ಯಡಿಯೂರಪ್ಪನವರೇ, ಎಲ್ಲರನ್ನು ಒಟ್ಟಿಗೆ ಕರಕೊಂಡು ಹೋಗೋದು ಅಂದ್ರೆ ಶೋಭಾ ಜತೆ ಕೇದಾರನಾಥ ಟೂರ್ ಮಾಡೋದಲ್ಲ!

author-thyagaraj (1)ಮನುಷ್ಯನ ಒಳಗುಣ ಮತ್ತು ನಿಜಗುಣ ಅಷ್ಟು ಸುಲಭಕ್ಕೆ ಬದಲಾಗುವುದಿಲ್ಲ. ಒಮ್ಮೆ ಕಲಿತದ್ದು ಹಾಗೂ ಬಲಿತದ್ದು ಅಷ್ಟು ಆಳವಾಗಿ ಬೇರೂರಿರುತ್ತದೆ. ಅದಕ್ಕೆ ಹೇಳುವುದು ಕಲಿತ ಬುದ್ದಿ ಎಲ್ಲಿ ಬಿಡ್ತಾರೆ ಅಂತಾ.

ಈ ಸಣ್ಣ ಪೀಠಿಕೆ ಯಾಕೆ ಅಂದರೆ, ಬಿಜೆಪಿ ನೂತನ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ತಿಂಗಳೊಪ್ಪತ್ತು ಕಳೆಯುವುದರೊಳಗೆ ಹಳೇ ಚಾಳಿ ಶುರುವಿಟ್ಟುಕೊಂಡಿದ್ದಾರೆ. ಪಕ್ಷದಲ್ಲಿ ತಮಗಾಗದವರನ್ನು ಸದೆಬಡಿದು, ತಮಗೆ ಮಾತ್ರ ಸಲ್ಲುವವರನ್ನು ಮೆರವಣಿಗೆ ಹೊರಡಿಸಲು ಹೊರಟಿದ್ದಾರೆ. ಆದರೆ ಆ ಭರದಲ್ಲಿ, ‘ಎಲ್ಲರನ್ನು ಒಟ್ಟಿಗೆ ಕರೆದೊಯ್ಯುತ್ತೇನೆ, ಎಲ್ಲರನ್ನೂ ಜತೆಗಿಟ್ಟುಕೊಂಡೇ ಪಕ್ಷ ಕಟ್ಟುತ್ತೇನೆ, ರಾಗದ್ವೇಷಕ್ಕೆ ಆಸ್ಪದ ಇಲ್ಲ’ ಎಂದು ರಾಜ್ಯಾಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಸಂದರ್ಭದಲ್ಲಿ ಆಡಿದ ಮಾತನ್ನು ಅದಾಗಲೇ ಮರೆತುಬಿಟ್ಟಿದ್ದಾರೆ.

ಹಳ್ಳಿ ಕಡೆ ಒಂದು ಕೆಟ್ಟ ಗಾದೆ ಮಾತಿದೆ. ‘ಕಲಿತದ್ದು ಬಿಡೆ ಕಳ್ಳಮುಂಡೆ ಅಂದ್ರೆ, ನಡುದಾರೀಲಿ ಕೂತು ತಲೆ ಮೇಲೆ ಹುಡಿಮಣ್ಣು ಸುರಿದುಕೊಂಡಳು’ ಅಂತಾ. ಯಡಿಯೂರಪ್ಪನವರು ಅದೇ ದಾರೀಲಿ ಹೊರಟಂತೆ ಕಾಣುತ್ತದೆ. ಪಕ್ಷದ ಸಂಘಟನಾ ಕಾರ್ಯದರ್ಶಿ ಸಂತೋಷ್ ಹಾಗೂ ಮಾಜಿ ಸಚಿವ ವಿ. ಸೋಮಣ್ಣ ವಿರುದ್ಧ ದ್ವೇಷದ ರಾಜಕೀಯಕ್ಕೆ ಇಳಿದಿದ್ದಾರೆ. ಸಂತೋಷ್ ಜಾಗದಲ್ಲಿ ಆಪ್ತ ರವಿಕುಮಾರ್ ಅವರನ್ನು ತರಲು ಹೊರಟರು. ಅದಾಗದಿದ್ದಾಗ ಸಂತೋಷ್ ಅವರಿಗಾಗದ ಅರುಣ್ ಕುಮಾರ್ ಮೊರೆ ಹೋಗಿದ್ದಾರೆ. ಈ ಬೆಳವಣಿಗೆ ಆರೆಸ್ಸಸ್ ಮತ್ತು ಬಿಜೆಪಿ ವಲಯದಲ್ಲಿ ಒಂದಷ್ಟು ಅಸಮಾಧಾನಕ್ಕೆ ಕಾರಣವಾಗಿದೆ.

