ಒಲಿಂಪಿಕ್ಸ್ ರಿಂಗ್ ಆಚೆಗಿನ ಈ ಕುಸ್ತಿ ಬೇಕೇ? ಸುಶೀಲ್ ಆಡೋದಿಕ್ಕೆ ನರಸಿಂಗ್ ಯಾದವ್ ಬಲಿ ಕೋಡಬೇಕು ಏಕೆ?

ಡಿಜಿಟಲ್ ಕನ್ನಡ ಟೀಮ್

ಪ್ರತಿಷ್ಠಿತ ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ಎರಡೂವರೆ ತಿಂಗಳು ಬಾಕಿ ಇದೆ. ಅದಾಗಲೇ ಭಾರತದಲ್ಲಿ ಇದರ ಕಾವು ಕಾಣಿಸಿಕೊಂಡಿದೆ. ಹಾಗಂತ ಕ್ರೀಡಾಪಟುಗಳು ಸಿಕ್ಕಾಪಟ್ಟೆ ತಯಾರಿ ಮಾಡ್ಕೊತ್ತಿದ್ದಾರೆ, ಪದಕ ತರೋದಿಕ್ಕೆ ಹಪಾಹಪಿಸುತ್ತಿದ್ದಾರೆ ಅನ್ನೋದು ಇದಕ್ಕೆ ಕಾರಣ ಅಲ್ಲ. ಬದಲಿಗೆ 74 ಕೆ.ಜಿ ಕುಸ್ತಿ ವಿಭಾಗದಲ್ಲಿ ಸುಶೀಲ್ ಕುಮಾರ್ ಸೆಣಸಬೇಕೇ ಅಥವಾ ಯುವಪ್ರತಿಭೆ ನರಸಿಂಗ್ ಯಾದವ್ ಕಣಕ್ಕಿಳಿಸಬೇಕೇ ಅನ್ನೋ ವಿವಾದದಿಂದ.

ಅಂತಾರಾಷ್ಟ್ರೀಯ ಕುಸ್ತಿ ಸಂಸ್ಥೆಗಳ ಒಕ್ಕೂಟ ರಿಯೋ ಒಲಿಂಪಿಕ್ಸ್ ಕುಸ್ತಿ ಸ್ಪರ್ಧೆಯ ವಿಭಾಗದಲ್ಲಿ ಅದು 2013 ರ ಅಂತ್ಯದಲ್ಲಿ ತಂದ ಬದಲಾವಣೆಯಿಂದ ತೀವ್ರ ಪರಿಣಾಮ ಆಗಿದ್ದು ಭಾರತದ ಮೇಲೆ. ಬೀಜಿಂಗ್ ಹಾಗೂ ಲಂಡನ್ ಒಲಿಂಪಿಕ್ಸ್ ನಲ್ಲಿ ಭಾರತಕ್ಕೆ ಪದಕ ತಂದುಕೊಟ್ಟಿದ್ದ ಸುಶೀಲ್ ಕುಮಾರ್ ಸ್ಪರ್ಧಿಸುತ್ತಿದ್ದ 66 ಕೆ.ಜಿ ವಿಭಾಗ ರದ್ದಾಗಿತ್ತು. ಆಗ ರಿಯೋ ಒಲಿಂಪಿಕ್ಸ್ ನಲ್ಲಿ ಸುಶೀಲ್ ಮತ್ತೆ ಪದಕ ತರಬಲ್ಲರೇ ಎಂಬ ಆತಂಕ ಅಭಿಮಾನಿಗಳಲ್ಲಿ ಮೂಡಿತ್ತಿ. ನಂತರ ಸುಶೀಲ್ 74 ಕೆ.ಜಿಯಲ್ಲಿ ಆಡಲು ನಿರ್ಧರಿಸಿದರು.

