ಸ್ಥಳೀಯ ನೇತಾರರನ್ನು ಬೆಳೆಸದಿದ್ದರೆ ಮತಪ್ರಮಾಣ ಹೆಚ್ಚಿದೆಯೆಂಬ ಸಂಭ್ರಮಕ್ಕೆ ಆಯಸ್ಸಿದ್ದೀತೇ?

ಡಿಜಿಟಲ್ ಕನ್ನಡ ವಿಶೇಷ

ಸೈದ್ಧಾಂತಿಕ ಸಮರ, ಕಾರ್ಯಕರ್ತರ ಪಡೆ, ಕೇಂದ್ರದ ನಾಯಕತ್ವದ ಮೂಲಕ ಚಿಗುರಿಸಿರುವ ಭರವಸೆ ಇವೆಲ್ಲವೂ ಸರಿ.

ಆದರೆ…

ಪ್ರಾದೇಶಿಕ ನಾಯಕತ್ವವಿಲ್ಲದೇ ಸಮರ ಗೆಲ್ಲಲಾಗುವುದೇ? ಇದು ಪಂಚರಾಜ್ಯಗಳ ಚುನಾವಣೆ ಫಲಿತಾಂಶದ ಬೆನ್ನಲ್ಲಿ, ಅಸ್ಸಾಮಿನ ವಿಜಯದ ನೆಲೆಯಲ್ಲಿ ಬಿಜೆಪಿಗೆ ಕಾಡಬೇಕಿರುವ ಪ್ರಶ್ನೆ.

ಬಿಹಾರದಲ್ಲಿ ಪ್ರಾದೇಶಿಕ ನಾಯಕರ್ಯಾರನ್ನೂ ಬಿಂಬಿಸದೇ ನಿತೀಶ್- ಲಾಲು ವಿರುದ್ಧ ಚುನಾವಣೆ ಸೋಲು ಅನುಭವಿಸಿದ ಬೆನ್ನಲ್ಲೇ ಎಚ್ಚೆತ್ತುಕೊಂಡ ಬಿಜೆಪಿ, ಅಸ್ಸಾಮಿನ ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಸರ್ಬಾನಂದ ಸೋನೊವಾಲ್ ಅವರನ್ನು ಆಗಲೇ ಹೆಸರಿಸಿತ್ತು. ಆ ಬಗ್ಗೆ ಈ ಹಿಂದೆ ಪ್ರಕಟಿಸಿದ್ದ ವಿಶ್ಲೇಷಣೆ ಓದಿಕೊಳ್ಳಬಹುದು. ಜತೆಗೆ ಪ್ರಮುಖ ಮಿತ್ರಪಕ್ಷವಾದ ಅಸ್ಸಾಂ ಗಣ ಪರಿಷತ್ ನ ನಾಯಕ ಹಿಮಂತ ಬಿಶ್ವಾಸ್ ಶರ್ಮಗೆ ಬಿಜೆಪಿ ಕೊಟ್ಟ ಪ್ರಾಮುಖ್ಯವೂ ಗಣನೀಯವೇ. ಇವತ್ತು ಅಸ್ಸಾಮಿನ ಗೆಲುವಲ್ಲಿ ಪ್ರಜ್ವಲಿಸುತ್ತಿರುವ ಮುಖಗಳು ಇವೆರಡು.

ಹಾಗಂತ ಇಲ್ಲಿ ಅಮಿತ್ ಶಾ ಕಾರ್ಯತಂತ್ರ, ಬಿಜೆಪಿಯ ಕೇಸರಿ ಕಾರ್ಯಕರ್ತರ ತಳಮಟ್ಟದ ಕೆಲಸ ಇವೆಲ್ಲ ಪ್ರಯೋಜನವಾಗಿಲ್ಲ ಎಂಬರ್ಥವಲ್ಲ. ಅಡಿಪಾಯ ಕಟ್ಟಿದ ಅಂಶಗಳು ಇವೇ ಇದ್ದಿರಬಹುದಾದರೂ ಕೊನೆಗೂ ಸ್ಥಳೀಯ ನಾಯಕನೇ ರಾಜ್ಯ ಆಳುವುದನ್ನು ಜನ ಅಪೇಕ್ಷಿಸುತ್ತಾರೆಯೇ ಹೊರತು ಮತ್ತೇನಲ್ಲ.

ಈ ಫಲಿತಾಂಶ ಹೇಳುತ್ತಿರುವ ಪ್ರಕಾರ ತಮಿಳುನಾಡು, ಕೇರಳ, ಪಶ್ಚಿಮಬಂಗಾಳ ಈ ಎಲ್ಲ ಕಡೆಗಳಲ್ಲೂ ಬಿಜೆಪಿಯ ಮತ ಗಳಿಕೆ ಪ್ರಮಾಣ ಗಣನೀಯವಾಗಿ ಏರಿದೆ. ಕೇರಳದಲ್ಲಿ ಜಯದ ಖಾತೆ ತೆಗೆಯುತ್ತಿರುವುದಕ್ಕೆ ಬಿಜೆಪಿ ಇನ್ನಿಲ್ಲದಂತೆ ಸಂಭ್ರಮಿಸುತ್ತಿದೆ. ಇದು ಬಿಜೆಪಿಯು ರಾಷ್ಟ್ರದ ಎಲ್ಲ ಕಡೆ ತನ್ನು ಪ್ರಸ್ತುತಿ ಹೊಂದುತ್ತಿರುವುದರ ದ್ಯೋತಕ ಎಂದೂ ಆ ಪಕ್ಷದ ವಕ್ತಾರರೆಲ್ಲ ಟಿವಿ ವಾಹಿನಿಗಳಲ್ಲಿ ಪ್ರತಿಪಾದಿಸುತ್ತಿದ್ದಾರೆ. ಕಾಂಗ್ರೆಸ್ ರಾಷ್ಟ್ರ ರಾಜಕಾರಣದ ನಕಾಶೆಯಲ್ಲಿ ಕುಗ್ಗಿಹೋಗುತ್ತಿರುವ ಚಿತ್ರಣದೆದುರು ಇದು ಬಹಳ ಪ್ರಮುಖ ಅಂಶವಾಗಿಯೇ ಕಾಣಬಹುದು.

