ಮಾನಸಿಕ ಪೂರ್ಣ ಭಾರತೀಯನಲ್ಲದ ರಾಜನ್ ನನ್ನು ಕಿತ್ತುಹಾಕಿ ಎಂದು ಪ್ರಧಾನಿಗೆ ಸ್ವಾಮಿ ಆಗ್ರಹ

ಡಿಜಿಟಲ್ ಕನ್ನಡ ಟೀಮ್

ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್ ರಘುರಾಮ್ ರಾಜನ್ ವಿರುದ್ಧ ರಾಜ್ಯಸಭೆ ಬಿಜೆಪಿ ಸದಸ್ಯ ಸುಬ್ರಮಣಿಯನ್ ಸ್ವಾಮಿ ಟೀಕಾ ಪ್ರಹಾರ ಮುಂದುವರಿಸಿದ್ದಾರೆ. ರಾಜನ್ ಮೇಲೆ ಸ್ವಾಮಿ ಅವರ ಕೋಪ ದಿನೇದಿನೇ ಹೆಚ್ಚಾಗುತ್ತಲೇ ಇದೆ. ರಾಜನ್ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿರುವ ಸ್ವಾಮಿ, ತಕ್ಷಣವೇ ಅವರನ್ನು ಆರ್ ಬಿಐ ಗವರ್ನರ್ ಸ್ಥಾನದಿಂದ ಕಿತ್ತುಹಾಕಬೇಕೆಂದು ಆಗ್ರಹಿಸಿದ್ದಾರೆ.

ಗವರ್ನರ್ ಸ್ಥಾನಕ್ಕೆ ರಾಜನ್ ಅನರ್ಹ ಎಂದು ಹೇಳಿದ್ದ ಸ್ವಾಮಿ, ಈಗ ಒಂದು ಹೆಜ್ಜೆ ಮುಂದೆ ಹೋಗಿದ್ದಾರೆ. ರಾಜನ್ ಪೂರ್ಣ ಪ್ರಮಾಣದ ಭಾರತೀಯನ ಮನಸ್ಥಿತಿ ಹೊಂದಿಲ್ಲ. ಅವರನ್ನು ಹಿಂದಿನ ಯುಪಿಎ ಸರ್ಕಾರ ನೇಮಕ ಮಾಡಿತ್ತು. ರಾಜನ್ ಉದ್ದೇಶಪೂರ್ವಕವಾಗಿ ಭಾರತದ ಆರ್ಥಿಕ ಸ್ಥಿತಿಯನ್ನು ಹಳ್ಳಹಿಡಿಸುತ್ತಿದ್ದಾರೆ. ಈ ದಿಕ್ಕಿನಲ್ಲಿ ಅವರ ಪ್ರಯತ್ನಗಳು ನಿರಂತರವಾಗಿವೆ. ಅವರ ಯಾವುದೇ ನಿರ್ಧಾರಗಳು ಭಾರತದ ಆರ್ಥಿಕ ಸ್ಥಿತಿ ಸುಧಾರಿಸುವ ಉದ್ದೇಶ ಹೊಂದಿಲ್ಲ.

ಕಳೆದ ಎರಡು ವರ್ಷಗಳಲ್ಲಿ ಸಾರ್ವಜನಿಕ ಬ್ಯಾಂಕ್ ಗಳಲ್ಲಿ ಕೆಟ್ಟ ಸಾಲದ ಪ್ರಮಾಣ ದುಪ್ಪಟ್ಟಾಗಿದ್ದು, ₹3.5 ಲಕ್ಷ ಕೋಟಿ ಮುಟ್ಟಿದೆ. ರಾಜನ್ ಅಮೆರಿಕದ ಗ್ರೀನ್ ಕಾರ್ಡ್ ಬಳಸುತ್ತಾ ಭಾರತದಲ್ಲಿದ್ದಾರೆ. ಪ್ರತಿ ವರ್ಷ ಅಮೆರಿಕಕ್ಕೆ ಹೋಗಿಬರುತ್ತಾರೆ ಎಂದು ಸ್ವಾಮಿ ಪತ್ರದಲ್ಲಿ ತಿಳಿಸಿದ್ದಾರೆ.

ಭಾರತ ಆರ್ಥಿಕ ಹಿತಾಸಕ್ತಿಗೆ ವಿರುದ್ಧವಾಗಿ ಕೆಲಸ ಮಾಡುವವರನ್ನು ಯುಪಿಎ ಸರ್ಕಾರ ನೇಮಿಸಿದ್ದು ಏಕೆ ಎಂಬುದೇ ಅರ್ಥವಾಗುತ್ತಿಲ್ಲ. ನಮ್ಮಲ್ಲೇ ಅನೇಕ ದೇಶಭಕ್ತ ಆರ್ಥಿಕ ತಜ್ಞರಿದ್ದಾರೆ. ಅವರನ್ನೇ ಆರ್ ಬಿಐ ಗವರ್ನರ್ ಸ್ಥಾನಕ್ಕೆ ಪರಿಗಣಿಸಬಹುದು. ರಾಷ್ಟ್ರದ ಹಿತಾಸಕ್ತಿ ದೃಷ್ಠಿಯಿಂದ ರಾಜನ್ ಅವರನ್ನು ವಜಾಗೊಳಿಸಬೇಕು ಎಂದು ಸ್ವಾಮಿ ಆಗ್ರಹಿಸಿದ್ದಾರೆ.

ದೇಶದ ಹಣದುಬ್ಬರವನ್ನು ಕಡಿಮೆ ಮಾಡಲು ರಾಜನಿ ಬಡ್ಡಿ ದರ ಹೆಚ್ಚಿಸುರುವುದು ನಿಜಕ್ಕೂ ಕೆಟ್ಟ ನಿರ್ಧಾರ. ಇದರಿಮದಾಗಿ ದೇಶದಲ್ಲಿ ನಿರುದ್ಯೋಗ ಸಮಸ್ಯೆ ಇಮ್ಮಡಿಯಾಗುತ್ತಿದೆ ಸ್ವಾಮಿ ಆಪಾದಿಸಿದ್ದಾರೆ.

Leave a Reply