ವರದಕ್ಷಿಣೆ ಕೊಡೋದು, ತಗೋಳೋದು ಎರಡೂ ಅಪರಾಧವೇ, ಆದರೆ ಈವರೆಗೂ ಕನ್ಯಾಪಿತೃಗಳ್ಯಾರೂ ಬಂಧಿಗಳಾದ ಸುದ್ದಿ ಕೇಳಿಲ್ಲ

 

author-geetha
ಈ ವರದಕ್ಷಿಣೆ ಎಂಬುದು ನಮ್ಮ ಸಾಮಾಜಿಕ ಪಿಡುಗುಗಳಲ್ಲಿಯೇ ದೈತ್ಯಾಕಾರದ ಸ್ವರೂಪ ಪಡೆದು ನಮ್ಮ ಸಮಾಜವನ್ನು ಕಾಡುತ್ತಿದೆ. ಮಾತೃ ಸ್ವರೂಪಿ ಅತ್ತೆ ರಾಕ್ಷಸಿಯಾಗುತ್ತಿದ್ದಾಳೆ. ಕೈ ಹಿಡಿದು ಸಪ್ತಪದಿ ತುಳಿದು ಸಂರಕ್ಷಿಸುವ ವಾದ ಮಾಡಿದ ಗಂಡ ಗಂಡಾಂತರವಾಗುತ್ತಿದ್ದಾನೆ.

ಹೆಣ್ಣಿನ ರಕ್ಷಣೆಗೆ ನಮ್ಮ ಕಾನೂನು, ಸಂಘ ಸಂಸ್ಥೆಗಳು, ಪಾಲಕರು ಈಗ ಟೊಂಕ ಕಟ್ಟಿ ನಿಂತಿದ್ದಾರೆ. ವರದಕ್ಷಿಣ ಕಿರುಕುಳವಿದೆ ಎಂದು ಹೆಣ್ಣು ಸೊಲೆತ್ತಿದರೆ ಸಾಕು ಅವಳ ಗಂಡ ಹಾಗೂ ಅವನ ಮನೆಯವರು ನೇರವಾಗಿ ಸೆರೆಮನೆ ಸೇರುತ್ತಾರೆ. ‘ಜಾಮೀನು ಸಿಗದಂತಹ ಅಪರಾಧ ವರದಕ್ಷಿಣೆ ಕಿರುಕುಳ’ ಎಂದು ಘೋಷಿಸಲಾಗಿದೆ. ಕಾನೂನು ಸಜ್ಜಾಗಿ ಶೋಷಿತ ಮಹಿಳೆಯ ರಕ್ಷಣೆಗೆ ಧಾವಿಸಿದೆ. ಹಲವು ಸಂಘ ಸಂಸ್ಥೆಗಳು ಮದುವೆಗೆ ಮುನ್ನವೇ ಹೆಣ್ಣು ಮಕ್ಕಳಿಗೆ, ಕಾಲೇಜಿನಲ್ಲಿಯೇ ಆ ಕಾನೂನುಗಳ ಅರಿವು ಮೂಡಿಸುತ್ತಿವೆ.

ವರದಕ್ಷಿಣೆ ಕೊಡುವುದು, ತೆಗೆದುಕೊಳ್ಳುವುದು ಎರಡೂ ಅಪರಾಧವಾದರೂ ಕನ್ಯಾಪಿತೃಗಳ್ಯಾರೂ ಈವರೆಗೂ ಬಂಧಿಗಳಾದ ಸುದ್ದಿ ಕೇಳಿಲ್ಲ.

