14 ವರ್ಷ ತಲೆಮರೆಸಿಕೊಂಡಿದ್ದ ಗೋಧ್ರಾ ಹತ್ಯಾಕಾಂಡ ಪ್ರಮುಖ ಆರೋಪಿ ಫಾರೂಕ್ ಭಾನಾ ಬಂಧನ

ಡಿಜಿಟಲ್ ಕನ್ನಡ ಟೀಮ್

ದೇಶವನ್ನೇ ಬೆಚ್ಚಿ ಬೀಳಿಸಿದ, ಕೋಮು ಗಲಭೆಗೆ ಕಾರಣವಾಗಿದ್ದ ಗೋಧ್ರಾ ಹತ್ಯಾಕಾಂಡದ ಪ್ರಮುಖ ಆರೋಪಿ ಫಾರೂಕ್ ಮೊಹಮದ್ ಭಾನಾನನ್ನು ಗುಜರಾತ್ ಭಯೋತ್ಪಾದನೆ ನಿಗ್ರಹ ತಂಡ 14 ವರ್ಷಗಳ ನಂತರ ಕೊನೆಗೂ ಬಂಧಿಸಿದೆ.

ಅಯೋಧ್ಯೆಯಲ್ಲಿ ವಿವಾದಿತ ಬಾಬರಿ ಮಸೀದಿ ಆವರಣದ ಬಳಿ ವಿಶ್ವ ಹಿಂದು ಪರಿಷತ್ (ವಿಎಚ್ ಪಿ) ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮರಳುತ್ತಿದ್ದ ಹಿಂದೂ ಯಾತ್ರಿಕರನ್ನು ಗುರಿಯಾಗಿಸಿಕೊಂಡು, 2002 ರ ಫೆಬ್ರವರಿ 27 ರ ಬೆಳಗ್ಗೆ ಸಬರ್ಮತಿ ಎಕ್ಸ್ ಪ್ರೆಸ್ ರೈಲಿಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದರು. ಈ ಪ್ರಕರಣದಲ್ಲಿ ಒಟ್ಟು 59 ಮಂದಿ ಸಾವನ್ನಪ್ಪಿದರು. ಇದರ ಬೆನ್ನಲ್ಲೇ ನಡೆದ ಗುಜರಾತ್ ಕೋಮುಗಲಭೆ ಸುಮಾರು ಒಂದು ಸಾವಿರಕ್ಕೂ ಹೆಚ್ಚು ಮುಸಲ್ಮಾನರನ್ನು ಬಲಿ ಪಡೆದಿತ್ತು.

ಈ ಪ್ರಕರಣ ಗುಜರಾತ್ ನ ಆಗಿನ ಮುಖ್ಯಮಂತ್ರಿ ನರೇಂದ್ರ ಮೋದಿ ಅವರ ಸರ್ಕಾರಕ್ಕೆ ಮಸಿ ಬಳೆದಿತ್ತು. ಘಟನೆ ನಂತರ ಕಣ್ಮರೆಯಾಗಿದ್ದ ಪ್ರಮುಖ ಆರೋಪಿ ಫಾರೂಕ್ ಸುಮಾರು 14 ವರ್ಷಗಳ ಕಾಲ ಯಾರ ಕೈಗೂ ಸಿಗದೇ ತಲೆಮರೆಸಿಕೊಂಡಿದ್ದ.

ಈ ಘಟನೆ ನಂತರ ಫಾರೂಕ್ ತಲೆತಪ್ಪಿಸಿಕೊಂಡು ಮುಂಬೈಗೆ ತೆರಳಿ ರಿಯಲ್ ಎಸ್ಟೇಟ್ ವ್ಯವಹಾರದ ದಳ್ಳಾಳಿಯಾಗಿ ಕೆಲಸ ಮಾಡುತ್ತಿದ್ದ. ಬುಧವಾರ ಮುಂಬೈನಿಂದ ಗೋದ್ರಾಗೆ ಆಗಮಿಸುತ್ತಿದ್ದ ಈತನನ್ನು ಪಂಚಮಹಲ್ ಜಿಲ್ಲೆಯ ಕಲೋಲ್ ಪಟ್ಟಣದ ಟೋಲ್ ಪ್ಲಾಜಾ ಬಳಿ ಬಂಧಿಸಲಾಯಿತು ಎಂದು ಗುಜರಾತ್ ಭಯೋತ್ಪಾದನೆ ನಿಗ್ರಹ ದಳ ಅಧಿಕಾರಿಗಳು ತಿಳಿಸಿದ್ದಾರೆ.

ಗೋಧ್ರಾ ರೈಲ್ವೇ ನಿಲ್ಧಾಣದ ಬಳಿ ಇರುವ ಅಮನ್ ಅತಿಥಿ ಗೃಹದಲ್ಲಿ ಬಿಲಾಲ್ ಹಾಜಿ ಮತ್ತಿತರ ಆರೋಪಿಗಳ ಜತೆ ಫಾರೂಕ್ ಸಭೆ ನಡೆಸಿ, ಸಬರ್ಮತಿ ರೈಲಿನ 6 ಬೋಗಿಗಳಿಗೆ ಬೆಂಕಿ ಇಟ್ಟಿದ್ದ ಎಂದು ಆತನ ವಿರುದ್ಧ ಎಫ್ಐಆರ್ ನಲ್ಲಿ ಆರೋಪಿಸಲಾಗಿದೆ.

Leave a Reply