ಇನ್ನು ವಿಧಾನ ಪರಿಷತ್ ಸದಸ್ಯತ್ವದ ಅವಧಿ ಮುಗಿಯುತ್ತಾ ಬಂದಿರುವ ಸೋಮಣ್ಣ ಈ ಸ್ಥಾನಕ್ಕೆ ಮರುಆಕಾಂಕ್ಷಿ ಆಗಿದ್ದಾರೆ. ಆದರೆ ಯಡಿಯೂರಪ್ಪನವರಿಗೆ ಇದು ಇಷ್ಟವಿಲ್ಲ. ಹಿಂದೆ ಸೋಮಣ್ಣ ಅವರನ್ನು ಬಿಜೆಪಿಗೆ ಕರೆತಂದು, ಮರುಚುನಾವಣೇಲಿ ಸೋತ ಅವರನ್ನು ಮೇಲ್ಮನೆಗೆ ಕಳುಹಿಸಿ, ಸಚಿವರನ್ನಾಗಿಯೂ ಮಾಡಿದ್ದ ಯಡಿಯೂರಪ್ಪನವರಿಗೆ ಈಗ ಆ ಹಳೇ ಪ್ರೀತಿ ಉಳಿದುಕೊಂಡಿಲ್ಲ. ಬಿಜೆಪಿ ತೊರೆದು ಕೆಜೆಪಿಗೆ ಹೋದಾಗ ತಮ್ಮೊಡನೆ ಬರಲಿಲ್ಲ ಎಂಬ ಕಾರಣಕ್ಕೆ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸೋಮಣ್ಣ ಸೋಲಿಗೂ ಒಳಪಿತೂರಿ ನಡೆಸಿದ ಯಡಿಯೂರಪ್ಪನವರು ಇದೀಗ ತಾವೇ ಬಿಜೆಪಿಗೆ ವಾಪಸ್ಸು ಬಂದು ಅಧ್ಯಕ್ಷರಾದರೂ ಸೋಮಣ್ಣ ಮೇಲಿನ ಹಗೆಯನ್ನು ಮಾತ್ರ ತೊರೆದಿಲ್ಲ. ಹೀಗಾಗಿ ಸೋಮಣ್ಣ ಮೇಲ್ಮನೆಗೆ ಮರುಆಕಾಂಕ್ಷಿ ಎಂದು ಗೊತ್ತಾಗುತ್ತಲೇ ಬಿಜೆಪಿ ಬೆಂಗಳೂರು ನಗರಾಧ್ಯಕ್ಷ ಸುಬ್ಬಣ್ಣ ಅವರನ್ನು ಈ ಸ್ಥಾನಕ್ಕೆ ಸಜ್ಜುಗೊಳಿಸಲು ಯತ್ನಿಸಿದ್ದಾರೆ. ಕೇಂದ್ರ ಸಚಿವ ಅನಂತಕುಮಾರ್ ಪರಮಾಪ್ತ ಎಂಬ ಕಾರಣಕ್ಕೆ ಸುಬ್ಬಣ್ಣ ಅವರ ಮೇಲೆ ಯಡಿಯೂರಪ್ಪ ಅವರಿಗೆ ಈ ಮೊದಲು ವಿಶೇಷ ಪ್ರೀತಿಯೇನೂ ಇರಲಿಲ್ಲ. ಆದರೆ ತಮಗಾಗದ ಸೋಮಣ್ಣ ಅವರನ್ನು ಬಲಿಹಾಕಲು ಸುಬ್ಬಣ್ಣ ಮೇಲೆ ‘ಮಾಘಪ್ರೀತಿ’ ಬೆಳೆಸಿಕೊಂಡಿದ್ದಾರೆ. ಮೇಲ್ಮನೆಗೆ ಅವರನ್ನು ಎತ್ತಿಕಟ್ಟಿದ್ದಾರೆ. ಅದೇ ಕಾಲಕ್ಕೆ ಯಾವುದಕ್ಕೂ ಇರಲಿ ಅಂತ ತವರು ಜಿಲ್ಲೆ ಶಿವಮೊಗ್ಗದ ಮಾಜಿ ಸಂಸದ ಆಯನೂರು ಮಂಜುನಾಥ್ ಅವರಿಗೂ ಆಸೆ ತೋರಿದ್ದಾರೆ. ಒಂದೇ ಸ್ಥಾನಕ್ಕೆ ಇಬ್ಬರನ್ನು ಕುಣಿಸುತ್ತಿದ್ದಾರೆ.