ವರದಕ್ಷಿಣೆ ಕೇಳಲು ಗಂಡು ಹೆದರಿಕೊಳ್ಳಲಿ ಎಂದು ಕಠಿಣ ಕಾನೂನು ಮಾಡಲಾಗಿದೆ. ಸಾವಿರಾರು ಹೆಣ್ಣುಮಕ್ಕಳಿಗೆ ನ್ಯಾಯ ಸಿಕ್ಕಿದೆ. ಅದಕ್ಕಿಂತ ಹೆಚ್ಚು ಮಂದಿಗೆ ಅನ್ಯಾಯ ಆಗುವುದು ತಪ್ಪಿದೆ. ಎಲ್ಲಾ ನಿಜ, ಪ್ರಶಂಸನೀಯ. ಆದರೆ ನೂರಾರು ಗಂಡುಗಳಿಗೆ ಈ ಕಾನೂನಿನ ದುರ್ಬಳಕೆಯಿಂದ ಅನ್ಯಾಯವಾಗಿದೆ. ತಂದೆಯ ಪ್ರೀತಿಯಿಂದ ಸಾವಿರಾರು ಮಕ್ಕಳು ವಂಚಿತರಾಗಿದ್ದಾರೆ ಎಂಬುದೂ ಅಷ್ಟೇ ಸತ್ಯ.

ಎರಡು ದಿನ ಜೈಲಿನಲ್ಲಿ ಮುದ್ದೆ ಮುರಿದು ಬರಲಿ, ಬುದ್ಧಿ ಬರುತ್ತೆ ಎಂದು ಲಾಯರ್ ಅಥವಾ ಇನ್ಯಾರದೋ ಉಪದೇಶ ಕೇಳಿ ಅನ್ಯಾಯವಾಗಿ ಡೌರಿ ಹೆರಾಸ್ಮೆಂಟ್ ಕೇಸ್ ಹಾಕಿದ ಉದಾಹರಣೆಗಳಿವೆ. ಹೆಣ್ಣಿನ ಕೈಗೆ ಈ ಕಾನೂನು ಒಂದು ಆಯುಧವಾಗಿದೆ. ಉಪಯೋಗದ ಜೊತೆಗೆ ದುರುಪಯೋಗವೂ ಆಗುತ್ತಿದೆ.

ಬೇರೊಬ್ಬನೊಡನೆ ಸಂಬಂಧ ಬೆಳೆದು, ಕಟ್ಟಿಕೊಂಡ ಗಂಡ ವಿಚ್ಛೇಧನ ಕೊಡಲು ನಿರಾಕರಿಸಿದಾಗ, ಅವನ ಮೇಲೆ ವರದಕ್ಷಿಣೆ ಕಿರುಕುಳದ ಕೇಸ್ ಹಾಕಿದ ಉದಾಹರಣೆಗಳಿವೆ. ತಂದೆ ತಾಯಿಯನ್ನು ಬಿಟ್ಟು ಬೇರೆ ಸಂಸಾರ ಹೂಡಲು ನಿರಾಕರಿಸುವ ಗಂಡ, ತಂದೆಯ ಆಸ್ತಿಯಲ್ಲಿ ಪಾಲು ಕೇಳಲು ನಿರಾಕರಿಸುವ ಗಂಡನ ವಿರುದ್ಧ ವರದಕ್ಷಿಣೆ ಕಿರುಕುಳದ ಕೇಸ್ ಜಡಿದ ಹೆಣ್ಣು ಮಕ್ಕಳೂ ಇದ್ದಾರೆ. ಎಷ್ಟೊ ಬಾರಿ ಮೈನ್ಟೇನೆನ್ಸ್ ಅಥವಾ ಇಡುಗಂಟು ಸಿಗುವುದಿಲ್ಲ ಎಂದು ತಿಳಿದಾಗ ವರದಕ್ಷಿಣೆ ಕಿರುಕುಳದ ಕೇಸನ್ನು ಹಿಂದಕ್ಕೆ ಪಡೆದು ಸಂಸಾರ ನಡೆಸಲು ಸಿದ್ಧರಿರುವ ಹೆಣ್ಣು ಮಕ್ಕಳೂ ಇದ್ದಾರೆ.

