ಕಾಂಗ್ರೆಸ್ಸಿಗಿಲ್ಲ ವಿಳಾಸ, ಅಸ್ಸಾಮಿನಲ್ಲಿ ಬಿಜೆಪಿ ಇತಿಹಾಸ, ಸಾಟಿಯಿಲ್ಲದ ಮಮತಾ, ಜಯಾ, ಎಲ್ಡಿಎಫ್ ವರ್ಚಸ್ಸು

ಡಿಜಿಟಲ್ ಕನ್ನಡ ವಿಶೇಷ

ಅಳಬೇಕಿರುವುದು ಕಾಂಗ್ರೆಸ್, ಬೀಗಬೇಕಿರುವವು ಪ್ರಾದೇಶಿಕ ಬಲಗಳು, ವಿಶ್ವಾಸ ಒಗ್ಗೂಡಿಸಿಕೊಂಡು ಇನ್ನೂ ಮುನ್ನುಗ್ಗಬೇಕಿರುವುದು ಬಿಜೆಪಿ…

ಪಂಚರಾಜ್ಯಗಳ ಚುನಾವಣೆಯಿಂದ ಹೆಕ್ಕಬಹುದಾದ ಸಾರವಿದು. ತಮಿಳುನಾಡು ಮತ್ತು ಪಶ್ಚಿಮ ಬಂಗಾಳಗಳಲ್ಲಿ ಕ್ರಮವಾಗಿ ಜಯಲಲಿತಾ ಮತ್ತು ಮಮತಾ ಬ್ಯಾನರ್ಜಿ ಅಧಿಕಾರಕ್ಕೆ ಮರಳಿರುವುದನ್ನು ಆಡಳಿತವಿರೋಧಿ ಅಲೆ ಜೀಕಿದ್ದಾಗಿ ವಿಶ್ಲೇಷಿಸಲಾಗುತ್ತಿದೆ.

ಆದರೆ…

ತಮಿಳುನಾಡು ಮತ್ತು ಪಶ್ಚಿಮ ಬಂಗಾಳಗಳಲ್ಲಿ ಬೇರೆ ಆಯ್ಕೆ ಆದರೂ ಏನಿತ್ತು ಹೇಳಿ? ಗಾಲಿಕುರ್ಚಿಗೆ ಅಂಟಿಕೊಂಡಿರುವ ಕರುಣಾನಿಧಿಗಿಂತ ಪುಕ್ಕಟೆ ಕೊಡುಗೆಗಳ ಬಿರುಸನ್ನು ಉಳಿಸಿಕೊಂಡಿರುವ ಜಯಲಲಿತಾ ಅಲ್ಲಿನ ಜನರಿಗೆ ಆಪ್ತರಾಗಿ ಕಂಡಿದ್ದರಲ್ಲಿ ಅತಿ ಅಚ್ಚರಿ ಎನ್ನಿಸುವಂಥದ್ದು ಏನೂ ಇಲ್ಲ.

jaya

ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ‘ಪರಿಬೊರ್ತನ್’ ತಂದುಬಿಟ್ಟಿದ್ದಾರೆ ಎಂಬ ಭ್ರಮೆ ಯಾರಿಗೂ ಇಲ್ಲವಾದರೂ ಅವರ ವಿರುದ್ಧ ಮತ್ತದೇ ಕಾಂಗ್ರೆಸ್- ಎಡಪಕ್ಷ ಮೈತ್ರಿಯನ್ನು ಆರಿಸದೇ ಇರುವ ನಿರ್ಣಯ ಅಲ್ಲಿನ ಜನ ತೆಗೆದುಕೊಂಡಿರುವುದರಲ್ಲೂ ಅಚ್ಚರಿ ಪಡುವಂಥದ್ದೇನೂ ಕಾಣುತ್ತಿಲ್ಲ. ಎಡಪಕ್ಷಕ್ಕೆ ಕಾಲುಶತಮಾನಗಳ ಅವಕಾಶ ಕೊಟ್ಟು ನೋಡಿದ್ದಾಗಿದೆ ಎಂಬ ಅಭಿಪ್ರಾಯವೊಂದು ಇದ್ದೇ ಇದೆ.

ಕೇರಳಕ್ಕೂ ಇದನ್ನು ಸ್ವಲ್ಪ ಮಟ್ಟಿಗೆ ಬೆಳೆಸಬಹುದು. ಅಲ್ಲಿ ಕಾಂಗ್ರೆಸ್ ನೇತೃತ್ವದ ಮೈತ್ರಿಕೂಟ ಮತ್ತು ಎಡಪಕ್ಷ ನೇತೃತ್ವದ ಮೈತ್ರಿಕೂಟಗಳ ನಡುವೆ ಅಧಿಕಾರದ ಖೊಖೊ ಆಟ ಲಾಗಾಯ್ತಿನಿಂದ ನಡೆದು ಬಂದಿದೆ. ಹೀಗಾಗಿ ಕಾಂಗ್ರೆಸ್ ಬಗ್ಗೆ ವಿಶ್ವಾಸ ಕಳೆದುಕೊಳ್ಳುತ್ತಲೇ ಎಡಪಕ್ಷಕ್ಕೆ ಲಾಭ ಸಿಕ್ಕಿದೆ.

