ ಸಹಕಾರ ಕೊಟ್ಟವರು ಮಂತ್ರಿಗಳು. ಯಡಿಯೂರಪ್ಪ ಸಂಪುಟದಲ್ಲಿದ್ದವರು ಹಾಗೂ ಈಗ ಸಿದ್ದರಾಮಯ್ಯ ಸಂಪುಟದಲ್ಲಿರುವವರು. ಇನ್ನೂ ಸರಿಯಾಗಿ ಹೇಳಬೇಕೆಂದರೆ ಇವರ ಸಹಕಾರ ಇಲ್ಲದಿದ್ದರೆ ಸಿದ್ದರಾಮಯ್ಯ ಮತ್ತು ಯಡಿಯೂರಪ್ಪನವರ ನಡುವೆ ಈ ಜುಗಲ್ ಬಂಧಿ ಏರ್ಪಡುತ್ತಿರಲಿಲ್ಲ.

ವಿಷಯ ಏನು ಅಂತಂದ್ರೇ, ಮೂರು ವರ್ಷ ಅಧಿಕಾರ ಪೂರೈಸಿದ ಹಿನ್ನೆಲೆಯಲ್ಲಿ ಸರಕಾರದ ನಾನಾ ಯೋಜನೆಗಳ ಫಲಾನುಭವಿಗಳ ಅಭಿಪ್ರಾಯ ಆಲಿಸಲು ಗುರುವಾರ ಏರ್ಪಡಿಸಿದ್ದ ‘ಜನಮನ’ ಕಾರ್ಯಕ್ರಮದಲ್ಲಿ, ‘ಸಂಪುಟದ ಎಲ್ಲ ಸದಸ್ಯರೂ ಭಾಗವಹಿಸಬೇಕು, ತಮ್ಮ ಖಾತೆಗೆ ಸಂಬಂಧಪಟ್ಟ ಪ್ರಶ್ನೆ, ಅಹವಾಲುಗಳಿಗೆ ಉತ್ತರಿಸಬೇಕು, ಇಲ್ಲವೇ ತಮ್ಮ ಇಲಾಖೆ ಅಧಿಕಾರಿಗಳಿಂದ ಉತ್ತರ ಕೊಡಿಸಬೇಕು’ ಎಂದು ಸಿದ್ದರಾಮಯ್ಯನವರು ಮೊದಲೇ ಹುಕುಂ ಚಲಾಯಿಸಿದ್ದರು. ಈ ಹುಕುಂ ಹಿಂದಿರುವ ಅವರ ಕಾಳಜಿ ನೈಜ ಮತ್ತು ಮೆಚ್ಚುವಂತದ್ದೇ. ಆದರೆ ಅವರಿಗಿರೋ ಕಾಳಜಿ ಅವರ ಮಂತ್ರಿಗಳಿಗೆ ಇರಬೇಕಲ್ಲ. ಬರೋಬ್ಬರಿ ಹನ್ನೊಂದು ಸಚಿವರು ‘ಜನಮನ’ದ ಕಡೆ ತಲೆ ಹಾಕಿಯೂ ಮಲಗಲಿಲ್ಲ. ಪಾಪ, ಅವರಿಗೇನೂ ತೊಂದರೆ, ತಾಪತ್ರಯ ಇತ್ತೋ ಏನೋ. ಆದರೆ ಮುಜುಗರ ಆಗಿದ್ದು ಸಿದ್ದರಾಮಯ್ಯನವರಿಗೆ.

ಇದು ನಿನ್ನೆ ವಿಚಾರ. ಇವತ್ತೇನಾಯ್ತು ಅಂದರೆ, ಸರಕಾರದ ಮೂರು ವರ್ಷದ ಸಾಧನೆ ವಿವರಿಸುವ ಹೊತ್ತಿಗೆಯನ್ನು ಸಿದ್ದರಾಮಯ್ಯ ಅವರು ಶುಕ್ರವಾರ ಬಿಡುಗಡೆ ಮಾಡಿದ ಸಮಾರಂಭದಲ್ಲಿ ಒಬ್ಬರೇ ಒಬ್ಬ ಸಚಿವರು ಇರಲಿಲ್ಲ. ಅವರೆಲ್ಲ ಸರಕಾರ ಮಾಡಿರೋ ಸಾಧನೆ ಭಾಗವಾಗಿದ್ದಾರೋ ಇಲ್ಲವೋ ಗೊತ್ತಿಲ್ಲ. ಒಟ್ನಲ್ಲಿ ಅವರೆಲ್ಲ ನಾಪತ್ತೆಯಾಗಿದ್ದರು. ಅವರ ಗೈರಲ್ಲೇ ಸಿಎಂ ಸಾಧನೆ ಪುಸ್ತಕ ಬಿಡುಗಡೆ ಮಾಡಿದರು. ಆಗಲ್ಲಿದ್ದದ್ದು ಆಸ್ಥಾನ ಪಂಡಿತರು ಮಾತ್ರ.

