ಮಕ್ಕಳಿಗೂ ಗೊತ್ತಿರಲಿ ಒಂದಷ್ಟು ಮನೆಕೆಲಸ

author-shamaಅವರದು ಸಾಮಾನ್ಯ ಮಧ್ಯಮ ವರ್ಗದ ಮನೆ. ಇಬ್ಬರು ಮಕ್ಕಳು. ಹಿರಿಯವನಿಗೆ ಏಳು, ಕಿರಿಯವನಿಗೆ ನಾಲ್ಕು ವರ್ಷ. ನಾನು ಹೋದಾಗ ಊಟದ ಸಮಯ. ತಟ್ಟೆ ತೊಳೆಯುವುದಿರಲಿ, ಊಟ ಮುಗಿಸಿ ಎದ್ದು ಹೋಗುವಾಗ ತಟ್ಟೆ ಎತ್ತಿಕೊಂಡೂ ಹೋಗಲಿಲ್ಲ. ಒಂದೂವರೆ ವರ್ಷದವಳಿದ್ದಾಗಲೇ ತಿಂದಾದ ನಂತ್ರ ತಟ್ಟೆ ಗ್ಲಾಸು ಎತ್ತಿ ವಾಷ್ ಬೇಸಿನ್ ಗೆ ಹಾಕಿ ಬಂದು “ಅಮ್ಮಾ ಚಪ್ಪಾಳೆ” ಅಂತಿದ್ದ ಮಗಳ ನೆನಪಾಯಿತು. ಅಧಿಕ ಪ್ರಸಂಗವೇ ಆದರೂ ಹೇಳಿದ್ದೆ “ತಟ್ಟೆ ತೊಗೊಂಡು ಹೋಗಿ ಮಕ್ಕಳೇ” ಇನ್ನೂ ಮಾತು ಮುಗಿಸೋ ಮುನ್ನ “ಹೋಗ್ಲಿ ಬಿಡೇ ನಾ ಇದೀನಲ್ಲ ತೆಗೀತೀನಿ” ಅಂದಿದ್ದಳು ಅವರ ಅಮ್ಮ. ಮಾತು ಬೆಳೆಸುವ, ಚರ್ಚೆಯ ಅಗತ್ಯವಿರಲಿಲ್ಲ. ಇದು ಒಂದು ಚಿತ್ರ.

ಕೆಳಗಿನ ಫ್ಲಾಟ್ ನಲ್ಲಿರುವ ಗೆಳತಿ ದೀಪಾ ಮನೆಗೆ ಹೋದಾಗ ಅಪರೂಪಕ್ಕೆಂಬಂತೆ ಸುಮ್ಮನೇ ಕೂತಿದ್ದಳು. ಲೋಕಾಭಿರಾಮ ಹರಟೆ ಮತಾಡ್ತಿದ್ದ ಹಾಗೇ ಮಗಳನ್ನ ಕರೆದು “ಅಪ್ಪ ಬೇಗ ಬರ್ತಾರಂತೆ, ಒಂಚೂರು ಹಿಟ್ಟು ನಾದಿಡಮ್ಮಾ” ಇನ್ನೂ ಆರನೇ ಕ್ಲಾಸಲ್ಲಿದ್ದ ಹುಡುಗಿ ಪರಿಣಿತೆ ಥರ ಚಪಾತಿ ಹಿಟ್ಟು ಕಲಸಿಟ್ಟಿದ್ದನ್ನು ಕಂಡು ವಿಸ್ಮಯ, ಖುಷಿ ಎರಡೂ ಆಗಿದ್ದು ಸುಳ್ಳಲ್ಲ. ಮಗಳಿಗೆ ಕೆಲಸ ಕಲಿಸಿದ ಗೆಳತಿ ಬಗ್ಗೆಯೂ ಹೆಮ್ಮೆ ಅನಿಸಿತ್ತು. ಇದು ಇನ್ನೊಂದು ಚಿತ್ರ.