ಇವನ್ನೆಲ್ಲ ನೋಡಿದಾಗ ‘ಪರ್ಯಾಯ’ ಅನ್ನೋದು ಮಿಂಚಿರುವುದು ಅಸ್ಸಾಮಿನಲ್ಲಿ. ಮೂರು ಅವಧಿಗಳ ತರುಣ್ ಗೋಗೊಯ್ ನೇತೃತ್ವದ ಕಾಂಗ್ರೆಸ್ ಪ್ರಾಬಲ್ಯ ಮುರಿಯುವಲ್ಲಿ ಬಿಜೆಪಿ ಯಶಸ್ವಿಯಾಗಿದೆ. ಅಲ್ಲಿ ಬಿಜೆಪಿ, ಎಜಿಪಿ, ಬೊಡೊಲ್ಯಾಂಡ್ ಪಕ್ಷಗಳ ಜತೆಗಿನ ಮೈತ್ರಿಗೆ ಬಹುಮತ ಸಿಕ್ಕಿದೆ. ಬಿಜೆಪಿಯ ಪರವಾಗಿ ಸರ್ಬಾನಂದ ಸೋನೊವಾಲ್ ಮುಖ್ಯಮಂತ್ರಿಯಾಗುವುದು ಖಾತ್ರಿಯಾಗಿದೆ.

ಈ ಇಡಿ ಇಡಿ ಖುಷಿಯನ್ನು ಇಟ್ಟುಕೊಂಡು ವಿಶ್ವಾಸ ಇಮ್ಮಡಿಸಿಕೊಳ್ಳುವ ಅವಕಾಶ ಬಿಜೆಪಿಗಿದೆ. ಅಸ್ಸಾಮಿನಲ್ಲಿ ಹೇಗೆ ಪರ್ಯಾಯವಾಗಿ ಹೊಮ್ಮಿ, ನಿಜಕ್ಕೂ ರಾಷ್ಟ್ರೀಯ ಪಕ್ಷ ಎಂಬ ಛಾತಿಯತ್ತ ಹೊರಳಿದೆಯಲ್ಲ.. ಆ ಮೂಲಕ ಅದು ಬಿಹಾರ ಚುನಾವಣೆ ವೈಫಲ್ಯದಿಂದ ಅಮಿತ್ ಶಾ- ಮೋದಿ ಜೋಡಿ ವಿರುದ್ಧ ವ್ಯಕ್ತವಾಗುತ್ತಿದ್ದ ಟೀಕೆಗಳಿಗೆ ಬ್ರೇಕ್ ಬಿದ್ದಂತಾಗಿದೆ.

ಇದೇ ಪರ್ಯಾಯ ಮಾದರಿಯನ್ನು ಬೇರೆ ರಾಜ್ಯಗಳಲ್ಲಿ ಸ್ಥಾಪಿಸುವ ಜವಾಬ್ದಾರಿ ಬಿಜೆಪಿಗಿದೆ. ಪಶ್ಚಿಮ ಬಂಗಾಳದಲ್ಲಿ 7 ಸ್ಥಾನಗಳನ್ನು ಪಡೆದಿರುವುದು, ಕೇರಳದಲ್ಲಿ ಒಂದು ಸೀಟು ಪಡೆದಿರುವುದು ಇವೆಲ್ಲವೂ ಬಿಜೆಪಿಗೆ ವಿಶ್ವಾಸ ಒದಗಿಸಿರುವ ಅಂಶಗಳು. ಇದರ ಮೇಲೆ ಬಿಜೆಪಿ ಬುನಾದಿ ಹೇಗೆ ಕಟ್ಟಿಕೊಳ್ಳಲಿದೆ ಎಂಬುದು ಮುಂದಿನ ರಾಷ್ಟ್ರ ರಾಜಕೀಯವನ್ನು ತುಂಬ ಪ್ರಭಾವಿಸಲಿರುವ ಅಂಶ.

ಇನ್ನು…

ಪುದುಚೆರಿಯಲ್ಲಿ ಕಾಂಗ್ರೆಸ್- ಡಿಎಂಕೆ ಮರಳಿ ಅಧಿಕಾರ ಹಿಡಿದಿರುವುದೇ ತಮ್ಮ ವಿಜಯ ಅಂತ ರಾಹುಲ್ ಗಾಂಧಿ ಹೇಳುತ್ತಾರೆಯೇ ಎಂಬುದು, ಸುಮ್ಮನೇ ಇರಲಿ ಎಂಬಂತೆ ಕಾಂಗ್ರೆಸ್ ಗೆ ಕೇಳಬಹುದಾದ ಪ್ರಶ್ನೆ. ಏಕೆಂದರೆ ಕಾಂಗ್ರೆಸ್ ನಂಥ ರಾಷ್ಟ್ರೀಯ ಪಕ್ಷ ತೀರ ಪ್ರಶ್ನೆ ಕೇಳುವುದಕ್ಕೇ ಏನೂ ಇಲ್ಲ ಎಂಬಂತೆ ಕರಗಿಹೋಗುತ್ತಿದೆ.

Leave a Reply