ಲೋಕಾಯುಕ್ತಕ್ಕೆ ಮತ್ತೆ ಎಸ್.ಆರ್ ನಾಯಕ್ ಹೆಸ್ರು ಶಿಫಾರಸ್ಸು, ಕೇಂದ್ರದ ಹೆಚ್ಚುವರಿ ವಿದ್ಯುತ್ ನಿರಾಕರಿಸ್ತಂತೆ ರಾಜ್ಯ ಸರ್ಕಾರ, ತರುಣ್ ವಿಜಯ್ ಮೇಲೆ ಹಲ್ಲೆ.. ದಿನಾಂತ್ಯದ ಎಲ್ಲ ಸುದ್ದಿಗಳು

 ಬೆಂಗಳೂರಿನ ಚಿತ್ರಕಲಾ ಪರಿಷತ್ ನಲ್ಲಿ ಶುಕ್ರವಾರ ನಡೆದ ಹತ್ತಿ ಮತ್ತು ರೇಷ್ಮೆ ಉಡುಪು ಮೇಳ ಉದ್ಘಾಟಿಸಿದ ನಟಿ ಹರಿಪ್ರಿಯಾ ಹಿಂಗೆ ಕಂಡ್ರು ನೋಡಿ…

ಡಿಜಿಟಲ್ ಕನ್ನಡ ಟೀಮ್

ತೀವ್ರ ವಿರೋಧದ ನಡುವೆಯೂ ಕೆಪಿಎಸ್ಸಿ ಅಧ್ಯಕ್ಷ ಸ್ಥಾನಕ್ಕೆ ಬಿಡಿಎ ಆಯುಕ್ತ ಶ್ಯಾಂಭಟ್ ಹೆಸರನ್ನೇ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯಪಾಲರಿಗೆ ಶಿಫಾರಸು ಮಾಡಿರುವ ಬೆನ್ನಲ್ಲೇ, ಲೋಕಾಯುಕ್ತಕ್ಕೆ ಮತ್ತೇ ನ್ಯಾ.ಎಸ್.ಆರ್.ನಾಯಕ್ ಹೆಸರನ್ನೇ ಮರು ಶಿಫಾರಸು ಮಾಡಿದ್ದಾರೆ.

ಈ ಬಾರಿ ನಾಯಕ್ ಹೆಸರು ಶಿಫಾರಸು ಮಾಡುವಾಗ ರಾಜ್ಯಪಾಲರು ಎತ್ತಿದ್ದ ಆಕ್ಷೇಪಗಳಿಗೆ ಸಮರ್ಥನೆ ನೀಡುತ್ತಾ, ರಾಜ್ಯ ಭಾಷೆಯನ್ನು ಮುಂದಿಟ್ಟು ಕನ್ನಡಿಗರು ಎಂಬುದನ್ನು ಪ್ರತಿಪಾದಿಸಿ ಎಲ್ಲ ರೀತಿಯಲ್ಲೂ  ಈ ಸ್ಥಾನಕ್ಕೆ ನಾಯಕ್ ಅರ್ಹರು ಎಂಬ ವಾದವನ್ನು ಬಲವಾಗಿ ಪ್ರತಿಪಾದಿಸಿದ್ದಾರೆ.