ಇನ್ನು ಪಕ್ಷದ ಹಿರಿಯ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಪ್ರಯತ್ನ ಮಾಡಿಲ್ಲ. ಬದಲಿಗೆ ಹಗೆ ಮುಂದುವರಿಸಿದ್ದಾರೆ. ಮೂರು ವರ್ಷ ತುಂಬಿದ ಸಿದ್ದರಾಮಯ್ಯ ಸರಕಾರದ ವೈಫಲ್ಯಗಳನ್ನು ಸಾರುವ  ‘ಇದು ಜನಪರ ಸರ್ಕಾರವಲ್ಲ, ಜನವಿರೋಧಿ ಸರ್ಕಾರ’ ಎಂಬ ಹೊತ್ತಿಗೆಯನ್ನು ವಿಧಾನಸಭೆ ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಮೇ 11 ರಂದು ಬಿಡುಗಡೆ ಮಾಡಿದರು. ಯಡಿಯೂರಪ್ಪನವರನ್ನು ಕೇಳಿಕೊಂಡೇ ಆ ದಿನ ನಿಗದಿ ಮಾಡಿದ್ದರು. ಅದರೆ ಶೆಟ್ಟರ್ ಮೇಲಿನ ಹಳೇ ದ್ವೇಷ ಮುಂದುವರಿಸಿರುವ ಯಡಿಯೂರಪ್ಪನವರು ಈ ಕಾರ್ಯಕ್ರಮಕ್ಕೆ ಕೈಕೊಟ್ಟು, ಮಾಜಿ ಸಚಿವೆ ಶೋಭಾ ಕರಂದ್ಲಾಜೆ ಅವರ ಜತೆ ಕೇದಾರ-ಬದರಿನಾಥ ಪ್ರವಾಸ ಹೋದರು. ಯಡಿಯೂರಪ್ಪನವರು ಯಾಕೆ ಬಂದಿಲ್ಲ ಅಂತ ಮಾಧ್ಯಮದವರು ಕೇಳಿದರೆ ಅವರು ತುರ್ತು ಕೆಲಸದ ಮೇಲೆ ಹೊರಗೆ ಹೋಗಿದ್ದಾರೆ ಅಂತ ಶೆಟ್ಟರ್ ಸಬೂಬೂ ಹೇಳಿದರು. ಶೋಭಾ ಕರಂದ್ಲಾಜೆ ಜತೆ ಕೇದಾರನಾಥ ಟೂರ್ ಮಾಡುವುದು ತುರ್ತು ಕೆಲಸವೇ? ಪಕ್ಷದ ಕಾರ್ಯಕ್ರಮಕ್ಕಿಂತ ಇದು ಆದ್ಯತೆಯ ವಿಚಾರವೇ? ಬದರಿನಾಥಕ್ಕೆ ಬೇರೆ ಸಂದರ್ಭದಲ್ಲಿ ಹೋಗಬಹುದಿತ್ತಲ್ಲ.

