ಮಿಲಿಟರಿ ಸಹಕಾರಕ್ಕೆ ಅಮೆರಿಕ ಉತ್ಸುಕತೆ, ಭಾರತದ ಮೇಲೆ ಒಲವು ಹೆಚ್ಚುತ್ತಿರೋದಕ್ಕೆ ಸಾಕ್ಷಿ

ಡಿಜಿಟಲ್ ಕನ್ನಡ ಟೀಮ್

ಮುಂದಿನ ತಿಂಗಳು ಭಾರತ ಪ್ರಧಾನಿ ಮೋದಿ ಅಮೆರಿಕ ಪ್ರವಾಸ ಕೈಗೊಳ್ಳುತ್ತಿದ್ದಾರೆ. ಮೋದಿ ಪ್ರವಾಸದ ಬಗ್ಗೆ ಅಮೆರಿಕ ಈಗ ಹಿಂದೆಂದೂ ಇಲ್ಲದ ಉತ್ಸಾಹ ತೋರುತ್ತಿದೆ. ಮೋದಿ ಪ್ರವಾಸದ ವೇಳೆ ಉಭಯ ದೇಶಗಳ ಮಿಲಿಟರಿ ಸಹಕಾರ ವಿಸ್ತರಣೆ ಬಗ್ಗೆ ಅಮೆರಿಕ ಹೆಚ್ಚಿನ ನಿರೀಕ್ಷೆ ಇಟ್ಟುಕೊಂಡಿದೆ. ಇಷ್ಟು ದಿನಗಳ ಕಾಲ ಇಲ್ಲದ್ದು ಈಗೇಕೆ ಎಂಬ ಪ್ರಶ್ನೆ ಮೂಡುತ್ತದೆಯಾದರೂ, ಅಮೆರಿಕಕ್ಕೆ ಭಾರತ ಜತೆಗಿನ ಸ್ನೇಹ ಸಂಬಂಧ ಎಷ್ಟು ಮುಖ್ಯ ಎಂಬುದರ ದ್ಯೋತಕ ಇದಾಗಿದೆ.

ಯೆಸ್, ಇತ್ತೀಚಿನ ದಿನಗಳಲ್ಲಿ ಅಂತಾರಾಷ್ಟ್ರೀಯ ಮಟ್ಟದ ಸಾಕಷ್ಟು ವಿಚಾರಗಳಲ್ಲಿ ಭಾರತದ ಬೆನ್ನಿಗೆ ಅಮೆರಿಕ ನಿಂತಿದೆ. ಅದಕ್ಕೆ ಸಾಲು ಸಾಲು ಉದಾಹರಣೆಗಳಿವೆ. ಪಾಕಿಸ್ತಾನಕ್ಕೆ ಯುದ್ಧ ವಿಮಾನ ಮಾರಾಟ ವಿನಾಯಿತಿ ಹಿಂಪಡೆದಿದ್ದು, ಏಷ್ಯಾದಲ್ಲಿ ಚೀನಾ ನಿಯಂತ್ರಿಸಲು ಭಾರತ ಶಶಕ್ತ ಎಂದು ಹೇಳಿದ್ದು, ಎಲ್ಲಕ್ಕಿಂತ ಮಿಗಿಲಾಗಿ ಇತ್ತೀಚೆಗೆ ಚೀನಾದ ವಿರೋಧ ಲೆಕ್ಕಿಸದೇ ಅಣ್ವಸ್ತ್ರ ಪೂರೈಕೆ ಸಮೂಹದಲ್ಲಿ ಭಾರತಕ್ಕೆ ಸ್ಥಾನ ಕೊಡಬೇಕು ಎಂದು ಹೇಳಿದ್ದು. ಈಗ ಭಾರತದ ಜತೆಗಿನ ಮಿಲಿಟರಿ ಸಹಕಾರದ ವಿಸ್ತರಣೆಗೆ ಅಮೆರಿಕ ಉತ್ಸುಕವಾಗಿರುವುದು ಇದಕ್ಕೆ ಕನ್ನಡಿ ಹಿಡಿದಿದೆ.

ಭಾರತದ ಜತೆಗಿನ ಸಂಬಂಧ ವೃದ್ಧಿಗೆ ಎದುರು ನೋಡುತ್ತಿದ್ದೇವೆ. ಉಭಯ ದೇಶಗಳ ನಡುವಣ ಮಿಲಿಟರಿ ಸಹಕಾರ ವಿಸ್ತರಣೆಗೆ ಸಾಕಷ್ಟು ಅವಕಾಶಗಳಿವೆ ಎಂದು ಅಮೆರಿಕ ರಕ್ಷಣಾ ಕಾರ್ಯದರ್ಶಿ ಆಶ್ಟನ್ ಕಾರ್ಟರ್ ಹೇಳಿರುವುದಾಗಿ ಎಂದು ಪೆಂಟಗನ್ ಮಾಧ್ಯಮ ಕಾರ್ಯದರ್ಶಿ ಪೀಟರ್ ಕುಕ್ ತಿಳಿಸಿದ್ದಾರೆ.

ಭದ್ರತಾ ವಿಷಯಗಳಲ್ಲಿ ನಾವು ಆಸಕ್ತರಾಗಿದ್ದೇವೆ. ಈವರೆಗೂ ಭಾರತದ ಜತೆಗೆ ಹೊಂದಿರುವ ಉತ್ತಮ ಸಂಬಂಧವನ್ನು ಭವಿಷ್ಯದಲ್ಲಿ ಮತ್ತಷ್ಟು ಗಟ್ಟಿಮಾಡಿಕೊಳ್ಳುವ ವಿಶ್ವಾಸವಿದೆ. ಜೂನ್ ತಿಂಗಳಲ್ಲಿ ಮೋದಿ ಅವರ ಪ್ರವಾಸವನ್ನು ಕಾರ್ಟರ್ ಎದುರು ನೋಡುತ್ತಿದ್ದಾರೆ ಎಂದು ಕುಕ್ ಹೇಳಿದ್ದಾರೆ.

ಒಟ್ಟಿನಲ್ಲಿ ಭಾರತದ ಸಾಮರ್ಥ್ಯದ ಮೇಲೆ ಅಮೆರಿಕ ನಂಬಿಕೆ ಇಟ್ಟಿದ್ದು, ಭವಿಷ್ಯದಲ್ಲಿ ಈ ಸ್ನೇಹ ನಾನಾ ಆಯಾಮಗಳಲ್ಲಿ ಮಹತ್ವ ಪಡೆದುಕೊಳ್ಳಲಿದೆ. ಈ ಕಾರಣಕ್ಕಾಗಿ ಮೋದಿ ಅವರ ಪ್ರವಾಸಕ್ಕೆ ಅಮೆರಿಕ ಹೆಚ್ಚಿನ ಮಹತ್ವ ಕೊಟ್ಟಿದೆ. ಈ ಎಲ್ಲ ಬೆಳವಣಿಗೆಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತ ತನ್ನದೇ ಆದ ಛಾಪು ಮೂಡಿಸಿಕೊಳ್ಳುತ್ತಿರುವುದಕ್ಕೆ ಸಾಕ್ಷಿಯಾಗಿವೆ.

Leave a Reply