ಆದರೆ ಕಳೆದ ವರ್ಷ ಲಾಸ್ ವೇಗಾಸ್ ವಿಶ್ವ ಚಾಂಪಿಯನ್ ಶಿಪ್ ನಲ್ಲಿ ಕಂಚಿನ ಪದಕ ಪಡೆದ ಯುವ ಕುಸ್ತಿಪಟು ನರಸಿಂಗ್ ಯಾದವ್ 74 ಕೆ.ಜಿ ವಿಭಾಗದಲ್ಲಿ ಭಾರತದ ಅರ್ಹತೆ ಗಿಟ್ಟಿಸಿದ್ದು ಈಗ ದ್ವಂದ್ವಕ್ಕೆ ಕಾರಣವಾಗಿದೆ. ಭಾರತಕ್ಕೆ ಒಲಿಂಪಿಕ್ಸ್ ಅರ್ಹತೆ ಸಿಕ್ತು ಅನ್ನೋ ಖುಷಿ ಒಂದೆಡೆಯಾದರೆ, ನರಸಿಂಗ್ ಹಾಗೂ ಸುಶೀಲ್ ಈ ಇಬ್ಬರಲ್ಲಿ ಯಾರನ್ನು ರಿಯೋದಲ್ಲಿ ಕಣಕ್ಕಿಳಿಸಬೇಕು ಅನ್ನೋ ತಾಪತ್ರಯ ಮತ್ತೊಂದೆಡೆ.

ಇಷ್ಟು ದಿನ ತಣ್ಣಗಿದ್ದ ಈ ಗೊಂದಲ ಕ್ರೀಡಾಕೂಟ ಸಮೀಪಿಸುತ್ತಿದ್ದಂತೆ ವಿವಾದದ ಸ್ವರೂಪ ಪಡೆದುಕೊಂಡಿದೆ. ಇಲ್ಲಿ ಎರಡು ವಾದಗಳಿವೆ. ಸುಶೀಲ್ ಕುಮಾರ್ ಈಗಾಗಲೇ ಭಾರತಕ್ಕೆ ಎರಡು ಪದಕಗಳನ್ನು ತಂದುಕೊಟ್ಟಿರುವಿದರಿಂದ ಅವರೇ ಆಡಿದರೆ ಭಾರತಕ್ಕೆ ಪದಕ ಸಾಧ್ಯತೆ ಹೆಚ್ಚು ಅನ್ನೋದು ಎಂದು. ಇಲ್ಲ, ಇಲ್ಲ  ಒಲಿಂಪಿಕ್ಸ್ ಗೆ ಅರ್ಹತೆ ತಂದುಕೊಟ್ಟಿರೋ ನರಸಿಂಗ್ ಅವರನ್ನೇ ಕಣಕ್ಕಿಳಿಸುವುದು ಸೂಕ್ತ ಅನ್ನೋದು ಮತ್ತೊಂದು.

ಈ ವಾದ-ವಿವಾದದ ನಡುವೆ ಈ ಇಬ್ಬರು ಆಟಗಾರರ ಟ್ರಾಕ್ ರೆಕಾರ್ಡ್ ನೋಡೋಣ. ನರಸಿಂಗ್ ಯಾದವ್ ಎರಡು ವರ್ಷಗಳಲ್ಲಿ ವಿಶ್ವ ಚಾಂಪಿಯನ್ ಶಿಪ್, ಏಷ್ಯನ್ ಗೇಮ್ಸ್ ಹಾಗೂ ಏಷ್ಯನ್ ಚಾಂಪಿಯನ್ ಶಿಪ್ ನಲ್ಲಿ ಕಂಚಿನ ಪದಕ ಪಡೆದಿದ್ದಾರೆ. ಒಲಿಂಪಿಕ್ಸ್ ನಲ್ಲಿ ಸೆಣಸಬೇಕೆಂದು ಹಗಲು ರಾತ್ರಿ ತಾಲೀಮು ನಡೆಸಿದ್ದಾರೆ. ಇನ್ನು ಸುಶೀಲ್ ಭಾರತ ಕಂಡ ಶ್ರೇಷ್ಠ ಕುಸ್ತಿಪಟು. 2008 ರ ಬೀಜಿಂಗ್ ಒಲಿಂಪಿಕ್ಸ್ ನಲ್ಲಿ ಕಂಚು, 2012 ರ ಲಂಡನ್ ಒಲಿಂಪಿಕ್ಸ್ ನಲ್ಲಿ ಬೆಳ್ಳಿ ಪದಕ ಪಡೆದಿದ್ದಾರೆ. ಈ ಬಾರಿ ಒಲಿಂಪಿಕ್ಸ್ ನಲ್ಲಿ ಚಿನ್ನ ಗೆಲ್ಲೋ ಗುರಿ ಹೊಂದಿದ್ದಾರೆ. ಆದರೆ ಒಲಿಂಪಿಕ್ಸ್ ನಲ್ಲಿ ಸುಶೀಲ್ ಸಾಧನೆ ಮಾಡಿರೋದು 66 ಕೆ.ಜಿ. ಫ್ರೀಸ್ಟೈಲ್ ವಿಭಾಗದಲ್ಲಿ. ಈಗ ಸ್ಪರ್ಧಿಸಬೇಕಿರೋ ವಿಭಾಗ 74 ಕೆ.ಜಿ. ಇದರಲ್ಲಿ ಅವರು 2014 ರ ಕಾಮನ್ ವೆಲ್ತ್ ಕ್ರೀಡಾಕೂಟದ ಚಿನ್ನದ ಪದಕವೇನೋ ಗೆದ್ದಿದ್ದಾರೆ. ಆದರೆ ಕಳೆದ ಎರಡು ವರ್ಷದಲ್ಲಿ ಮತ್ತೆ ಅಂತಾರಾಷ್ಟ್ರೀಯ ಮಟ್ಟದ ಈ ವಿಭಾದಗ ಸ್ಪರ್ಧೆಗಳಲ್ಲಿ ಅವರು ಸೆಣೆಸಿಲ್ಲ. ಗಾಯದ ಸಮಸ್ಯೆ, ಫಾರ್ಮ್ ಕೊರತೆಯಿಂದ ಹಲವು ಟೂರ್ನಿಗಳಿಂದ ಹಿಂದೆ ಸರಿದಿದ್ದಾರೆ.

