ಈ ಮೆಕ್ಸಿಕೊ ರಾಯಭಾರಿ ಬಳಿ ಗೂಟದ ಕಾರಿಲ್ಲ, ಆಟೊರಿಕ್ಷಾವೇ ಎಲ್ಲ!

ಡಿಜಿಟಲ್ ಕನ್ನಡ ಟೀಮ್

ಅಧಿಕಾರವೆಂದರೆ ಗೂಟದ ಕಾರು, ಹಿಂದೆ-ಮುಂದೆ ಅನುಯಾಯಿ- ಸಹಾಯಕರ ಗಣ ಎಂಬ ಚಿತ್ರಣ ನಮ್ಮಲ್ಲಿನದು. ಆದರೆ ದೆಹಲಿಯಲ್ಲಿರೋ  ಮೆಕ್ಸಿಕೊ ರಾಯಭಾರಿ ಮೆಲ್ಬ ಪ್ರಿಯ ಮಾತ್ರ ಅಚ್ಚರಿಯ ಮಾದರಿ. ಇವರು ಓಡಾಟಕ್ಕೆ ಬಳಸೋದು ಸಿ ಎನ್ ಜಿ ಇಂಧನ ಉಪಯೋಗಿಸುವ ಪರಿಸರಸ್ನೇಹಿ ಆಟೋ ರಿಕ್ಷಾವನ್ನು!

ಸಾಮಾನ್ಯವಾಗಿ ಯಾವುದೇ ಸರ್ಕಾರಿ ಅಧಿಕಾರಿ, ಅಥವಾ ವಿದೇಶದ ರಾಯಭಾರಿಗಳು ಸಾಮಾನ್ಯ ಕಾರ್ ಗಳನ್ನೇ ಮುಟ್ಟೋದಿಲ್ಲ. ಐಶಾರಾಮಿ ಕಾರ್ ಗಳನ್ನೇ ಬಳಸೋದು ಸಹಜ. ಆದರೆ, ಈಕೆ ಮಾತ್ರ ಆಟೋವನ್ನೇ ಬಳಸುತ್ತಾಳೆ. ಇವರು ಪ್ರತಿನಿತ್ಯ ಆಟೋದಲ್ಲೇ ಓಡಾಡುತ್ತಾರೆ. ಹಾಗೆಂದ ಮಾತ್ರಕ್ಕೆ ಬಾಡಿಗೆ ಆಟೋ ಬಳಸೋದಿಲ್ಲ. ಬದಲಿಗೆ ಪ್ರತ್ಯೇಕ ಆಟೋವನ್ನೇ ಹೊಂದಿದ್ದಾಳೆ. ಈ ಆಟೋ ಭಾರತದಲ್ಲಿರೋ ಇತರ ಆಟೋಗಳಂತೆ ಕಾಣಲ್ಲ. ಬಿಳಿ ಬಣ್ಣದ ಆಟೋ ಮೇಲೆ ಮೆಕ್ಸಿಕೊ ಎಂದು ಬರೆದು, ಮೆಕ್ಸಿಕೊ ರಾಷ್ಟ್ರಧ್ವಜವನ್ನು ಹೊಂದಿರುತ್ತದೆ.

ಆಟೋ ಮೇಲೆ ನಿಮಗ್ಯಾಕೆ ಇಷ್ಟೋಂದು ಪ್ರೀತಿ ಅಂತಾ ಕೇಳಿದ್ರೆ, ಇವರು ಕೊಡೋದು ಎರಡು ಕಾರಣ. ಅದರಲ್ಲಿ ಮೊದಲನೆಯದು, ಭಾರತದಲ್ಲಿ ಮೆಕ್ಸಿಕೊ ರಾಷ್ಟ್ರವನ್ನು ಹೀಗೆ ಭಿನ್ನವಾಗಿ ಪ್ರತಿನಿಧಿಸಿದಂತಾಗುತ್ತೆ ಅನ್ನೋದು. ಎರಡನೆಯದು ಪರಿಸರ ಮಾಲಿನ್ಯ ತಡೆಯಲು ಅಳಿಲು ಸೇವೆ.

‘ಆರಂಭದಲ್ಲಿ ನಾನು ಮೆಕ್ಸಿಕೊ ಬಗ್ಗೆ ಪ್ರಚಾರ ಮಾಡುವುದು ಹೇಗೆ ಎಂದು ಯೋಚಿಸುತ್ತಿದ್ದೆ. ಆಗ ನನಗೆ ಸಿಕ್ಕ ಹೊಳಹು ಆಟೋ. ಆಟೋ ಇಲ್ಲಿನ ಜನರ ಸಂಸ್ಕೃತಿಯ ಪ್ರತೀಕ. ಆಟೋ ಮೂಲಕ ಭಾರತೀಯರಲ್ಲಿ ಮೆಕ್ಸಿಕೊ ಬಗ್ಗೆ ಪ್ರಚಾರ ನಡೆಸುವುದು ಉತ್ತಮ ಎನಿಸಿತು. ಇನ್ನು ದೆಹಲಿಯಲ್ಲಿ ವಾಯು ಮಾಲಿನ್ಯ ಪ್ರಮಾಣ ಹೆಚ್ಚಾಗಿದ್ದು, ಇದನ್ನು ತಡೆಯುವ ನಿಟ್ಟಿನಲ್ಲಿ ಆಟೋ ಬಳಸುತ್ತಿದ್ದೇನೆ’ ಎಂದು ಮೆಲ್ಬಾ ತಿಳಿಸಿದ್ದಾರೆ.

Leave a Reply