ಪ್ರಾದೇಶಿಕ ‘ಮಮತೆ’ಯ ‘ಜಯ’, ಎಡಕ್ಕೆ ವಾಲಿದ ಕೇರಳದಲ್ಲಿ ಜೆಡಿಎಸ್ ಗೆ ಸಿಕ್ತು 3 ಸ್ಥಾನ, ರಾಜ್ಯ ನಾಯಕರೇನಂದರು?, ಮೇ 27ಕ್ಕೆ ಸಿಇಟಿ ಫಲಿತಾಂಶ…

ಡಿಜಿಟಲ್ ಕನ್ನಡ ಟೀಮ್

ಸಾಕಷ್ಟು ಮಹತ್ವ ಪಡೆದುಕೊಂಡಿದ್ದ ಪಂಚ ರಾಜ್ಯಗಳ ಚುನಾವಣೆ ಫಲಿತಾಂಶ ಗುರುವಾರ ಪ್ರಕಟವಾಗಿದೆ. ತಮಿಳುನಾಡಿನಲ್ಲಿ ಜಯಲಲಿತಾ ನೇತೃತ್ವದ ಎಐಎಡಿಎಂಕೆ ಬಹುಮತ ಪಡೆದು ಅಧಿಕಾರ ಹಿಡಿದಿದೆ. ಆ ಮೂಲಕ 1982ರ ನಂತರ ತಮಿಳುನಾಡಿನಲ್ಲಿ ಒಂದೇ ಪಕ್ಷ ಸತತ ಎರಡನೇ ಬಾರಿಗೆ ಆಡಳಿತ ನಡೆಸಲು ಮತದಾರ ಅವಕಾಶ ಕಲ್ಪಿಸಿದ್ದಾನೆ.

ಉಳಿದಂತೆ ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ಮತ್ತೆ ಅಧಿಕಾರ ಗದ್ದುಗೆ ಹಿಡಿದಿದೆ. ಅಸ್ಸಾಂನಲ್ಲಿ ಬಿಜೆಪಿ ಭರ್ಜರಿ ಜಯ ಸಾಧಿಸಿ ಮೊದಲ ಬಾರಿಗೆ ಅಧಿಕಾರ ಸಂಪಾದಿಸಿದೆ. ಕೇರಳದಲ್ಲಿ ಮಾಜಿ ಮುಖ್ಯಮಂತ್ರಿ ಒಮನ್ ಚಾಂಡಿ ಅವರಿಗೆ ತೀವ್ರ ಮುಖಭಂಗವಾಗಿದ್ದು, ಎಲ್ ಡಿಎಫ್ ಅಧಿಕಾರಕ್ಕೆ ಬಂದಿದೆ. ಇನ್ನು ಪುದುಚೆರಿಯಲ್ಲಿ ಮಾತ್ರ ಕಾಂಗ್ರೆಸ್ ಹಾಗೂ ಡಿಎಂಕೆ ಮೈತ್ರಿ ಯಶಸ್ವಿಯಾಗಿದೆ.

ಈ ಫಲಿತಾಂಶದಲ್ಲಿ ಯಾವ ರಾಜ್ಯದಲ್ಲಿ ಯಾವ ಪಕ್ಷ ಏನು ಸಾಧನೆ ಮಾಡಿದೆ ಎಂಬ ಪಟ್ಟಿ ಇಲ್ಲಿದೆ.