ಈ ಹಿಂದೆ ನ್ಯಾ.ಭಾಸ್ಕರ್ ರಾವ್ ಹೊರಗಿನವರಾಗಿದ್ದರಿಂದ ಅವರಿಗೆ ತಮ್ಮ ಕಚೇರಿಯಲ್ಲಿ ನಡೆಯುತ್ತಿದ್ದ ಆಗು ಹೋಗು ತಿಳಿಯದೆ ಭ್ರಷ್ಟಾಚಾರಕ್ಕೆ ಎಡೆ ಮಾಡಿಕೊಟ್ಟಿತ್ತು. ಇದಕ್ಕೆ ಸ್ಥಳೀಯ ಭಾಷೆಬಾರದಿರುವುದು ಕಾರಣ. ಈ ಹಿಂದೆ ಸ್ಥಳೀಯ ಭಾಷೆ ಅರಿತಿದ್ದ ನ್ಯಾ.ವೆಂಕಟಾಚಲಯ್ಯ, ನ್ಯಾ.ಸಂತೋಷ್ ಹೆಗ್ಡೆ ಆ ಸ್ಥಾನದಲ್ಲಿ ಅತ್ಯಂತ ದಕ್ಷ ರೀತಿಯಲ್ಲಿ ಕೆಲಸ ಮಾಡಿ ಜನರ ಭಾವನೆಗಳಿಗೆ ಸ್ಪಂದಿಸಿ ಭ್ರಷ್ಟರಿಗೆ ಸಿಂಹಸ್ವಪ್ನವಾಗಿದ್ದರು ಎಂಬ ಸ್ಪಷ್ಟನೆ ನೀಡಲಾಗಿದೆ.

ಇದರ ಜತೆಗೆ ಕೆಪಿಎಸ್ಸಿ ಅಧ್ಯಕ್ಷ ಸ್ಥಾನಕ್ಕೆ ಶ್ಯಾಂಭಟ್ ಹಾಗೂ ಎರಡು ಸದಸ್ಯ ಸ್ಥಾನಕ್ಕೆ ಸೈಯದ್ ಅಹಮದ್ ಖಾನ್ ಹಾಗೂ ಶ್ರೀನಿವಾಸ್ ಹೆಸರನ್ನು ರಾಜ್ಯಪಾಲರಿಗೆ ಶಿಫಾರಸು ಮಾಡಲಾಗಿದೆ. ಶ್ಯಾಂ ಭಟ್ ಹೆಸರಿಗೆ ಸಂಪುಟದಲ್ಲೂ ತೀವ್ರ ವಿರೋಧವಿದ್ದರೂ ಲೆಕ್ಕಿಸದೆ ಮುಖ್ಯಮಂತ್ರಿಯವರು ಶಿಫಾರಸು ಮಾಡಿದ್ದಾರೆ ಎಂಬ ಮಾತುಗಳಿವೆ.

 

ರಾಜ್ಯ ಸರ್ಕಾರವೇ ಕೇಂದ್ರ ನೀಡಿದ ವಿದ್ಯುತ್ ಬೇಡ ಎಂದಿದೆ: ಗೋಯಲ್

ಕರ್ನಾಟಕದಲ್ಲಿ ವಿದ್ಯುತ್ ಅಭಾವದ ಪರಿಸ್ಥಿತಿ ಎದುರಾದಾಗ ಕೇಂದ್ರ ವಿದ್ಯುತ್ ನೀಡಲು ಮುಂದಾದರೂ ಅದನ್ನು ಪಡೆಯಲು ರಾಜ್ಯ ಸರ್ಕಾರ ನಿರಾಕರಿಸಿದೆ ಎಂದು ಕೇಂದ್ರ ಇಂಧನ ಖಾತೆ ಸಚಿವ ಪಿಯುಶ್ ಗೋಯಲ್ ಆಪಾದಿಸಿದ್ದಾರೆ.

ಇದು ರಾಜ್ಯಕ್ಕೆ ಸಂಬಂಧಿಸಿದ ಕತೆಯಾದರೆ, ಅತ್ತ ದೆಹಲಿಯಲ್ಲಿ ಕೇಂದ್ರ ಸರ್ಕಾರದ ಉಜ್ವಲ ಭಾರತ ಯೋಜನೆ ವಿವರಿಸುವಾಗಲೇ ಪದೇ ಪದೆ ಕರೆಂಟು ಕೈಕೊಟ್ಟು ಸಚಿವರನ್ನು ಪೇಚಿಗೆ ಸಿಲುಕಿಸಿದ ವಿದ್ಯಮಾನವೂ ವರದಿಯಾಗಿದೆ.