ಹೆಣ್ಣು ಮಾತೃಸ್ವರೂಪಿಣಿ, ಹಲವಾರು ಸಂದರ್ಭಗಳಲ್ಲಿ ಅಸಹಾಯಕಿ, ಅವಳಿಗೆ ಅನ್ಯಾಯವಾಗಿರುವುದು ಐತಿಹಾಸಿಕ ಸತ್ಯ ಎಂಬುದನ್ನು ಒಪ್ಪಿಕೊಳ್ಳೋಣ. ಆದರೆ ಹೆಣ್ಣು ಮಕ್ಕಳಲ್ಲಿ ಸ್ವಾರ್ಥಿಗಳೇ ಇಲ್ಲ, ಕೆಡುಕನ್ನು ಬಯಸುವವರೇ ಇಲ್ಲ ಎಂಬ ನಿರ್ಧಾರಕ್ಕೆ ಬರುವುದು ಎಷ್ಟು ಸರಿ? ಅಸಹಾಯಕ ಹೆಣ್ಣಿನ ಸಹಾಯಕ್ಕಾಗಿ ಮಾಡಿರುವ ಕಾನೂನನ್ನು ತಮ್ಮ ಸ್ವಾರ್ಥಸಾಧನೆಗೆ ಬಳಸಿಕೊಂಡು ನಿರಪರಾಧಿ ಗಂಡನನ್ನು ಬೀದಿಗೆ, ಬೀದಿಯಿಂದ ಜೈಲಿಗೆ ತಳ್ಳಿರುವ ಹೆಣ್ಣುಗಳಿಗೇನು ಕಮ್ಮಿಯಿಲ್ಲ. ಒಮ್ಮೆ ಜೈಲಿಗೆ ಹೋಗಿ ಬಂದರೆ, ನಿರಪರಾಧಿಯಾಗಿದ್ದರೂ ಅವನಿಗೆ ಕೆಲಸ, ಮರ್ಯಾದೆ ಹೋಗುತ್ತದೆ. ಅವನಿಗೆ ಅಕ್ಕ ತಂಗಿ, ಅಣ್ಣ ತಮ್ಮಂದಿರಿದ್ದರೆ
ಅವರ ಬಾಳು ಹಾಳಾಗುತ್ತದೆ.

ಸಾವಿರಾರು ಹೆಣ್ಣು ಮಕ್ಕಳಿಗೆ ಸಹಾಯವಾಗಿರುವ ಈ ಕಾನೂನು ಕೆಲವು ನಿರಪರಾಧಿ ಗಂಡಸರಿಗೆ ಉರಿಗಂಬವಾಗಿದೆ. ಗಂಡು ಹೆಣ್ಣು ಎಂದು ಭೇದ ಮಾಡದೆ ಕಾನೂನು ಇರಬೇಕು. ಕಾನೂನು ನ್ಯಾಯಸಮ್ಮತವಾಗಿರಬೇಕು ಎಂದರೆ ಸತ್ಯ, ಮಾನವೀಯತೆ ಮುಖ್ಯವಾಗಿರಬೇಕು. ಹೆಣ್ಣು ಅಮಾಯಕಳಾಗಿ ಇರದೆ ತನ್ನನ್ನು ತಾನು ಸಮರ್ಥಿಸಿಕೊಳ್ಳುವಂತೆ ಶೋಷಣೆಗೆ ತಲೆಬಾಗದಂತೆ ಇರಬೇಕು ನಿಜ. ಆದರೆ ಸಂಬಂಧ ಉಳಿಸುವ ದೃಷ್ಟಿ ಇರಬೇಕು ಮದುವೆಗೆ ಮುಂಚೆಯೇ ಎಲ್ಲವನ್ನು ಸಾವಕಾಶವಾಗಿ ಯೋಚಿಸಬೇಕು. ವರದಕ್ಷಿಣೆ ಕೇಳುವ ಗಂಡನ್ನು ಮದುವೆ ಆಗಲು ನಿರಾಕರಿಸಬೇಕು. ಮದುವೆಗೆ ಮುನ್ನ ಐವತ್ತು ಸಾವಿರ ಕೇಳುವ, ಕೇಳಿದ್ದನ್ನು ಪಡೆಯುವ ಗಂಡು ಮದುವೆಯಾದ ಮೇಲೆ ಲಕ್ಷ ಕೇಳಬಹುದಲ್ಲವೇ? ಐವತ್ತು ಸಾವಿರ ಕೊಟ್ಟು ಮದುವೆಯಾಗಿ ನಂತರ ವರದಕ್ಷಣೆ ಕಿರುಕುಳ ಎಂದು ಕಾನೂನಿನ ಮೊರೆ ಹೋಗುವ ಬದಲು ಮದುವೆಗೆ ಮುಂಚೆಯೇ ವರದಕ್ಷಿಣೆ ಕೇಳಿದ ಗಂಡಿನ ವಿರುದ್ಧ ದೂರು ನೀಡಿ, ಮಾಧ್ಯಮಗಳಲ್ಲಿ ಪ್ರಚಾರ ಕೊಟ್ಟು, ಸಮಾಜದಲ್ಲಿ ಅವನು ತಲೆಎತ್ತಿಕೊಂಡು ಬಾಳಲಾರದಂಥ ಪರಿಸ್ಥಿತಿ ನಿರ್ಮಿಸಬೇಕು. ಹುಡುಗಿಯ ತಂದೆತಾಯಿ ಈ ನಿಟ್ಟಿನಲ್ಲಿ ಎಚ್ಚೆತ್ತುಕೊಳ್ಳಬೇಕು. ಮಗಳು ಅಂದರೆ ತಲೆಯ ಮೇಲಿನ
ಹೊರೆ.. ಆದಷ್ಟು ಬೇಗ ಅಷ್ಟೊ ಇಷ್ಟೊ ಕೊಟ್ಟು ಧಾರೆಯೆರೆದು ಕೈ ತೊಳೆದುಕೊಳ್ಳಬೇಕು ಎಂಬ ಯೋಚನೆ ಬಿಡಬೇಕಲ್ಲವೇ?