ತಮಿಳುನಾಡು: ಒಟ್ಟು- 232: ಎಐಎಡಿಎಂಕೆ- 132, ಡಿಎಂಕೆ+ ಕಾಂಗ್ರೆಸ್- 97, ಬಿಜೆಪಿ- 0, ಇತರೆ-3

ಪಶ್ಚಿಮ ಬಂಗಾಳ: ಒಟ್ಟು- 294: ಟಿಸಿಎಂ- 212, ಎಡ+ಕಾಂಗ್ರೆಸ್- 72, ಬಿಜೆಪಿ-3, ಇತರೆ-7

ಅಸ್ಸಾಂ: ಒಟ್ಟು- 126: ಬಿಜೆಪಿ- 76, ಕಾಂಗ್ರೆಸ್- 24, ಎಐಯುಡಿಎಫ್- 13, ಇತರೆ- 13

ಕೇರಳ: ಒಟ್ಟು- 140: ಎಲ್ ಡಿಎಫ್- 91, ಯುಡಿಎಫ್- 47, ಬಿಜೆಪಿ- 1, ಇತರೆ- 1

ಪುದುಚೆರಿ: ಒಟ್ಟು- 30: ಡಿಎಂಕೆ+ಕಾಂಗ್ರೆಸ್- 17, ಎಐಎನ್ಆರ್ ಸಿ- 8, ಎಐಡಿಎಂಕೆ- 4, ಇತರೆ- 1.

ಕೇರಳ ಚುನಾವಣೆಯಲ್ಲಿ ಜೆಡಿಎಸ್ ಗೆ 3 ಸ್ಥಾನಗಳಲ್ಲಿ ಜಯ

ಕೇರಳ ವಿಧಾನಸಭೆ ಚುನಾವಣೆ ಫಲಿತಾಂಶ ಗುರುವಾರ ಪ್ರಕಟವಾಗಿದ್ದು, ಎಡರಂಗ ಮೈತ್ರಿಕೂಟದ ಜೆಡಿಎಸ್ ಸಹ ಮೂರು ಸ್ಥಾನಗಳಲ್ಲಿ ಜಯ ಸಾಧಿಸಿದೆ.

ಮೇ 16ರಂದು ನಡೆದ ಕೇರಳ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ಎಡರಂಗದೊಂದಿಗೆ ಮೈತ್ರಿ ಮಾಡಿಕೊಂಡು ಐದು ಸ್ಥಾನಗಳಲ್ಲಿ ಸ್ಪರ್ಧಿಸಿತ್ತು. ಆ ಪೈಕಿ ಈಗ ಮೂರು ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಚುನಾವಣೆ ವೇಳೆ ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರು ಕೇರಳದಲ್ಲಿ ಒಂದು ವಾರಗಳ ಕಾಲ ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರ ಮಾಡಿದ್ದರು.

ಜೆಡಿಎಸ್ ನಿಂದ ಕೇರಳ ತಿರುವಳ್ಳ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ಮ್ಯಾಥ್ಯೂ ಟಿ ಥಾಮಸ್, ಚಿತ್ತೂರಿ ಕ್ಷೇತ್ರದಿಂದ ಸ್ಪರ್ಥಿಸಿದ್ದ ಕೃಷ್ಣನ್ ಕುಟ್ಟಿ ಹಾಗೂ ವಡಕ್ಕರ ಕ್ಷೇತ್ರದಿಂದ ಸ್ಪರ್ಧಿಸಿದ್ದ ಸಿ.ಕೆ.ನಾಣು ಗೆಲುವು ಸಾಧಿಸಿದ್ದಾರೆ. ಫಲಿತಾಂಶದ ಬಳಿಕ ಕೇರಳದಲ್ಲಿ ಸ್ಪಷ್ಟ ಬಹುಮತ ಪಡೆದಿರುವ ಎಡರಂಗ ನಾಯಕ ವಿ.ಎಸ್.ಅಚ್ಚುತಾನಂದನ್ ಅವರಿಗೆ ಪತ್ರ ಬರೆದ ಗೌಡರು ಅಭಿನಂದನೆ ಸಲ್ಲಿಸಿದ್ದಾರೆ.