ಇಲ್ಲಿ ಇನ್ನೂ ಒಂದು ವಿಚಾರ. ಶೆಟ್ಟರ್ ನಂತರ ಸಿದ್ದರಾಮಯ್ಯ ಅವರನ್ನು ತರಾಟೆಗೆ ತೆಗೆದುಕೊಳ್ಳಲು ಯಡಿಯೂರಪ್ಪನವರು ಮಾಡಿದ ಪತ್ರಿಕಾಕೋಷ್ಠಿಗೂ ಶೆಟ್ಟರ್ ಅವರನ್ನು ಕರೆದಿಲ್ಲ. ಅವತ್ತು ಶೆಟ್ಟರ್ ಬೆಂಗಳೂರಲ್ಲೇ ಇದ್ದರು ಆಹ್ವಾನವಿಲ್ಲ. ಜತೆಗೆ ಶೆಟ್ಟರ್ ಬಿಡುಗಡೆ ಮಾಡಿದ ಪುಸ್ತಕ ಅಪೂರ್ಣವಾಗಿದೆ. ಇನ್ನೊಂದಷ್ಟು ಸೇರಿಸಿ ಮುಂದೆ ಮತ್ತೊಮ್ಮೆ ಹೊರತರುತ್ತೇನೆ ಅಂತ ಶೆಟ್ಟರ್ ಗೆ ಟಾಂಗ್ ಬೇರೆ ಕೊಟ್ಟರು.

ಎಲ್ಲರನ್ನೂ ಒಟ್ಟಿಗೆ ಕರೆದುಕೊಂಡು ಹೋಗುವುದು ಅಂದರೆ ಇದೇ ಏನು? ಈ ರೀತಿ ದ್ವೇಷದ ರಾಜಕೀಯ ಮಾಡಲು ಹೊರಟರೆ ಪಕ್ಷ ಕಟ್ಟಲು ಆಗುತ್ತದೆಯೇ? ತಣ್ಣಗೆ ಬೀಸುತ್ತಿರುವ ಆಡಳಿತ ವಿರೋಧಿ ಅಲೆಯನ್ನು ಬಿಜೆಪಿ ಪರ ತಿರುಗಿಸಿಕೊಳ್ಳುವುದು ಬಿಟ್ಟು, ಬಿಜೆಪಿಯೊಳಗೇ ಈ ರೀತಿ ‘ವಿರೋಧಿ ಅಲೆ’ ಸೃಷ್ಟಿಸಿದರೆ ಪಕ್ಷ ಉದ್ಧಾರ ಆಗುತ್ತದೆಯೇ? – ಇದು ಬಿಜೆಪಿ ಒಳಗಿನವರದೇ ಪ್ರಶ್ನೆ.