ವಿಷಯ ಏನೋ ಇರಲಿ ಈ ಗೊಂದಲ ಬಗೆಹರಿಸೋ ಜವಾಬ್ದಾರಿಯನ್ನು ಭಾರತೀಯ ಕುಸ್ತಿ ಸಂಸ್ಥೆಗೆ ಬಿಟ್ಟುಬಿಟ್ಟಿದ್ದರೆ ಇದು ವಿವಾದವೂ ಆಗುತ್ತಿರಲಿಲ್ಲ. ದೊಡ್ಡ ಚರ್ಚೆಗೂ ಆಸ್ಪದ ಇರುತ್ತಿರಲಿಲ್ಲ. ಆದರೆ ಸುಶೀಲ್ ಸೂಕ್ಷ್ಮವಾಗಿ ಸಮಸ್ಯೆ ಬಗೆಹರಿಸಿಕೊಳ್ಳುವ ಬದಲು ವಿವಾದದ ಬಾವುಟ ಹಿಡಿದು ನಿಂತಿದ್ದಾರೆ. ಆರಂಭದಲ್ಲಿ ‘ನನ್ನ ಮತ್ತು ನರಸಿಂಗ್ ನಡುವೆ ಒಂದು ಆಯ್ಕೆ ಪಂದ್ಯ ನಡೆಯಲಿ, ಗೆದ್ದವರಿಗೆ ಒಲಿಂಪಿಕ್ಸ್ ಅವಕಾಶ ಕೊಡಿ’ ಎಂದಿದ್ದ ಸುಶೀಲ್ ಈಗ ಮತ್ತೊಂದು ಹೆಜ್ಜೆ ಮುಂದೆ ಹೋಗಿದ್ದಾರೆ. ಟ್ವಿಟರ್ ನಲ್ಲಿ ‘ಜಸ್ಟೀಸ್ ಫಾರ್ ಸುಶೀಲ್’ ಎಂಬ ಆಶ್ಟ್ಯಾಗ್ ಮೂಲಕ ‘ನನಗೆ ಒಲಿಂಪಿಕ್ಸ್ ನಲ್ಲಿ ಮತ್ತೊಂದು ಅವಕಾಶ ಕೊಡಿ’ ಎಂದು ಪ್ರಧಾನಿ ಮೋದಿ ಹಾಗೂ ಕ್ರೀಡಾ ಸಚಿವಾಲಯವನ್ನು ಕೇಳಿದ್ದಾರೆ. ಒಂದೊಮ್ಮೆ ಅವಕಾಶ ಸಿಗದೇ ಹೋದರೆ ಕೋರ್ಟ್ ಮೆಟ್ಟಿಲೇರಲೂ ಸಜ್ಜಾಗಿದ್ದಾರೆ.

