ಭ್ರಷ್ಟಾಚಾರ ನಿಜಕ್ಕೂ ಮತದಾರನ ಕಾಳಜಿಯಾ? ನಿಮಗೆಲ್ಲೋ ಮಂಕು ಎಂಬಂತೆ ವಿಜಯದ ನಗೆ ನಕ್ಕರಲ್ಲ ಬಂಗಾಳದ ‘ನಾರದ’ ಕಳಂಕಿತರು?

ಡಿಜಿಟಲ್ ಕನ್ನಡ ವಿಶೇಷ

ಭ್ರಷ್ಟಾಚಾರ ಮುಕ್ತ ಆಡಳಿತ ಬೇಕು, ಭ್ರಷ್ಟರನ್ನು ಅಧಿಕಾರದಿಂದ ಕಿತ್ತೊಗೆಯಬೇಕು- ಇಂಥ ಘೋಷಣೆಗಳನ್ನೆಲ್ಲ ಜನ ಎಷ್ಟೊಂದು ಉತ್ಕರ್ಷದಿಂದ ಪಠಿಸುತ್ತಾರೆ. ಭ್ರಷ್ಟಾಚಾರ ಮುಕ್ತ ಭಾರತಕ್ಕೆ ಆಗ್ರಹಿಸಿ ವಾರಾಂತ್ಯದಲ್ಲಿ ಫ್ರೀಡಂ ಪಾರ್ಕಿನಲ್ಲೋ, ರಾಮಲೀಲಾ ಮೈದಾನದಲ್ಲೋ ಜಾತ್ರೆಯಂತೆ ಸೇರಿಯಾರು. ಆದರೆ ಈ ಆಶಯವನ್ನು ನಿಜಕ್ಕೂ ಎದೆಗಿಳಿಸಿಕೊಂಡು ಅನುಷ್ಠಾನಕ್ಕೆ ತರುವ ಬದ್ಧತೆ ಹೊಂದಿದ್ದಾರೆಯೇ?

ಹೀಗೊಂದು ಪ್ರಶ್ನೆ ಪ್ರತಿಬಾರಿ ಚುನಾವಣೆ ಫಲಿತಾಂಶ ಬಂದಾಗಲೂ ಚುಚ್ಚುತ್ತಿರುತ್ತದೆ. ಏಕೆಂದರೆ ಆರಿಸಿಬರುವ ಭ್ರಷ್ಟರ ಪಟ್ಟಿ ದೊಡ್ಡದೇ.

ಪಶ್ಚಿಮ ಬಂಗಾಳದಲ್ಲಿ 212 ಸ್ಥಾನಗಳ ಗೆಲುವಿನೊಂದಿಗೆ ಅಸಾಮಾನ್ಯ ವಿಜಯ ದಾಖಲಿಸಿದ ತೃಣಮೂಲ ಕಾಂಗ್ರೆಸ್ ಮತ್ತು ಅದರ ನಾಯಕಿ ಮಮತಾ ಬ್ಯಾನರ್ಜಿ ಎಲ್ಲ ಅಭಿನಂದನೆಗಳಿಗೆ ಅರ್ಹರು. ಆದರೆ, ಈ ವಿಜಯಿಗಳ ಪಟ್ಟಿಯಲ್ಲಿ, ಕ್ಯಾಮರಾ ಎದುರು ಹಸಿ ಹಸಿಯಾಗಿ ಲಂಚ ಸ್ವೀಕರಿಸಿದ ಐದು ಮಂದಿ ಭಾರೀ ಮತಗಳ ಅಂತರದಿಂದ ಗೆದ್ದು ಬಂದಿದ್ದಾರಲ್ಲ… ಇದನ್ನು ಹೇಗಂತ ವ್ಯಾಖ್ಯಾನಿಸುವುದು? ಜನ ನಿಜಕ್ಕೂ ಭ್ರಷ್ಟಾಚಾರವನ್ನು ಒಂದು ಪಿಡುಗು ಅಂತ ಭಾವಿಸಿದ್ದಾರಾ ಎಂಬ ಅನುಮಾನ ಕಾಡುತ್ತದೆ. ಏಕೆಂದರೆ ‘ನಾರದಾ ಕುಟುಕು ಕಾರ್ಯಾಚರಣೆ’ ಚಿತ್ರಣ ಜನರನ್ನು ತಾಗಿದ್ದು ಇತ್ತೀಚೆಗೆ. ಅದರಲ್ಲಿ ವಿವಿಧ ಕೆಲಸಗಳನ್ನು ಮಾಡಿಕೊಡುವುದಕ್ಕೆ ತೃಣಮೂಲ ಶಾಸಕರು ಹಣದ ಕಟ್ಟುಗಳನ್ನು ಸ್ವೀಕರಿಸುತ್ತಿರುವ ದೃಶ್ಯಾವಳಿಗಳು ಭಿತ್ತರವಾಗಿವೆ. ಅದು ಸಂಸತ್ತಿನಲ್ಲೂ ಚರ್ಚೆಯಾಯಿತು.