ನಾವು ಕಷ್ಟ ಪಟ್ಟಿದ್ದೇ ಸಾಕು. ನಮ್ಮ ಮಕ್ಕಳಾದರೂ ಸುಖವಾಗಿರಲಿ ಎಂಬ ಧೋರಣೆ ಇತ್ತೀಚೆಗೆ ಫ್ಯಾಷನ್ ಎಂಬಂತೆ ಬೆಳೆದಿರುವುದು ಅಲ್ಲಗಳೆಯುವಂತಿಲ್ಲ. ಮಕ್ಕಳು ಕೇಳುವ ಮೊದಲೇ ಅವಶ್ಯಕತೆಗಿಂತ ಹೆಚ್ಚು ತಂದು ಕೊಡುವುದು, ಕಡ್ಡಿ ಅಲ್ಲಿಂದಿಲ್ಲಿ ಎತ್ತಿಡಲೂ ಬಿಡದೇ ಸೇವೆ ಮಾಡುವುದು, ಎಲ್ಲ ಅವರ ಆದ್ಯತೆ ಅಣತಿಗೆ ಅನುಸಾರವಾಗಿಯೇ ಮಾಡುವುದು ಕೂಡ ಈ ಟ್ರೆಂಡ್ ನ ಬಹು ದೊಡ್ಡ ಭಾಗ. “ನೀವು ಈಗಿನ ಅಮ್ಮಂದಿರು ಮಕ್ಕಳನ್ನ ಭಾರೀ ಮೆರೆಸ್ತೀರ, ಚೈಲ್ಡ್ ಸೆಂಟರ್ಡ್ ಮನೆ ಆಗ್ಹೋಗಿದೆ ಎಲ್ಲವೂ” ಗೀತಕ್ಕ ಮಾತಿನ ನಡುವೆ ಒಮ್ಮೆ ಹೇಳಿದ್ದು ಇನ್ನೂ ನೆನಪಿದೆ. ದಿನ ನಿತ್ಯದ ಆಗು ಹೋಗುಗಳಿಗೆ, ಬದಲಾವಣೆ ಮತ್ತು ಅವುಗಳ ಪರಿಣಾಮಗಳಿಗೆ ತನ್ನದೇ ರೀತಿಯಲ್ಲಿ ಸ್ಪಂದಿಸುವ ಸೂಕ್ಷ್ಮ ಮನಸ್ಸಿನ ಬರಹಗಾರ್ತಿಯಾದ ಅವರ ಮಾತು ನೂರಕ್ಕೆ ನೂರು ನಿಜವೇ. ಕೆಲವು ಮನೆಗಳಲ್ಲಂತೂ ಎಲ್ಲಿವರೆಗೆ ಎಂದರೆ ಹೈಸ್ಕೂಲಲ್ಲಿರುವ ಮಕ್ಕಳಿಗೆ ಸ್ವಂತವಾಗಿ ಸ್ನಾನ ಮಾಡಿಕೊಳ್ಳಲೂ ಗೊತ್ತಿಲ್ಲ.

ನಿಜ, ನಮ್ಮ ವಾರಿಗೆಯವರು ಬಹಳಷ್ಟು ಜನ ಕಷ್ಟಗಳ ನಡುವೆಯೇ ಹುಟ್ಟಿ, ಹಾಗೇ ಬೆಳೆದೆವು. ನಮ್ಮ ಮಕ್ಕಳು ನಮಗಿಂತ ಖುಷಿಯಾಗಿರಲಿ, ಚೆನ್ನಾಗಿ ಬೆಳೆಯಲಿ ಅನ್ನೋದು ಸಹಜ ಆಸೆ ಕೂಡ. ನಮ್ಮ ಹಾಗೆ ಗದ್ದೆ, ತೋಟ, ಕೂಲಿ ಮಾಡುವುದು ಅನಿವಾರ್ಯತೆಯಾಗಲೀ ಅಂಥ ವಾತಾವರಣವಾಗಲೀ ಇಂದಿಲ್ಲ. ಹಾಗಂತ ಅಂಗೈಯಲ್ಲಿರಿಸಿಕೊಂಡು ಬೆಳೆಸಬೇಕೇ ? ಪರಿಣಾಮ ಮಕ್ಕಳು ವಯಸ್ಸಿಗೆ ಬಂದಾಗಲೂ ಪೂರ ಪರಾವಲಂಬಿಗಳು. ಸ್ವಂತ ನಿರ್ಧಾರ ತೆಗೆದುಕೊಳ್ಳುವ ಶಕ್ತಿಯಿಲ್ಲ. ಸೋಲನ್ನು ಎದುರಿಸುವ ತಾಕತ್ತಿಲ್ಲ. ಚಿಕ್ಕ ಪುಟ್ಟ ಸಮಸ್ಯೆಗಳಿಗೂ ಕೊನೆಗೆ ಆತ್ಮ ಹತ್ಯೆಯೋ ಮನೆ ಬಿಟ್ಟು ಓಡಿ ಹೋಗುವುದೋ ಮಾಡಿದರೆ ಅಲ್ಲಿಗೆ ಮುಗಿಯಿತು ಎಂಬ ಪಲಾಯನವಾದ.