ಮದುವೇಲಿ ಅಷ್ಟೆಲ್ಲಾ ಕೇಳಿದರು (ಸೈಟು, ದುಡ್ಡು, ಬಂಗಾರ, ಬೆಳ್ಳಿ), ನಾವು ಇಷ್ಟೆಲ್ಲಾ ಕೊಟ್ವಿ, ಆದರೂ ತೃಪ್ತಿಯಿಲ್ಲ. ಇನ್ನೂ ಕೇಳಿದ್ರು, ನಮ್ಮ ಹುಡುಗಿ ಸುಖವಾಗಿರ್ತಾಳೆ ಎಂದು ಸ್ವಲ್ಪ ಕೊಟ್ವಿ.. ಆದರೆ ನಮ್ಮ ಹುಡುಗಿ ಸುಖವಾಗಿಲ್ಲ.. ಎಂದು ದೂರು ಕೊಡುವ ಪರಿಸ್ಥಿತಿ ನಿರ್ಮಾಣವಾಗದಿರುವಂತೆ ನೋಡಿಕೊಳ್ಳುವುದು ಅವರ ಕೈಯಲ್ಲೇ ಇದೆ. ವರದಕ್ಷಿಣೆ ಕೇಳಿದ ಗಂಡಿಗೆ ಮಗಳನ್ನೇ ಕೊಡಬೇಡಿ. ಎಲ್ಲಾ ಹೆಣ್ಣುಮಕ್ಕಳು ವರದಕ್ಷಿಣೆ ಕೇಳುವ ಗಂಡನ್ನು ಮದುವೆಯಾಗುವುದಿಲ್ಲ ಎಂದು ಧಿಕ್ಕರಿಸಿ ನಿಂತರೆ ಈ ಸಮಸ್ಯೆ ಪರಿಹಾರವಾಗುವ ಸಾಧ್ಯತೆಯಿದೆ. ಆಸೆಯೆಂಬುದು ತಳವಿಲ್ಲದ ಬಾವಿ. ಬಿಟ್ಟಿ ಬರುತ್ತದೆ ಎಂದರೆ ಒಂದ್ಯಾಕೆ ನಾಲ್ಕಿರಲಿ ಎನ್ನುವುದು ಮನುಷ್ಯನ ಸಹಜ ಗುಣ. ಈ ತಳವಿಲ್ಲದ, ತೇವವಿಲ್ಲದ, ತೃಪ್ತಿಯಿರದ ಬಾವಿಗೆ ನೀರು ತುಂಬುವ
ವ್ಯರ್ಥ ಪ್ರಯತ್ನ ಮಾಡುವ ಬದಲು ಬಾವಿ ಮುಚ್ಚಿಸುವುದೇ ಒಳ್ಳೆಯದು.