ಇದನ್ನೇ ಇಟ್ಟುಕೊಂಡು ತೃಣಮೂಲ ಕಾಂಗ್ರೆಸ್ ಅನ್ನು ಸೋಲಿಸಿಬಿಡಬೇಕಿತ್ತು ಎಂಬುದಲ್ಲ ವಾದ. ಆದರೆ ಕೊನೆಪಕ್ಷ, ನಾರದಾ ಹಗರಣದಲ್ಲಿ ಬೆತ್ತಲಾದವರಿಗಾದರೂ ಜನ ಸೋಲಿನ ರುಚಿ ತೋರಿಸಬೇಕಿತ್ತಲ್ಲವೇ? ಬಂಗಾಳಕ್ಕೆ ದೀದಿಯೇ ಆಪ್ತ ಎಂಬ ಸಂದೇಶದ ಜತೆಗೆ, ಹಾಗಂತ ಅವರ ಪಾಳೆಯದಲ್ಲಿ ಭ್ರಷ್ಟರಿದ್ದರೆ ಸಹಿಸಿಕೊಳ್ಳುವುದಿಲ್ಲ ಎಂಬ ಸಂದೇಶವನ್ನೂ ಪ್ರಜ್ಞಾವಂತ ಮತದಾರ ನೀಡಬೇಕಿತ್ತಲ್ಲವೇ? ಆದರೆ ಹಾಗಾಗಿಲ್ಲ.

ಪೂರ್ವ ಬೆಹ್ಲಾದಿಂದ ಸ್ಪರ್ಧಿಸಿದ್ದ ಸೊವನ್ ಚಟರ್ಜಿ 24,249 ಮತಗಳಿಂದ ಗೆದ್ದಿದ್ದಾರೆ. ಕೋಲ್ಕತಾ ಬಂದರು ನಗರಿಯಿಂದ ಸ್ಪರ್ಧಿಸಿದ್ದ ಫಿರ್ಹದ್ ಹಕಿಮ್ 26,548 ಮತಗಳಿಂದ, ಬ್ಯಾಲಿಗಂಗೆಯಿಂದ ಸ್ಪರ್ಧಿಸಿದ್ದ ಸುಬ್ರತಾ ಮುಖರ್ಜಿ 15,225 ಮತಗಳಿಂದ, ಹೂಗ್ಲಿಯಿಂದ ಇಕ್ಬಾಲ್ ಅಹ್ಮದ್ 43,487 ಮತಗಳಿಂದ ಹಾಗೂ ನಂದಿಗ್ರಾಮದಿಂದ ಸುರ್ಬೆಂದು ಅಧಿಕಾರಿ 81, 230 ಮತಗಳಿಂದ ಗೆದ್ದಿದ್ದಾರೆ ಅರ್ಥಾತ್ ಮತದಾರ ಮಹಾಪ್ರಭು ಗೆಲ್ಲಿಸಿದ್ದಾನೆ. ಇವರೆಲ್ಲರೂ ನಾರದಾ ಟೇಪ್ ನಲ್ಲಿ ಬೆತ್ತಲಾದವರೇ. ಒಬ್ಬ ಮದನ್ ಮಿತ್ರ ಮಾತ್ರ 4 ಸಾವಿರ ಚಿಲ್ಲರೆ ಮತಗಳಿಂದ ಸೋತು ಹೋದರು ಅನ್ನೋದು ಬಿಟ್ಟರೆ ಉಳಿದೆಲ್ಲ ಕಳಂಕಿತರದ್ದೂ ಭರ್ಜರಿ ವಿಜಯ!

