ರೈತರಿಗೆ ₹ 11 ಸಾವಿರ ಕೋಟಿ ಸಾಲ, ರಾಜಕೀಯ ನಿವೃತ್ತಿ ಇಲ್ಲ ಅಂದ್ರು ಗೌಡ್ರು, ಶ್ಯಾಂಭಟ್ ಕೆಪಿಎಸ್ಸಿ ಅಧ್ಯಕ್ಷ?

ಮಾಜಿ ಪ್ರಧಾನಿ ದೇವೇಗೌಡರು ತಮ್ಮ 84 ನೇ ಜನ್ಮದಿನವನ್ನು ಕುಟುಂಬ ಸದಸ್ಯರ ಜತೆ ಬುಧವಾರ ಆಚರಿಸಿಕೊಂಡಾಗ ಪತ್ನಿ ಚನ್ನಮ್ಮ
ಅವರಿಗೆ ಕೇಕ್ ತಿನ್ನಿಸಿದ್ದು.

ಈ ವರ್ಷ ರೈತರಿಗೆ ₹ 11 ಸಾವಿರ ಕೋಟಿ ಕೃಷಿ ಸಾಲ ನೀಡುವುದಾಗಿ ಸಹಕಾರ ಸಚಿವ ಹೆಚ್.ಎಸ್.ಮಹದೇವಪ್ರಸಾದ್ ಪ್ರಕಟಿಸಿದ್ದಾರೆ.

ಕಳೆದ ವರ್ಷ ರೈತರಿಗೆ ₹ 10,400 ಕೋಟಿ ಕೃಷಿ ಸಾಲ ನೀಡಲಾಗಿತ್ತು. ಈ ವರ್ಷ ಹೆಚ್ಚುವರಿ 600 ಕೋಟಿಗೂ ಅಧಿಕ ಸಾಲ ನೀಡಲಾಗುವುದು. ಸಣ್ಣ ಮತ್ತು ಮಧ್ಯಮ ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ಹೆಚ್ಚು ಸಾಲ ಕೊಡಬೇಕೆಂಬುದು ಸರ್ಕಾರದ ಉದ್ದೇಶ. ಇದನ್ನು ಗಮನದಲ್ಲಿಟ್ಟುಕೊಂಡೇ ಕೇಂದ್ರ ಕೃಷಿ ಸಚಿವರನ್ನು ಇತ್ತೀಚೆಗೆ ಭೇಟಿ ಮಾಡಿದಾಗ, ಈ ಸಾಲದ ಪೈಕಿ ಶೇಕಡಾ 70 ರಷ್ಟನ್ನು ನಬಾರ್ಡ್ ಮೂಲಕ ನೀಡುವಂತೆ ಕೋರಿದ್ದೇವೆ. ಪ್ರಸ್ತುತ ಶೇ. 40 ರಷ್ಟು ಮಾತ್ರ ದೊರೆಯುತ್ತಿದೆ. ಈ ಪ್ರಮಾಣ ಹೆಚ್ಚಳವಾದರೆ ರೈತರಿಗೆ ಹನ್ನೊಂದು ಸಾವಿರ ಕೋಟಿ ರುಪಾಯಿಗಿಂತ ಹೆಚ್ಚು ಸಾಲ ದೊರೆಯಲಿದೆ ಎಂದು ಸುದ್ದಿಗಾರರಿಗೆ ಬುಧವಾರ ತಿಳಿಸಿದರು.

ರೈತರ ಪ್ರತಿ ಎಕರೆ ಬೆಳೆಗೆ ನಿಗದಿಪಡಿಸುವ ಸಾಲ ಪ್ರಮಾಣ ಪರಿಷ್ಕರಿಸುವ ಅಧಿಕಾರವನ್ನು ಆಯಾ ಜಿಲ್ಲಾ ಬ್ಯಾಂಕುಗಳಿಗೆ ನೀಡಲಾಗಿದೆ. ರೈತರಿಗೆ ಬಡ್ಡಿ ರಹಿತ ₹ ಮೂರು ಲಕ್ಷವರೆಗಿನ ಸಾಲವನ್ನು ಅವರು ಬೆಳೆವ ಬೆಳೆ ಮತ್ತು ಪ್ರಮಾಣ ಆಧರಿಸಿ ನೀಡಲಾಗುವುದು ಎಂದರು.

