ಗೌರವ ಇಲ್ಲದೇ ನರಳುತ್ತಿವೆ ಕನ್ನಡ ಚಿತ್ರರಂಗದ ಜೀವಮಾನ ಸಾಧನೆಯ ಪ್ರಶಸ್ತಿಗಳು!

 

sridharamurthyಎನ್.ಎಸ್.ಶ್ರೀಧರ ಮೂರ್ತಿ

ಸಿನಿಮಾರಂಗಕ್ಕೆ ಭಾರತದ ಯಾವುದೇ ರಾಜ್ಯ ನೀಡದಷ್ಟು ಮನ್ನಣೆಯನ್ನು ಕರ್ನಾಟಕ ಸರ್ಕಾರ ಕೊಡುತ್ತಿದೆ. ಆದರೆ ಅದನ್ನು ಬಳಸಿಕೊಳ್ಳುವುದು ಚಿತ್ರರಂಗದವರಿಗೆ ಗೊತ್ತಿಲ್ಲ ಎನ್ನುವ ಮಾತಿದೆ. ಅದಕ್ಕೆ ಉತ್ತಮ ಉದಾಹರಣೆಯಾಗಬಲ್ಲ ಸಂಗತಿ ಎಂದರೆ ಜೀವಮಾನ ಸಾಧನೆಗಾಗಿ ನೀಡುವ ಪ್ರಶಸ್ತಿಗಳದು. ರಾಷ್ಟ್ರಮಟ್ಟದಲ್ಲಿಯೇ ಜೀವಮಾನ ಸಾಧನೆಗೆ ದಾದಾ ಸಾಹೇಬ್ ಫಾಲ್ಕೆ ಒಂದೇ ಗೌರವವಿದೆ. ಆದರೆ ಕರ್ನಾಟಕದಲ್ಲಿ ಡಾ.ರಾಜ್ ಕುಮಾರ್, ಪುಟ್ಟಣ್ಣ ಕಣಗಾಲ್ ಮತ್ತು ಡಾ. ವಿಷ್ಣುವರ್ಧನ್  ಅವರ ಹೆಸರಿನ ಮೂರು ಪ್ರಶಸ್ತಿಗಳಿವೆ. ಹೀಗಿದ್ದರೂ ಅರ್ಹರಿಗೆ ಪ್ರಶಸ್ತಿ ಸಿಕ್ಕುತ್ತಿಲ್ಲ ಎನ್ನುವ ಮಾತು ಕೇಳಿ ಬರುತ್ತಿದೆ. ಇದನ್ನು ಒಂದು ರೀತಿಯಲ್ಲಿ ವಿಪರ್ಯಾಸವೆಂದೇ ಕರೆಯಬಹುದು.

