ಸೋನಿಯಾ- ರಾಹುಲ್ ಆಪ್ತ ದಿಗ್ವಿಜಯ ಸಿಂಗರೇ ಕಾಂಗ್ರೆಸ್ಸಿಗೆ ಸರ್ಜರಿ ಬೇಕೆನ್ನುತ್ತಿದ್ದಾರೆ ಅಂದಮೇಲೆ ರೋಗದ ತೀವ್ರತೆ ಇನ್ನೆಷ್ಟಿರಬೇಕು?!

ಡಿಜಿಟಲ್ ಕನ್ನಡ ಟೀಮ್

ಬರೀ ಸೋಲಿನ ಸರಮಾಲೆಯನ್ನೇ ಧರಿಸುತ್ತಿರುವ ಕಾಂಗ್ರೆಸ್ ನ ರಾಷ್ಟ್ರ ನಾಯಕತ್ವದ ವಿರುದ್ಧ ಕೊನೆಗೂ ಗಂಡುಧ್ವನಿಯೊಂದು ಕೇಳಿಬಂದಿದೆ. ಅದೂ ಸೋನಿಯಾ ಗಾಂಧಿ ಕುಟುಂಬದ ಪರಮಾಪ್ತ ದಿಗ್ವಿಜಯ್ ಸಿಂಗ್ ಈ ಧ್ವನಿಯ ವಾರಸುದಾರ ಎಂಬುದು ಅದಕ್ಕೆ ಮತ್ತಷ್ಟು ಗಟ್ಟಿತನ ತಂದಿದೆ.

‘ಸೋಲುಗಳ ಆತ್ಮಾವಲೋಕನ ಮಾಡಿಕೊಂಡು ಸಾಕಾಗಿ ಹೋಗಿದೆ. ಪಂಚರಾಜ್ಯಗಳ ಚುನಾವಣೆ ಬೇಸರ ತಂದಿದೆ. ಆದರೆ ಈ ಫಲಿತಾಂಶ ಅನಿರೀಕ್ಷಿತವೇನೂ ಆಗಿರಲಿಲ್ಲ. ಹೀಗಾಗಿ ಪಕ್ಷಕ್ಕೆ ಸರ್ಜರಿ ಆಗಬೇಕಿದೆ’ – ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿಯೂ ಆಗಿರುವ ಮಧ್ಯಪ್ರದೇಶ ಮಾಜಿ ಮುಖ್ಯಮಂತ್ರಿ ದಿಗ್ವಿಜಯ್ ಸಿಂಗ್ ಮಾಡಿರುವ ಟ್ವೀಟ್ ಪಕ್ಷದಲ್ಲಿ ತೀವ್ರ ಸಂಚಲನ ತಂದಿದೆ.

ದಿಗ್ವಿಜಯ್ ಸಿಂಗ್ ಯಾರ ಹೆಸರನ್ನೂ ಹೇಳದಿದ್ದರೂ ಅವರ ಸರ್ಜರಿಯ ಮೂಲ ರಾಷ್ಟ್ರ ನಾಯಕತ್ವದ ಬುಡಕ್ಕೆ ಹೋಗಿ ನಿಲ್ಲುತ್ತದೆ ಎಂಬುದರಲ್ಲಿ ಯಾವುದೇ ಅನುಮಾನ ಇಲ್ಲ. ಕಾಂಗ್ರೆಸ್ ನ ಬಹಳಷ್ಟು ನಾಯಕರ ಅಭೀಪ್ಸೆ ಇದೇ ಆಗಿದ್ದರೂ ಧೈರ್ಯದ ಕೊರತೆಯಿಂದ ಅದು ಎದೆಯೊಳಗೇ ಮರಿ ಹಾಕುತ್ತಿದೆ. ಇಂಥ ಸಂದರ್ಭದಲ್ಲಿ ದಿಗ್ವಿಜಯ್ ಸಿಂಗ್ ಮಾತು ಈ ಎದೆಯೊಳಗಣ ಮರಿಗಳಿಗೂ ಒಂದಷ್ಟು ವಾಕ್ ಸ್ವಾತಂತ್ರ್ಯ ತಂದುಕೊಡಬಹುದಾದ ಸಾಧ್ಯತೆಗಳು ಇವೆ.