ರಾಜಕೀಯ ನಿವೃತ್ತಿ ಇಲ್ಲ: ದೇವೇಗೌಡ

ರಾಜಕೀಯ ನಿವೃತ್ತಿ ಪಡೆವ ಪ್ರಶ್ನೆಯೇ ಇಲ್ಲ ಎಂದು ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ತಿಳಿಸಿದ್ದಾರೆ.

ನಾನು 24×7  ರಾಜಕಾರಣಿ. ಅದರಲ್ಲಿ ಯಾವುದೇ ಅನುಮಾನ ಬೇಡ. ದೈವದಲ್ಲಿ ನಂಬಿಕೆ ಇದೆ. ಕಾರ್ಯಕರ್ತರ ಬೆಂಬಲ ಇದೆ. ಜನರ ಆಶೀರ್ವಾದ ಇದೆ. ಇದೇ ನನಗೆ ಶ್ರೀರಕ್ಷೆ ಎಂದು 84 ನೇ ವರ್ಷಕ್ಕೆ ಕಾಲಿಟ್ಟ ಸಂದರ್ಭದಲ್ಲಿ ಸುದ್ದಿಗಾರರಿಗೆ ಬುಧವಾರ ತಿಳಿಸಿದರು.

ಕಾಲಹರಣಕ್ಕೆ ಆಸ್ಪದವಿಲ್ಲದೆ ಪಕ್ಷ ಸಂಘಟಿಸಿ, ಅಧಿಕಾರಕ್ಕೆ ತರಲು ಹಗಲಿರುಳು ಶ್ರಮಿಸುತ್ತೇನೆ. ಹಿಂದೆ ಕಷ್ಟ ಕಾಲದಲ್ಲಿ ಪಕ್ಷ ಕಟ್ಟಿದ್ದೇನೆ. ಮುಂದೆಯೂ ಕಟ್ಟುತ್ತೇನೆ. ಹೋರಾಟದಿಂದ ಬಂದವನು ನಾನು. ಅದು ಮುಂದುವರಿಯುತ್ತದೆ ಎಂದರು.

.ಕೆಪಿಎಸ್ಸಿ ಅಧ್ಯಕ್ಷ ಸ್ಥಾನಕ್ಕೆ ಶ್ಯಾಂಭಟ್ ?

ಕರ್ನಾಟಕ ಲೋಕಸೇವಾ ಆಯೋಗದ ಅಧ್ಯಕ್ಷರಾಗಿ ಹಿರಿಯ ಅಧಿಕಾರಿ ಶ್ಯಾಂಭಟ್ ಅವರನ್ನು ನೇಮಿಸಲು ಸರ್ಕಾರ ನಿರ್ಧರಿಸಿದೆ. ಇದಕ್ಕೆ ಸಂಬಂಧಿಸಿದ ಕಡತಕ್ಕೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಮಂಗಳವಾರ ರಾತ್ರಿ ಸಹಿ ಹಾಕಿದ್ದು, ಅನುಮೋದನೆಗಾಗಿ ರಾಜ್ಯಪಾಲರಿಗೆ ಕಳಿಸಿದ್ದಾರೆ.

ಪ್ರಸ್ತುತ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಆಯುಕ್ತರಾಗಿ ಸೇವೆ ಸಲ್ಲಿಸುತ್ತಿರುವ ಶ್ಯಾಂಭಟ್ ಮುಂದಿನ ಜುಲೈನಲ್ಲಿ ನಿವೃತ್ತಿಯಾಗಲಿದ್ದಾರೆ.  ಕೆಎಎಸ್ ಅಧಿಕಾರಿಯಾಗಿ ಸೇವೆ ಆರಂಭಿಸಿದ ಶ್ಯಾಂಭಟ್ ಸಾರಿಗೆ ಆಯುಕ್ತ, ಮುಜುರಾಯಿ, ಕೆಪಿಸಿಎಲ್ ಮತ್ತಿತರ ಇಲಾಖೆಗಳಲ್ಲಿ ನಾನಾ ಹುದ್ದೆಗಳನ್ನು ಅಲಂಕರಿಸಿದ್ದಾರೆ. ಕೆಎಎಸ್ ಶ್ರೇಣಿಯಿಂದ ಐಎಎಸ್ ಹುದ್ದೆಗೆ ಬಡ್ತಿ ಪಡೆದು ಉಡುಪಿ ಜಿಲ್ಲಾಧಿಕಾರಿಯೂ ಆಗಿದ್ದರು.