ಆಡಳಿತ ವಿರೋಧಿ ಅಲೆ ಅಂದ ಮಾತ್ರಕ್ಕೆ ಅದು ಪ್ರತಿಪಕ್ಷಗಳ ಪರ ಪರವಾನಗಿ ಅಲ್ಲ. ಆ ಅಲೆ ದಕ್ಕಿಸಿಕೊಳ್ಳಲು ಒಂದಷ್ಟು ತಂತ್ರ, ಶ್ರಮ ಬೇಕು. ಯಡಿಯೂರಪ್ಪನವರ ರಾಜಕೀಯ ತವರು ಶಿವಮೊಗ್ಗದಲ್ಲೇ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಸ್ಥಾನ ಹಿಡಿಯಲು ಬಿಜೆಪಿಗೆ ಆಗಲಿಲ್ಲ. ಇದಕ್ಕೆ ಕಾರಣ ಈ ತಂತ್ರದ ಕೊರತೆ. ಸೂಕ್ತ ಯೋಜನೆ ಇದ್ದಿದ್ದರೆ ತಮಕೂರು ಸೇರಿ ಕೆಲ ಜಿಲ್ಲೆಗಳು ಬಿಜೆಪಿಗೆ ದಕ್ಕುತ್ತಿದ್ದವು. ಮೂರನೇ ಸ್ಥಾನದಲ್ಲಿರೇ ಜೆಡಿಎಸ್ ಜಿಲ್ಲಾ ಪಂಚಾಯಿತಿ ಅಧಿಕಾರ ರಾಜಕೀಯದಲ್ಲಿ ಮೆರೆಯುತ್ತಿರುವ ತಂತ್ರ ಪಾರಮ್ಯ ರಾಷ್ಟ್ರೀಯ ಪಕ್ಷದ ಮುಖಂಡರಾದ ಯಡಿಯೂರಪ್ಪನವರಿಗೆ ಕಾಣುತ್ತಿಲ್ಲವೇ? ಹಗೆ ರಾಜಕೀಯದಲ್ಲಿ ಮುಳುಗಿದವರಿಗೆ ತಂತ್ರಗಳು ಹೊಳೆಯುವುದಾದರೂ ಹೇಗೆ? ಮಿದುಳು ಸರಿದಿಕ್ಕಿನಲ್ಲಿ ಕೆಲಸ ಮಾಡುವುದಾದರೂ ಹೇಗೆ?