ಇದು ದಿಗ್ವಿಜಯ್ ಸಿಂಗ್ ಟ್ವೀಟ್ ಸಾರವಾದರೆ, ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆ ಜತೆ ಮಾತನಾಡುತ್ತ ಇನ್ನೂ ಹೆಚ್ಚಿನ ಅಸಮಾಧಾನ ಹೊರಹಾಕಿದ್ದಾರವರು. ಪ್ರತಿಸಾರಿ ಸೋಲನುಭವಿಸಿದಾಗಲೂ ಸೋನಿಯಾ- ರಾಹುಲ್ ಜೋಡಿ ಇನ್ನುಮುಂದೆ ಮತ್ತಷ್ಟು ಪರಿಶ್ರಮ ಪಡುವ, ಆತ್ಮಾವಲೋಕನ ಮಾಡುವ ಮಾತುಗಳನ್ನಾಡುವುದು ಎಲ್ಲರಿಗೂ ಗೊತ್ತಿರುವ ವಿಷಯ. ಚುನಾವಣೆ ಉಸ್ತುವಾರಿ ಹೊತ್ತವರು ಮತ್ತು ಪ್ರಮುಖ ನಾಯಕರಿಗೆ ವರದಿ ಸಲ್ಲಿಸಲು ಹೇಳುವುದೂ ರಿವಾಜಾಗಿದೆ. ಈ ಪ್ರಕ್ರಿಯೆಗೆ ನೇರ ವಿರೋಧ ದಿಗ್ವಿಜಯ್ ಮಾತುಗಳಲ್ಲಿ ವ್ಯಕ್ತವಾಗಿದೆ. ‘ಲೋಕಸಭೆ ಚುನಾವಣೆ ನಂತರ ರಾಹುಲ್ ಗಾಂಧಿ ಪ್ರಮುಖ ನಾಯಕರಿಗೆಲ್ಲ 2015 ಫೆಬ್ರವರಿ 15ರ ಡೆಡ್ಲೈನ್ ಹಾಕಿ ವರದಿ ಕೋರಿದ್ದರು. ನಾನೂ ಸೇರಿದಂತೆ ಬಹಳಷ್ಟು ಮಂದಿ ವರದಿ ಸಲ್ಲಿಸಿದ್ದೆವು. ಇದೀಗ ಮೇ 2016. ಆ ವರದಿಗಳ ಆಧಾರದಲ್ಲಿ ಯಾವ ಕ್ರಮವನ್ನೂ ಕೈಗೊಂಡಿಲ್ಲ. ಅಸ್ಸಾಮಿನಲ್ಲಿ ಹಿಮಂತ ಸರ್ಮರನ್ನು ದೂರ ಮಾಡಿಕೊಳ್ಳುವ ಅಗತ್ಯ ಕಾಂಗ್ರೆಸ್ಸಿಗಿರಲಿಲ್ಲ. ಹಿಮಂತ ಹೊರಹೋಗಿ ಬಿಜೆಪಿ ಜತೆ ಕೈಜೋಡಿಸಿದ್ದರಿಂದ 10-15 ಸ್ಥಾನಗಳು ಕೈಬಿಟ್ಟುಹೋದವು.’ ಎಂದಿದ್ದಾರೆ ದಿಗ್ವಿಜಯ್ ಸಿಂಗ್.