ಕಳೆದ ಮಾರ್ಚ್ ನಲ್ಲಿ ಶರಾವತಿ ಜಲವಿದ್ಯುತ್ ಗಾರ ಬೆಂಕಿಯಿಂದ ಸ್ಥಗಿತಗೊಂಡಿದ್ದರಿಂದ ಕರ್ನಾಟಕದಲ್ಲಿ ಭಾರೀ ವಿದ್ಯುತ್ ಸಮಸ್ಯೆ ಎದುರಾಯಿತು. ರಾಜ್ಯವನ್ನು ಪ್ರತಿನಿಧಿಸುವ ಕೇಂದ್ರ ಸಚಿವರಾದ ಸದಾನಂದಗೌಡ, ಅನಂತಕುಮಾರ್ ಹಾಗೂ ಸಂಸದರ ಒತ್ತಾಯದ ಮೇರೆಗೆ ಹೆಚ್ಚುವರಿಯಾಗಿ 200 ಮೆಗಾವ್ಯಾಟ್ ವಿದ್ಯುತ್ ಕರ್ನಾಟಕಕ್ಕೆ ವಿಶೇಷವಾಗಿ ನೀಡಲಾಯಿತು. ಆದರೆ ರಾಜ್ಯ ಸರ್ಕಾರ ನಮ್ಮ ವಿದ್ಯುತ್ ಅನ್ನು ನಿರಾಕರಿಸಿ, ಖಾಸಗಿ ಸಂಸ್ಥೆಗಳಿಂದಲೇ ಖರೀದಿ ಮಾಡಲು ಮುಂದಾಯಿತು. ಯಾವ ಕಾರಣಕ್ಕೆ ರಾಜ್ಯ ಸರ್ಕಾರ ಇಂತಹ ನಿರ್ಣಯ ಕೈಗೊಂಡಿತು ಎಂಬುದು ಯಕ್ಷಪ್ರಶ್ನೆಯಾಗಿದೆ.

ಕೇಂದ್ರ ನಿಗದಿಪಡಿಸಿದ ವಿದ್ಯುತ್ ದರವನ್ನೇ ಅಂದು ರಾಜ್ಯಕ್ಕೂ ನಿಗದಿಪಡಿಸಲಾಗಿತ್ತು. ಪ್ರತಿ ಯುನಿಟ್‍ಗೆ ಒಂದೆರಡು ದಿನದ ಮಟ್ಟಿಗೆ ದರ ಹೆಚ್ಚಳ ಎಂದು ಕಂಡು ಬಂದರೂ ದೀರ್ಘಕಾಲಕ್ಕೆ ಇದು ಭಾರೀ ಉಪಯುಕ್ತ. ಆದರೆ ರಾಜ್ಯ ಸರ್ಕಾರ ನಮ್ಮ ಸಹಕಾರವನ್ನು ನಿರಾಕರಿಸಿದೆ. ಈ ಭಾಗದ ಎಲ್ಲಾ ರಾಜ್ಯಗಳಿಗೂ ಅಗತ್ಯವಿರುವ ಕಲ್ಲಿದ್ದಲನ್ನು ಪೂರೈಸಿದ್ದರಿಂದ ವಿದ್ಯುತ್ ಎಂದಿನಂತೆ ಉತ್ಪಾದನೆಗೊಂಡು ಗ್ರಾಹಕರ ಬೇಡಿಕೆಯನ್ನು ಸರ್ಕಾರಗಳು ಈಡೇರಿಸಿವೆ ಎಂದು ದೆಹಲಿಯಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ ಸುದ್ದಿಗಾರರಿಗೆ ಸಚಿವರು ತಿಳಿಸಿದರು.

