ಪ್ರತಿಬಂಧ ತೆರವಾಗುತ್ತಲೇ ಎವರೆಸ್ಟ್ ಏರಿದವರು ಭಾರತದ ಯೋಧರು ಮತ್ತು ಈ ಪೋಲೀಸ್ ಹೀರೋ

ಡಿಜಿಟಲ್ ಕನ್ನಡ ಟೀಮ್

ವಿಶ್ವದ ಎತ್ತರದ ಶಿಖರ ಎವರೆಸ್ಟ್ ಹತ್ತುವುದು ಕೆಲವರಿಗೆ ಗುರಿ. ವೃತ್ತಿಪರ ಪರ್ವಾತಾರೋಹಿಗಳಿಗೆ ಜೀವನದ ದೊಡ್ಡ ಕನಸು. ಮತ್ತೇ ಕೆಲವರಿಗಂತೂ ಇದೊಂದು ಹವ್ಯಾಸ. ಈ ಗುರಿಯನ್ನು ಮುಟ್ಟಿದ ಎರಡು ಸಾಧನೆಯ ಕಥೆಗಳು ಈಗ ನಮ್ಮ ಮುಂದಿವೆ. ಆ ಪೈಕಿ ಮಹಾರಾಷ್ಟ್ರದ ಪೊಲೀಸ್ ಪೇದೆ ರಫೀಕ್ ಶೇಖ್ ಮೊದಲ ಬಾರಿಗೆ ಈ ಸಾಧನೆ ಮಾಡಿದ್ದು, ಭಾರತೀಯ ಯೋಧ ರಣ್ವೀರ್ ಜಮ್ವಾಲ್ ಮೂರನೇ ಬಾರಿಗೆ ಈ ಸಾಧನೆ ಮಾಡಿದ್ದಾರೆ.

ಅಂದಹಾಗೆ, ನೇಪಾಳ ಭೂಕಂಪದ ನಂತರ ಎರಡು ವರ್ಷಗಳ ಅವಧಿಗೆ ಎವರೆಸ್ಟ್ ಚಾರಣ ನಿಷೇಧಿಸಲಾಗಿತ್ತು. ಅದು ಮುಕ್ತವಾಗುತ್ತಲೇ ಎವರೆಸ್ಟ್ ನೆತ್ತಿಯಲ್ಲಿ ಧ್ವಜ ಹುಗಿದು ಬಂದವರಲ್ಲಿ ಭಾರತೀಯ ಸೋನೆಯ ಯೋಧರು ಮತ್ತು ಪೋಲೀಸ್ ರಫಿಕ್ ಪ್ರಮುಖರು ಎಂಬುದು ರೋಮಾಂಚನದ ಸಂಗತಿಯಲ್ವೇ?

ಈ ಹಿಂದೆ ಮಾಜಿ ವಾಲಿಬಾಲ್ ಆಟಗಾರ್ತಿ ಅರುನಿಮಾ ಸಿನ್ಹಾ ಕೃತಕ ಕಾಲಿನಿಂದ ಈ ಶಿಖರವೇರಿ ಎಲ್ಲರಿಗೂ ಸ್ಫೂರ್ತಿಯಾಗಿದ್ದರು. ಈ ಎವರೆಸ್ಟ್ ಶಿಖರ ಏರುವುದೇ ಒಂದು ಸಾಧನೆ. ಸಾಮಾನ್ಯ ಪರ್ವತಾರೋಹಣಕ್ಕೂ ಎವರೆಸ್ಟ್ ಶಿಖರ ಏರುವುದಕ್ಕೂ ಸಾಕಷ್ಟು ಭಿನ್ನತೆ ಇದೆ. ಇಲ್ಲಿ ಹವಾಮಾನ ಪರ್ವತಾರೋಹಿಗಳ ಪ್ರಮುಖ ಎದುರಾಳಿ. ಹವಾಮಾನ ವೈಪರಿತ್ಯವನ್ನು ಮೆಟ್ಟಿನಿಂತು ಗುರಿ ಮುಟ್ಟುವುದೇ ಒಂದು ರೋಚಕ ಹಾದಿ. ಅದೇ ಕಾರಣಕ್ಕೆ ಯಾರೇ ಈ ಸಾಧನೆ ಮಾಡಿದರೂ ಗಮನ ಸೆಳೆಯುವುದು. ಈ ರೀತಿಯ ಉದಾಹರಣೆಗಳ ಸಾಲಿಗೆ ಈಗ ಮತ್ತೆರಡು ಸೇರ್ಪಡೆಯಾಗಿವೆ.