ಈ ವರ್ಷ 2015ನೇ ಸಾಲಿನ ಪ್ರಶಸ್ತಿಗಳು ಪ್ರಕಟವಾದಾಗ  ಮೂರೂ ಜೀವಮಾನ ಸಾಧನೆಯ ಪ್ರಶಸ್ತಿಗಳು ಪ್ರಕಟವಾಗಲಿಲ್ಲ. ಈ ಕುರಿತು ಸಂಬಂಧಪಟ್ಟವರನ್ನು ಕೇಳಿದಾಗ ಅದಕ್ಕೆ ಪ್ರತ್ಯೇಕ ಸಮಿತಿಯನ್ನು ನೇಮಿಸಲಾಗುತ್ತದೆ ಎನ್ನುವ ಉತ್ತರ ಬಂತು. ಈಗಾಗಲೇ ಹಿರಿಯ ನಿರ್ದೇಶಕ ಎಸ್‍.ಕೆ.ಭಗವಾನ್ ನೇತೃತ್ವದಲ್ಲಿ ಇದಕ್ಕಾಗಿ ಸಮಿತಿ ನೇಮಕವಾಗಿದೆ. ಹಂಸಲೇಖ, ಭಾರತಿ ವಿಷ್ಣುವರ್ಧನ್ ಮತ್ತು ಗಂಗಾಧರ ಮೊದಲಿಯಾರ್ ಸದಸ್ಯರಾಗಿರುವ  ಸಮಿತಿಗೆ ಅರ್ಹ ಹೆಸರನ್ನು ಸೂಚಿಸಲು ಸಾರ್ವಜನಿಕರಿಂದ ಸಲಹೆಗಳನ್ನು ಜಾಹಿರಾತಿನ ಮೂಲಕ ಆಹ್ವಾನಿಸಲಾಗುತ್ತದಂತೆ. ಆ ಮಟ್ಟಿಗೆ ಪ್ರಶಸ್ತಿ ಆಯ್ಕೆ ಪ್ರಕ್ರಿಯೆಯನ್ನು ಪಾರದರ್ಶಕಗೊಳಿಸಲು, ಅದಕ್ಕೆ ಗೌರವ ತರಲು ಪ್ರಯತ್ನಗಳು ನಡೆದಿವೆ ಎಂದಾಯಿತು. ಆದರೆ ಇದು ರಾಜ್ಯೋತ್ಸವ ಪ್ರಶಸ್ತಿಗಳಂತೆ ಅರ್ಜಿ-ಮರ್ಜಿಯ ಭರಾಟೆಗೆ ಸಿಕ್ಕದಂತೆ ನೋಡಿಕೊಳ್ಳಬೇಕಾಗಿದೆ.

ಈ ಪ್ರಶಸ್ತಿಗಳ ಪೈಕಿ ಮೊದಲು ಆರಂಭವಾಗಿದ್ದು ಪುಟ್ಟಣ್ಣ ಕಣಗಾಲ್ ಪ್ರಶಸ್ತಿ. 1985-86 ರಲ್ಲಿ ಅದನ್ನು ಆರಂಭಿಸಿದಾಗ ನಿರ್ದೇಶಕರಿಗೆ ಮೀಸಲು ಎಂದು ಪ್ರಕಟಿಸಲಾಗಿತ್ತು. ಆದರೆ ಉಳಿದ ಕ್ಷೇತ್ರಗಳಲ್ಲಿ ಸಾಧಕರಿಲ್ಲವೆ ಎಂಬ ಪ್ರಶ್ನೆ ಬಂದಿದ್ದರಿಂದ 26-6-89 ರಲ್ಲಿ ಒಂದು ತಿದ್ದುಪಡಿ ತಂದು ಉಳಿದ ಕ್ಷೇತ್ರಗಳ ಸಾಧಕರಿಗೂ ಈ ಪ್ರಶಸ್ತಿ ಸಲ್ಲುತ್ತದೆ ಎನ್ನಲಾಯಿತು. ಅದರಂತೆ ಟಿ.ಎನ್.ಬಾಲಕೃಷ್ಣ ಅವರಿಗೆ ಈ ಪ್ರಶಸ್ತಿಯನ್ನು ನೀಡಲಾಯಿತು. ಆದರೆ ಮತ್ತೆ ವಿವಾದ ಉಂಟಾಗಿದ್ದರಿಂದ 1992-93 ನೇ ಸಾಲಿನಿಂದ ಗುಬ್ಬಿ ವೀರಣ್ಣನವರ ಹೆಸರಿನಲ್ಲಿ ಇನ್ನೊಂದು ಪ್ರಶಸ್ತಿ ಸ್ಥಾಪಿಸಿ ಪುಟ್ಟಣ್ಣ ಕಣಗಾಲ್ ಪ್ರಶಸ್ತಿಯನ್ನು ನಿರ್ದೇಶಕರಿಗೆ ಮೀಸಲಿಡಲು ನಿರ್ಧರಿಸಲಾಯಿತು.

