ಅಧಿಕಾರಿಗಳಿಗೆ ಸಿದ್ದರಾಮಯ್ಯ ವಾರ್ನಿಂಗ್, ನ್ಯಾಯಾಂಗಕ್ಕೆ ಲಕ್ಷ್ಮಣರೇಖೆ ಬೇಕೆಂದ ಜೇಟ್ಲಿ, ಕೋರ್ಟ್ ಮೆಟ್ಟಿಲೇರಿದ ಸುಶೀಲ್, ಮೂರು ರಾಜ್ಯಗಳ ಚುನಾವಣೆ ಅಂತ್ಯ

Minister Ramalingareddy inaugurating the “Mango and Jackfruit Sale Fair 2016” at Hudson Circle Hop Comps in Bengaluru on Monday.

ಬೆಂಗಳೂರಿನ ಹಡ್ಸನ್ ವೃತ್ತದ ಹಾಪ್ ಕಾಮ್ಸ್ ನಲ್ಲಿ ಸೋಮವಾರ ನಡೆದ ಮಾವು ಮತ್ತು ಹಲಸು ಮೇಳ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಚಿವ ರಾಮಲಿಂಗಾ ರೆಡ್ಡಿ

ಡಿಜಿಟಲ್ ಕನ್ನಡ ಟೀಮ್

ಇನ್ನು ಮುಂದೆ ಅಧಿಕಾರಿಗಳ ಅಸಡ್ಡೆ ಸಹಿಸುವುದಿಲ್ಲ. ಇಲಾಖಾ ಕಾರ್ಯದರ್ಶಿಗಳಿಂದ ಹಿಡಿದು ಕೆಳಹಂತದ ಅಧಿಕಾರಿಗಳವರೆಗೆ ಎಲ್ಲರೂ ಬೆಳಗ್ಗೆ 10 ಕ್ಕೆ ಕಚೇರಿಯಲ್ಲಿರುವುದು ಕಡ್ಡಾಯ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಖಡಕ್ ಸೂಚನೆ ನೀಡಿದ್ದಾರೆ.

ಸರ್ಕಾರ ನಾಲ್ಕನೇ ವರ್ಷಕ್ಕೆ ಕಾಲಿರಿಸಿರುವ ಬೆನ್ನಲ್ಲೇ ಆಡಳಿತಯಂತ್ರದ ವೇಗ ಹೆಚ್ಚಿಸಲು ಸೋಮವಾರ ನಡೆಸಿದ ಕಾರ್ಯದರ್ಶಿಗಳ ಮಟ್ಟದ ಸಭೆಯಲ್ಲಿ ಈ ಬಗ್ಗೆ ಆದೇಶ ನೀಡಿದರು. ಇಲಾಖಾ ಮುಖ್ಯಸ್ಥರು ನಿತ್ಯ ಜನತಾದರ್ಶನ ನಡೆಸಿ, ಜನರ ದೂರು ದುಮ್ಮಾನಗಳಿಗೆ ಸ್ಪಂದಿಸಬೇಕು ಎಂದರು.

ಕಡತ ವಿಲೇವಾರಿಗೆ ಹಣ ಪಡೆದರೂ, ಹಣ ಪಡೆಯದೆ ಕಡತ ವಿಲೇವಾರಿ ಮಾಡದಿದ್ದರೂ ಎರಡೂ ಭ್ರಷ್ಟಾಚಾರಕ್ಕೆ ಸಮ. ಇದರಿಂದ ಜನರಲ್ಲಿ ಸರಕಾರಿ ವಿರೋಧಿ ಭಾವನೆ ಮೂಡುತ್ತದೆ. ಇದನ್ನಿನ್ನು ಸಹಿಸಲು ಸಾಧ್ಯವಿಲ್ಲ. ಬೊಕ್ಕಸದಲ್ಲಿ ಹಣವಿದೆ. ಯೋಜನೆಗಳಿಗೆ ಹಣ ಬಿಡುಗಡೆ ಮಾಡುತ್ತೇವೆ. ಆದರೆ ಅಧಿಕಾರಿಗಳ ವಿಳಂಬ ನೀತಿಯಿಂದ ಸರಕಾರಕ್ಕೆ ಕೆಟ್ಟ ಹೆಸರು ಬರುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಇಲಾಖೆಗಳ ನಡುವೆ ಸಮನ್ವಯ, ಸಾಮರಸ್ಯ ಇಲ್ಲ. ಇದರಿಂದ ಅಭಿವೃದ್ಧಿ ಕಾರ್ಯ ಆಗುತ್ತಿಲ್ಲ. ಒಬ್ಬರ ಮೇಲೋ ಹೊಣೆ ವರ್ಗಾಯಿಸಿ ಬಡವರನ್ನು ಮರೆಯುತ್ತಿದ್ದೀರಿ. ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ಆರು ತಿಂಗಳಿಗೊಂದು ಸಭೆ ನಡೆಸದಿದ್ದರೆ ಹೇಗೆ? ಉಳಿದಿರೋದು ಇನ್ನೆರಡೇ ವರ್ಷ. ಒಳ್ಳೆ ಕೆಲಸ ಮಾಡಿ ಜನಮೆಚ್ಚುಗೆ ಪಡೆಯಬೇಕಿದೆ ಎಂದರು.

