ಅಸ್ಸಾಮಿನಲ್ಲಿ ಬಿಜೆಪಿ ಗೆತ್ತು ಎಂಬಷ್ಟೇ ಮುಖ್ಯ ಈ ಅಜ್ಮಲ್ ಸೋಲು!

ಡಿಜಿಟಲ್ ಕನ್ನಡ ಟೀಮ್

ಈ ಬಾರಿಯ ಅಸ್ಸಾಂ ವಿಧಾನಸಭೆ ಚುನಾವಣೆಯಲ್ಲಿ ಕಿಂಗ್ ಮೇಕರ್ ಆಗುವ ಕನಸು ಕಟ್ಟಿದ್ದ ಆಲ್ ಇಂಡಿಯಾ ಯುನೈಟೆಡ್ ಡೆಮಾಕ್ರಾಟಿಕ್ ಫ್ರಂಟ್ (ಎಐಯುಡಿಎಫ್) ಸ್ಥಾಪಕ ಮೌಲಾನಾ ಬದ್ರುದ್ದೀನ್ ಅಜ್ಮಲ್ ಹೀನಾಯ ಸೋಲನುಭವಿಸಿದ್ದಾರೆ. ಇಲ್ಲಿ ಬಿಜೆಪಿ ಭರ್ಜರಿ ಜಯ ಹೇಗೆ ಮಹತ್ವದ ಜನಾಭಿಪ್ರಾಯವಾಗಿದೆಯೋ ಅದೇ ರೀತಿ ಅಜ್ಮಲ್ ಪತನ ಸಹ ಮತ್ತೊಂದು ಮಹತ್ವದ ಬೆಳವಣಿಗೆ.

ಏಕೆಂದರೆ, ಯಾವ ಅಕ್ರಮ ಬಾಂಗ್ಲಾ ವಲಸಿಗರ ವಿಷಯ ಇಟ್ಟುಕೊಂಡು ಅಸ್ಸಾಮಿನಲ್ಲಿ ಬಿಜೆಪಿ ಪ್ರವರ್ಧಮಾನಕ್ಕೆ ಬಂತೋ ಅದರ ಇನ್ನೊಂದು ತುದಿಯಲ್ಲಿದ್ದರು ಬದ್ರುದ್ದೀನ್ ಅಜ್ಮಲ್. ಈ ಅಜ್ಮಲ್ ಜತೆ ಸೇರಿಕೊಂಡೇ ಕಾಂಗ್ರೆಸ್ ಪ್ರಾರಂಭದಲ್ಲಿ ‘ಸೆಕ್ಯುಲರ್’ ರಾಜಕಾರಣ ಮಾಡಿತ್ತು. ಆದರೆ, ಯಾವಾಗ ಮುಸ್ಲಿಮರ ಪ್ರಾಬಲ್ಯ ಹೆಚ್ಚಿತೋ, ಆಗ ಅಜ್ಮಲ್ ಕಾಂಗ್ರೆಸ್ಸಿನ ಸಖ್ಯ ಬಿಟ್ಟು ತಮ್ಮದೇ ಎಐಯುಡಿಎಫ್ ಸಾಮ್ರಾಜ್ಯ ಕಟ್ಟಲುಹೋದರು.

ಇದೀಗ ಬದ್ರುದ್ದೀನ್ ಅಜ್ಮಲ್ ಖುದ್ದು ತಮ್ಮ ಸ್ಥಾನದಲ್ಲಿ ಸೋತಿದ್ದಾರೆ.

2011ರಲ್ಲಿ 18 ಸೀಟ್ ಗಳನ್ನು ಗೆದ್ದು ವಿರೋಧ ಪಕ್ಷವಾಗಿ ಎಐಯುಡಿಎಫ್ ಬಿಂಬಿತವಾಗಿತ್ತು. ಈ ಬಾರಿಯ ಚುನಾವಣೆಯಲ್ಲೂ ತನ್ನ ಪ್ರಾಬಲ್ಯ ಹೆಚ್ಚಿಸಿಕೊಂಡು ಅಸ್ಸಾಂ ಸರ್ಕಾರ ರಚನೆಯಲ್ಲಿ ಪ್ರಮುಖ ಪಾತ್ರವಹಿಸುವ ನಿರೀಕ್ಷೆ ಹೊಂದಿದ್ದರು. ಆದರೆ ಜನರ ನಿರ್ಧಾರ ಅಜ್ಮಲ್ ಲೆಕ್ಕಾಚಾರವನ್ನು ತಲೆಕೆಳಗಾಗಿಸಿದೆ. 126 ಕ್ಷೇತ್ರಗಳಲ್ಲಿ ಬಿಜೆಪಿ 73 ಸ್ಥಾನಗಳನ್ನು ಗೆದ್ದು ಭರ್ಜರಿ ಜಯ ಸಾಧಿಸಿದರೆ, ಕಾಂಗ್ರೆಸ್ 26 ಸ್ಥಾನ ಗಳಿಸಿ ವಿರೋಧ ಪಕ್ಷವಾಗಿ ಹೊರಹೊಮ್ಮಿದೆ. ಇತರೆ 15 ಸ್ಥಾನ ಗಳಿಸಿ ಮೂರನೇ ಸ್ಥಾನದಲ್ಲಿದ್ದರೆ, ಎಐಯುಡಿಎಫ್ 12 ಸ್ಥಾನದೊಂದಿಗೆ ತೀವ್ರ ಕುಸಿತ ಕಂಡಿದೆ.