ಹಾಗಿದ್ದರೆ ಕನ್ನಡದ ಶ್ರೇಷ್ಠ ನಿರ್ದೇಶಕರಿಗೆಲ್ಲರಿಗೂ ಈ ಪ್ರಶಸ್ತಿ ಸಿಕ್ಕಿದೆಯೆ? ಎಂದು ಹುಡುಕಿದರೆ ನಿರಾಸೆ ಕಾದಿದೆ. ಕನ್ನಡದ ಮಟ್ಟಿಗೆ ಮಾತ್ರವಲ್ಲ ಜಗತ್ತಿನಲ್ಲಿಯೇ ಶ್ರೇಷ್ಠ ನಿರ್ದೇಶಕರಲ್ಲಿ ಒಬ್ಬರು ಎನ್ನಿಸಿಕೊಂಡಿದ್ದ ಎನ್. ಲಕ್ಷ್ಮಿನಾರಾಯಣ್ ಅವರಿಗೆ ಈ ಪ್ರಶಸ್ತಿ ದೊರಕಿಲ್ಲ. ‘ಗರಂಹವಾ’ ಸಿನಿಮಾ ಮೂಲಕ ಜಾಗತಿಕ ರಂಗದಲ್ಲಿ ಹೆಸರು ಮಾಡಿ ‘ಬರ’, ‘ಕನ್ನೇಶ್ವರ ರಾಮ’, ‘ಚಿತೆಗೂ ಚಿಂತೆ’ ಮೊದಲಾದ ಗುಣಾತ್ಮಕ ಕನ್ನಡ ಸಿನಿಮಾಗಳನ್ನು ನೀಡಿದ ಎಂ.ಎಸ್.ಸತ್ಯು ಅವರಿಗೆ ಈ ಪ್ರಶಸ್ತಿ ಇದುವರೆಗೂ ಸಿಕ್ಕಿಲ್ಲ. ಆಯ್ಕೆಯಾಗಿರುವ ಕೆಲವರು ಮಾಧ್ಯಮಕ್ಕೆ ನೀಡಿರುವ ಕೊಡುಗೆಯ ಬಗ್ಗೆ ಗಂಭೀರ ಆಕ್ಷೇಪಗಳಿವೆ.

 

ಇನ್ನು ಗುಬ್ಬಿ ವೀರಣ್ಣ ಪ್ರಶಸ್ತಿ ಮೊದಲಿಗೆ ಡಾ.ರಾಜ್ ಕುಮಾರ್ ಅವರಿಗೆ ದೊರಕಿತು. ನಂತರ ಅದನ್ನು ‘ರಾಜ್ ‍ಕುಮಾರ್ ಪ್ರಶಸ್ತಿ’ ಎಂದು ಬದಲಾಯಿಸಲಾಯಿತು. ಮುಂದೆ ‘ಡಾ. ವಿಷ್ಣುವರ್ಧನ್’ ಅವರ ಹೆಸರಿನಲ್ಲೂ ಒಂದು ಜೀವಮಾನದ ಸಾಧನೆಗೆ ಪ್ರಶಸ್ತಿ ಆರಂಭವಾಯಿತು. ಈ ಎರಡು ಪ್ರಶಸ್ತಿಗಳಿಗೆ ಏನು ವ್ಯತ್ಯಾಸ ಎನ್ನುವುದು ನಿಯಮಾವಳಿಗಳಲ್ಲಿ ಉಲ್ಲೇಖವಾಗಿಲ್ಲ. ಹೋಗಲಿ ಹೀಗೆ ಎರಡು ಜೀವಮಾನದ ಸಾಧನೆಗೆ ಪ್ರಶಸ್ತಿಗಳು ಇರುವುದರಿಂದ ಅರ್ಹರೆಲ್ಲರಿಗೂ ದೊರಕಿದೆಯೆ? ಎಂದರೆ ಅಲ್ಲಿಯೂ ನಿರಾಸೆ ಕಾದಿದೆ.