ಅಂದಹಾಗೆ, ಸಚಿವರು ದೆಹಲಿಯಲ್ಲಿ ತಮ್ಮ ಸಚಿವಾಲಯದ ಸಾಧನೆ ಹೇಳುತ್ತಿರುವಾಗಲೇ ಎರಡು ತಾಸಿನ ಅವಧಿಯಲ್ಲಿ ವಿದ್ಯುತ್ ಹಲವು ಸಾರಿ ಬಂದು-ಹೋಗುವ ಆಟವಾಡಿತು. ಮುಜುಗರವನ್ನು ಮೀರುವ ಪ್ರಯತ್ನದಲ್ಲಿ ಪಿಯೂಶರು ತಮಾಷೆ ಮಾಡಿದರು- ‘ನಿಮ್ಮ ಕಾರ್ಯಕ್ರಮದಲ್ಲಿ ಆಗಾಗ ಕರೆಂಟು ಹೋಗುತ್ತಿರಬೇಕು. ಆಗ ವಿಶ್ರಮಿಸಿಕೊಳ್ಳುವುದಕ್ಕೂ ಮೊದಲು ನಡೆಯಬೇಕಿರುವ ದೂರ ಎಷ್ಟು ಎಂಬುದು ತಿಳಿಯುತ್ತದೆ ಅಂತ ಹೆಂಡತಿ ಹೇಳುತ್ತಿರುತ್ತಾಳೆ. ಅವಳ ಮಾತು ಕೇಳಿಯೋ ಏನೋ ಇಲ್ಲಿಯೂ ಕರೆಂಟು ಹೋಯ್ತು’ ಅಂತ ಚಟಾಕಿ ಹಾರಿಸಿದರು.

ಕೆಪಿಸಿಸಿ ಅಧ್ಯಕ್ಷರಿಗೆ ಸಮರ್ಥನೆ ನೀಡುತ್ತೇನೆ: ಆಂಜನೇಯ

ಸುಲಿಗೆ ಮಾಡುವ ಖಾಸಗಿ ಶಿಕ್ಷಣ ಸಂಸ್ಥೆಗಳು ವೇಶ್ಯಾವಾಟಿಕೆಗಿಂತ ಕಡೆ ಎಂಬ ವಿವಾದಾದ್ಮಕ ಹೇಳಿಕೆ ಕುರಿತು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಅವರಿಗೆ ಸಮಜಾಯಿಷಿ ನೀಡುತ್ತೇನೆ ಎಂದು ಸಮಾಜ ಕಲ್ಯಾಣ ಸಚಿವ ಎಚ್.ಆಂಜನೇಯ ತಿಳಿಸಿದ್ದಾರೆ.

ನಾನು ಸಮಾರಂಭವೊಂದರಲ್ಲಿ ಭಾಗಿಯಾಗಿದ್ದಾಗ ಸಾಲ, ಸೋಲ ಮಾಡಿ, ಚಿನ್ನ ಮಾರಿ ಮಕ್ಕಳನ್ನು ಶಾಲೆಗೆ ಸೇರಿಸಿದ ಹೆಂಗಸೊಬ್ಬರು ನನ್ನ ಬಳಿ ಅವಲತ್ತುಕೊಂಡರು. ಆ ಮಾತು ಹೇಳಿ ನನ್ನ ಕರುಳು ಹಿಂಡಿದಂತಾಯಿತು. ಅದಕ್ಕಾಗಿ ಈ ಮಾತು ಹೇಳಿದೆ. ನಾನು ನಿರ್ದಿಷ್ಟವಾಗಿ ಯಾರ ಹೆಸರನ್ನೂ ಉಲ್ಲೇಖಿಸಿಲ್ಲ. ಅಥವಾ ಶಿಕ್ಷಣ ಸಂಸ್ಥೆಗಳನ್ನು ವೇಶ್ಯಾವಾಟಿಕೆ ಅಡ್ಡೆಗಳಿದ್ದಂತೆ, ಕೇಂದ್ರಗಳಿದ್ದಂತೆ ಎಂದು ಹೇಳಿಲ್ಲ. ಬದಲಿಗೆ ಹಲವು ಶಿಕ್ಷಣ ಸಂಸ್ಥೆಗಳು ವೇಶ್ಯಾವಾಟಿಕೆಗಳಿಗಿಂತಲೂ ಕಡೆ ಎಂದು ಹೇಳಿದ್ದೇನೆ ಎಂದಿದ್ದಾರೆ ಸಚಿವರು.