ಬಿಹಾರದಲ್ಲಿ ಅಭಿವೃದ್ಧಿಯ ಸ್ಥಳೀಯ ಮುಖ ನಿತೀಶ್ ಕುಮಾರ್ ಮುಖ್ಯಮಂತ್ರಿಯಾಗಿದ್ದಕ್ಕೆ ಖುಷಿಪಡಬಹುದು. ಆದರೆ ಭ್ರಷ್ಟಾಚಾರ ಪ್ರಕರಣದಲ್ಲಿ ಅಪರಾಧ ಸಾಬೀತಾದ ಲಾಲು ಪ್ರಸಾದ್ ನೇತೃತ್ವದ ಆರ್ ಜೆ ಡಿ ಗೆ ಅಷ್ಟುದೊಡ್ಡಮಟ್ಟದಲ್ಲಿ ಜನರ ಆಶೀರ್ವಾದ ಸಿಕ್ಕಾಗಲೇ ಭ್ರಷ್ಟಾಚಾರ ಮುಕ್ತ ಆಡಳಿತ ಅನ್ನೋದು ಮೇಲು ಮೇಲಿನ ಫ್ಯಾಷನ್ ಸ್ಟೇಟ್ಮೆಂಟಾ ಎಂಬ ಅನುಮಾನ ಮೂಡಿತ್ತು. ಸತತ ಎರಡನೇ ಅವಧಿಗೆ ಮುಖ್ಯಮಂತ್ರಿಯಾಗುತ್ತಿರುವ ಜಯಲಲಿತಾರ ವಿಷಯದಲ್ಲೂ ಭ್ರಷ್ಟಾಚಾರ ಲೇಪವಿಲ್ಲವೇ ಎಂದು ಪ್ರಶ್ನಿಸಬಹುದು. ಆದರೆ ಅಲ್ಲಿ ಜನರಿಗೆ ತುಂಬ ಆಯ್ಕೆ ಏನೂ ಇರಲಿಲ್ಲ, ಏಕೆಂದರೆ ಪ್ರಮುಖ ಎದುರಾಳಿ ಡಿಎಂಕೆ ವಿರುದ್ಧವೂ ಭ್ರಷ್ಟಾಚಾರ ಆರೋಪದ ಮೇರು ಪರ್ವತವಿದೆ ಅಂತ ತರ್ಕ ಹುಡುಕಬಹುದು.

ಕರ್ನಾಟಕದಲ್ಲೂ ಭ್ರಷ್ಟಾಚಾರ ಆರೋಪ ಹೊತ್ತಿರುವವರು ವೈಯಕ್ತಿಕ ಗೆಲುವು ದಾಖಲಿಸುವಲ್ಲಿ ಸಫಲವಾಗಿರುವ ಹಲವು ಉದಾಹರಣೆಗಳು ಸಿಗುತ್ತವೆ.

ಉಳಿದು ಚುಚ್ಚುವ ಪ್ರಶ್ನೆ ಇಷ್ಟೆ. ಭ್ರಷ್ಟಾಚಾರದ ಬಗ್ಗೆ ಆಕ್ರೋಶ ವ್ಯಕ್ತಪಡಿಸುವ ಸಾಮಾನ್ಯನ ನೈತಿಕತೆ ನಿಜಕ್ಕೂ ಮೇಲ್ಮಟ್ಟದ್ದಾ? ನಾವು ನಿಜಕ್ಕೂ ಭ್ರಷ್ಟಾಚಾರದಿಂದ ರೋಸಿಹೋಗಿದ್ದೇವಾ? ಅಥವಾ ಇದು ಕೇವಲ ರಾಜಕಾರಣಿಗಳನ್ನು ಬಯ್ದು ಬಾಯ್ಚಪಲ ತೀರಿಸಿಕೊಳ್ಳುವ ನೆಪವಾ?

Leave a Reply