ಮೇ 27ಕ್ಕೆ ಸಿಇಟಿ ಫಲಿತಾಂಶ ಪ್ರಕಟ

ಪ್ರಸಕ್ತ ಸಾಲಿನ ವೃತ್ತಿ ಶಿಕ್ಷಣ ಕೋರ್ಸ್ ಗಳ ಪ್ರವೇಶಕ್ಕೆ ನಡೆದ ಸಿಇಟಿ ಪರೀಕ್ಷೆ ಫಲಿತಾಂಶ ಮೇ 27 ಕ್ಕೆ ಪ್ರಕಟವಾಗಲಿದೆ. ಇದೇ ತಿಂಗಳು 4 ಮತ್ತು 5 ರಂದು ರಾಜ್ಯದಲ್ಲಿ ನಡೆದ ಸಿಇಟಿ ಪರೀಕ್ಷೆಯಲ್ಲಿ 1.78,346 ವಿದ್ಯಾರ್ಥಿಗಳು ಹಾಜರಾಗಿದ್ದರು. ನೀಟ್ ಗೊಂದಲ ಇರುವ ಕಾರಣ ಸಿಇಟಿ ಫಲಿತಾಂಶ ಬಂದರೂ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಶಿಕ್ಷಣ ಪ್ರವೇಶ ಪಡೆಯುವುದು ಕಷ್ಟಕರವಾಗಬಹುದು. 2016-17 ಕ್ಕೆ ಸೀಮಿತವಾಗುವಂತೆ ಸಿಇಟಿ ಪ್ರವೇಶಕ್ಕೆ ಅನುಮತಿ ನೀಡಿ ನೀಟ್ ಮುಂದೂಡಿ ಎಂದು  ಈಗಾಗಲೇ ರಾಜ್ಯ ಸರ್ಕಾರ ಸುಪ್ರೀಂಕೋರ್ಟ್‍ಗೆ ಮೊರೆಹೋಗಿದೆ.

ಮೆಡಿಟೆರನಿಯನ್ ಸಮುದ್ರಕ್ಕೆ ಬಿದ್ದ ಈಜಿಪ್ಟ್ ವಿಮಾನ

ಪ್ಯಾರಿಸ್ ನಿಂದ ಕೈರೊಗೆ 66 ಪ್ರಯಾಣಿಕರನ್ನು ಹೊತ್ತು ಸಾಗುತ್ತಿದ್ದ ಈಜಿಪ್ಟ್ ಏರ್ ಫ್ಲೈಟ್ 804 ವಿಮಾನ ಗುರುವಾರ ಮೆಡಿಟೇರನಿಯನ್ ಸಮುದ್ರಕ್ಕೆ ಬಿದ್ದಿದೆ. 37 ಸಾವಿರ ಅಡಿ ಎತ್ತರದಲ್ಲಿ ಸಾಗುತ್ತಿದ್ದ ವಿಮಾನ ಸ್ಥಳೀಯ ಕಾಲಮಾನ ಬೆಳಗಿನ ಜಾವ 2.45 ರ ಸುಮಾರಿಗೆ ರಾಡರ್ ಸಂಪರ್ಕ ಕಳೆದುಕೊಂಡಿತು ಎಂದು ಈಜಿಪ್ಟ್ ವಿಮಾನ ಸಂಸ್ಥೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಈಜಿಪ್ಟ್ ಮಿಲಿಟರಿ ವಿಮಾನ ಮತ್ತು ನೌಕಾಪಡೆ ಈ ವಿಮಾನದ ಹುಡುಕಾಟ ಕಾರ್ಯಾಚರಣೆ ನಡೆಸುತ್ತಿದೆ. ಈ ವಿಮಾನದಲ್ಲಿ ಫ್ರಾನ್ಸ್ ನ 15, ಈಜಿಪ್ಟ್ ನ 30, ಕುವೈತ್ ನ 2, ಬ್ರಿಟನ್, ಸೌದಿ, ಸುಡಾನ್, ಕೆನಡಾ, ಪೋರ್ಚುಗಲ್, ಬೆಲ್ಜಿಯಂ, ಅಲ್ಜೇರಿಯಾದ ತಲಾ 1 ಪ್ರಯಾಣಿಕರು ಇದ್ದರು. ಅಲ್ಲದೆ 3 ಮಕ್ಕಳು ಹಾಗೂ 10 ವಿಮಾನ ಸಿಬ್ಬಂದಿ ಸಹ ಇದ್ದರು ಎಂದು ಮಾಹಿತಿ ಬಂದಿವೆ.

