ಬಿಜೆಪಿ, ಕಾಂಗ್ರೆಸ್ ಬುಕ್ ಫೈಟ್; ಯಡಿಯೂರಪ್ಪ ವಿರುದ್ಧ ಸಿದ್ರಾಮಣ್ಣ ತರ್ತಾರಂತೆ ‘ಕಲಿಯುಗದ ಸತ್ಯ ಹರಿಶ್ಚಂದ್ರ’ ಗ್ರಂಥ!

ಡಿಜಿಟಲ್ ಕನ್ನಡ ಟೀಮ್

ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಬುಕ್ ಫೈಟ್ ಶುರುವಾಗಿದೆ. ಸಿದ್ದರಾಮಯ್ಯ ಸಂಪುಟದ ಭ್ರಷ್ಟ ಸಚಿವರ ಬಗ್ಗೆ ಪುಸ್ತಕ ತರ್ತೀನಿ ಅಂತ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಘೋಷಿಸಿದ್ದೇ ತಡ ಸಿದ್ದರಾಮಯ್ಯ ಕೂಡ ಅದೇ ಪುಸ್ತಕದ ಪ್ರತ್ಯಸ್ತ್ರ ಪ್ರಯೋಗಕ್ಕೆ ಸಜ್ಜಾಗಿದ್ದಾರೆ. ಹಿಂದೆ ಯಡಿಯೂರಪ್ಪ ಆಳ್ವಿಕೆಯಲ್ಲಿ ನಡೆದ ಹಗರಣಗಳ ಬಗ್ಗೆ “ಕಲಿಯುಗದ ಸತ್ಯ ಹರಿಶ್ಚಂದ್ರ” ಎಂಬ ಬೃಹತ್ ಗ್ರಂಥ ತರಲು ಮುಂದಾಗಿದ್ದಾರೆ.

ಮೊನ್ನೆ ಸಿದ್ದರಾಮಯ್ಯ ಸರಕಾರಕ್ಕೆ ಮೂರು ವರ್ಷ ತುಂಬಿ, ನಾಲ್ಕಕ್ಕೆ ಬಿದ್ದ ಸಂದರ್ಭದಲ್ಲಿ ವಿಧಾನಸಭೆ ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಇದು ಜನಪರ ಸರ್ಕಾರವಲ್ಲ, ಜನ ವಿರೋಧಿ ಸರ್ಕಾರ ಅಂತ ಕಿರುಹೊತ್ತಿಗೆ ತಂದಿದ್ದರು. ‘ತಂತ್ರ ಕಾರಣ’ ಆ ಕಾರ್ಯಕ್ರಮದಿಂದ ದೂರ ಸರಿದಿದ್ದ ಯಡಿಯೂರಪ್ಪ ತಾವು ಪ್ರತ್ಯೇಕ ಪುಸ್ತಕ ತರುವುದಾಗಿ ಹೇಳಿದ್ದರು. ಅದರಲ್ಲಿ ಸಿದ್ದರಾಮಯ್ಯ ಸರಕಾರ ಭ್ರಷ್ಟ ಸಚಿವರ ಪ್ರವರ ಇರಲಿದೆ ಎಂದಿದ್ದರು. ಅದರ ಬೆನ್ನಲ್ಲೇ ಯಡಿಯೂರಪ್ಪ ಅವರನ್ನು ಪುಸ್ತಕದ ಮೂಲಕವೇ ಹಣಿಯುವ ನಿರ್ಧಾರಕ್ಕೆ ಸಿದ್ದರಾಮಯ್ಯ ಬಂದಿದ್ದಾರೆ.