ಈ ಪ್ರಶಸ್ತಿ ದೊರಕಿರುವುದು ಬಹುಮಟ್ಟಿಗೆ ತೆರೆಯ ಮೇಲೆ ಮಿಂಚಿದವರಿಗೇ. ತೆರೆಯ ಹಿಂದಿನ ಸಾಧಕರನ್ನು ಪರಿಗಣಿಸಿದ್ದು ತೀರಾ ವಿರಳ. ಕನ್ನಡ ಚಿತ್ರಗೀತೆಗಳು ಎಂದ ಕೂಡಲೇ ನೆನಪಿಗೆ ಬರುವುದು ಚಿ. ಉದಯಶಂಕರ್, ಆರ್.ಎನ್. ಜಯಗೋಪಾಲ್, ವಿಜಯನಾರಸಿಂಹ ಅವರ ಹೆಸರುಗಳು. ಸುವರ್ಣಯುಗವನ್ನೇ ಕನ್ನಡದ ಮಟ್ಟಿಗೆ ತಂದ ಮಹನೀಯರು ಇವರು. ಈ ಮೂವರಿಗೂ ಜೀವಮಾನ ಸಾಧನೆಯ ಪ್ರಶಸ್ತಿಗಳು ದೊರಕಿಲ್ಲ. ಸಂಗೀತ ನಿರ್ದೇಶಕರಾದ ಜಿ.ಕೆ. ವೆಂಟಕೇಶ್, ಎಂ.ರಂಗರಾವ್, ಉಪೇಂದ್ರ ಕುಮಾರ್, ಟಿ.ಜಿ. ಲಿಂಗಪ್ಪ ಯಾರಿಗೂ ಈ ಗೌರವ ದೊರಕಿಲ್ಲ. ಗಾಯಕರಲ್ಲಂತೂ ಪಿ.ಬಿ. ಶ್ರೀನಿವಾಸ್, ಎಸ್.ಪಿ. ಬಾಲಸುಬ್ರಹ್ಮಣ್ಯಂ, ಕೆ.ಜೆ. ಯೇಸುದಾಸ್, ಪಿ. ಸುಶೀಲ, ಎಸ್. ಜಾನಕಿ, ವಾಣಿ ಜಯರಾಂ, ಕೆ.ಎಸ್. ಚಿತ್ರಾ ಯಾರಿಗೂ ದೊರಕಿಲ್ಲ. ಕನ್ನಡದವರೇ ಆದ ಶಿವಮೊಗ್ಗ ಸುಬ್ಬಣ್ಣ, ಸಿ. ಅಶ್ವತ್ಥ್, ಕಸ್ತೂರಿ ಶಂಕರ್, ಬಿ.ಕೆ. ಸುಮಿತ್ರ ಯಾರಿಗೂ ದೊರಕಿಲ್ಲ. ಅಂದರೆ ಚಿತ್ರರಂಗಕ್ಕೆ ಇವರ ಕೊಡುಗೆ ಮಹತ್ವದಲ್ಲವೆ? ಇದು ಪ್ರಶಸ್ತಿಯ ಆಯ್ಕೆ ಪ್ರಕ್ರಿಯೆ ಕುರಿತು ಇರುವ ಅಸ್ಪಷ್ಟತೆಗೆ ನಿದರ್ಶನವಾಗಿದೆ. ಇದರ ಬದಲು ಇರುವ ಎರಡು ಪ್ರಶಸ್ತಿಗಳಲ್ಲಿ ಒಂದನ್ನು ತೆರೆಯ ಮೇಲಿ ಮಿಂಚಿದವರಿಗೆ ಇನ್ನೊಂದನ್ನು ತೆರೆಯ ಹಿಂದೆ ಕೆಲಸ ಮಾಡಿದವರಿಗೆ ಎಂದು ವಿಂಗಡಿಸಿದರೆ ಕೆಲಮಟ್ಟಿನ ಪಾರದರ್ಶಕತೆ ದೊರಕುತ್ತದೆ.