ಬಿಜೆಪಿಗೆ ಸ್ಪರ್ಧೆ ನೀಡೋದು ಪ್ರಾದೇಶಿಕ ಪಕ್ಷಗಳೇ ಹೊರತು ಕಾಂಗ್ರೆಸ್ ಅಲ್ಲ: ದೇವೇಗೌಡ

ಪ್ರತಿಷ್ಠಿತ ಐದು ರಾಜ್ಯಗಳ ವಿಧಾನಸಭೆ ಚುನಾವಣಾ ಫಲಿತಾಂಶ ಪೈಕಿ ಅಸ್ಸಾಂ ಬಿಟ್ಟರೆ ಬೇರೆಲ್ಲಕಡೆ ಪ್ರಾದೇಶಿಕ ಪಕ್ಷಗಳ ಪ್ರಾಬಲ್ಯ ಮತ್ತೆ ಬಿಂಬಿತವಾಗಿದೆ ಎಂದು ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ತಿಳಿಸಿದ್ದಾರೆ.

ಪದುಚೇರಿ ಬಿಟ್ಟರೆ ಕಾಂಗ್ರೆಸ್ ನಾಲ್ಕು ರಾಜ್ಯದಲ್ಲಿ ತನ್ನ ಅಸ್ಥಿತ್ವ ಕಳೆದುಕೊಂಡಿದೆ. ಬಿಜೆಪಿ ಅಸ್ಸಾಂನಲ್ಲಿ ಮೊದಲ ಭಾರಿಗೆ ತನ್ನ ಸ್ವಂತ ಶಕ್ತಿಯಿಂದ ಸರ್ಕಾರ ನಡೆಸುವ ಅಧಿಕಾರ ಪಡೆದಿದೆ. ಈಗ ರಾಷ್ಟ್ರದಲ್ಲಿ ಆಳ್ವಿಕೆ ನಡೆಸುತ್ತಿರುವ ಬಿಜೆಪಿಗೆ ಸ್ಪರ್ಧೆ ನೀಡಬಲ್ಲ ಪಕ್ಷಗಳು ಆಯಾ ರಾಜ್ಯಗಳ ಪ್ರಾದೇಶಿಕ ಪಕ್ಷಗಳೇ ಹೊರತು ಕಾಂಗ್ರೆಸ್ ಅಲ್ಲ ಎನ್ನುವುದು ಈ ಫಲಿತಾಂಶದಲ್ಲಿ ಮತದಾರರು ನೀಡಿರುವ ದಿಕ್ಸೂಚಿ.

ತಮಿಳುನಾಡಿನಲ್ಲಿ ಅಮ್ಮ ಸ್ವಂತ ಶಕ್ತಿಯಿಂದ ಅಧಿಕಾರಕ್ಕೆ ಬಂದಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಎರಡನೇ ಭಾರಿ ಅಧಿಕಾರ ಹಿಡಿದಿದ್ದಾರೆ. ಇದಕ್ಕೆ ಅಭಿನಂದನೆ ಸಲ್ಲಿಸುತ್ತೇನೆ. 130 ವರ್ಷ ಇತಿಹಾಸವುಳ್ಳ ಕಾಂಗ್ರೆಸ್ ಪಕ್ಷ ಯಾವ ರೀತಿ ಮುಂದಿನ ದಿನಗಳಲ್ಲಿ ಚೈತನ್ಯ ಉಳಿಸಿಕೊಳ್ಳುತ್ತಿದೆ ಎಂಬುದನ್ನು ಕಾದು ನೋಡಬೇಕು ಎಂದು ಅವರು ಸುದ್ದಿಗೋಷ್ಠಿಯಲ್ಲಿ ಗುರುವಾರ ಹೇಳಿದರು.

