12 ನೇ ವಯಸ್ಸಿಗೆ 12 ನೇ ಕ್ಲಾಸ್ ಪಾಸು, ಹೊಟ್ಟೆಗೆ ಬರೀ ಅಕ್ಷರಾನೇ ತಿಂತಾರೇನೋ..!

 

ಡಿಜಿಟಲ್ ಕನ್ನಡ ಟೀಮ್

ಇವರು ಹೊಟ್ಟೆಗೇನು ಬರೀ ಅಕ್ಷರಾನೇ ತಿಂತಾರೆ ಅಂತ ಕಾಣ್ತದೆ. ಅದೇನ್ ರೆಕಾರ್ಡ್ ಮಾಡ್ತಾರಪ್ಪಾ..!

ಟೆನ್ತ್ ಪರೀಕ್ಷೆಯಲ್ಲಿ ನಮ್ ಭದ್ರಾವತಿ ಹುಡುಗ ರಂಜನ್ ಔಟ್ ಆಫ್ ಔಟ್ ತಗೊಂಡು ಇತಿಹಾಸ ಸೃಷ್ಟಿ ಮಾಡಿರೋ ಸಂದರ್ಭದಲ್ಲೇ ಇನ್ನೊಂದು ರೆಕಾರ್ಡ್ ರಾಜಸ್ಥಾನದಿಂದ ಬಂದಿದೆ. ಅಲ್ಲೊಬ್ಬ ಹುಡುಗ ಬರೀ ಹನ್ನೆರಡನೇ ವಯಸ್ಸಿಗೇ ಹನ್ನೆರಡನೇ ಕ್ಲಾಸ್ ಪಾಸು ಮಾಡಿ, ಸರಸ್ವತಮ್ಮನಿಗೇ ಜರ್ಕ್ ಹೊಡೆಸಿದ್ದಾನೆ.

ಯೆಸ್, ನಂಬಲೇಬೇಕಾದ ಸುದ್ದಿ ಇದು. 12 ನೇ ವಯಸ್ಸಿಗೆ 7 ಅಥವಾ 8 ನೇ ತರಗತಿ ಮುಗಿಸೋ ಹೊತ್ತಿಗೆ ರಾಜಸ್ಥಾನದ ಅಭಾಸ್ ಶರ್ಮಾ ಇತ್ತೀಚೆಗೆ ನಡೆದ 12 ನೇ ತರಗತಿ ಪರೀಕ್ಷೆಯಲ್ಲಿ ಶೇ. 65 ರಷ್ಟು ಅಂಕ ಪಡೆದು ಎಲ್ಲರ ಹುಬ್ಬೇರಿಸಿದ್ದಾನೆ. ಸಾಮಾನ್ಯವಾಗಿ 17-18 ನೇ ವಯಸ್ಸಲ್ಲಿ ದ್ವಿತೀಯ ಪಿಯುಸಿ ಮುಗಿಸೋದು ವಾಡಿಕೆ. ಅವರವರ ತಾಕತ್ತಿನ ಮೇಲೆ ಈ ವಯಸ್ಸು ಒಂದಷ್ಟು ಹಿಗ್ಗಲೂಬಹುದು. ಆದರೆ ಈ ಶರ್ಮಾ ಸಾಧನೆ ಮಾತ್ರ ಕೊಂಡಾಡುವಂತದ್ದೇ.