ನಿಜ, ಬರ ಪ್ರವಾಸ ಮಾಡಿದ ಯಡಿಯೂರಪ್ಪನವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ಹೂಗುಚ್ಛ ನೀಡುವ ಬದಲು ಬರ ಭೀಕರತೆ ಬಗ್ಗೆ ಒಂದು ವರದಿ ಕೊಟ್ಟು ಕುಡಿಯುವ ನೀರಿಗೆ ಒಂದಿನ್ನೂರು ಕೋಟಿ ರುಪಾಯಿ ಬಿಡುಗಡೆ ಮಾಡಿಸಿಕೊಂಡು ಬಂದಿದ್ದರೆ ಶಹಬ್ಬಾಸ್ ಅನ್ನಬಹುದಿತ್ತು. ಅವರು ಸಂಸತ್ ಸದಸ್ಯರು, ಮೇಲಾಗಿ ರಾಜ್ಯಾಧ್ಯಕ್ಷರು. ಕೇಂದ್ರದಲ್ಲಿರುವುದು ಅವರದೇ ಸರಕಾರ. ‘ಪ್ರತಿಪಕ್ಷ ಸ್ಥಾನದಿಂದ ಈ ಕೆಲಸ ಮಾಡಿದ್ದೇನೆ, ನನ್ನ ಮನವಿಗೆ ಪ್ರಧಾನಿ ಸ್ಪಂದಿಸಿದರು’ ಅಂತ ಬೆನ್ನು ತಟ್ಟಿಕೊಂಡು ಓಡಾಡಬಹುದಿತ್ತು. ಅದನ್ನು ಬಿಟ್ಟು ನಾನು ಬರ ಟೂರ್ ಶುರು ಮಾಡಿದ ಮೇಲೆ ಸಿದ್ದರಾಮಯ್ಯ ಪ್ರವಾಸ ಹೊರಟರು ಅಂತ ಹೇಳಿಕೊಳ್ಳೋದರಿಂದ ಅವರಿಗಾಗಲಿ, ಅವರ ಪಕ್ಷಕ್ಕಾಗಲಿ, ಕರ್ನಾಟಕಕ್ಕಾಗಲಿ ಯಾವುದೇ ಲಾಭ ಇಲ್ಲ. ಬರ ಸ್ಥಿತಿ ನಿರ್ವಹಣೆಯಲ್ಲಿ ಸಿದ್ದರಾಮಯ್ಯ ಸಂಪೂರ್ಣ ವಿಫಲರಾಗಿದ್ದಾರೆ ಅಂತ ಯಡಿಯೂರಪ್ಪನವರು ಹೇಳುತ್ತಿರುವ ಸಂದರ್ಭದಲ್ಲೇ ರಾಜ್ಯಪಾಲ ವಜೂಭಾಯಿ ರೂಢಬಾಯಿ ವಾಲಾ ಉಲ್ಟಾ ವ್ಯತಿರಿಕ್ತ ಹೇಳಿಕೆ ಕೊಟ್ಟಿದ್ದಾರೆ. ಬರ ನಿರ್ವಹಣೆಗೆ ಸಿದ್ದರಾಮಯ್ಯ ಚೆನ್ನಾಗಿಯೇ ಓಡಾಡಿದ್ದಾರೆ ಅಂತ ಗವರ್ನರ್ ಕೊಟ್ಟಿರೋ ಸರ್ಟಿಫಿಕೆಟ್ ನಲ್ಲಿ ಕಾಣುತ್ತಿರುವುದು ಕೂಡ ಯಡಿಯೂರಪ್ಪನವರ ಸಮನ್ವಯ ಮತ್ತು ಸಂವಹನದ ಕೊರತೆಯೇ. ಅವರು ಪ್ರಧಾನಿಗಿರಲಿ, ರಾಜ್ಯಪಾಲರಿಗೂ ರಾಜ್ಯದ ಬರಸ್ಥಿತಿ ಮನವರಿಕೆ ಮಾಡಿಕೊಡುವಲ್ಲಿ ವಿಫಲರಾಗಿದ್ದಾರೆ. ಸುಮ್ಮನೆ ಬರ ಟೂರ್ ಮಾಡಿದರೆ ಆಗೋದಿಲ್ಲ. ಅಲ್ಲೇನಾಗಿದೆ ಅನ್ನೋದನ್ನು ತಿಳಿಸಬೇಕಾದವರಿಗೆ ಮನವರಿಕೆ ಮಾಡಿಕೊಡಬೇಕಲ್ವೇ? ಯಡಿಯೂರಪ್ಪ ಪ್ರತಿನಿಧಿಸುವ ಬಿಜೆಪಿ ಮೂಲದ ವಾಲಾ ಅವರೇ ಯಡಿಯೂರಪ್ಪ ಅವರಿಗೆ ವ್ಯತಿರಿಕ್ತವಾಗಿ ಸಿದ್ದರಾಮಯ್ಯನವರ ಬೆನ್ನು ತಟ್ಟುತ್ತಾರೆ ಅಂದರೆ ಸೋಜಿಗವಲ್ಲದೇ ಮತ್ತೇನು? ಹಾಗಾದರೆ ರಾಜ್ಯದಲ್ಲಿ ಬರ ಸಮಸ್ಯೆ ಪರಿಹಾರ ಆಗಿ ಹೋಗಿದೆಯೇ? ಇಲ್ಲೇನು ಸಮಸ್ಯೆಯೇ ಇಲ್ಲವೇ?