ನ್ಯಾಯಾಂಗಕ್ಕೂ ಲಕ್ಷ್ಮಣರೇಖೆ ಅಪೇಕ್ಷಣೀಯ: ಜೇಟ್ಲಿ

ಆಡಳಿತದಲ್ಲಿ ನ್ಯಾಯಾಂಗದ ಹಸ್ತಕ್ಷೇಪದ ಬಗ್ಗೆ ಬೇಸರ ವ್ಯಕ್ತಪಡಿಸಿರುವ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ, ನ್ಯಾಯಾಂಗ ತನ್ನ ಮಿತಿ ಅರಿತು ನಡೆಯಬೇಕಿದೆ ಎಂದು ತಿಳಿಸಿದ್ದಾರೆ. ‘ನ್ಯಾಯಾಂಗವು ತನ್ನ ಕಾರ್ಯವೈಖರಿ ಬಗ್ಗೆ ಆತ್ಮವಿಮರ್ಶೆ ಮಾಡಿಕೊಳ್ಳಬೇಕಿದೆ. ಆಡಳಿತಾತ್ಮಕ ನಿರ್ಧಾರ ತೆಗೆದುಕೊಳ್ಳುವುದು ನ್ಯಾಯಾಂಗದ ಕೆಲಸವಲ್ಲ’ ಎಂದರು.

ಕೋರ್ಟ್ ಮೆಟ್ಟಿಲೇರಿದ ಸುಶೀಲ್ ಕುಮಾರ್

ಒಲಿಂಪಿಕ್ಸ್ 74 ಕೆ.ಜಿ ವಿಭಾಗದಲ್ಲಿ ಭಾರತದ ಪರ ಕಣಕ್ಕಿಳಿಯಲು ನರಸಿಂಗ್ ಯಾದವ್ ವಿರುದ್ಧ ಮುಕ್ತ ಆಯ್ಕೆ ಟ್ರಯಲ್ ಪಂದ್ಯ ನಡೆಸಬೇಕೆಂದು ಖ್ಯಾತ ಕುಸ್ತಿಪಟು ಸುಶೀಲ್ ಕುಮಾರ್ ದೆಹಲಿ ಹೈಕೋರ್ಟ್ ಮೊರೆ ಹೋಗಿದ್ದಾರೆ. ಒಲಿಂಪಿಕ್ಸ್ ಪೂರ್ವಸಿದ್ಧತಾ ಶಿಬಿರದಲ್ಲಿ ಭಾಗವಹಿಸುವವರ ಪಟ್ಟಿಯಿಂದ ಭಾರತೀಯ ಕುಸ್ತಿ ಸಂಸ್ಥೆ ಸುಶೀಲ್ ಕುಮಾರ್ ಹೆಸರು ಕೈಬಿಟ್ಟಿದೆ. ಇದರಿಂದ ಸುಶೀಲ್ ಒಲಿಂಪಿಕ್ಸ್ ಹಾದಿ ಬಹುತೇಕ ಅಂತ್ಯವಾಗಿದೆ. ಹೀಗಾಗಿ ಕೊನೆ ಯತ್ನವಾಗಿ ಅವರು ಕೋರ್ಟ್ ಮೆಟ್ಟಿಲೇರಿದ್ದಾರೆ. ದೆಹಲಿ ಹೈಕೋರ್ಟ್ ಮಂಗಳವಾರ ಸುಶೀಲ್ ಅರ್ಜಿ ವಿಚಾರಣೆ ನಡೆಸುವ ಸಾಧ್ಯತೆ ಇದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಕೇಂದ್ರ ಕ್ರೀಡಾ ಸಚಿವ ಸರ್ಬಾನಂದ ಸೋನೊವಾಲ್, ಸುಶೀಲ್ ಹಾಗೂ ನರಸಿಂಗ್ ಪ್ರಕರಣದಲ್ಲಿ ಸರ್ಕಾರ ಹಸ್ತಕ್ಷೇಪ ಮಾಡದು ಎಂದಿದ್ದಾರೆ.