ನೀಟ್ ಸುಗ್ರೀವಾಜ್ಞೆ

ವೈದ್ಯಕೀಯ ಶಿಕ್ಷಣಕ್ಕೆ ಸಾಮಾನ್ಯ ಪ್ರವೇಶ ಪರೀಕ್ಷೆ ಕುರಿತಂತೆ ಉದ್ಭವಿಸಿದ್ದ ಸಾಕಷ್ಟು ಗೊಂದಲಕ್ಕೆ ಕೊನೆಗೂ ತೆರೆ ಬಿದ್ದಿದೆ. ಮೇ 9ರಂದು ದೇಶದಾದ್ಯಂತ ನೀಟ್ ಜಾರಿಗೊಳಿಸುವ ಸುಪ್ರೀಂ ಕೋರ್ಟ್ ಆದೇಶವನ್ನು ಮುಂದಿನ ವರ್ಷದಿಂದ ಜಾರಿಗೊಳಿಸಲು ಶುಕ್ರವಾರ ಕೇಂದ್ರ ಸಂಪುಟ ಸಭೆಯಲ್ಲಿ ಸುಗ್ರೀವಾಜ್ಞೆ ಹೊರಡಿಸಿದೆ. ವಿವರ ಇಲ್ಲಿದೆ.

ನಮ್ಮಲ್ಲೀಗ ಮಳೆ ತಂಪು, ಆದ್ರೆ ರಾಜಸ್ಥಾನದ ಕತೆ ಗೊತ್ತಾ?

ಕಳೆದ ಒಂದುವಾರದಿಂದ ರಾಜ್ಯದ ಹಲವೆಡೆ ಮಳೆ ಬಿದ್ದು ಜನ ತಂಪಾದ ವಾತಾವರಣ ಅನುಭವಿಸುತ್ತಿದ್ದಾರೆ. ಆದರೆ, ಇದು ದೇಶದ ಎಲ್ಲ ಸ್ಥಳಗಳ ಪರಿಸ್ಥಿತಿಯಾಗಿಲ್ಲ. ರಾಜಸ್ಥಾನದಲ್ಲಿ ಬಿಸಿಲ ಬೇಗೆ ತೀವ್ರ ಪ್ರಮಾಣದಲ್ಲಿ ಹೆಚ್ಚಿತ್ತು, ಉಷ್ಣಾಂಶ 51 ಡಿಗ್ರಿ ಸೆಲ್ಸಿಯಸ್ ಗೆ ಹೆಚ್ಚಿದೆ. ಇನ್ನು ಉತ್ತರ ಹಾಗೂ ಪಶ್ಚಿಮ ಭಾರತದಲ್ಲಿ ಮುಂದಿನ ಹತ್ತು ದಿನಗಳ ಕಾಲ ಇದೇ ರೀತಿಯ ಪರಿಸ್ಥಿತಿ ಮುಂದುವರಿಯುವ ಸಾಧ್ಯತೆಗಳಿವೆ. ಪರಿಣಾಮ ಸರ್ಕಾರ ಸ್ಥಳೀಯ ಆಸ್ಪತ್ರೆಗಳಲ್ಲಿ ಅಗತ್ಯ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದೆ.

ಅನುತ್ತೀರ್ಣ ವಿದ್ಯಾರ್ಥಿಗಳಿಗೆ ವಿಶೇಷ ತರಗತಿ ನಡೆಸಲು ಸೂಚನೆ

ಇತ್ತೀಚೆಗೆ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ತಕ್ಷಣವೇ ಕಡ್ಡಾಯ ವಿಶೇಷ ತರಗತಿ ನಡೆಸಲು ರಾಜ್ಯದ ಎಲ್ಲ ಪ್ರೌಢಶಾಲೆಗಳಿಗೆ ಸರ್ಕಾರ ಕಟ್ಟುನಿಟ್ಟಿನ ಸೂಚನೆ ನೀಡಿದೆ.

