‘ತಿಥಿ’ಗೆ ಅತ್ಯುತ್ತಮ ಚಲನಚಿತ್ರ ಪ್ರಶಸ್ತಿ, ಭಾರತ ಭೌಗೋಳಿಕ ವಿಧೇಯಕಕ್ಕೆ ಪಾಕ್ ವಿರೋಧ, ಸ್ಪೈಸ್ ಜೆಟ್ ಪ್ರಯಾಣಿಕರಿಗೆ ಬಂಪರ್ ಆಫರ್, ಬಿಹಾರ ಎಂಎಲ್ಸಿ ಮನೋರಮಾದೇವಿ ಶರಣು

ಡಿಜಿಟಲ್ ಕನ್ನಡ ಟೀಮ್

ಸಾಕಷ್ಟು ಪ್ರಶಂಸೆಗೆ ಒಳಗಾಗಿರುವ ‘ತಿಥಿ’ ಸಿನಿಮಾಕ್ಕೆ ಕಳೆದ ಸಾಲಿನ ಅತ್ಯುತ್ತಮ ಚಲನಚಿತ್ರ ಪ್ರಶಸ್ತಿ ಲಭಿಸಿದೆ. ಇನ್ನು ಮಾಲಾಶ್ರೀ ಅವರಿಗೆ ಅತ್ಯುತ್ತಮ ನಟಿ (ಗಂಗಾ ಚಿತ್ರ) ಹಾಗೂ ವಿಜಯ್ ರಾಘವೇಂದ್ರ ಅವರಿಗೆ ಅತ್ಯುತ್ತಮ ನಟ (ಚಿತ್ರ ಶಿವಯೋಗಿ ಪುಟ್ಟಯ್ಯಜ್ಜ) ಪ್ರಶಸ್ತಿ ಲಭಿಸಿದೆ.

ಅತ್ಯುತ್ತಮ ಚಿತ್ರ ವಿಭಾಗದಲ್ಲಿ ‘ತಿಥಿ’ಗೆ ಮೊದಲ, ‘ಮಾರಿಕೊಂಡವರು’ ಚಿತ್ರಕ್ಕೆ ದ್ವಿತೀಯ ಸ್ಥಾನ ಸಿಕ್ಕಿದೆ. ಉಳಿದ ಪ್ರಶಸ್ತಿಗಳು ಹೀಗಿವೆ:  ಅತ್ಯುತ್ತಮ ಮನರಂಜನಾ ಚಿತ್ರ ‘ಕೃಷ್ಣಲೀಲಾ’, ಚೊಚ್ಚಲ ನಿರ್ದೇಶನದ ಅತ್ಯುತ್ತಮ ಚಿತ್ರ ‘ರಂಗಿತರಂಗ’, ಅತ್ಯುತ್ತಮ ನಿರ್ದೇಶಕ ಅನೂಪ್ ಭಂಡಾರಿ (ರಂಗಿತರಂಗ), ಅತ್ಯುತ್ತಮ ಸಂಭಾಷಣೆ ಈರೇಗೌಡ (ತಿಥಿ), ಅತ್ಯುತ್ತಮ ಪೋಷಕ ನಟ ರಮೇಶ್ ಭಟ್ (ಮನಮಂಥನ).

ಅತ್ಯುತ್ತಮ ಛಾಯಾಗ್ರಹಣ ಅನಂತ್ ಅರಸು (ಲಾಸ್ಟ್ ಬಸ್), ಅತ್ಯುತ್ತಮ ಹಿನ್ನಲೆ ಗಾಯನ ಸಂತೋಷ್ ವೆಂಕಿ, ಅತ್ಯುತ್ತಮ ಸಂಕಲನ ಸೃಜನ್ ನಾಯಕ್, ಅತ್ಯುತ್ತಮ ಬಾಲ ನಟಿ ಮೇವಿಷ್, ಅತ್ಯುತ್ತಮ ಗೀತ ರಚನೆ ವಿ. ನಾಗೇಂದ್ರ ಪ್ರಸಾದ್. ವಾರ್ತಾ ಸಚಿವ ರೋಶನ್ ಬೇಗ್ ಪತ್ರಿಕಾಗೋಷ್ಠಿಯಲ್ಲಿ ಮಂಗಳವಾರ ಪ್ರಶಸ್ತಿ ವಿವರ ಪ್ರಕಟಿಸಿದರು.