ಕೇರಳ, ತಮಿಳುನಾಡು, ಪುದುಚೆರಿ ರಾಜ್ಯ ಚುನಾವಣೆ ಅಂತ್ಯ

ದಕ್ಷಿಣ ಭಾರತದ ಮೂರು ರಾಜ್ಯಗಳ ಚುನಾವಣೆಗೆ ಸೋಮವಾರ ತೆರೆ ಬಿದ್ದಿದೆ. ಕೇರಳ, ತಮಿಳುನಾಡು, ಪುದುಚೇರಿಯಲ್ಲಿ ಮತದಾನ ನಡೆದಿದ್ದು, ಈ ರಾಜ್ಯಗಳ ಜತೆಗೆ ಅಸ್ಸಾಂ ಮತ್ತು ಪಶ್ಚಿಮ ಬಂಗಾಳ  ಚುನಾವಣೆ ಫಲಿತಾಂಶ ಮೇ 19 ರಂದು ಹೊರ ಬೀಳಲಿದೆ.

ತಮಿಳುನಾಡಿನಲ್ಲಿ ಅಣ್ಣಾಡಿಎಂಕೆ, ಡಿಎಂಕೆ ಹಾಗೂ ಪೀಪಲ್ ವೆಲ್ಫೆರ್ ಫ್ರಂಟ್ ನಡುವೆ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ಅದೇ ರೀತಿ ಕೇರಳದಲ್ಲೂ ಯುಡಿಎಫ್, ಎಲ್ ಡಿಎಫ್ ನಡುವೆ ಬಿಜೆಪಿಯೂ ಪೈಪೋಟಿ ನೀಡುತ್ತಿದೆ.

ಮೂರೂ ರಾಜ್ಯಗಳಲ್ಲಿ ಶಾಂತಿಯುತ ಮತದಾನವಾಗಿದೆ. ಸಿನಿಮಾ, ರಾಜಕೀಯ ಸೇರಿ ನಾನಾ ಕ್ಷೇತ್ರದಳ ಖ್ಯಾತನಾಮರು ಹಕ್ಕು ಚಲಾಯಿಸಿದರು. ಕೆಲವೆಡೆ ಮಳೆ ಸುರಿಯುತ್ತಿದ್ದರೂ ಲೆಕ್ಕಿಸದೆ ಮತದಾರರು ಸರದಿಯಲ್ಲಿ ನಿಂತು ಮತ ಚಲಾಯಿಸಿದರು.

ವೈದ್ಯ, ಎಂಜನಿಯರಿಂಗ್ ಏಕಕಾಲ ಪ್ರವೇಶ ಪ್ರಕ್ರಿಯೆಗೆ ಮನವಿ

ಸುಪ್ರೀಂ ಕೋರ್ಟ್ ಆದೇಶದಂತೆ ನಡೆದಿರುವ ನೀಟ್ ಪರೀಕ್ಷೆ ಫಲಿತಾಂಶ ಜುಲೈ 17 ರಂದು  ಪ್ರಕಟಗೊಳ್ಳಲಿದ್ದು, ಸಿಇಟಿ ಫಲಿತಾಂಶಕ್ಕಿಂತಲೂ ವಿಳಂಬವಾಗಲಿದೆ. ಹೀಗಾಗಿ ವೈದ್ಯ, ದಂತ ವೈದ್ಯ ಹಾಗೂ ಎಂಜಿನಿಯರಿಂಗ್ ಕೋರ್ಸುಗಳ ಪ್ರವೇಶ ಪ್ರಕ್ರಿಯೆ ಒಟ್ಟಿಗೆ ನಡೆಸಲು ಅನುವು ಮಾಡಿಕೊಡುವಂತೆ ರಾಜ್ಯ ಸರ್ಕಾರ ಸುಪ್ರೀಂಕೋರ್ಟ್ ಗೆ ಮನವಿ ಮಾಡಿದೆ.