ಕಾಂಗ್ರೆಸ್ ಸಂಸದ ಶಶಿ ತರೂರ್ ಸಹ ಇದೇ ಧಾಟಿಯ ಮಾತುಗಳನ್ನಾಡಿದ್ದಾರೆ. ಆತ್ಮಾವಲೋಕನವಲ್ಲ, ನಿಖರ ಕ್ರಮಗಳು ಬೇಕು ಎಂಬುದೇ ಅವರ ಮಾತು ಸಹ. ಆದರೆ ತರೂರ್ ವರಸೆ ತುಸು ಭಿನ್ನ. ‘ಸಂಘಟನೆಯಲ್ಲಿ ಆಮೂಲಾಗ್ರ ಬದಲಾವಣೆ ಆಗಲಿ. ಜತೆಗೆ ಅಧ್ಯಕ್ಷ ಪದಕ್ಕೆ ಕಾದಿರುವಂತೆ ಭಾಸವಾಗಿರುವ ರಾಹುಲ್ ಗಾಂಧಿ ತಡವಿಲ್ಲದೇ ಆ ಜವಾಬ್ದಾರಿ ವಹಿಸಿಕೊಳ್ಳಬೇಕು’ ಎಂದಿದ್ದಾರೆ. ಇದು ಮೇಲ್ನೋಟಕ್ಕೆ ರಾಹುಲ್ ಭಟ್ಟಂಗಿತನದ ಭಾಗವಾಗಿ ಕಾಣಬಹುದಾದರೂ, ಪರೋಕ್ಷವಾಗಿ ರಾಹುಲ್ ಗಾಂಧಿಯ ಅಂತಿಮ ಪ್ರಯತ್ನವೂ ಮುಗಿದುಹೋಗಿ ಹೊಸದಾರಿ ತೆರೆದುಕೊಳ್ಳಲಿ ಎಂದು ತರೂರ್ ಸೂಚಿಸುತ್ತಿರುವಂತಿದೆ.

ಕಳೆದ ಲೋಕಸಭೆ ಚುನಾವಣೆ ಪೂರ್ವ ಹಾಗೂ ಉತ್ತರದಲ್ಲಿ ನಡೆದ ಬಹುತೇಕ ರಾಜ್ಯಗಳ ವಿಧಾನಸಭೆ ಚುನಾವಣೆಗಳಲ್ಲಿ ರಾರಾಜಿಸಿದ ಕಾಂಗ್ರೆಸ್ ‘ದಂಡ’ ಯಾತ್ರೆ ಗುರುವಾರ ಫಲಿತಾಂಶ ಕಂಡ ಪಂಚರಾಜ್ಯಗಳಲ್ಲೂ ಮುಂದುವರಿದಿದೆ. ‘ಈ ಸೋಲಿಗೆ ರಾಷ್ಟ್ರೀಯ ನಾಯಕತ್ವ ಹೊಣೆಯಲ್ಲ, ಅದೇನಿದ್ದರೂ ಸ್ಥಳೀಯ ಮುಖಂಡರದು’ ಎಂದು ಲೋಕಸಭೆಯಲ್ಲಿ ಕಾಂಗ್ರೆಸ್ ನಾಯಕರಾಗಿರುವ ಮಲ್ಲಿಕಾರ್ಜುನ ಖರ್ಗೆ ತಿಪ್ಪೇ ಸಾರಿಸಿದ್ದರೂ ಅದರಲ್ಲಿ ಸತ್ಯ ಇಲ್ಲ ಎಂಬುದು ಉಳಿದೆಲ್ಲರಿಗಿಂತ ಚೆನ್ನಾಗಿ ಅವರಿಗೇ ಗೊತ್ತು. ಒಂದೊಂದೇ ರಾಜ್ಯದಲ್ಲಿ ಪಕ್ಷ ನಾಪತ್ತೆ ಆಗುತ್ತಿರುವುದನ್ನು ಸಮರ್ಥಿಸಿಕೊಳ್ಳುವಷ್ಟು ತಾಕತ್ತು ಅವರ ಈ ‘ಋಣಮುಕ್ತಿ’ ಹೇಳಿಕೆಗೆ ಇಲ್ಲ.