ಈ ಸಂಬಂಧ ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಯು ಸುತ್ತೋಲೆ ಹೊರಡಿಸಿದ್ದು, ಕಡ್ಡಾಯವಾಗಿ ಸರ್ಕಾರಿ, ಅನುದಾನ ಮತ್ತು ಅನುದಾನ ರಹಿತ ಪ್ರೌಢಶಾಲೆಗಳಲ್ಲಿ ವಿಶೇಷ ತರಗತಿ ನಡೆಸಲು ನಿರ್ದೇಶನ ನೀಡಿದೆ. ಒಂದು ವೇಳೆ ಶಿಕ್ಷಕರು ರಜೆ ನೆಪ ಹೇಳಿ ತರಗತಿಗಳನ್ನು ನಡೆಸದೆ ಗೈರುಹಾಜರಾದರೆ ಅಂತಹ ಶಾಲೆಗಳು ಇಲ್ಲವೆ ಶಿಕ್ಷಕರ ವಿರುದ್ಧ ಕಟ್ಟುನಿಟ್ಟಿನ ಶಿಸ್ತುಕ್ರಮ ಜರುಗಿಸುವುದಾಗಿ ಮಂಡಳಿ ಎಚ್ಚರಿಕೆ ನೀಡಿದೆ. ಮೇ 16 ರಂದು ಪ್ರಕಟಗೊಂಡ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಕಳೆದ ವರ್ಷಕ್ಕಿಂತ ಈ ಬಾರಿ ಶೇ.2 ರಷ್ಟು ಫಲಿತಾಂಶ ಕುಸಿತ ಕಂಡಿತ್ತು. 2014-15 ರಲ್ಲಿ ಶೇ.81.82 ಫಲಿತಾಂಶ ಬಂದರೆ ಈ ಬಾರಿ ಶೇ.79.16 ಫಲಿತಾಂಶ ಬಂದಿತ್ತು.

ಇನ್ನುಳಿದಂತೆ ನೀವು ತಿಳಿಯಬೇಕಿರೋ ಸುದ್ದಿ ಸಾಲುಗಳು..

  • ಕೇರಳದಲ್ಲಿ ಅಧಿಕಾರ ಹಿಡಿದ ಎಲ್ ಡಿಎಫ್, ಮುಖ್ಯಮಂತ್ರಿ ಸ್ಥಾನಕ್ಕೆ ಪಿನರಾಯಿ ವಿಜಯನ್ ಅವರ ಹೆಸರನ್ನು ಆಯ್ಕೆ ಮಾಡಿದೆ. ಹಿರಿಯ ನೇತಾರ ವಿ.ಎಸ್ ಅಚ್ಯುತಾನಂದನ್ ಹೆಸರು ಈ ಮೊದಲು ಕೇಳಿಬಂದಿತ್ತು.
  • ಸೈಕ್ಲೋನ್ ನಿಂದ ತತ್ತರಿಸಿರುವ ಶ್ರೀಲಂಕಾಕ್ಕೆ ಭಾರತ ತನ್ನ ನೆರವಿನ ಹಸ್ತ ಚಾಚಿದ್ದು, ಎರಡು ನೌಕಾ ಹಡಗು ಹಾಗೂ ಸಿ-17 ವಿಮಾನವನ್ನು ಪರಿಹಾರ ಕಾರ್ಯಚರಣೆಗಾಗಿ ಕಳುಹಿಸಿಕೊಟ್ಟಿದೆ. ಇದೇ ವೇಳೆ ದ್ವೀಪ ರಾಷ್ಟ್ರಕ್ಕೆ ಬೇಕಾದ ಎಲ್ಲ ನೆರವನ್ನು ನೀಡಲು ಶುಕ್ರವಾರ ಕೇಂದ್ರ ಗೃಹ ಚಚಿವಾಲಯದಲ್ಲಿ ನಡೆದ ಸಭೆಯಲ್ಲಿ ನಿರ್ಧರಿಸಲಾಯಿತು.
  • ಸಿಬಿಎಸ್ಇ 12ನೇ ತರಗತಿಯ ಫಲಿತಾಂಶ ಶನಿವಾರ ಮಧ್ಯಾಹ್ನ ಅಂತರ್ಜಾಲದಲ್ಲಿ ಪ್ರಕಟವಾಗಲಿದೆ. cbse.nic.in ವೆಬ್ ತಾಣದಲ್ಲಿ ಮಧ್ಯಾಹ್ನ 12 ಗಂಟೆ ನಂತರ ಫಲಿತಾಂಶ ಪ್ರಕಟಿಸಲಾಗುವುದು. ಈ ಬಾರಿ 14,99,122 ವಿದ್ಯಾರ್ಥಿಗಳು ಈ ಪರೀಕ್ಷೆ ಬರೆದಿದ್ದರು.
  • ಬಿಜೆಪಿ ರಾಜ್ಯಸಭೆ ಸಂಸದ ತರುಣ್ ವಿಜಯ್ ಮೇಲೆ ಶುಕ್ರವಾರ ತೀವ್ರ ಪ್ರಮಾಣದ ಹಲ್ಲೆಯಾಗಿದೆ. ಉತ್ತರಾಖಂಡದ ಮುಸ್ಸುರಿ ಪ್ರದೇಶದ ಸಿಲ್ಗುರ್ ದೇವಾಲಯಕ್ಕೆ ದಲಿತರ ಪ್ರವೇಶಕ್ಕೆ ಮುಂದಾದ ಪರಿಣಾಮ ಇವರ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಪ್ರಾಥಮಿಕ ವರದಿಗಳು ತಿಳಿಸಿವೆ.