ನಮ್ಮ ಬಾಲ್ಯ ಹೀಗಿರಲಿಲ್ಲ. ಆಟಕ್ಕೆ ಎಷ್ಟು ಅವಕಾಶಗಳಿದ್ದವೋ ಜವಾಬ್ದಾರಿ ಹೊರುವುದು ಕೂಡ ಅದೇ ರೀತಿ ಬದುಕಿನೊಂದು ಭಾಗವೇ ಆಗಿತ್ತು. ಅದು ಹೇರಿಕೆ ಎನಿಸದ ಹಾಗೆ ನಮ್ಮಿಂದ ಮಾಡಿಸುವ ಜಾಣ್ಮೆ ಪೋಷಕರಿಗೂ ಇತ್ತು.

ಹೈಸ್ಕೂಲ್ ಮುಗಿದು ಮುಂದಿನ ಓದಿಗೆ ಮನೆಯಲ್ಲಿರಲಿ ಹಾಸ್ಟೆಲ್ ಇರಲಿ, ಯಾರನ್ನೋ ಅವಲಂಬಿಸುವ ಪರಿಸ್ಥಿತಿ ಬರುತ್ತಿರಲಿಲ್ಲ. ಎಲ್ಲೇ ಹೋದರೂ ಪರಿಸ್ಥಿತಿಯನ್ನು ಎದುರಿಸುವ, ಗೆಲ್ಲುವ, ಬದುಕು ಕಟ್ಟಿಕೊಳ್ಳುವ ಛಲದ ಬೀಜ ಮೊಳಕೆಯೊಡೆದದ್ದು ಕೂಡ ಹಾಗೆಯೇ.

ಎಷ್ಟು ಕೆಲಸ ಮಾಡಿಸಬೇಕು ? ಏನು ಮಾಡಿಸಬೇಕು ? ಇದು ಕೂಡ ಇಂದಿನ ಪೋಷಕರ ಮುಂದಿನ ಮಿಲಿಯನ್ ಡಾಲರ್ ಪ್ರಶ್ನೆ. ಒಂದೈದು ನಿಮಿಷ ಕೂತು ಯೋಚನೆ ಮಾಡಿದರೆ ಉತ್ತರ ಸುಲಭ ಮತ್ತು ಸರಳ. ಸುಮಾರು ಎರಡು ವರ್ಷವಾಗುವಷ್ಟರಲ್ಲಿ ಮಕ್ಕಳಿಗೆ ತಮ್ಮ ಕೆಲಸಗಳನ್ನು ಒಂದಷ್ಟು ಮಾಡುವಷ್ಟು ದೈಹಿಕವಾಗಿ ಮತ್ತು ಮಾನಸಿಕವಾಗಿ ಬೆಳೆದಿರುತ್ತಾರೆ. ತಮ್ಮ ತಟ್ಟೆ ಗ್ಲಾಸುಗಳನ್ನು ಕನಿಷ್ಟ ವಾಷ್ ಬೇಸಿನ್ನಿಗೆ ಹಾಕುವುದು ಅವರಿಂದಾಗುತ್ತದೆ ಮತ್ತು ಒಂದೆರಡು ದಿನ ಕಲಿಸಿ ಅವಕಾಶ ಕೊಟ್ಟರೆ ಚೆನ್ನಾಗಿಯೇ ಮಾಡುತ್ತಾರೆ. ಒಣಗಿದ ನಂತರ ಒಳ ತಂದಿಟ್ಟ ಬಟ್ಟೆಗಳ ರಾಶಿಯಿಂದ ತಮ್ಮ ಬಟ್ಟೆಯನ್ನು ಮಾತ್ರವೇ ಎತ್ತಿಡುವುದು ಮಕ್ಕಳಿಗೆ ಖುಷಿ ಕೊಡುವ ಕೆಲಸ ಮಾತ್ರವಲ್ಲ ಗೊತ್ತೇ ಆಗದಂತೆ segregation ಎಂಬ ಗಣಿತದ ಬಹಳ ಮುಖ್ಯವಾದ ಕಾನ್ಸೆಪ್ಟ್ ಕಲಿಕೆಯನ್ನು ಕೊಡಮಾಡುತ್ತವೆ.