ಎತ್ತಿನ ಯೋಜನೆಗೆ ಕರಾವಳಿ ಜನರ ವಿಶ್ವಾಸ ಪಡೆಯುತ್ತೇವೆ: ಖಾದರ್

ಎತ್ತಿನಹೊಳೆ ಯೋಜನೆ ಬಗ್ಗೆ ಕರಾವಳಿ ಭಾಗದ ಜನರಲ್ಲಿರುವ ಆತಂಕ ಮತ್ತು ಶಂಕೆ ನಿವಾರಣೆಗೆ ಸರ್ಕಾರ ಮುಂದಾಗಿದ್ದು, ಆ ಭಾಗದ ಜನರ ವಿಶ್ವಾಸ ಪಡೆದ ನಂತರ ಯೋಜನೆ ಜಾರಿಗೊಳಿಸುತ್ತೇವೆ ಎಂದು ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ.ಖಾದರ್ ಹೇಳಿದ್ದಾರೆ.

ಕರಾವಳಿ ಭಾಗದ ಜನರಲ್ಲಿ ಉಂಟಾಗಿರುವ ಆತಂಕ ನಿವಾರಣೆ ಸಂಬಂಧ ಆಲ್ಲಿನ ಜನಪ್ರತಿನಿಧಿಗಳು, ಧಾರ್ಮಿಕ ಮುಖಂಡರು, ಹೋರಾಟಗಾರರ ಸಭೆ ಕರೆದು ಚರ್ಚಿಸುವಂತೆಯೂ ನೀರಾವರಿ ಸಚಿವರು ಹಾಗೂ ಮುಖ್ಯಮಂತ್ರಿಯವರಿಗೆ ಮನವಿ ಮಾಡಲಾಗಿದೆ. ಎತ್ತಿನಹೊಳೆ ಯೋಜನೆ ಜಾರಿಗೆ ಬಗ್ಗೆ ವಿಧಾನಸಭೆಯಲ್ಲಿ ಒಪ್ಪಿಗೆ ಪಡೆಯಲಾಗಿದೆ. ಕಾಮಗಾರಿಯೂ ನಡೆಯುತ್ತಿದೆ.  ಈ ಹಂತದಲ್ಲಿ ನಿಲ್ಲಿಸುವ ಪ್ರಶ್ನೆ ಎದುರಾಗದು. ಆದರೆ, ಆ ಭಾಗದ ಜನರಲ್ಲಿರುವ ಆತಂಕ ನಿವಾರಿಸುವ ಪ್ರಯತ್ನವಂತೂ ಆಗಬೇಕು ಎಂದು ವಿಕಾಸಸೌಧದಲ್ಲಿ ಸುದ್ದಿಗಾರರಿಗೆ ತಿಳಿಸಿದರು.

ಈ ಫಲಿತಾಂಶಕ್ಕೂ, ಕಾಂಗ್ರೆಸ್ ಮುಕ್ತ ಭಾರತಕ್ಕೂ ಸಂಬಂಧವಿಲ್ಲ: ಖರ್ಗೆ

ಕಾಂಗ್ರೆಸ್ ಮುಕ್ತ ಭಾರತ ಮಾಡುವುದಾಗಿ ಬಿಜೆಪಿ ಹೇಳುತ್ತಿರುವ ಬೆನ್ನಲ್ಲೇ ಕೇರಳ ಹಾಗೂ ಅಸ್ಸಾಂ ಚುನಾವಣೆಯಲ್ಲಿ ಪಕ್ಷಕ್ಕೆ ಹಿನ್ನಡೆಯಾಗಿದೆ. ಇದು ಕಾಗೆ ಕೂರುವುದಕ್ಕೂ ಕೊಂಬೆ ಮುರಿಯುವುದು ಒಂದೆ ಕಾಲಕ್ಕೆ ಸಮವಾದ ಘಟನೆಯಂತಾಗಿದೆ ಎಂದು ಲೋಕಸಭೆಯ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ವಿಶ್ಲೇಷಿಸಿದ್ದಾರೆ.