ಅಷ್ಟಾಗಿಯೂ…

ಮತಗಳಿಕೆ ಪ್ರಮಾಣ ಹೆಚ್ಚಿದ್ದನ್ನೇ ವಿಜಯದ ಭವಿಷ್ಯವಾಗಿ ತೆಗೆದುಕೊಳ್ಳುವುದು ಬಿಜೆಪಿ ಬೆಂಬಲಿಗರ ತಪ್ಪಾಗುತ್ತದೆ. ಕೇರಳದಲ್ಲಿ ಬಿಜೆಪಿಯ ನೇತಾರ ಯಾರು, ತಮಿಳುನಾಡಿನಲ್ಲಿ ಯಾವ ನಾಯಕ, ಪಶ್ಚಿಮ ಬಂಗಾಳದಲ್ಲಿ ನಾಯಕತ್ವದ ಚಹರೆ ತೋರಿಸಿ ಎಂಬ ಪ್ರಶ್ನೆಗಳೆಲ್ಲ ಬಿಜೆಪಿಗೆ ಯಾವತ್ತೂ ಎದುರಾಗುವಂಥವೇ. ಕೇರಳದ ಬಿಜೆಪಿ ಅಧ್ಯಕ್ಷರು ಸುದ್ದಿ ಮುಂಚೂಣಿಯಲ್ಲಿರುತ್ತಾರೆ ನಿಜ, ಆದರೆ ನಾಯಕತ್ವಕ್ಕೆ ಸಲ್ಲುವಷ್ಟು ದೃಢವೇ? ರೂಪಾ ಗಂಗೂಲಿಯಂಥ ಪರಿಚಿತ ಮುಖ ಪಶ್ಚಿಮ ಬಂಗಾಳದಲ್ಲಿ ಪ್ರಾರಂಭಕ್ಕೊಂದು ವೇದಿಕೆ ಒದಗಿಸಬಹುದೇ ಹೊರತು ಪಕ್ಕಾ ರಾಜಕೀಯ ನಾಯಕನ ಹೆಸರೊಂದನ್ನು ಹೇಳುವಂತಾಗಬೇಕಲ್ಲವೇ? ಅಸ್ಸಾಮಿನಲ್ಲಿ ಸರ್ಬಾನಂದರ ಹೆಸರನ್ನೇ ತೆಗೆದುಕೊಂಡರೆ, ಅವರು ಏಕಾಏಕಿ ನಾಯಕರಾಗಿದ್ದಲ್ಲ. ಅಕ್ರಮ ಬಾಂಗ್ಲಾ ವಲಸಿಗರ ವಿಷಯವನ್ನಿಟ್ಟುಕೊಂಡು ಹಲವು ವರ್ಷಗಳ ಕಾಲ ತಮ್ಮ ಈ ಹಿಂದಿನ ನೆಲೆಯಾಗಿದ್ದ ಅಸ್ಸಾಂ ಗಣ ಪರಿಷತ್ ಮೂಲಕ ಕೆಲಸ ಮಾಡಿಕೊಂಡುಬಂದಿದ್ದಾರೆ. ಬಾಂಗ್ಲಾದೇಶದ ಗಡಿ ಭದ್ರಪಡಿಸಬೇಕು ಎಂಬಂಥ ನಿಖರ ಅಭಿಪ್ರಾಯಗಳನ್ನು ಹೊಂದಿ ಜನರ ಮಧ್ಯೆ ನಿಂತವರು. ಅಮಿತ್ ಶಾ ಅಸ್ಸಾಮಿಗೆ ಬಂದು ರಾಹುಲ್ ಗಾಂಧಿಯವರನ್ನು ಟೀಕಿಸುವುದಕ್ಕೂ, ಸ್ಥಳಿಯರೇ ಆದ ಎಜಿಪಿಯ ಹಿಮಂತ್, ಕಾಂಗ್ರೆಸ್ಸಿನ ವಿರುದ್ಧ ಹರಿಹಾಯುವುದಕ್ಕೂ ವ್ಯತ್ಯಾಸ ಇದ್ದೇ ಇದೆ.

ಸ್ಥಳೀಯ ನಾಯಕರನ್ನು ಸಿದ್ಧಪಡಿಸಿಕೊಳ್ಳಿ- ಹೀಗೊಂದು ಸಂದೇಶವನ್ನು ಬಿಜೆಪಿಗೆ ಈ ಪಂಚರಾಜ್ಯಗಳ ಚುನಾವಣೆ ರವಾನಿಸಿದೆ ಅಂದರೆ ತಪ್ಪಾಗಲಾರದು.

Leave a Reply