ವೈವಾಹಿಕ ಜೀವನದಲ್ಲಿ ಬರುವ ಇತರೆ ತಾಪತ್ರಯಗಳನ್ನು ಮಾತುಕತೆ, ಹೊಂದಾಣಿಕೆಯಿಂದ ಪರಿಹರಿಸಿಕೊಳ್ಳಬೇಕು. ಅದು ಬಿಟ್ಟು ವರದಕ್ಷಿಣೆ ವಿರೋಧ ಕಾನೂನನ್ನು ದುರ್ಬಳಕೆ ಮಾಡಿಕೊಳ್ಳವುದು ಅನ್ಯಾಯವಲ್ಲವೇ? ಕಾನೂನಿನ ದುರುಪಯೋಗವಾಗಿದೆ ಎಂದು ಸಾಬೀತಾದರೆ ದುರುಪಯೋಗ ಮಾಡಿದವರಿಗೆ ಭಾರಿ ಶಿಕ್ಷೆಯಾಗುತ್ತದೆ ಎಂಬ ಎಚ್ಚರಿಕೆ ಇರಬೇಕು. ಕಾನೂನಿನ ದುರ್ಬಳಕೆಯಿಂದ ಅನ್ಯಾಯವಾದ ಗಂಡಿಗೆ ಪರಿಹಾರವಿರಬೇಕು. ವಂಚನೆ ಅಂದರೆ ವಂಚನೆ ಅ ಷ್ಟೇ. ಅದು ಗಂಡು ಮಾಡಿದ ವಂಚನೆ, ಹೆಣ್ಣು ಮಾಡಿದ ವಂಚನೆ ಎಂಬ ಭೇದ ಇರುವುದಿಲ್ಲ. ವರದಕ್ಷಿಣೆ ಪೆಡಂಭೂತದ ಜೊತೆಗೆ ವರದಕ್ಷಿಣೆ ವಿರೋಧಿ ಕಾನೂನಿನ ದುರ್ಬಳಕೆ ಎಂಬ ಮರಿ ಭೂತದ ನಿವಾರಣೆಗೆ ನಾವು ಹೋರಾಡಬೇಕು.

ದುರ್ಬಳಕೆ ಮಾಡಿಕೊಳ್ಳುತ್ತಿರುವವರ ಸಂಖ್ಯೆ ಕಡಿಮೆ ಎಂದು ಅದನ್ನು ತಳ್ಳಿಹಾಕುವುದು ಸರಿಯೇ? ನಾವು ತಳ್ಳಿ ಹಾಕಿದರೆ ಅದು ಮಾಯವಾಗಿಬಿಡುತ್ತದೆಯೇ? ದುರುಪಯೋಗವಾಗಿದೆ ಎಂದು ತಿಳಿದುಬಂದ ಮೇಲೆ ಅವಳಿಗೆ ಶಿಕ್ಷೆಯಿಲ್ಲವೇ? ಅನ್ಯಾಯವಾಗಿ ಜೈಲುವಾಸ, ಅಪಮಾನ ಅನುಭವಿಸಿದ ಗಂಡಿಗೆ ಪರಿಹಾರವಿಲ್ಲವೇ?

ಸಾವಿರ ಹೆಣ್ಣು ಕಂಬನಿಗೆ ನೂರು ಗಂಡಸರ ಕಂಬನಿ, ನಿಟ್ಟುಸಿರು ಪರಿಹಾರವೇ? ಎಲ್ಲವೂ ಬರೀ ನಂಬರ್ ಗೇಮೇ?!

1 COMMENT

  1. “ಸಾವಿರ ಹೆಣ್ಣು ಕಂಬನಿಗೆ ನೂರು ಗಂಡಸರ ಕಂಬನಿ, ನಿಟ್ಟುಸಿರು ಪರಿಹಾರವೇ? ಎಲ್ಲವೂ ಬರೀ ನಂಬರ್ ಗೇಮೇ?!” ಮೌಲಿಕ ಸಮಯೋಚಿತ ಪ್ರಶ್ನೆ.

    Unfortunately Yes.. ಇವತ್ತು ಎಲ್ಲವೂ ನಂಬರ್ ಗೇಮ್ ಆಗಿದೆ.

Leave a Reply