ಕಾಂಗ್ರೆಸ್ ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಟ್ಟಿರುವ ಪಕ್ಷ. ಚುನಾವಣೆಯಲ್ಲಿ ಸೋಲು-ಗೆಲವು ಸಾಮಾನ್ಯ. ಕಾಂಗ್ರೆಸ್ ಸೋಲಿಗೆ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿಯನ್ನು ಹೊಣೆ ಮಾಡುವುದು ಸರಿಯಲ್ಲ. ಆಯಾ ರಾಜ್ಯಗಳ ಸ್ಥಳೀಯ ನಾಯಕತ್ವದಲ್ಲಿ ಚುನಾವಣೆ ಎದುರಿಸಲಾಗಿತ್ತು. ಪಂಚ ರಾಜ್ಯಗಳ ಚುನಾವಣೆ ಫಲಿತಾಂಶದಲ್ಲಿ ನಮ್ಮ ನಿರೀಕ್ಷೆ ಹುಸಿಯಾಗಿದೆ. ಕೇರಳ ಮತ್ತು ಆಸ್ಸಾಂನಲ್ಲಿ ಮರಳಿ ಅಧಿಕಾರ ಹಿಡಿಯುವ ನಿರೀಕ್ಷೆ ಮಾಡಿದ್ದೆವು. ಚುನಾವಣೆ ಸೋಲಿಗೆ ಕಾರಣವಾದ ಅಂಶಗಳ ಬಗ್ಗೆ ಪಕ್ಷದ ವೇದಿಕೆಯಲ್ಲಿ ಚರ್ಚಿಸಿ ಸರಿ ಪಡಿಸಿಕೊಳ್ಳುತ್ತೇವೆ.

ರಾಜ್ಯ ನಾಯಕತ್ವದಲ್ಲಿ ಎಲ್ಲೆಲ್ಲೆ ಏನೇನು ದುರಸ್ಥಿ ಮಾಡಬೇಕೊ, ಅದನ್ನು ದುರಸ್ತಿ ಮಾಡುತ್ತೇವೆ. ಹೈಕಮಾಂಡ್ ಈ ಬಗ್ಗೆ ತೀರ್ಮಾನ ಕೈಗೊಳ್ಳುತ್ತದೆ ಎಂದು ಮಾರ್ಮಿಕವಾಗಿ ಖರ್ಗೆ ಸುದ್ದಿಗಾರರಿಗೆ ಗುರುವಾರ ತಿಳಿಸಿದರು.

ಇನ್ನುಳಿದಂತೆ ನೀವು ತಿಳಿಯಬೇಕಿರೋ ಪ್ರಮುಖ ಸುದ್ದಿ ಸಾಲುಗಳು..

  • ಕೇರಳ ಚುನಾವಣೆಯಲ್ಲಿ ಸಿಪಿಎಂ ಅಭ್ಯರ್ಥಿ ಪಿನರಾಯಿ ವಿಜಯನ್ ಜಯ ಸಾಧಿಸಿದ ನಂತರ ನಡೆದ ಸಂಭ್ರಮಾಚರಣೆ ವೇಳೆ ಬಾಂಬ್ ಸ್ಫೋಟಗೊಂಡ ಪರಿಣಾಮ, ಒಬ್ಬ ಸಿಪಿಎಂ ಕಾರ್ಯಕರ್ತ ಮೃತಪಟ್ಟಿದ್ದಾನೆ. ಉಳಿದಂತೆ ನಾಲ್ವರಿಗೆ ಗಾಯವಾಗಿದೆ.
  • ಉಗ್ರ ಮಸೂದ್ ಅಜರ್ ನನ್ನು ವಿಶ್ವಸಂಸ್ಥೆಯ ಉಗ್ರರ ಪಟ್ಟಿಯಲ್ಲಿ ಸೇರಿಸುವ ವಿಷಯದ ಬಗ್ಗೆ ಭಾರತದೊಂದಿಗೆ ಸಂಪರ್ಕದಲ್ಲಿರುವುದಾಗಿ ಚೀನಾ ಗುರುವಾರ ತಿಳಿಸಿದೆ. ಉಗ್ರರ ವಿರುದ್ಧ ಹೋರಾಡಲು ಭಾರತಕ್ಕೆ ಸಹಕಾರ ನೀಡಲು ಸಿದ್ಧ ಎಂದು ತಿಳಿಸಿದೆ.
  • ಐದು ಬಾರಿ ಚಾಂಪಿಯನ್ ಭಾರತದ ಮೇರಿ ಕೋಮ್ ಕಜಕಸ್ತಾನದಲ್ಲಿ ನಡೆಯುತ್ತಿರುವ ಬಾಕ್ಸಿಂಗ್ ವಿಶ್ವ ಚಾಂಪಿಯನ್ ಶಿಪ್ ನಲ್ಲಿ ಶುಭಾರಂಭ ಮಾಡಿದ್ದಾರೆ. ಮಹಿಳೆಯರ 51 ಕೆ.ಜಿ ವಿಭಾಗದಲ್ಲಿ ಸ್ವೀಡನ್ ಪ್ರತಿಸ್ಪರ್ಧಿ ಜೂಲಿಯಾನ್ ಸೊಡೆರ್ಸ್ಟ್ರೋಮ್ ವಿರುದ್ಧ 3-0 ಅಂತರದ ಜಯ ಸಾಧಿಸಿ ಎರಡನೇ ಸುತ್ತಿಗೆ ಪ್ರವೇಶಿಸಿದರು.