ಅಭಾಸ್ ತಂದೆ ಸಚಿನ್ ಶರ್ಮಾ ಮಗನ ಹೆಸರಿನಲ್ಲೇ ‘ಅಭಾಸ್ ಪಬ್ಲಿಕ್ ಶಾಲೆ’ಗೆ ನಡೆಸುತ್ತಿದ್ದಾರೆ.  ಮೊದಲ ತರಗತಿ ಮುಗಿಸುವಷ್ಟರಲ್ಲೇ ಸಿಕ್ಕಾಪಟ್ಟೆ ಚುರುಕಾಗಿದ್ದ ಅಭಾಸ್ನಂಎರಡನೇ ತರಗತಿ ಬದಲು ನೇರ 5 ನೇ ತರಗತಿಗೆ ಬಡ್ತಿ ಪಡೆದ. ವಯಸ್ಸಿಗೆ ಮೀರಿದ ತಲೆ, ಅಕ್ಷರಾನುಗ್ರಹ ಚಕಾಚಕಾ ಅಂತ ತರಗತಿಗಳನ್ನು ದಾಟಿಸುತ್ತಾ ಹೋಯಿತು. ಹತ್ತನೇ ವಯಸ್ಸಿಗೆ 10 ನೇ ತರಗತಿ ಪಾಸು ಮಾಡಿದ, 61 ರಷ್ಟು ಅಂಕಗಳೊಂದಿಗೆ. ಇದೀಗ 12ನೇ ವಯಸ್ಸಿಗೆ 12 ನೇ ತರಗತೀನೂ ಮುಗಿಸಿ ಕೂತಿದ್ದಾನೆ.

ಅತ್ಯಂತ ಕಿರಿಯ ವಯಸ್ಸಿನಲ್ಲಿ ಡಾಕ್ಟರ್ ಆಗಬೇಕು ಎನ್ನುವುದು ಈತನ ಗುರಿ. ಆದರೆ ಆತನ ಆಸೆಗೆ ಕಾನೂನಿನ ತೊಡಕಿದೆ. ನೀಟ್ ಅಥವಾ ಆಖಿಲ ಭಾರತ ವೈದ್ಯಕೀಯ ಪೂರ್ವ ಪರೀಕ್ಷೆಗೆ (ಎಐಟಿಎಂಟಿ) ಕೂರಲು ವಿದ್ಯಾರ್ಥಿಗೆ 17 ವರ್ಷವಾಗಿರಬೇಕು ಎಂಬ ನಿಯಮವಿದೆ. ಹೀಗಾಗಿ ಅಭಾಸ್ ಶರ್ಮಾ ವೈದ್ಯ ಶಿಕ್ಷಣ ಪ್ರವೇಶಕ್ಕೆ  ಇನ್ನು 5 ವರ್ಷ ಕಾಯಬೇಕಿದೆ. ಈ ಮಧ್ಯೆ ಸಚಿನ್ ಶರ್ಮಾ ತಮ್ಮ ಮಗನನ್ನು ಆದಷ್ಟು ಶೀಘ್ರ ವೈದ್ಯ ಪರೀಕ್ಷೆಗೆ ಕೂರಿಸಲು ಶಿಕ್ಷಣ ಹಾಗೂ ಕಾನೂನು ತಜ್ಞರ ಮೂಲಕ ದಾರಿ ಹುಡುಕುತ್ತಿದ್ದಾರೆ.

ಒಂದು ವೇಳೆ ವೈದ್ಯ ಪ್ರವೇಶ ಪರೀಕ್ಷೆ ಬರೆಯಲು ಅನುಮತಿ ಸಿಗದಿದ್ದರೆ ಪರ್ಯಾಯ ಯೋಜನೆ ಸಿದ್ಧವಾಗಿದೆ. ಮುಂದಿನ ಐದು ವರ್ಷಗಳಲ್ಲಿ ಪದವಿ ಹಾಗೂ ಸ್ನಾತಕೋತ್ತರ ಪದವಿ ಮುಗಿಸಿ, ನಂತರ ವೈದ್ಯ ಪ್ರವೇಶ ಪರೀಕ್ಷೆ ಬರೆಯುವುದು. ಆಗ ಸ್ನಾತಕೋತ್ತರ ಪದವಿ ಮುಗಿಸಿ, ವೈದ್ಯ ಪ್ರವೇಶ ಪರೀಕ್ಷೆ ಬರೆದ ದೇಶದ ಮೊದಲ ವಿದ್ಯಾರ್ಥಿ ಎಂಬ ಹೆಗ್ಗಳಿಕೆಗೆ ಈತ ಪಾತ್ರನಾಗಲಿದ್ದಾನೆ.

Leave a Reply