ಬೆಂಗ್ಳೂರಲ್ಲಿ ಆಪಲ್ ಸೌಕರ್ಯ ಕೇಂದ್ರ ಸ್ಥಾಪನೆ

ಸದ್ಯ ಭಾರತ ಪ್ರವಾಸದಲ್ಲಿರುವ ಪ್ರತಿಷ್ಠಿತ ಆಪಲ್ ಸಂಸ್ಥೆ ಸಿಇಒ ಟಿಮ್ ಕುಕ್, ಬೆಂಗಳೂರಿನಲ್ಲಿ ವಿನ್ಯಾಸ ಮತ್ತು ಅಭಿವೃದ್ಧಿ ಸೌಲಭ್ಯ ಕೇಂದ್ರ ಸ್ಥಾಪನೆ ಮಾಡುವುದಾಗಿ ಘೋಷಿಸಿದ್ದಾರೆ.

ಬೆಂಗಳೂರಿನ ಈ ಕೇಂದ್ರದಲ್ಲಿ ಗ್ರಾಹಕರ ಅನುಕೂಲ ಹಾಗೂ ಅಭಿರುಚಿಗೆ ತಕ್ಕಂತೆ ವಿಭಿನ್ನ ಆ್ಯಪ್ ಅಭಿವೃದ್ಧಿ ಮಾಡುತ್ತೇವೆ ಎಂದಿದ್ದಾರೆ ಕುಕ್. ಬುಧವಾರ ಮುಂಬೈಗೆ ಆಗಮಿಸಿದ ಟಿಮ್ ಪ್ರಭಾದೇವಿ ಪ್ರದೇಶದ ಶ್ರೀ ಸಿದ್ಧಿವಿನಾಯಕ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಈ ವೇಳೆ ಕಂಪನಿಯ ಭಾರತದ ಮುಖ್ಯಸ್ಥ ಸಂಜಯ್ ಕೌಲ್ ಜತೆಗಿದ್ದರು.

ಇನ್ನುಳಿದಂತೆ ನೀವು ತಿಳಿಯಬೇಕಿರೋ ಸುದ್ದಿ ಸಾಲುಗಳು..

  • ಕಳೆದ ವರ್ಷ ಪ್ರವಾಹಕ್ಕೆ ಸಿಲುಕಿದ್ದ ಚೆನ್ನೈ ಜನತೆಗೆ ಮತ್ತೆ ಆತಂಕ ಎದುರಾಗಿದೆ. ಸೋಮವಾರದಿಂದ ನಿರಂತರ ದಾಖಲೆ ಪ್ರಮಾಣದಲ್ಲಿ ಮಳೆ ಸುರಿಯುತ್ತಿದೆ. ಕಳೆದ 24 ಗಂಟೆಯಲ್ಲಿ 24 ಸೆ.ಮೀ ನಷ್ಟು ಮಳೆಯಾಗಿದೆ.
  • ಮೇ 22ರಂದು ನಡೆಯಬೇಕಿರೋ ಬಿಸಿಸಿಐ ಅಧ್ಯಕ್ಷ ಸ್ಥಾನದ ಚುನಾವಣೆಗೆ ತಡೆಯಾಜ್ಞೆ ನೀಡಬೇಕು ಎಂದು ಬಿಹಾರ ಕ್ರಿಕೆಟ್ ಸಂಸ್ಥೆ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ. ವಿವಿಧ ಪ್ರಕರಣಗಳಲ್ಲಿ ಆರೋಪ ಹೊತ್ತಿರುವವರು ಸ್ಪರ್ಧೆಯಲ್ಲಿದ್ದಾರೆ. ಹೀಗಾಗಿ ತಡೆ ನೀಡಬೇಕು ಎಂದು ಅದು ತಿಳಿಸಿದೆ.

Leave a Reply