ಪಂಚರಾಜ್ಯಗಳ ಫಲಿತಾಂಶವನ್ನು ವಿಶ್ಲೇಷಣಾತ್ಮಕವಾಗಿ ಹೇಳೋದಾದರೆ-  ಕಾಂಗ್ರೆಸ್ಸಿಗಿಲ್ಲ ವಿಳಾಸ, ಅಸ್ಸಾಮಿನಲ್ಲಿ ನಿರ್ಮಿಸಿದ ಇತಿಹಾಸದ ಜಾಡಲ್ಲಿ ಬಲವಾಗುತ್ತಿರುವ ಬಿಜೆಪಿ ಅಡ್ರೆಸ್ಸು, ಸಾಟಿಯಿಲ್ಲದ ಪ್ರಾದೇಶಿಕ ವರ್ಚಸ್ಸು

ತನ್ನ ಮತಗಳಿಕೆ ಪ್ರಮಾಣ ಹೆಚ್ಚಾಗಿದೆ ಎಂದು ಬಿಜೆಪಿ ಸಂಭ್ರಮಿಸುತ್ತಿದೆ. ಆದರೆ ಪ್ರಾದೇಶಿಕ ನಾಯಕತ್ವ ಗಟ್ಟಿಯಿಲ್ಲದಿದ್ದರೆ ಅಸ್ಸಾಮಿನಲ್ಲಿ ಗೆದ್ದಂತೆ ಉಳಿದೆಡೆ ಗೆಲ್ಲಲಾದೀತೇ ಎಂಬುದು ಪ್ರಶ್ನೆ.

ಬದ್ರುದ್ದೀನ್ ಅಜ್ಮಲ್ ಎಂಬ ಅಸ್ಸಾಮ್ ರಾಜಕಾರಣಿ ಬಗ್ಗೆ ನೀವು ತಿಳಿದಿರಬೇಕು.

ಚುನಾವಣೆ ಸುದ್ದಿ ಬಿಟ್ಟು ಬೇರೇದೂ ಬೇಕು ಅಂದ್ರಾ? ಪೋಷಕರು- ಪಾಲಕರ ಜವಾಬ್ದಾರಿ ಬಗ್ಗೆ ಶಮಾ ನಂದಿಬೆಟ್ಟ ಪ್ರತಿವಾರದ ಅಂಕಣ ನೀವು ಮಿಸ್ ಮಾಡಿಕೊಳ್ಳಲೇಬಾರದು.

ಆತ ಹೆಂಡತಿಗಾಗಿ ಎತ್ತಿಟ್ಟಿದ್ದ ವಜ್ರ ಅದು… ಬೆಲೆ ಎಷ್ಟು ಗೊತ್ತಾ?

Leave a Reply