ಸರಕಾರದ ಹಣದಲ್ಲಿ ಇಂತಹ ಪುಸ್ತಕ ಪ್ರಿಂಟ್ ಮಾಡೋದಾಗಲಿ, ಬಿಡುಗಡೆ ಮಾಡೋದಾಗಲಿ ಸಾಧ್ಯವಿಲ್ಲ. ಹೀಗಾಗಿ ಆಪ್ತೇಷ್ಟರ ಮೂಲಕ ಈ ಕೆಲಸಕ್ಕೆ ಕೈ ಹಾಕಿದ್ದಾರೆ. ಯಡಿಯೂರಪ್ಪ ಸಿಎಂ ಆಗಿದ್ದಾಗ ರಾಚೇನಹಳ್ಳಿ ಡಿನೋಟಿಫಿಕೇಷನ್ ಪ್ರಕರಣದಿಂದ ಹಿಡಿದು ಜಿಂದಾಲ್ ಸಂಸ್ಥೆಯಿಂದ ದೇಣಿಗೆ ಸ್ವೀಕಾರದವರೆಗೂ ನಡೆದ ಎಲ್ಲ ಹಗರಣಗಳ ಬಗ್ಗೆ ‘ಕಲಿಯುಗ ಸತ್ಯ ಹರಿಶ್ಚಂದ್ರ’ ಕತೆ ಹೇಳಲಿದೆ. ಈ ಕತೆಯಲ್ಲಿ ಸುಮಾರು 516 ಮಹತ್ವದ ವಿವರಗಳಿರುತ್ತವೆ. ಜಗದೀಶ್ ಶೆಟ್ಟರ, ಸದಾನಂದಗೌಡರ ಸರಕಾರದ ಲೋಪದೋಷಗಳೂ ಇದರಲ್ಲಿರಲಿವೆ. ಆದರೆ ಸಿಂಹಪಾಲು ಯಡಿಯೂರಪ್ಪನವರದ್ದು. ಅವರ ಸರಕಾರ ಕೈಗೊಂಡ ವಿವಾದಾತ್ಮಕ ನಿರ್ಧಾರ, ಅದರಿಂದ ಆದ ಪ್ರತಿಕೂಲ ಪರಿಣಾಮ, ಕಾನೂನಾತ್ಮಕ ವಿಶ್ಲೇಷಣೆ, ನಾನಾ ರಂಗಗಳ ಪರಿಣಿತರ ಲೇಖನಗಳೂ ಇರುತ್ತವೆ.

ಒಂದು ಲಕ್ಷಕ್ಕೂ ಹೆಚ್ಚು ಪ್ರತಿಗಳನ್ನು ಮುದ್ರಿಸಿ, ರಾಜ್ಯಾದ್ಯಂತ ಹಂಚುವ ಗುರಿಯಿದೆ. ಸಾರ್ವಜನಿಕರೂ ನ್ಯಾಯಾಲಯದಲ್ಲಿ ಪ್ರಶ್ನೆ ಮಾಡಲು ಅನುಕೂಲ ಆಗುವಂತೆ ದಾಖಲೆಗಳ ಸಂಗ್ರಹವಾಗುತ್ತಿದೆ. ಸುಮಾರು ಐದು ಸಾವಿರ ಪುಟಗಳಷ್ಟು ದಾಖಲೆಗಳ ಝೆರಾಕ್ಸ್ ಪ್ರತಿಗಳನ್ನು ಗ್ರಂಥ ಕರ್ತೃವಿಗೆ ಒದಗಿಸಲು ಸೂಚನೆ ನೀಡಲಾಗಿದೆ.

ಶೆಟ್ಟರ್ ಪುಸ್ತಕ ನಿರೀಕ್ಷಿಸದಿದ್ದ ಸರಕಾರ ಮೇ 13 ರಂದು ‘ಜನಮನ’ ಕಾರ್ಯಕ್ರಮ ಹಮ್ಮಿಕೊಂಡಿತಾದರೂ ಅದು ನಿರೀಕ್ಷಿತ ಫಲ ಕೊಡಲಿಲ್ಲ. ಇದರಿಂದ ಕುಪಿತರಾದ ಸಿದ್ಧರಾಮಯ್ಯ ಮರುದಿನ ಅಂದರೆ ಮೇ 14 ರಂದು ಸರ್ಕಾರದ ಸಾಧನೆ ವಿವರಗಳುಳ್ಳ ‘4 ನೇ ವರ್ಷದ ಕಡೆಗೆ ಭರವಸೆಯ ನಡಿಗೆ” ಎಂಬ ಕೃತಿ ಬಿಡುಗಡೆ ಮಾಡಿದರು. ಸಿಎಂ, ಪ್ರತಿಪಕ್ಷ ನಾಯಕ ಶೆಟ್ಟರ್ ಬುಕ್ ಫೈಟ್ ನಿಂದ ಪ್ರೇರಿತರಾದ ಯಡಿಯೂರಪ್ಪ ತಾವೂ ಒಂದು ಬುಕ್ ಹೊರತರುವುದಾಗಿ ಹೇಳಿದರು. ಇದನ್ನು ಹೀಗೆ ಬಿಟ್ಟರೆ ಆಗಲ್ಲ ಅಂತ ತೀರ್ಮಾನಿಸಿರುವ ಸರಕಾರ ಯಡಿಯೂರಪ್ಪನವರಿಗೆ ‘ಕಲಿಯುಗದ ಸತ್ಯ ಹರಿಶ್ಚಂದ್ರ’ ಗ್ರಂಥವನ್ನು ಉಡುಗೊರೆ ಆಗಿ ನೀಡಲು ನಿರ್ಧರಿಸಿದೆ.

Leave a Reply