ಭಾರತದ ಭೌಗೋಳಿಕ ಕಾಯ್ದೆಗೆ ಪಾಕ್ ಕಿಡಿ

ಸಾಮಾಜಿಕ ಜಾಲತಾಣ ಸೇರಿದಂತೆ ಭಾರತದ ಭೂಪಟವನ್ನು ತಪ್ಪಾಗಿ ತೋರಿಸುವುದರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಕೇಂದ್ರ ಸರ್ಕಾರ ರೂಪಿಸಿರುವ ಭೌಗೋಳಿಕ ವಿಶೇಷ ಮಾಹಿತಿ ನಿಯಂತ್ರಣ ವಿಧೇಯಕ 2016 ವಿರುದ್ಧ ಪಾಕ್ ಕಿಡಿಕಾರಿದೆ.

ಈ ಬಗ್ಗೆ ವಿಶ್ವಸಂಸ್ಥೆಯಲ್ಲಿ ಭಾರತದ ವಿರುದ್ಧ ದೂರು ನೀಡಿರುವ ಪಾಕ್, ಈ ವಿಧೇಯಕದ ಮೂಲಕ ವಿವಾದಿತ ಜಮ್ಮು ಕಾಶ್ಮೀರ ತನ್ನದೆಂದು ಭಾರತ ಹೇಳಿಕೊಳ್ಳುತ್ತಿದೆ. ಆ ಮೂಲಕ ವಿಶ್ವಸಂಸ್ಥೆಯ ಭದ್ರತಾ ಸಮಿತಿ ನಿಯಮ ಉಲ್ಲಂಘಿಸಿದೆ ಎಂದಿದೆ. ಇದಕ್ಕೆ ಪ್ರತಿಕ್ರಿಯಿಸಿರುವ ಭಾರತ, ತನ್ನ ಆಂತರಿಕ ಶಾಸನ ರಚನೆ ನಿರ್ಧಾರ ಪ್ರಶ್ನಿಸುವ ಹಕ್ಕು ಪಾಕಿಸ್ತಾನಕ್ಕಿಲ್ಲ ಎಂದು ಸ್ಪಷ್ಟವಾಗಿ ಹೇಳಿದೆ.

ಪ್ರಯಾಣಿಕರಿಗೆ ಸ್ಪೈಸ್ ಜೆಟ್ ನಿಂದ ವಿಶೇಷ ಆಫರ್

ಭಾರತದಲ್ಲಿ ಕಾರ್ಯಾರಂಭ ಮಾಡಿ 11 ವರ್ಷ ಪೂರೈಸಿದ ಸಂದರ್ಭದಲ್ಲಿ ಸ್ಪೈಸ್ ಜೆಟ್ ಪ್ರಯಾಣಿಕರಿಗೆ ವಿಶೇಷ ಆಫರ್ ನೀಡಿದೆ. ಎಕಾನಮಿ ವಿಭಾಗದ ಒಂದು ಕಡೆ ದೇಶಿಯ ಪ್ರಯಾಣಕ್ಕೆ ಕೇವಲ ₹ 511 ದರ ನಿಗದಿ ಮಾಡಿದ್ದು, ಅಂತಾರಾಷ್ಟ್ರೀಯ ಪ್ರಯಾಣಕ್ಕೆ ₹ 2111 ನಿಗದಿ ಪಡಿಸಿದೆ. ಜೂನ್ 15 ರಿಂದ ಸೆಪ್ಟೆಂಬರ್ 30 ರವರೆಗೆ ದೇಶಿಯ ಹಾಗೂ ಜೂನ್ 1 ರಿಂದ ಜುಲೈ 20 ರವರೆಗೆ ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ಈ ಉಡುಗೊರೆ ಸಿಗಲಿದೆ. ಆದರೆ, ಪ್ರಯಾಣಿಕರು ಇಂದಿನಿಂದ ಮೂರು ದಿನಗಳ ಒಳಗಾಗಿ ಅಂದರೆ, ಮೇ 19 ರೊಳಗೆ ಟಿಕೆಟ್ ಕಾಯ್ದಿರಿಸಬೇಕಿದೆ. ಕೇವಲ ಸ್ಪೈಸ್ ಜೆಟ್ ಸಂಪರ್ಕವಿರುವ ಪ್ರಯಾಣಕ್ಕೆ ಮಾತ್ರ ಇದು ಅನ್ವಯ ಎಂದು ಸಂಸ್ಥೆ ತಿಳಿಸಿದೆ.