ಕೇಂದ್ರದ ಯುಪಿಎ-2 ಸರಕಾರ ಕಳೆದ ಚುನಾವಣೆಯಲ್ಲಿ ಇನ್ನಿಲ್ಲದಂತೆ, ಲೋಕಸಭೆಯಲ್ಲಿ ಪ್ರತಿಪಕ್ಷ ನಾಯಕರ ಸ್ಥಾನಕ್ಕೂ ಅರ್ಹತೆಯಿಲ್ಲದಂತೆ ನೆಲಕಚ್ಚಿದ ಸಂದರ್ಭದಲ್ಲೇ ನಾಯಕತ್ವದ ವಿರುದ್ಧ ಕಾಂಗ್ರೆಸ್ ನೊಳಗೆ ಅಸಮಾಧಾನ ಹೊಗೆಯಾಡುತ್ತಿತ್ತು. ಆದರೆ ಬಹಿರಂಗ ಹೇಳಿಕೆ ಕೊಟ್ಟು ಅರಗಿಸಿಕೊಳ್ಳುವ ವಿಶ್ವಾಸ ಯಾರಿಗೂ ಇರಲಿಲ್ಲ. ಹೀಗಾಗಿ ಸೋನಿಯಾ ಗಾಂಧಿ ಅವರ ಅಧ್ಯಕ್ಷತೆ ಹಾಗೂ ಪುತ್ರ ರಾಹುಲ್ ಗಾಂಧಿ ಉಪಾಧ್ಯಕ್ಷತೆ ಜತೆಜತೆಗೆ ಸೋಲಿನ ಸರಮಾಲೆಯೂ ಮುಂದುವರಿಯಿತು. ಮಧ್ಯಪ್ರದೇಶ, ನವದೆಹಲಿ, ಬಿಹಾರ ಸೇರಿದಂತೆ ಚುನಾವಣೆ ನಡೆದ ಕಡೆಯೆಲ್ಲೆಲ್ಲ ಅದರ ಪ್ರಸ್ತುತತೆ ಸ್ಪರ್ಧೆಗಷ್ಟೇ ಸೀಮಿತವಾಯಿತೇ ಹೊರತು ಒಂದೇ ಒಂದು ದೊಡ್ಡ ಗೆಲುವನ್ನು ಬಾಚಿಕೊಳ್ಳಲು ಆಗಲಿಲ್ಲ. ಇತ್ತೀಚೆಗೆ ನಡೆದ ಚುನಾವಣೆ ಪೈಕಿ ಅದು ಅಧಿಕಾರದಲ್ಲಿದ್ದ ಅಸ್ಸಾಂ ಮತ್ತು ಕೇರಳ ಕಳೆದುಕೊಂಡಿದೆ. ಪಶ್ಚಿಮ ಬಂಗಾಳ ಮತ್ತು ತಮಿಳುನಾಡಿನಲ್ಲಿ ಮಿಸುಕಾಡಲೂ ಆಗಿಲ್ಲ. ಕೇಂದ್ರಾಡಳಿತ ಪ್ರದೇಶ ಪುದುಚೇರಿಯಲ್ಲಿ ಮಾತ್ರ ಡಿಎಂಕೆ ಜತೆ ದಡ ಸೇರಿಸಿದೆ. ಕರ್ನಾಟಕ ಒಂದನ್ನು ಹೊರತುಪಡಿಸಿ ಪ್ರಮುಖ ರಾಜ್ಯಗಳಲ್ಲಿ ಅದರ ವಿಳಾಸ ನಾಪತ್ತೆ ಆಗಿದೆ.

ನಿರಂತರ ಸೋಲು, ರಾಹುಲ್ ಗಾಂಧಿ ಅವರ ಬಾಲಿಶ ಹೇಳಿಕೆಗಳು, ಆಗಸ್ತಾ ವೆಸ್ಟ್ ಲ್ಯಾಂಡ್ ಹಗರಣದಿಂದ ಗುಪ್ತಗಾಮಿನಿಯಾಗಿ ಹರಿಯುತ್ತಿದ್ದ ಆಕ್ರೋಶ ಸ್ಫೋಟಕ್ಕೆ ಇದೀಗ ಪಂಚರಾಜ್ಯಗಳ ಚುನಾವಣೆ ಫಲಿತಾಂಶ ವೇದಿಕೆ ಕಲ್ಪಿಸಿಕೊಟ್ಟಿದ್ದು, ದಿಗ್ವಿಜಯ್ ಸಿಂಗ್ ಟ್ವೀಟ್ ಮೂಲಕ ಅದನ್ನು ಬಳಸಿಕೊಂಡಿದ್ದಾರೆ.

