ಭಾನುವಾರಕ್ಕೆರಡು ತಮಾಷೆಯ ಕತೆ: ಕಪ್ಪೆ ಸುಂದರಿ ಮತ್ತು ಸುಬ್ಬಮ್ಮನ ಪ್ರವಾಸ..

ತನ್ಮಯ

ಆ ಶ್ರೀಮಂತರ ಮನೆಯ ರಾಜಕುಮಾರಿಯಂಥ ಹುಡುಗಿ ಸ್ವಿಮ್ಮಿಂಗ್ಫೂಲಿನಲ್ಲಿ ಕಾಲುಚಾಚಿ ತನ್ನದೇ ಲಹರಿಯಲ್ಲಿದ್ದಳು. ಆಗೊಂದು ಕಪ್ಪೆ ಟಣ್ಣನೇ ಇವಳ ಸನಿಹ ನೆಗೆದು ಇವಳನ್ನೇ ನೋಡತೊಡಗಿತು. ಈಕೆಯೂ ಅದನ್ನು ನೋಡಿ, ಅರೇ ಇದೆಲ್ಲಿಂದ ಬಂತು ಎಂಬಂತೆ ಯೋಚಿಸತೊಡಗಿದಳು.

ಆಗ ಕಪ್ಪೆ ಮಾತನಾಡಿತು…

ಎಂಥದು ಮಾರಾಯ್ತಿ, ನೀನು ರಾಜಕುಮಾರಿ ಮತ್ತು ಕಪ್ಪೆಯ ಕತೆ ಕೇಳಿಲ್ಲವಾ? ರಾಜಕುಮಾರ ಶಾಪಗ್ರಸ್ತನಾಗಿ ಕಪ್ಪೆ ರೂಪದಲ್ಲಿರುತ್ತಾನೆ. ರಾಜಕುಮಾರಿಯ ಹಸ್ತಸ್ಪರ್ಶವಾಗುತ್ತಲೇ ಕಪ್ಪೆ ಸುಂದರ ರಾಜಕುಮಾರನಾಗಿ ಬದಲಾಗುತ್ತದೆ. ನಂತರ ಇಬ್ಬರೂ ವಿವಾಹವಾಗುತ್ತಾರೆ. ನಂದೂ ಅಂಥದೇ ಕೇಸು. ನೀನೊಂದು ಮುತ್ತು ಕೊಡು. ನಾನು ಸುಂದರ ಯುವಕನಾಗಿ ಬದಲಾಗುತ್ತೇನೆ…

ಈ ಮಾತು ಕೇಳಿಸಿಕೊಂಡವಳು ಕಪ್ಪೆಯನ್ನು ಪ್ರಶ್ನಿಸಿದಳು- ಅದೆಲ್ಲ ಸರಿ. ನಂತ್ರ ಏನಾಗುತ್ತೆ? ಮುಂದಿನ ಕತೆ ಏನು?

ಕಪ್ಪೆ ಉತ್ಸುಕವಾಗಿ ಹೇಳಿತು- ಮುಂದೇನಿದೆ ಕತೆ? ಅತಿ ಸುಂದರ ಯುವಕನಾಗಿ ಬದಲಾಗಿ ನಾನು ನಿನ್ನನ್ನು ಮದುವೆ ಆಗುತ್ತೇನೆ. ನನ್ನೊಂದಿಗೆ ಸಂತೋಷವಾಗಿ ಕಾಲ ಕಳಿ. ನನ್ನ ಹೆಂಡತಿಯಾಗಿ ನನ್ನ ಮಕ್ಕಳನ್ನು ಹೆತ್ತು, ಕುಟುಂಬವನ್ನು ನೋಡಿಕೊಳ್ಳುವಿಯಂತೆ…

ಅವತ್ತು ರಾತ್ರಿ….

ಹುಡುಗಿ ಡರ್ರೆಂದು ತೇಗಿದಳು. ಕಪ್ಪೆ ಮಾಂಸದ ಊಟ ಭರ್ಜರಿ ರುಚಿಸಿತ್ತು.

