ಎಲ್ಲದಕ್ಕೂ ಗಾಂಧಿ ಕುಟುಂಬದ ಹೆಸರೇಕೆ ಎಂಬ ರಿಶಿ ಕಪೂರ್ ಪ್ರಶ್ನೆಯಲ್ಲಿ ತರ್ಕವಿದೆ ಅಲ್ಲವೇ..?

ಡಿಜಿಟಲ್ ಕನ್ನಡ ಟೀಮ್

ಸದ್ಯ ದೇಶದಲ್ಲಿ ಹೊಸದೊಂದು ಚರ್ಚೆ ಶುರುವಾಗಿದೆ. ಅದು ಬೃಹದಾಕಾರ ಪಡೆವ ನಿರೀಕ್ಷೆಯೂ ಇದೆ. ವಿಷಯ ಏನಪ್ಪಾ ಅಂದ್ರೆ, ಸಾರ್ವಜನಿಕ ಆಸ್ತಿ-ಪಾಸ್ತಿಗಳಿಗೆ ಇಡಲಾಗುತ್ತಿರುವ ಹೆಸರಿನ ಕುರಿತು. ದೆಹಲಿಯ ಖ್ಯಾತ ಅಕ್ಬರ್ ರಸ್ತೆಗೆ ಮಹಾರಾಣ ಪ್ರತಾಪ್ ಸಿಂಗ್ ಹೆಸರಿಡಬೇಕೆಂದು ವಿದೇಶಾಂಗ ಖಾತೆ ರಾಜ್ಯ ಸಚಿವ ವಿ.ಕೆ ಸಿಂಗ್ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಅದರ ಬೆನ್ನಲ್ಲೇ ಸಾರ್ವಜನಿಕ ಆಸ್ತಿ-ಪಾಸ್ತಿಗೆ ಇಟ್ಟಿರೋ ಗಾಂಧಿ ಕುಟುಂಬ ಸದಸ್ಯರ ಹೆಸರುಗಳನ್ನು ಬದಲಿಸಬಾರದು ಏಕೆ ಎಂದು ಬಾಲಿವುಡ್ ಹಿರಿಯ ನಟ ರಿಶಿ ಕಪೂರ್ ಟ್ವೀಟ್ ಮಾಡಿರುವುದು ವಿವಾದ ಸೃಷ್ಟಿಸಿದೆ.

ಈ ಎರಡು ಹೇಳಿಕೆಗಳು ಇದೀಗ ರಾಜಕೀಯ ಬಣ್ಣ ಪಡೆದಿವೆ. 9 ತಿಂಗಳ ಹಿಂದೆ ನವದೆಹಲಿಯ ಔರಂಗಜೇಬ್ ರಸ್ತೆಯನ್ನು ಡಾ.ಎ.ಪಿ.ಜೆ ಅಬ್ದುಲ್ ಕಲಾಂ ರಸ್ತೆ ಎಂದು ಬದಲಾವಣೆ ಮಾಡಲಾಗಿತ್ತು. ಈಗ ಅಕ್ಬರ್ ರಸ್ತೆಗೆ 16ನೇ ಶತಮಾನದ ರಜಪೂತ ದೊರೆ ಮಹರಾಣ ಪ್ರತಾಪ್ ಸಿಂಗ್ ಹೆಸರಿಡಬೇಕೆಂದು ವಿ.ಕೆ ಸಿಂಗ್  ನಗರಾಭಿವೃದ್ಧಿ ಸಚಿವ ವೆಂಕಯ್ಯ ನಾಯ್ಡು ಅವರಿಗೆ ಪತ್ರ ಬರೆದಿದ್ದಾರೆ.