ನರಸಿಂಗ್ ಇದಕ್ಕೆ ವ್ಯತಿರಿಕ್ತ ವಾದ ಮಂಡಿಸುತ್ತಿದ್ದಾರೆ. ‘ಒಲಿಂಪಿಕ್ಸ್ ನೇರ ಅರ್ಹತೆ ಗಿಟ್ಟಿಸಿರೋದು ನಾನು, ಹೀಗಾಗಿ ನನಗೆ ಅವಕಾಶ ಕೊಡೋದು ನ್ಯಾಯ. ನಾನು ಒಲಿಂಪಿಕ್ಸ್ ಗೆ ಹೋಗಬಾರದು ಅಂತ ಹೇಳಲು ಸುಶೀಲ್ ಗೆ ಯಾವುದೇ ಅಧಿಕಾರ ಇಲ್ಲ’ ಎಂದಿದ್ದಾರೆ.

ಸುಶೀಲ್ ಭಾರತದ ಖ್ಯಾತ ಕುಸ್ತಿಪಟು. ಆದರೆ, ನರಸಿಂಗ್ ಗಿಟ್ಟಿಸಿರುವ ಅವಕಾಶ ತನಗೇ ದಕ್ಕಬೇಕು ಅಂತ ಹಠ ಹಿಡಿದಿರೋದು ಸರಿಯಲ್ಲ. ನರಸಿಂಗ್ ಸಹ ಯುವ ಪ್ರತಿಭೆ. ಪ್ರತಿಯೊಬ್ಬ ಕ್ರೀಡಾಪಟುವಿಗೆ ಇರುವಂತೆ ಒಲಿಂಪಿಕ್ಸ್ ನಲ್ಲಿ ದೇಶ ಪ್ರತಿನಿಧಿಸೋ ಕನಸು ಇವರಿಗೂ ಇದೆ. ಅದಕ್ಕವರು ಪಟ್ಟಿರುವ ಶ್ರಮ ಅವರಿಗೆ ಮಾತ್ರ ಗೊತ್ತಿರಲು ಸಾಧ್ಯ. ಕನಸು ನನಸಾಗೋ ಹೊತ್ತಿನಲ್ಲಿ ಇನ್ಯಾರೋ ತನ್ನ ಶ್ರಮದ ಫಲ ಅಪಹರಿಸುತ್ತಿದ್ದಾರೆ ಅಂದರೆ ಯಾರು ತಾನೇ ಸಹಿಸಿಕೊಳ್ಳುತ್ತಾರೆ.

ನರಸಿಂಗ್ ಬದಲು ಸುಶೀಲ್ ಕಣಕ್ಕಿಳಿದರೆ ಭಾರತಕ್ಕೆ ಚಿನ್ನದ ಪದಕ ಬರಬಹುದು. ಹಾಗಂತ ಮತ್ತೊಂದು ಪ್ರತಿಭೆ ಕುತ್ತಿಗೆ ಹಿಚುಕುವುದು ಸರಿಯಲ್ಲ. ಯಾರಿಗೆ ಗೊತ್ತು. ನರಸಿಂಗ್ ಕೂಡ ಪದಕ ತರಬಹುದು. ಅದಕ್ಕಿಂತ ಮುಖ್ಯವಾಗಿ ಇಲ್ಲಿ ಗೆಲ್ಲಬೇಕಿರೋದು ಕ್ರೀಡಾಸ್ಫೂರ್ತಿ. ಮತ್ತೊಂದು ಪ್ರತಿಭೆ ಅರಳಲು ಅವಕಾಶ ಮಾಡಿಕೊಡುವ ಮೂಲಕ ಸುಶೀಲ್ ಕುಮಾರ್ ತಮ್ಮ ಘನತೆ ಹಿಗ್ಗಿಸಿಕೊಳ್ಳಬೇಕು. ಅದನ್ನು ಬಿಟ್ಟು ಹೀಗೆ ಕಿತ್ತಾಡುತ್ತಾ ಹೋದರೆ ಮಸಿ ಬೀಳುವುದು ಭಾರತೀಯ ಕ್ರೀಡಾ ರಂಗದ ಮೇಲೆ ಎಂಬುದನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕು.

Leave a Reply