ಮಹಾರಾಷ್ಟ್ರದ ಔರಂಗಬಾದ್ ನ ಪುಟ್ಟ ಗ್ರಾಮವೊಂದರಲ್ಲಿ ಜನಿಸಿದ ರಫೀಕ್ ಶೇಖ್, ಮನಸ್ಸಲ್ಲಿ ಎವರೆಸ್ಟ್ ಏರುವ ಕನಸು ಮನೆ ಮಾಡಿತ್ತು. ಸತತ ಪ್ರಯತ್ನಗಳ ನಂತರ ಅವರ ಕನಸು ನನಸಾಗಿದೆ. ಅದೂ 3ನೇ ಪ್ರಯತ್ನದಲ್ಲಿ. ಈ ಹಿಂದೆ ಮಾಡಿದ ಎರಡು ಪ್ರಯತ್ನ ವೇಳೆ ಹವಾಮಾನ ವೈಪರಿತ್ಯದ ಕಾರಣ, ಗುರಿ ತಲುಪಲು ಸಾಧ್ಯವಾಗಿರಲಿಲ್ಲ.

ಈ ಬಾರಿ ಎವರೆಸ್ಟ್ ಏರಲೇಬೇಕು ಎಂಬ ಗಟ್ಟಿ ಮನಸು ಮಾಡಿದ್ದ ರಫೀಕ್, ಏಪ್ರಿಲ್ 4ರಂದು ಔರಂಗಬಾದ್ ನಿಂದ ತನ್ನ ಆರೋಹಣ ಆರಂಭಿಸಿದ್ದರು. ಮೇ 19 ರಂದು ಎವರೆಸ್ಟ್ ಶಿಖರದ ಅತ್ಯಂತ ತುತ್ತತುದಿ ಶೆರ್ಪಾ ಸೌಥ್ ಪೋಲ್ ನ 26,240 ಅಡಿ ಎತ್ತರ ತಲುಪಪವಲ್ಲಿ ಯಶಸ್ವಿಯಾಗಿದ್ದಾರೆ. ಆ ಮೂಲಕ ಈ ಸಾಧನೆ ಮಾಡಿದ ಮಹಾರಾಷ್ಟ್ರದ ಮೊದಲ ಪೊಲೀಸ್ ಪೇದೆ ಎಂಬ ಹೆಗ್ಗಳಿಕೆಗೂ ಭಾಜನರಾಗಿದ್ದಾರೆ.

ಇನ್ನು ರಣ್ವೀರ್ ಮೂರನೇ ಬಾರಿಗೆ ಈ ಶಿಖರವೇರಿದ್ದಾರೆ. 2012ರ ಮೇ 25 ರಂದು ಮೊದಲ ಬಾರಿಗೆ 8,848 ಮೀಟರ್ ಎತ್ತರದ ತುದಿ ತಲುಪಿದ್ದ ರಣ್ವೀರ್, 2013ರ ಮೇ 19 ರಂದು ಎರಡನೇ ಬಾರಿಗೆ ಎವರೆಸ್ಟ್ ಏರಿದ್ದರು. ಆ ಮೂಲಕ ಮೂರು ಬಾರಿ ಎವರೆಸ್ಟ್ ಹತ್ತಿದ ಜಮ್ಮು ಕಾಶ್ಮೀರದ ಮೊದಲ ಅಧಿಕಾರಿ ಎಂಬ ಕೀರ್ತಿ ಸಂಪಾದಿಸಿದ್ದಾರೆ. ಈ ಬಾರಿ ರಣ್ವೀರ್ ತಾನೊಬ್ಬನೇ ಅಲ್ಲದೇ, 6 ಯೋಧರ ತಂಡವನ್ನೇ ಶಿಖರ ಹತ್ತಿಸಿರುವುದು ವಿಶೇಷ. ಈ ತಂಡ ಮಾರ್ಚ್ 30ರಂದು ನವದೆಹಲಿಯಿಂದ ಹೊರಟಿದ್ದು, ಗುರುವಾರ ಬೆಳಗಿನ ಜಾವ 6 ಗಂಟೆ ಸುಮಾರಿಗೆ ಗುರಿ ಮುಟ್ಟಿದೆ.

ಈ ಬಾರಿ 6 ಯೋಧರಿಗೆ ಎವರೆಸ್ಟ್ ಏರಲು ಮಾರ್ಗದರ್ಶನ ನೀಡಿರುವ ರಣ್ವೀರ್, ಒಟ್ಟಾರೆಯಾಗಿ 17 ಯೋಧರಿಗೆ ಮಾರ್ಗದರ್ಶನ ನೀಡಿದ್ದಾರೆ. ತಾನೊಬ್ಬನೇ ಪರ್ವತ ಹತ್ತುವುದರ ಜತೆಗೆ ಇಡೀ ತಂಡವನ್ನು ಇಂತಹ ಪರಿಸ್ಥಿತಿಯಲ್ಲಿ ಮುನ್ನಡೆಸುವುದು ಮತ್ತೊಂದು ಸಾಧನೆ.

Leave a Reply