ತೆರೆಯ ಮೇಲೆ ಮಿಂಚಿದವರೂ ಎಂದಾಗಲೂ ರಾಷ್ಟ್ರಮಟ್ಟದಲ್ಲಿ ಕನ್ನಡ ಚಿತ್ರರಂಗಕ್ಕೆ ಗೌರವ ತಂದ ಎಲ್.ವಿ. ಶಾರದಾ, ಎಚ್.ಜಿ. ದತ್ತಾತ್ರೇಯ ಸೇರಿದಂತೆ ಹಲವು ಕಲಾವಿದರಿಗೆ ಈ ಗೌರವ ಸಿಕ್ಕಿಲ್ಲ. ಹೀಗೆ ಪಟ್ಟಿಯನ್ನು ಸಾಕಷ್ಟು ಬೆಳೆಸಬಹುದು. ಈಗ ಏನೂ ತಪ್ಪಾಗಿದೆ ಎನ್ನುವ ವಿವೇಚನೆ ಮೂಡಿ ಸರಿ ಪಡಿಸುವ ಪ್ರಯತ್ನಗಳು ನಡೆಯುತ್ತಿರುವುದು ಉತ್ತಮ ಬೆಳವಣಿಗೆ. ಆದರೆ ಇಷ್ಟೇ ಸಾಕಾಗುವುದಿಲ್ಲ. ಒಂದು ವರ್ಷ  ಈ ಪ್ರಶಸ್ತಿಗಳನ್ನು ನಿಲ್ಲಿಸಿದರೂ ಪರವಾಗಿಲ್ಲ.  ಈ ಕುರಿತು ಸಮಗ್ರ ಚರ್ಚೆಗಳಾಗ ಬೇಕು. ಮೂರೂ ಪ್ರಶಸ್ತಿಗಳ ಭಿನ್ನತೆ ಮತ್ತು ಅನನ್ಯತೆ ನಿರ್ಧಾರವಾಗಬೇಕು. ಚಿತ್ರರಂಗವನ್ನು ಸಮಗ್ರವಾಗಿ ಪರಿಶೀಲಿಸಿ ಗೌರವಿಸುವ ಪರಂಪರೆ ಬೆಳೆಯ ಬೇಕು. ಚಿತ್ರರಂಗವನ್ನು ಗಂಭೀರವಾಗಿ ಅಧ್ಯಯನ ಮಾಡಿದವರ ಸಲಹೆ ಪಡೆಯಬೇಕು. ‘ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ’ಯ ನಿಯಮಾವಳಿಗಳನ್ನು ಗಮನಿಸಬೇಕು. ಈ ಪ್ರಶಸ್ತಿಗಳಿಗೆ ಮಾತ್ರವಲ್ಲ ರಾಜ್ಯ ಪ್ರಶಸ್ತಿಗಳಿಗೂ ರಾಷ್ಟ್ರ ಪ್ರಶಸ್ತಿಗಳಂತೆ ಏಕೆ ಈ ಆಯ್ಕೆ ಎಂದು ಟಿಪ್ಪಣಿ ನೀಡುವ ಪದ್ದತಿ ಆರಂಭವಾಗ ಬೇಕು. ಇದರ ಜೊತೆಗೆ ಸೇರಿಸಲೇ ಬೇಕಾದ ಮಾತು ಎಂದರೆ ರಾಜ್ಯ ಚಲನಚಿತ್ರ ಅಕಾಡಮಿ ಕೂಡ ಈ ವರ್ಷದಿಂದ ಜೀವಮಾನ ಸಾಧನೆಗೆ ಪ್ರಶಸ್ತಿಗಳನ್ನು ನೀಡಲು ಆರಂಭಿಸಿದೆ. ಅದರ ಭಿನ್ನತೆ ಮತ್ತು ಅಗತ್ಯ ಕೂಡ ಈ ಹಂತದಲ್ಲಿಯೇ ಚರ್ಚೆಯಾಗ ಬೇಕು.

Leave a Reply