ದಾಖಲೆ ಮೊತ್ತಕ್ಕೆ ಹರಾಜಾದ ಒಪೆನೈಮೆರ್ ನೀಲಿ ವಜ್ರದ ಬೆಲೆ ಎಷ್ಟು ಗೊತ್ತಾ?

ಡಿಜಿಟಲ್ ಕನ್ನಡ ಟೀಮ್

ವಜ್ರ ದುಬಾರಿ ಅಂತಾ ಗೊತ್ತು. ಆದರೆ, ಹರಾಜಿನಲ್ಲಿ ಅವು ಮಾರಾಟವಾಗೋ ಮೊತ್ತ ಎಲ್ಲರ ಹುಬ್ಬೇರಿಸುತ್ತದೆ. ಅದೇ ರೀತಿ ಕಳೆದ ಎರಡು ದಿನಗಳ ಕಾಲ ಜಿನೆವಾದಲ್ಲಿ ನಡೆದ ವಜ್ರ ಹರಾಜಿನಲ್ಲಿ ‘ಒಪೆನೈಮೆರ್ ಬ್ಲೂ ಡೈಮಂಡ್’ ಎಂಬ ವಜ್ರ ಹೊಸ ದಾಖಲೆಯನ್ನೇ ನಿರ್ಮಿಸಿದೆ. ಆ ಮೂಲಕ ಹರಾಜಿನಲ್ಲಿ ದುಬಾರಿ ಮೊತ್ತಕ್ಕೆ ಮಾರಾಟವಾದ ನೀಲಿ ವಜ್ರ ಎಂಬ ಖ್ಯಾತಿಗೂ ಪಾತ್ರವಾಗಿದೆ.

ಆಯಾತಾಕಾರದ ಉಂಗುರದ ಈ ನೀಲಿ ವಜ್ರ 14.62 ಕ್ಯಾರೆಟ್ ನದ್ದಾಗಿದೆ. ಹರಾಜಿನಲ್ಲಿ ತೀವ್ರ ಸ್ಪರ್ಧೆ ಏರ್ಪಟ್ಟ ಪರಿಣಾಮ ಈ ವಜ್ರ ಶುಲ್ಕ ಹಾಗೂ ಇತರೆ ವೆಚ್ಚ ಸೇರಿದಂತೆ ಒಟ್ಟು ₹387 ಕೋಟಿ (57.6 ಮಿಲಿಯನ್ ಡಾಲರ್) ಗೆ ಮಾರಾಟವಾಗಿದೆ. ಹರಾಜಿಗೂ ಮುನ್ನ ಈ ವಜ್ರ ₹255 ಕೋಟಿ (38 ಮಿಲಿಯನ್ ಡಾಲರ್) ರಿಂದ ₹322 ಕೋಟಿ (45 ಮಿಲಿಯನ್ ಡಾಲರ್) ಮೊತ್ತಕ್ಕೆ ಮಾರಾಟವಾಗುವ ನಿರೀಕ್ಷೆ ಇತ್ತು.

ಈ ಹಿಂದೆ ಬ್ಲೂ ಮೂನ್ ಎಂಬ 12.03 ಕ್ಯಾರೆಟ್ ನ ವಜ್ರ ₹ 67 ಕೋಟಿಗೆ ಮಾರಾಟವಾಗಿದ್ದು, ಈ ಹಿಂದಿನ ದಾಖಲೆಯಾಗಿತ್ತು. ಈಗ ಒಪೆನೈಮೆರ್ ಹೆಸರಿನ ಹೊಸ ದಾಖಲೆ ನಿರ್ಮಿಸಿದೆ. ಈ ವಜ್ರದ ಹಿಂದೆ ಒಂದು ಕಥೆಯೂ ಇದೆ.

ಈ ವಜ್ರಕ್ಕೆ ಸರ್ ಫಿಲಿಪ್ ಒಪೆನೈಮೆರ್ ಹೆಸರಿಡಲಾಗಿದೆ. ವಜ್ರ ವ್ಯಾಪಾರ ಕಂಪನಿ ಡಿ ಬೀರ್ಸ್ ನ ಭಾಗವಾಗಿದ್ದ ಒಪೆನೈಮೆರ್ ಸುಮಾರು 50 ವರ್ಷಗಳ ಕಾಲ ಈ ವಜ್ರ ವ್ಯಾಪಾರ ಕ್ಷೇತ್ರದಲ್ಲಿದ್ದ. ಈ ಅವಧಿಯಲ್ಲಿ ತನ್ನ ಪತ್ನಿಗಾಗಿ ಆಯ್ಕೆ ಮಾಡಿ ಎತ್ತಿಟ್ಟಿದ್ದ ವಜ್ರವೇ ಈ ನೀಲಿ ವಜ್ರ. ಹಾಗಾಗಿ ಈ ವಜ್ರಕ್ಕೆ ಒಪೆನೈಮೆರ್ ಎಂಬ ಹೆಸರು ಬಂದಿತು.

ಈ ಹಿಂದೆ ಸಾಕಷ್ಟು ನೀಲಿ ವಜ್ರಗಳು ಮಾರಾಟವಾಗಿವೆ. ಆದರೆ, ಒಪೆನೈಮೆರ್ ನೀಲಿ ವಜ್ರದಂತೆ ಇನ್ಯಾವುದೇ ವಜ್ರ ಇದರ ಗುಣಮಟ್ಟವನ್ನು ಹೊಂದಿಲ್ಲ ಎಂದು ಯುರೋಪ್ ಜ್ಯುವೆಲರಿ ನಿರ್ದೇಶಕ ರೇಮಂಡ್ ಸ್ಯಾಂಕ್ರಾಫ್ಟ್ ಬೇಕರ್ ತಿಳಿಸಿದ್ದಾರೆ.

Leave a Reply