ದುರ್ಬಲ ನಾಯಕತ್ವ ಪಕ್ಷ ಗಟ್ಟಿ ಮಾಡದು, ಬದಲಾವಣೆ ಬೇಕು ಎಂಬುದು ಅನೇಕರ ಆಶಯವಾದರೂ, ಅದನ್ನು ಗಾಂಧಿ ಕುಟುಂಬದೊಳಗಿನ ಪರ್ಯಾಯಕ್ಕೆ ಸೀಮಿತ ಮಾಡಿದರು. ಹೀಗಾಗಿ ರಾಹುಲ್ ಬದಲಿಗೆ ಪ್ರಿಯಾಂಕ ಗಾಂಧಿ ಅವರಿಗೆ ಪಟ್ಟ ಕಟ್ಟಬೇಕು ಎಂಬಂತಹ ಸಲಹೆಗಳು ಆಗಾಗ್ಗೆ ಬಂದು ಹೋಗಿವೆ, ಬಂದು ಹೋಗುತ್ತಿವೆ. ಆದರೆ ಇದೀಗ ದಿಗ್ವಿಜಯ್ ಸಿಂಗ್ ಹೇಳಿಕೆ ಅದನ್ನು ಮೀರಿದ ಪರಿಭಾಷೆಯನ್ನು ಹೊಂದಿರುವಂತೆ ಕಾಣುತ್ತಿದೆ. ಕಾಂಗ್ರೆಸ್ ನಲ್ಲಿ ಸೋನಿಯಾ ಮತ್ತು ರಾಹುಲ್ ಅವರನ್ನು ಮೀರಿಸಿದ ಅನೇಕ ಸಮರ್ಥ ಮುಖಂಡರು ಇದ್ದಾರೆ. ನೆಹರೂ, ಇಂದಿರಾ ಗಾಂಧಿ, ರಾಜೀವ್ ಗಾಂಧಿ ಅವರವರೆಗೂ ಒಂದು ಹಂತಕ್ಕೆ ಫಲ ನೀಡಿದ್ದ ವಂಶಪರಂಪರೆ ಆಳ್ವಿಕೆ ಸೋನಿಯಾ ಮತ್ತು ರಾಹುಲ್ ಅವಧಿಯಲ್ಲಿ ಸೊರಗಿ ತಳ ಸೇರಿದೆ. ಬದಲಾವಣೆ ಅಗತ್ಯವನ್ನು ಸಾರಿ ಹೇಳುತ್ತಿದೆ.

ಕಾಂಗ್ರೆಸ್ ಮುಕ್ತ ಭಾರತ ಮಾಡುವುದಾಗಿ ಬಿಜೆಪಿ ಮುಖಂಡರು ಹೇಳಿಕೊಂಡು ತಿರುಗುತ್ತಿದ್ದಾರೆ. ಆದರೆ ಆ ಆವಕಾಶವನ್ನು ಕಾಂಗ್ರೆಸ್ ಮುಖಂಡರು ಯಾರಿಗೂ ಬಿಟ್ಟುಕೊಟ್ಟಿಲ್ಲ. ಅದನ್ನು ಅವರೇ ಮಾಡಿಮುಗಿಸುತ್ತಿದ್ದಾರೆ. ಅದಕ್ಕೆ ತಡೆಹಾಕೆಂಬ ಆಶಯದಿಂದ ದಿಗ್ವಿಜಯ್ ಸಿಂಗ್ ಈ ಹೇಳಿಕೆ ನೀಡಿದ್ದಾರೆ. ನೋಡಬೇಕು ಯಾರು ಹೇಗೆ ತೆಗೆದುಕೊಂಡು ಹೋಗುತ್ತಾರೆ ಎಂಬುದನ್ನು..

Leave a Reply