ತೊಳೆದು ತಂದಿಟ್ಟ ಪಾತ್ರೆಗಳನ್ನು ಅವರಿಗೆ ಸಾಧ್ಯವಾದಷ್ಟು ಆಯಾ ಸ್ಥಳಗಳಲ್ಲಿ ಜೋಡಿಸಿಡುವುದು, ತಿಂದ ಹಣ್ಣಿನ ಸಿಪ್ಪೆಯನ್ನು ಕಸದ ಬುಟ್ಟಿಗೇ ಹಾಕುವುದು, ಅಪ್ಪ ಅಮ್ಮನ ಜತೆ ತಾವೂ ಕೈ ಜೋಡಿಸುವುದು ಆಟವಾಗಿಯೇ ಕಲಿವ ಪಾಠಗಳು. ಶಾಲೆಯಿಂದ ಬಂದಾಕ್ಷಣ ಶೂ, ಪುಸ್ತಕಗಳನ್ನ ತಾವೇ ಜೋಡಿಸಿಡುವುದು, ನ್ಯೂಸ್ ಪೇಪರ್ ಗಳನ್ನು ತಾರೀಖು ಪ್ರಕಾರ ಇಡುವುದು ಶಿಸ್ತು ಕಲಿಕೆಯ ಮೊದಲ ಮೆಟ್ಟಿಲುಗಳು. ಕಾರಿನಲ್ಲಿ ಹೋಗಬೇಕೆಂದರೆ ತೊಳೆಯಲೂ ಸಹಾಯ ಮಾಡಬೇಕು, ನಾಳೆಗೆ ಕುಡಿಯಲು ಹಾಲು ಬೇಕಿದ್ದರೆ ಹಾಲಿನ ಕೂಪನ್ ಇಡಬೇಕು, ಸ್ನಾನಕ್ಕೆ ಮುಂಚೆ ಬಿಚ್ಚಿದ ಬಟ್ಟೆಗಳನ್ನು ಅದಕ್ಕಾಗಿ ಇರಿಸಿದ ಬಕೆಟ್ ಒಳಗೇ ಹಾಕಿಡಬೇಕು. ಇಲ್ಲದೇ ಹೋದಲ್ಲಿ ಮರು ದಿನ ಅವರಿಗೆ ಈ ಯಾವ ಸವಲತ್ತುಗಳೂ ದಕ್ಕುವುದಿಲ್ಲ ಎನ್ನುವುದು ನಮ್ಮ ಮನೆಯ ಕಡ್ಡಾಯ ನಿಯಮ.