ಬದ್ರುದ್ದೀನ್ ಅಜ್ಮಲ್ ಹೋಗುತ್ತಿದ್ದ ವೇಗ ಅಚ್ಚರಿಯದ್ದೇ ಆಗಿತ್ತು. ಯಾವಾಗ ಅಸ್ಸಾಮಿನ ಹಲವು ಜಿಲ್ಲೆಗಳು ಮುಸ್ಲಿಂ ಬಾಹುಳ್ಯ ಹೊಂದಿದವೋ, ತಮ್ಮನ್ನು ಬಿಟ್ಟು ಅದ್ಯಾರು ಸರ್ಕಾರ ಮಾಡುತ್ತಾರೋ ನೋಡೋಣ ಎಂಬ ಧಾಟಿ ತೋರಿದ್ದರು ಅಜ್ಮಲ್. ಸಂಪನ್ಮೂಲವೂ ಅದಕ್ಕೆ ಪೂರಕವಾಗಿತ್ತು. ಏಕೆಂದರೆ ಈ ಬದ್ರುದ್ದೀನ್ ಅಜ್ಮಲ್ 2 ಸಾವಿರ ಕೋಟಿ ವಹಿವಾಟಿನ ಸುಗಂಧಪದಾರ್ಥಗಳ ಉದ್ದಿಮೆಯ ಒಡೆಯ. ಇದಕ್ಕೆ ಪೂರಕವಾಗಿ ಎನ್ಜಿಒ ಸ್ಥಾಪಿಸಿಕೊಂಡು ಶಾಲೆ, ಆಸ್ಪತ್ರೆ, ವೃದ್ಧಾಶ್ರಮ ಎಂದೆಲ್ಲ ತಮ್ಮ ಪ್ರಭಾವಳಿ ಬೆಳೆಸಿಕೊಂಡವರು.

ಅಜ್ಮಲ್ 2006 ರಲ್ಲಿ ರಾಜಕೀಯ ಪ್ರವೇಶಿಸಿದರು. ಆಗಿನ ವಿಧಾನಸಭೆ  ಚುನಾವಣೆಯಲ್ಲಿ ಸೌಥ್ ಸಲ್ಮಾರಾ ಮತ್ತು ಜಮುನಾಮುಖ್ ಕ್ಷೇತ್ರಗಳೆರಡರಲ್ಲೂ ಭರ್ಜರಿ ಜಯ ಸಾಧಿಸುವ ಮೂಲಕ ರಾಜಕೀಯಕ್ಕೆ ಭರ್ಜರಿ ಎಂಟ್ರಿ ಕೊಟ್ಟಿದ್ದರು. ಆಗ ಅಸ್ಸಾಂ ಜನತೆಗೆ ಕಾಗ್ರೆಸ್ ನ ಪರ್ಯಾಯ ಆಯ್ಕೆ ಹುಟ್ಟುಕೊಂಡಿತು ಎಂಬ ಹವಾ ನಿರ್ಮಿಸಿದರು. ಅಲ್ಲಿಂದ ಇಲ್ಲಿಯವರೆಗೂ ಅಜ್ಮಲ್ ಅಸ್ಸಾಂನಲ್ಲಿ ತನ್ನದೇ ಆದ ಅಸ್ಥಿತ್ವ ಸ್ಥಾಪಿಸಿಕೊಂಡಿದ್ದರು.  ದ ರಾಯಲ್ ಇಸ್ಲಾಮಿಕ್ ಸ್ಟ್ರಾಟಜಿಕ್ ಸ್ಟಡೀಸ್ ಸೆಂಟರ್ ಆಫ್ ಜೊರ್ಡನ್ ಪ್ರಕಟಿಸಿದ್ದ 2015-16ನೇ ಸಾಲಿನ ವಿಶ್ವದ ಅತ್ಯಂತ ಪ್ರಭಾವಶಾಲಿ ಮುಸಲ್ಮಾನರ ಪಟ್ಟಿಯಲ್ಲಿ ಅಜ್ಮಲ್ ಸ್ಥಾನ ಪಡೆದಿದ್ದರು.

ಅದೇನೇ ಸೆಕ್ಯುಲರ್ ಎಂದು ಹೇಳಿಕೊಂಡರೂ ಇವರ ಮುಸ್ಲಿಂ ಕೇಂದ್ರಿತ ರಾಜಕಾರಣ ನಿಧಾನಕ್ಕೆ ಬುಡಕಟ್ಟು ವರ್ಗದವರನ್ನು ದೂರ ಮಾಡುತ್ತ ಹೋಯಿತು. ಮುಸ್ಲಿಂ ಬಾಹುಳ್ಯ ಹೆಚ್ಚುತ್ತಲೇ ತೊಂದರೆ ಶುರುವಾಗಿದ್ದೇ ಈ ಪಂಗಡದವರಿಗೆ. ಅವರೆಲ್ಲ ಬಿಜೆಪಿ ಪರ ನಿಂತಿದ್ದರಿಂದ ಈ ಫಲಿತಾಂಶ ಹೀಗೆಯೇ ಬಂದೀತೆಂಬ ಅಂದಾಜು ಹಿಂದೆಯೂ ಇತ್ತು. ಆ ಕುರಿತು ಡಿಜಿಟಲ್ ಕನ್ನಡ ವಿಶ್ಲೇಷಣೆಯನ್ನೂ ಓದಿಕೊಳ್ಳಬಹುದು.

ಹೀಗಾಗಿ ಅಜ್ಮಲ್ ಸೋಲು, ಬಿಜೆಪಿ ಗೆಲುವಿನಷ್ಟೇ ತೀವ್ರವಾಗಿ ಅಸ್ಸಾಮಿನ ಐಡೆಂಟಿಟಿ ತಲ್ಲಣವನ್ನು ಕಟ್ಟಿಕೊಡುತ್ತಿದೆ.

Leave a Reply