ಬಿಹಾರ ಎಂಎಲ್ಸಿ ಮನೋರಮಾ ದೇವಿ ಪೊಲೀಸರಿಗೆ ಶರಣು

ಮದ್ಯ ನಿಷೇಧ ಕಾನೂನು ಜಾರಿ ನಡುವೆಯೂ ಮನೆಯಲ್ಲಿ ಅನಧಿಕೃತ ಮದ್ಯ ಸಂಗ್ರಹಣೆ ಆರೋಪ ಎದುರಿಸುತ್ತಿರುವ ಬಿಹಾರ ವಿಧಾನ ಪರಿಷತ್ ಸದಸ್ಯೆ ಮನೋರಮಾದೇವಿ ಮಂಗಳವಾರ ಪೊಲೀಸರಿಗೆ ಶರಣಾಗಿದ್ದಾರೆ. ದೇವಿ ಅವರನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ. ಕಳೆದ ವಾರ ತನ್ನ ಕಾರು ಹಿಂದಿಕ್ಕಿದಕ್ಕಾಗಿ 19 ವರ್ಷದ ಯುವಕನನ್ನು ಗುಂಡಿಕ್ಕಿ ಹತ್ಯೆ ಮಾಡಿದ ಆರೋಪದ ಮೇರೆಗೆ ಇವರ ಪುತ್ರ ರಾಕಿಯನ್ನು ಬಂಧಿಸಲಾಗಿದೆ.

2022 ವೇಳೆಗೆ ರಾಜ್ಯದಲ್ಲಿ ವಿದ್ಯುತ್ ಸಮಸ್ಯೆ ಅಂತ್ಯ: ಡಿಕೆಶಿ

ಮುಂದಿನ 6 ವರ್ಷಗಳಲ್ಲಿ ರಾಜ್ಯದ ವಿದ್ಯುತ್ ಸಮಸ್ಯೆ ಸಂಪೂರ್ಣ ನಿವಾರಣೆ ಆಗಲಿದೆ. ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ವಿದ್ಯುತ್ ಪೂರೈಸಲಾಗುವುದು ಎಂದು ಇಂಧನ ಸಚಿವ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

ಬೃಹತ್ ಪ್ರಮಾಣದ ಸೌರಶಕ್ತಿ ವಿದ್ಯುತ್ ಉತ್ಪಾದನೆ ಸಂಬಂಧ ಕೇಂದ್ರದ ಎನ್.ಟಿ.ಪಿ ಜತೆ ಒಡಂಬಡಿಕೆ ಮಾಡಿಕೊಂಡ ನಂತರ ಸುದ್ದಿಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿದ ಸಚಿವರು, 2022 ರ ವೇಳೆಗೆ 6000 ಮೆಗಾವ್ಯಾಟ್ ಹೆಚ್ಚವರಿ ವಿದ್ಯುತ್ ಉತ್ಪಾದನೆಯಾಗಲಿದೆ. 2018 ರ ವೇಳಗೆ ಉತ್ಪಾದಿಸಲಿರುವ 5200 ಮೆಗಾವ್ಯಾಟ್ ವಿದ್ಯುತ್ ಪೈಕಿ ಸೌರಶಕ್ತಿಯದು 2000 ಮೆಗಾವ್ಯಾಟ್. ಇಷ್ಟು ದೊಡ್ಡ ಪ್ರಮಾಣದ ಸೌರವಿದ್ಯುತ್ ಕೇಂದ್ರವನ್ನು ತುಮಕೂರು ಜಿಲ್ಲೆ ಪಾವಗಡದಲ್ಲಿ ಪ್ರಾರಂಭಿಸಲಾಗುವುದು. 2017 ರ ಸೆಪ್ಟೆಂಬರ್ ವೇಳೆಗೆ 500 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ
ಆಗಲಿದೆ ಎಂದರು.

ಜನರು ಸರ್ಕಾರಿ ಆಸ್ಪತ್ರೆ ಲಾಭ ಪಡೆಯುತ್ತಿಲ್ಲ: ಸಿಎಂ

ಸರ್ಕಾರ ಸಾವಿರಾರು ಕೋಟಿ ಖರ್ಚು ಮಾಡಿ ಅತ್ಯುತ್ತಮ ಸೌಕರ್ಯ ಕಲ್ಪಿಸಿದ್ದರೂ ಜನ ಚಿಕಿತ್ಸೆಗೆ ಸರಕಾರಿ ಆಸ್ಪತ್ರೆಗಳನ್ನು ಬಿಟ್ಟು, ಖಾಸಗಿ ಆಸ್ಪತ್ರೆಗಳ ಕಡೆ ಹೋಗುತ್ತಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬೇಸರ ವ್ಯಕ್ತಪಡಿಸಿದರು.