ಈ ಸಂಬಂಧ ಇಲಾಖೆಯ ಉನ್ನತ ಅಧಿಕಾರಿಗಳ ಸಭೆ ನಡೆಸಲು ಉನ್ನತ ಶಿಕ್ಷಣ ಸಚಿವ ಟಿ.ಬಿ.ಜಯಚಂದ್ರ ನಿರ್ಧರಿಸಿದ್ದಾರೆ. ನೀಟ್ ಫಲಿತಾಂಶ ವಿಳಂಬದಿಂದ ಎಂಜಿನಿಯರಿಂಗ್ ಕೋರ್ಸು ಪ್ರವೇಶ ಬಯಸುವ ವಿದ್ಯಾರ್ಥಿಗಳಿಗೆ ಸಮಸ್ಯೆಯಾಗಲಿದೆ. ಸಿಇಟಿ ಫಲಿತಾಂಶ ಮೇ 27 ಕ್ಕೆ ಪ್ರಕಟವಾಗಲಿದೆ.

ಇನ್ನುಳಿದಂತೆ ನೀವು ತಿಳಿಯಬೇಕಿರೋ ಪ್ರಮುಖ ಸುದ್ದಿ ಸಾಲುಗಳು..

  • ಇನ್ಫೋಸಿಸ್ ಸಿಇಒ ವಿಕಾಸ್ ಸಿಕ್ಕಾ ವಾರ್ಷಿಕ ₹ 73.5 ಕೋಟಿ ವೇತನ ಜೇಬಿಗಿಳಿಸಿಕೊಂಡಿದ್ದಾರೆ. ಎರಡು ವರ್ಷಗಳ ಹಿಂದೆ ಕುಸಿತದಲ್ಲಿದ್ದ ಕಂಪನಿ ಜವಾಬ್ದಾರಿ ಹೊತ್ತ ವಿಕಾಸ್ ಸತತ ಆದಾಯ ಹೆಚ್ಚಿಸುತ್ತಲೇ ಬಂದಿದ್ದಾರೆ.
  • ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಜ್ವರದಿಂದ ಬಳಲುತ್ತಿದ್ದು, ಅವರು ಆದಷ್ಟು ಬೇಗ ಚೇತರಿಸಿಕೊಳ್ಳಲಿ ಎಂದು ಪ್ರಧಾನಿ ಮೋದಿ ಹಾರೈಸಿದ್ದಾರೆ.
  • ಹಂದ್ವಾರದಲ್ಲಿ ಲೈಂಗಿಕ ಕಿರುಕುಳಕ್ಕೆ ಒಳಗಾಗಿದ್ದ ಯುವತಿ ಈಗ ಉಲ್ಟಾ ಹೊಡೆದಿದ್ದಾಳೆ. ನ ನ್ನಮೇಲೆ ದೌರ್ಜನ್ಯ ನಡೆಸಿದ್ದು ಸ್ಥಳೀಯ ಯುವಕರಲ್ಲ, ಬದಲಿಗೆ ಅಲ್ಲಿದ್ದ ಯೋಧರು ಎಂದು ಹೇಳಿಕೆ ಬದಲಿಸಿದ್ದಾಳೆ.
  • ಇತ್ತೀಚೆಗೆ ಬಿಹಾರದಲ್ಲಿ ನಡೆದ ಪತ್ರಕರ್ತರ ಹತ್ಯೆ ಪ್ರಕರಣದ ತನಿಖೆಯ ಸಿಬಿಐಗೆ ವಹಿಸಲು ಮುಖ್ಯಮಂತ್ರಿ ನಿತೀಶ್ ಕುಮಾರ್ ನಿರ್ಧರಿಸಿದ್ದಾರೆ.

Leave a Reply