ಪಾಪ, ಅದು ಸಿದ್ದರಾಮಯ್ಯನವರ ತಲೆನೋವು, ಆಡಳಿತ ಪಕ್ಷದ ವಿಷಯ, ತಮಗೂ ಅದಕ್ಕೂ ಸಂಬಂಧ ಇಲ್ಲ ಅಂತ ಈ ಯಡಿಯೂರಪ್ಪನವರು ಸುಮ್ಮನಿರಬೇಕಿತ್ತು. ಆದರೆ ಪ್ರತಿಪಕ್ಷ ಬಿಜೆಪಿ ಮುಖಂಡರು. ಹೊಸದಾಗಿ ರಾಜ್ಯಾಧ್ಯಕ್ಷರಾದ ಜೋಶ್ ಬೇರೆ ಜೋರಾಗಿಯೇ ಇದೆ. ಹಿಂಗಾಗಿ, ‘ಈ ಸರಕಾರದಲ್ಲಿ ಸಿದ್ದರಾಮಯ್ಯ ಏಕಾಂಗಿ, ಅವರ ಬೆಂಬಲಕ್ಕೆ ಒಬ್ಬ ಸಚಿವರೂ ಗತಿ ಇಲ್ಲ. ಬರೀ ಯಂಕ, ಸೀನ, ನಾಣಿ ಮಾತ್ರ ಪಕ್ಕದಲ್ಲಿದ್ದಾರೆ’ ಅಂತ ಕಿಚಾಯಿಸಿಬಿಟ್ಟರು. ಅವರೇನೋ ಹಂಗಂದುಕೊಂಡ್ರು, ಹೋಗಲಿ ಅಂತ ಈ ಮಾಧ್ಯಮದವರಾದರೂ  ಸುಮ್ಮನಿರಬೇಕಿತ್ತು. ಆದರೆ ವೃತ್ತಿಧರ್ಮ, ಏನು ಮಾಡೋದು. ಸಿಎಂ ಅವರನ್ನು ಕೇಳಿಯೇ ಬಿಟ್ಟರು.

‘ಯಡಿಯೂರಪ್ಪನವರು ಈ ಥರಕ್ಕೆ ಈ ಥರಾ ಅಂದವ್ರಲ್ಲಾ, ಇದಕ್ಕೇನಂತೀರಿ ಅಂತ ಪ್ರೆಸ್ ಕಾನ್ಫರೆನ್ಸಲ್ಲಿ ಪ್ರಶ್ನೆ ಕೇಳಿದ್ದೇ ತಡಾ ಸಿದ್ದರಾಮಯ್ಯನವರಿಗೆ ಮೈಮೇಲೆ ದೇವರು ಬಂದಂತಾಗಿ ಹೋಗಿದೆ. ಸರಿ ಶುರು ಹಚ್ಚಿಕೊಂಡಿದ್ದಾರೆ. ‘ಈ ಯಡಿಯೂರಪ್ಪನಿಗೆ ಮಾನ ಮರ್ಯಾದೆ ಇಲ್ಲ. ಅವರಿಗೇನಾದರೂ ಮಾನ ಮರ್ಯಾದೆ ಇದ್ದಿದ್ದರೆ ಈ ರೀತಿ ಮಾತಾಡ್ತಿರಲಿಲ್ಲ. ಅವರು ಸಿಎಂ ಆಗಿ ಬಳ್ಳಾರಿ ಜಿಲ್ಲಾ ಪ್ರವಾಸ ಕೈಗೊಂಡಾಗ ಮಂತ್ರಿಗಳಿರಲಿ, ಅಲ್ಲಿಯ ಜಿಲ್ಲಾಧಿಕಾರಿ ಕೂಡ ಅವರನ್ನು ಬರ ಮಾಡಿಕೊಳ್ಳಲಿಲ್ಲ. ಅದೆಲ್ಲ ಇರಲಿ, ಕನಿಷ್ಠ ಒಬ್ಬ ದಫೇದಾರ್ ಕೂಡ ಗತಿ ಇರಲಿಲ್ಲ. ಅವರ ಭ್ರಷ್ಟಾಚಾರಕ್ಕೆ ಹೆದರಿಕೊಂಡು ಅವರೆಲ್ಲ ಕಣ್ಮರೆ ಆಗಿದ್ದರು. ಇವಯ್ಯ ನನ್ ಬಗ್ಗೆ ಮಾತಾಡ್ತಾರಾ’ ಅಂತ ಗುಡುಗಿದಾಗ ಅಲ್ಲಿ ಸಿದ್ದರಾಮಯ್ಯನವರ ಒರಿಜಿನಲ್ ಸ್ಟೈಲ್ ವಿಜೃಂಭಿಸಿತ್ತು.

‘ಗಣಿ ರೆಡ್ಡಿಗಳ ಮಾತು ಕೇಳಿಕೊಂಡು ಶೋಭಾ ಕರಂದ್ಲಾಜೆ ಅವರನ್ನೇ ಮಂತ್ರಿಮಂಡಲದಿಂದ ಕೈಬಿಟ್ಟರು. ಇವರಿಗೆ ತಮ್ಮ ಮಂತ್ರಿಮಂಡಲದ ಮೇಲೆ ಹಿಡಿತವಿದ್ದಿದ್ದರೆ ಆ ಕೆಲಸ ಮಾಡುತ್ತಿರಲಿಲ್ಲ. ರೆಡ್ಡಿಗಳು ಇವರನ್ನು ಬುಗುರಿ ಥರಾ ಆಡಿಸಿದ್ರು. ಅಂಥವರು ನನಗೆ ಪಾಠ ಹೇಳ್ತಾರಾ. ಅವರಿಗೇನಾದರೂ ಮರ್ಯಾದೆ ಇದೆಯೇ’ ಅಂತ ಪ್ರಶ್ನಿಸಿದಾಗ ಉತ್ತರ ಹೇಳಬೇಕಾದ ಯಡಿಯೂರಪ್ಪನವರು ಅಲ್ಲಿರಲಿಲ್ಲ. ಮುಂದೇನಾದ್ರೂ ಹೇಳ್ತಾರಾ ನೋಡೋಣ.

Leave a Reply