ವಿ.ಕೆ ಸಿಂಗ್ ಬೇಡಿಕೆ ಬೆನ್ನಲ್ಲೇ ರಿಶಿ ಕಪೂರ್ ಅವರ ಟ್ವೀಟ್ ಈ ವಿಷಯದ ಸ್ವರೂಪವನ್ನೇ ಬೇರೆಡೆಗೆ ತೆಗೆದುಕೊಂಡು ಹೋಗುತ್ತಿದೆ. ಕ್ರೀಡಾಂಗಣಗಳು, ವಿಮಾನ ನಿಲ್ದಾಣ, ರಸ್ತೆ, ಉದ್ಯಾನವನ – ಹೀಗೆ ದೇಶದ ನಾನಾ ಕಟ್ಟಡಗಳು ಹಾಗೂ ಯೋಜನೆಗಳಿಗೆ ಗಾಂಧಿ ಕುಟುಂಬ ಸದಸ್ಯರ ಹೆಸರಿಡುತ್ತಿರುವುದು ಎಷ್ಟು ಸರಿ ಎಂಬುದು ರಿಶಿ ಕಪೂರ್ ಪ್ರಶ್ನೆ. ಬಾಂದ್ರಾ-ವೊರ್ಲಿ ಸಂಪರ್ಕ ರಸ್ತೆಗೆ ಖ್ಯಾತ ಗಾಯಕಿ ಲತಾ ಮಂಗೇಶ್ಕರ್ ಅಥವಾ ಜೆಆರ್ ಡಿ ಟಾಟಾ ಅವರ ಹೆಸರನ್ನು ಏಕೆ ಇಡಬಾರದು. ದೇಶ ಏನು ಗಾಂಧಿ ಕುಟುಂಬದ ಆಸ್ತಿನೇ? ಬೇರೆ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರ ಹೆಸರು ಏಕೆ ಇಡಬಾರದು ಅನ್ನೊದು ಕಪೂರ್ ಪ್ರಶ್ನೆ.

ವಿಮಾನ ನಿಲ್ದಾಣಕ್ಕೆ ಇಂದಿರಾ ಗಾಂಧಿ ಅವರ ಹೆಸರನ್ನೇ ಏಕೆ ಇಡಬೇಕು? ಮಹಾತ್ಮ ಗಾಂಧಿ, ಅಂಬೇಡ್ಕರ್, ಭಗತ್ ಸಿಂಗ್ ಅವರಂತ ಗಣ್ಯರ ಹೆಸರೇಕೆ ಇಡಬಾರದು. ಸಿನಿಮಾ ಕ್ಷೇತ್ರದಲ್ಲಿ ಮೊಹಮದ್ ರಫಿ, ಮನ್ನಾ ಡೇ, ಕಿಶೋರ್ ಕುಮಾರ್ ಅವರು ಸಾಕಷ್ಟು ಕೊಡುಗೆ ನೀಡಿದ್ದಾರೆ. ಫಿಲ್ಮ್ ಸಿಟಿಗೆ ದಿಲೀಪ್ ಕುಮಾರ್, ದೇವ್ ಆನಂದ್, ಅಶೋಕ್ ಕುಮಾರ್, ಅಮಿತಾಬ್ ಬಚ್ಚನ್ ಅವರಂಥವರ ಹೆಸರಿಡಬೇಕೇ ಹೊರತು ರಾಜೀವ್ ಗಾಂಧಿ ಅಥವಾ ರಾಹುಲ್ ಗಾಂಧಿ ಹೆಸರಲ್ಲ ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.

ರಿಶಿ ಕಪೂರ್ ಹೇಳಿಕೆ ಕಾಂಗ್ರೆಸ್ ನಾಯಕರ ಅಸಮಾಧಾನಕ್ಕೆ ಕಾರಣವಾಗಿದ್ದು, ಇದೊಂದು ರಾಜಕೀಯ ಪ್ರೇರಿತ ಎಂದು ಟೀಕಿಸಿದ್ದಾರೆ.

ನಿಜ, ಇಲ್ಲಿ ರಿಶಿ ಕಪೂರ್ ನೀಡಿದ ಹೇಳಿಕೆ ರಾಜಕೀಯ ಪ್ರೇರಿತವೋ ಅಲ್ಲವೋ ಅದು ಬೇರೆ ಪ್ರಶ್ನೆ. ಆದರೆ, ಅವರ ಮಾತಿನಲ್ಲಿ ಒಂದಷ್ಟು ಸತ್ಯ ಇರೋದಂತೂ ನಿಜ. ಈಗಾಗಲೇ ರಾಜೀವ್ ಗಾಂಧಿ, ಇಂದಿರಾ ಗಾಂಧಿ ಸೇರಿದಂತೆ ಗಾಂಧಿ ಕುಟುಂಬದ ಅನೇಕ ಹೆಸರುಗಳನ್ನು ಸಾಕಷ್ಟು ಸಾರ್ವಜನಿಕ ಸ್ಥಳಗಳಿಗೆ ಇಡಲಾಗಿದೆ. ಆದಾಗ್ಯೂ ಈಗಲೂ ಅವರ ಕುಟುಂಬ ಸದಸ್ಯರ ಹೆಸರನ್ನೇ ಇಡುತ್ತಿರುವುದು ಎಷ್ಟು ಸರಿ ಎಂಬ ರಿಶಿ ಕಪೂರ್ ಪ್ರಶ್ನೆಯಲ್ಲಿ ತರ್ಕವಿದೆ.

Leave a Reply