ಜಯದೇವ ಹೃದ್ರೋಗ ಸಂಸ್ಥೆಗೆ ಖಾಸಗಿ ಆಸ್ಪತ್ರೆಗಿಂತಲೂ ಹೆಚ್ಚು ಜನಪ್ರಿಯತೆ ಗಳಿಸಲು ಸಾಧ್ಯವಾಗುವುದಾದರೆ, ಇದು ಇತರೆ ಸರ್ಕಾರಿ ಆಸ್ಪತ್ರೆಗಳಿಗೆ ಏಕೆ ಸಾಧ್ಯವಾಗುತ್ತಿಲ್ಲ ಎಂದು ವಿಕ್ಟೋರಿಯಾ ಆಸ್ಪತ್ರೆ ಆವರಣದಲ್ಲಿ ಬೆಂಗಳೂರು ಮೆಡಿಕಲ್ ಕಾಲೇಜಿನ ಅತ್ಯಾಧುನಿಕ ಟ್ರಾಮಾ ಸೆಂಟರ್, ಇ-ಕಿರಣ, ಹೀಮೊಪೋಲಿಯೋ ಚಿಕಿತ್ಸಾ ಕೇಂದ್ರ, ಸೂಪರ್ ಸಿಟಿ ಸ್ಕ್ಯಾನರ್ ಯಂತ್ರ ಮತ್ತಿತರ ಸೌಲಭ್ಯಗಳನ್ನು ಉದ್ಘಾಟಿಸಿ ಪ್ರಶ್ನಿಸಿದರು.

ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದು ಆ ಬಿಲ್ಲನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಪಡೆಯಲು ಸಲ್ಲಿಸುವ ಅರ್ಜಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ಸರಕಾರಿ ಆಸ್ಪತ್ರೆಗಳಲ್ಲಿ ಗುಣಮಟ್ಟದ ಸೇವೆ ಸಿಗುತ್ತಿಲ್ಲ ಎಂದು ಜನ ಖಾಸಗಿ ಆಸ್ಪತ್ರೆಗಳಿಗೆ ಹೋಗುತ್ತಿದ್ದಾರೆ. ಸರ್ಕಾರಿ ಆಸ್ಪತ್ರೆಗಳ ಮುಖ್ಯಸ್ಥರು, ವೈದ್ಯರು, ಸಿಬ್ಬಂದಿಗಳು ಇದನ್ನು ಗಂಭೀರವಾಗಿ ಪರಿಗಣಿಸಬೇಕು ಎಂದರು.

ಇನ್ನುಳಿದಂತೆ ನೀವು ತಿಳಿಯಬೇಕಿರೋ ಪ್ರಮುಖ ಸುದ್ದಿ ಸಾಲುಗಳು..

  • ಕಾಶ್ಮೀರದ ಉತ್ತರ ಮತ್ತು ದಕ್ಷಿಣ ಪ್ರದೇಶಗಳಲ್ಲಿ ಭಾರತೀಯ ಸೇನೆ ನಡೆಸಿದ ಕಾರ್ಯಾಚರಣೆಯಲ್ಲಿ ಇಬ್ಬರು ಉಗ್ರರು ಹತರಾಗಿದ್ದಾರೆ. ಜೂನರೇಶಿ ಹಳ್ಳಿ ಸಮೀಪ ಉಗ್ರರ ಸುಳಿವು ದೊರೆತ ಹಿನ್ನೆಲೆಯಲ್ಲಿ ಭಾರತೀಯ ಯೋಧರು ಕಾರ್ಯಚರಣೆ ನಡೆಸಿದರು. ಹತ್ಯೆಗೊಳಗಾದವರ ಗುರುತು ಇನ್ನಷ್ಟೆ ಪತ್ತೆ ಆಗಬೇಕಿದೆ.
  • ಒಲಿಂಪಿಕ್ಸ್ 74 ಕೆ.ಜಿ ವಿಭಾಗದಲ್ಲಿ ಭಾರತ ಪ್ರತಿನಿಧಿಸುವ ಕುರಿತು ಎದ್ದಿರುವ ವಿವಾದವನ್ನು ಭಾರತೀಯ ಕುಸ್ತಿ ಸಂಸ್ಥೆ ಬಗೆಹರಿಸಬೇಕು ಎಂದು ದೆಹಲಿ ಹೈಕೋರ್ಟ್ ಸೂಚನೆ ನೀಡಿದೆ. ಭಾರತೀಯ ಕುಸ್ತಿ ಸಂಸ್ಥೆಯ ಅಧ್ಯಕ್ಷ, ಉಪಾಧ್ಯಕ್ಷ, ಕಾರ್ಯದರ್ಶಿ ಮತ್ತು ಭಾರತದ ಮುಖ್ಯ ಕೋಚ್ ಅವರನ್ನೊಳಗೊಂಡ ಸಮಿತಿ ಸುಶೀಲ್ ಕುಮಾರ್ ಅವರನ್ನು ಭೇಟಿ ಮಾಡಿ ಸಮಸ್ಯೆ ಬಗೆಹರಿಸುವಂತೆ ಸೂಚಿಸಿದೆ.

Leave a Reply