ಯಾಕೆ ಹೀಗೆ ಅಂದರೆ ಮತ್ತೇ ಸಮಸ್ಯೆ ಕಾಣುವುದು ಯಡಿಯೂರಪ್ಪನವರ ಬುಡದಲ್ಲೇ. ಬಿಜೆಪಿ ಮುಖಂಡರು ಹನ್ನೊಂದು ತಂಡದಲ್ಲಿ ರಾಜ್ಯಾದ್ಯಂತ ಬರ ಸ್ಧಿತಿ ಅಧ್ಯಯನಕ್ಕೆ ಪ್ರವಾಸ ಮಾಡಿದರು. ಆದರೆ ಈವರೆಗೂ ಯಡಿಯೂರಪ್ಪನವರು ಆ ಮುಖಂಡರ ಸಭೆ ಮಾಡಲಿಲ್ಲ. ಅವರ ಅಧ್ಯಯನ ಏನೆಂದು ಕೇಳಲಿಲ್ಲ. ಮಾಹಿತಿಗಳ ಕ್ರೋಡೀಕರಣ ಮಾಡಲಿಲ್ಲ. ಹೀಗಾಗರೆ ಅವರಿಗೆ ಸಮಗ್ರ ಮಾಹಿತಿ ಸಿಗುವುದು ಹೇಗೆ? ಮನವರಿಕೆ ಮಾಡಿಕೊಡಬೇಕಾದವರಿಗೆ ತಿಳಿಸುವುದಾದರೂ ಹೇಗೆ? ಎಲ್ಲ ಮಾಹಿತಿ ಒಳಗೊಂಡ ವರದಿಯನ್ನು ಸಿ.ಟಿ. ರವಿ ನೇತೃತ್ವದ ತಂಡ ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಅರವಿಂದ ಜಾದವ್ ಅವರಿಗೆ ಕೊಡಲು ಹೊರಟಾಗ ದೂರವಾಣಿ ಕರೆ ಮಾಡಿ, ಅದನ್ನು ತಡೆಹಿಡಿದದ್ದಷ್ಟೇ ಯಡಿಯೂರಪ್ಪನವರ ಹೆಗ್ಗಳಿಕೆ!

ಇದಿಷ್ಟೇ ಅಲ್ಲ, ಅವರು ರಾಜ್ಯಾಧ್ಯಕ್ಷರಾದ ನಂತರ ಹಿರಿಯ ಮುಖಂಡರ ಸಭೆ ಕರೆದಿಲ್ಲ. ಪಕ್ಷ ಸಂಘಟನೆ ಬಗ್ಗೆ ವಿಚಾರ-ವಿನಿಮಯ ಮಾಡಿಕೊಂಡಿಲ್ಲ. ಇತ್ತೀಚೆಗೆ ಆರು ಮಂದಿ ವಕ್ತಾರರನ್ನು ನೇಮಕ ಮಾಡುವಾಗ ತಮ್ಮ ಆಪ್ತ ವಲಯಕ್ಕಷ್ಟೇ ಮಣೆ ಹಾಕಿಕ್ದಾರೆ. ಹಾಗೆ ಮಾಡುವಾಗ ಕೋರ್ ಕಮಿಟಿ ಜತೆ ಸಮಾಲೋಚನೆ ನಡೆಸಿಲ್ಲ. ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ. ಪಕ್ಷಪಾತ, ಹಗೆ, ಹಠ, ದ್ವೇಷಾಸೂಯೆ – ಹೀಗೆ ಯಡಿಯೂರಪ್ಪನವರ ಹಳೇ ಚಾಳಿ ಮುಂದುವರಿದಿದೆ. ಇದು ಪಕ್ಷದೊಳಗೆ ನಾನಾ ಗುಂಪುಗಳ ಸೃಷ್ಟಿಗೆ ಕಾರಣವಾಗಿದ್ದು, ಇದು ಹೀಗೆಯೇ ಮುಂದುವರಿದರೆ ಯಡಿಯೂರಪ್ಪನವರ ನಾಯಕತ್ವ ಬಿಜೆಪಿಗೆ ವರವಾಗುವುದರ ಬದಲು ಶಾಪವಾಗಿ ಪರಿಣಮಿಸುವ ಎಲ್ಲ ಸಾಧ್ಯತೆಗಳು ನಿಚ್ಚಳವಾಗಿವೆ.

ಲಗೋರಿ :  ಹತ್ತು ಇದ್ದು ಒಂದು ಆಟ ಆಡೋದಲ್ಲ, ಒಂದಿದ್ದು ಹತ್ತು ಆಟ ಆಡುವುದೇ ರಾಜಕೀಯ.

Leave a Reply