ಕತೆಯ ನೀತಿ: ಕಾಲ ಬದಲಾಗಿದೆ, ಹುಡುಗಿಯರ ಆಯ್ಕೆಗಳು ಬದಲಾಗಿವೆ. ನೀವೇ ಸ್ಮಾರ್ಟ್, ನಿಮ್ಮ ಆಫರ್ರು ಬೆಸ್ಟು ಅಂದ್ಕೋಬೇಡಿ.
—–
ಸುಬ್ಬಮ್ಮ ಪ್ರವಾಸದಲ್ಲಿದ್ದಳು. ವಿಧಾನಸೌಧದ ಮುಂದೆ ಬಂದಾಗ ಪ್ರವಾಸಿ ಬಸ್ಸಿನ ಡ್ರೈವರ್ ವಿವರಿಸುತ್ತಿದ್ದ- ‘ಇದು ಕೆಂಗಲ್ ಹನುಮಂತಯ್ಯನವರ ಕಾಲದ್ದು. ಕಟ್ಟಲಿಕ್ಕೆ ವರ್ಷಗಳು ಹಿಡಿದವು. ಬಹಳ ಅಪರೂಪದ ವಾಸ್ತುಶಿಲ್ಪ…’ ಇತ್ಯಾದಿ.

ಸುಬ್ಬಮ್ಮ ಒಂದಿನಿತೂ ಬೆರಗುಪಡದೇ- ಅಷ್ಟೆಲ್ಲ ಕಷ್ಟ ಪಟ್ರೇನು? ನಮ್ಮೂರಲ್ಲಿ ಇಂಥದ್ದನ್ನೆಲ್ಲ ತಿಂಗಳಲ್ಲಿ ಕಟ್ಟಿ ಮುಗಿಸ್ತಾರೆ ಅಂತ ಮಾತು ಒಗಾಯಿಸಿಯೇ ಬಿಟ್ಳು. ಗವಿ ಗಂಗಾಧರೇಶ್ವರ ದೇವಸ್ಥಾನಕ್ಕೆ ಹೋದಾಗ ಅದರ ಪುರಾತನತೆ, ಸಂಕ್ರಾಂತಿ ದಿನ ಸೂರ್ಯನ ಬೆಳಕು ಲಿಂಗದ ಮೇಲೆ ಬೀಳುವಂತೆ ಚಾಕಚಕ್ಯತೆಯಿಂದ ಕಟ್ಟಲಾಗಿದೆ ಎಂದೆಲ್ಲ ವಿವರಿಸಿದ. ಸುಬ್ಬಮ್ಮನದ್ದು ಬೆರಗುರಹಿತ ಪ್ರತಿಕ್ರಿಯೆ- ಇಂಥದ್ದನ್ನೆಲ್ಲ ನಮ್ಮೂರಿನಲ್ಲಿ ಹದಿನೈದು ದಿನದ ಒಳಗೆ ಕಟ್ಟಿಬಿಡ್ತಾರೆ.

ಏನೇ ತೋರಿಸಿದರೂ ಹಿಂಗಿದ್ದೇ ಕಾಮೆಂಟು ಕೇಳಿ ಚಾಲಕನಿಗೂ ರೋಸಿ ಹೋಗಿತ್ತು. ಇಸ್ಕಾನ್ ಮಂದಿರಕ್ಕೆ ಹೋದಾಗ ಈತ ಮಾತನಾಡಲೇ ಇಲ್ಲ. ಆಗ ಸುಬ್ಬಮ್ಮನೇ ಕೇಳಬೇಕಾಗಿ ಬಂತು- ಯಾವುದಿದು? ಚೆಂದ ಇದೆಯಲ್ಲ…

ಡ್ರೈವರ್ ಪಟಕ್ಕನೇ ಹೇಳಿದ- ಯಾವ್ದೋ ಗೊತ್ತಿಲ್ಲ ಮೇಡಂ… ನಿನ್ನೆ ಬಂದಾಗ ಇದು ಇಲ್ಲಿ ಇದ್ದಿರಲೇ ಇಲ್ಲ!

Leave a Reply