ಇದಮಿತ್ಥಂ ಎಂಬ ಹಾಗೆ ಆಗಬೇಕಿಲ್ಲದ ಒಂಚೂರು ಹೆಚ್ಚು ಕಡಿಮೆಯಾದರೂ ಪರವಾಗಿಲ್ಲ ಎನಬಹುದಾದ ಕೆಲಸಗಳನ್ನು ಮಕ್ಕಳಿಗೆ ಹೇಳುವುದು ಪ್ರತಿಯೊಂದು ಮನೆಯಲ್ಲೂ ಮಾಡಬೇಕಿದೆ. ಮಕ್ಕಳನ್ನು ಸ್ವಾವಲಂಬನೆಗೆ ಹಚ್ಚಲು, ಆತ್ಮ ವಿಶ್ವಾಸ ಬೆಳೆಸಲು, ಶಿಸ್ತು ರೂಢಿಸಲು ಎಲ್ಲಕ್ಕೂ ಹೆಚ್ಚು ಬದುಕಲ್ಲಿ ಹಕ್ಕುಗಳು ಮಾತ್ರವಲ್ಲ ಜತೆಗೆ ಜವಾಬ್ದಾರಿಗಳೂ ಬರುತ್ತವೆ ಮತ್ತು ನಿಭಾಯಿಸಬೇಕೆಂದು ಅರಿತುಕೊಳ್ಳಲು ಇದು ರಾಜಮಾರ್ಗ. ಮಾನಸಿಕ ಮತ್ತು ದೈಹಿಕ ಆರೋಗ್ಯಕ್ಕೆ ಉಣ್ಣುವುದು ತಿನ್ನುವುದು ಎಷ್ಟು ಮುಖ್ಯವೋ ಕೆಲಸ ಮಾಡುವದೂ ಅಷ್ಟೇ ಅಗತ್ಯ. ನಾಳೆ ಸಮಾಜದ ಮುಖ್ಯ ವಾಹಿನಿಗೆ ಸೇರಿಕೊಳ್ಳುವ ಕಿರು ತೊರೆಗಳು ತಮ್ಮದೇ ಪಾತ್ರ ಸೃಷ್ಟಿಸಿಕೊಂಡು ಹರಿಯುವುದಕ್ಕೆ ದಾರಿ ತೋರಿಸಬೇಕಿರುವುದು ಪೋಷಕರೆಂಬ ತೀರಗಳೇ ಅಲ್ಲವೇ ?

2 COMMENTS

  1. “ಚೈಲ್ಡ್ ಸೆಂಟರ್ಡ್” ವ್ಯವಸ್ಥೆಯೆಂಬುದು ಬಹುತೇಕ ಶಾಪವಾಗಿ ಬೆಳೆಯುವಷ್ಟರ ಮಟ್ಟಿಗೆ ಸಮಾಜವನ್ನು ಆವರಿಸಿದೆ.. ಇದು ಮಕ್ಕಳ ಕಾರ್ಯಕ್ಷಮತೆಯನ್ನು ಕುಂಠಿತಗೊಳಿಸುವುದರಲ್ಲಿ ಅನುಮಾನವೇ ಇಲ್ಲ… ನೀವು ಹೇಳಿದಂತೆ ಇಂತಹ ಚಿಕ್ಕಪುಟ್ಟ ವಿಷಯಗಳಿಂದಲೇ ಸ್ವಾಭಿಮಾನದ, ಸ್ವಾವಲಂಬನೆಯ ಪಾಠವನ್ನು ಪೋಷಕರು ಮಕ್ಕಳಿಗೆ ದಾಟಿಸುವಂತಾಗಬೇಕು..

  2. Sushma, ನಿಜ. ನಮಗೆ ಅಂಥ ಬಾಲ್ಯ ಸಿಕ್ಕಿದ ಕಾರಣ ಬಹುಶಃ ನಾವು ಹುಟ್ಟಿದೂರು, ಬೆಳೆದೂರು ಬಿಟ್ಟು ಬಂದು ಸ್ವಾಭಿಮಾನ, ಸ್ವಾವಲಂಬನೆ ಎರಡನ್ನೂ ಮೈಗೂಡಿಸಿಕೊಂಡು ಬದುಕಲು ಸಾಧ್ಯವಾಗಿದೆ.

Leave a Reply