ಇವತ್ತಿನ ಮುಖ್ಯ ಸುದ್ದಿ ಕಾಂಗ್ರೆಸ್ ತಳಮಳ. ದಿಗ್ವಿಜಯ್ ಸಿಂಗ್, ಶಶಿ ತರೂರ್ ಅಂಥವರೇ ಅಧಿನಾಯಕರ ಅಂತರಾವಲೋಕನದ ಮಾತನ್ನು ನಿರಾಕರಿಸಿದ್ದಾರೆ. ಈಗ ಬೇಕಿರುವುದು ಕ್ರಮ ಹೊರತು ಆತ್ಮಾವಲೋಕನ ಅಲ್ಲ ಎಂದಿದ್ದಾರೆ.

ತೃಣಮೂಲದ ಗೆಲುವೇನೋ ಸರಿ. ಆದರೆ ನಾರದ ಕುಟುಕು ಕಾರ್ಯಾಚರಣೆಯಲ್ಲಿ ಬೆತ್ತಲಾಗಿದ್ದವರೂ ಭಾರಿ ಅಂತರದಲ್ಲೇ ಗೆದ್ದುಬಿಟ್ಟರಲ್ಲ? ಜನ ಭ್ರಷ್ಟಾಚಾರಕ್ಕೆ ತಲೆಕೆಡಿಸಿಕೊಳ್ತಾರೆ ಅನ್ನೋದು ನಿಜವಾ ಎಂಬ ಅನುಮಾನ ಬಂದುಬಿಡುತ್ತೆ!

ಕರ್ನಾಟಕ ಚಿತ್ರರಂಗದ ಮಟ್ಟಿಗೆ ಜೀವಮಾನ ಪ್ರಶಸ್ತಿಗೆ ಅರ್ಥವಿದೆಯಾ? ಪ್ರಶ್ನಿಸಿದ್ದಾರೆ ಎನ್. ಎಸ್. ಶ್ರೀಧರಮೂರ್ತಿ.

ಈ ಮೆಕ್ಸಿಕೊ ರಾಯಭಾರಿ ಬಳಿ ಗೂಟದ ಕಾರಿಲ್ಲ, ಆಟೊರಿಕ್ಷಾವೇ ಎಲ್ಲ!

ಪ್ರತಿಬಂಧ ತೆರವಾಗುತ್ತಲೇ ಎವರೆಸ್ಟ್ ಏರಿದವರು ಭಾರತದ ಯೋಧರು ಮತ್ತು ಈ ಪೋಲೀಸ್ ಹೀರೋ

Leave a Reply