ತರುಣ್ ವಿಜಯ್ ದಲಿತ ಸಂವೇದನೆ, ಹರೀಶ್ ರಾವತ್ ಸಜ್ಜನಿಕೆ – ಮನಕ್ಕಿಳಿಯಬೇಕಾದ ಎರಡು ಆರ್ದ್ರ ಬಿಂಬಗಳು!

ಚೈತನ್ಯ ಹೆಗಡೆ

ಒಂದು ಮನಸ್ಥಿತಿ- ರೂಢಿಯನ್ನು ಕಾಲಕ್ಕೆ ತಕ್ಕಂತೆ ಬದಲಿಸಬೇಕಾದಾಗ ಸಂಘರ್ಷ ಸಹಜ. ಇಂಥ ಸಂಘರ್ಷದಲ್ಲಿ ಮುಂದೆ ನಿಂತು ನಾನೇಕೆ ಮೈನೋಯಿಸಿಕೊಳ್ಳಲಿ ಎಂಬ ಯೋಚನೆಯೂ ಸಹಜ. ಅದಕ್ಕೆ ವ್ಯತಿರಿಕ್ತವಾಗಿ ಬಿಜೆಪಿ ಸಂಸದ ತರುಣ್ ವಿಜಯ್ ಅವರ ಹೋರಾಟ ಮಾದರಿ ಸ್ವರೂಪದ್ದು.

ಉತ್ತರಾಖಂಡದ ಚಕ್ರತಾ ಪ್ರಾಂತ್ಯದ ದೇವಾಲಯವೊಂದಕ್ಕೆ ದಲಿತರ ಪ್ರವೇಶದ ಮುಂದಾಳತ್ವ ವಹಿಸಿದ್ದರು ಅದೇ ರಾಜ್ಯದಿಂದ ರಾಜ್ಯಸಭೆ ಪ್ರವೇಶಿಸಿರುವ ತರುಣ್ ವಿಜಯ್. ಅವರ ಮೇಲೆ ಸಂಪ್ರದಾಯಬದ್ಧ ಗ್ರಾಮಸ್ಥರು ರೊಚ್ಚಿಗೆದ್ದು ಕಲ್ಲು ತೂರಿ ದಾಳಿ ಮಾಡಿದ ಪರಿಣಾಮ ತರುಣ್ ವಿಜಯ್ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವರ ಶೀಘ್ರ ಚೇತರಿಕೆಗೆ ಪ್ರಾರ್ಥಿಸುತ್ತಲೇ ಕೆಲವು ಅಂಶಗಳನ್ನು ಗಮನಿಸಬೇಕು.

  • ತರುಣ್ ವಿಜಯ್ ಆರೆಸ್ಸೆಸ್ಸಿನ ಮುಖವಾಣಿ ಪಾಂಚಜನ್ಯದ ಸಂಪಾದಕರಾಗಿದ್ದವರು. ಈ ನಿಟ್ಟಿನಲ್ಲಿ ಕಟ್ಟರ್ ಆರೆಸ್ಸೆಸ್ ಪಟ್ಟಿಯಲ್ಲಿ ಗುರುತಿಸಿಕೊಂಡವರು. ಅರ್ಥಾತ್, ದಲಿತರ ದೇವಾಲಯ ಪ್ರವೇಶ ಎಂಬುದು ಹಿಂದುತ್ವದೊಳಗೇ ತೀವ್ರವಾಗಿರುವ ಆಶಯ. ಇದಕ್ಕೆ ಪ್ರಗತಿಪರ ಬ್ರಾಂಡೇ ಆಗಬೇಕಿಲ್ಲ ಎಂಬುದಕ್ಕೆ ತರುಣ್ ವಿಜಯ್ ವಿದ್ಯಮಾನ ಸಾಕ್ಷಿ. ಪ್ರಾರ್ಥಿಸುವ ಹಕ್ಕು ಎಲ್ಲರದ್ದೂ ಎಂದಿರುವ ಆರೆಸ್ಸೆಸ್, ತರುಣ್ ವಿಜಯ್ ಅವರ ಮೇಲಿನ ದಾಳಿಯನ್ನು ಖಂಡಿಸಿದೆ.
  • ರಾಜಕೀಯ ತಿಕ್ಕಾಟಗಳು ಇದ್ದದ್ದೇ. ಆದರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ತರುಣ್ ವಿಜಯ್ ಅವರನ್ನು ಸಂದರ್ಶಿಸುವ ಮೂಲಕ ಉತ್ತರಾಖಂಡ ಮುಖ್ಯಮಂತ್ರಿ ಹರೀಶ್ ರಾವತ್ ಘನತೆ ಮೆರೆದಿದ್ದಾರೆ. ಇದೇ ಕಾಂಗ್ರೆಸ್ ಸರ್ಕಾರವನ್ನು ತನ್ನ ಕೇಂದ್ರ ಬಲದ ಮೂಲಕ ಕಿತ್ತೊಗೆಯುವುದಕ್ಕೆ ಪ್ರಯತ್ನಿಸಿ ಬಿಜೆಪಿ ಇತ್ತೀಚೆಗಷ್ಟೇ ಹಿನ್ನಡೆ ಅನುಭವಿಸಿರುವ ಸಂಗತಿ ಗೊತ್ತಿದ್ದದ್ದೇ. ಈ ಹಿಂದೆ ಕಾಂಗ್ರೆಸ್ಸಿಗರೂ ಅಧಿಕಾರದಲ್ಲಿದ್ದಾಗ ಹೀಗೆ ಮಾಡಿರಲಿಲ್ಲವಾ ಎಂಬ ವಿತಂಡವಾದವೂ ಬಿಜೆಪಿಗೆ ಬಲು ರುಚಿಯೇ… ಅದೇನೇ ಇರಲಿ, ಮುಖ್ಯಮಂತ್ರಿ ಹರೀಶ್ ರಾವತ್, ಸಂಸದ ತರುಣ್ ವಿಜಯ್ ಮೇಲೆ ಹಲ್ಲೆ ನಡೆಸಿದವರ ವಿರುದ್ಧ, ಘಟನೆ ವೇಳೆ ಕರ್ತವ್ಯಲೋಪ ಎಸಗಿದವರ ವಿರುದ್ಧ ಕ್ರಮ ಕೈಗೊಳ್ಳುವ ಭರವಸೆ ನೀಡಿರುವುದು, ಎಂಥದೇ ಉನ್ನತ ಚಿಕಿತ್ಸೆ ಅಗತ್ಯವಿದ್ದರೂ ರಾಜ್ಯ ಸರ್ಕಾರದ ಜವಾಬ್ದಾರಿ ಎಂದಿರುವುದು ಮೆಚ್ಚುಗೆಗೆ ಅರ್ಹವಾಗುವ ನಡೆ.
  • ಈ ಸಂದರ್ಭದಲ್ಲಿ ದಲಿತರ ದೇವಾಲಯ ಪ್ರವೇಶ ವಿಚಾರದಲ್ಲಿ ರಾವತ್ ಪ್ರತಿಕ್ರಿಯಿಸಿರುವುದೂ ಮುಖ್ಯವಾಗುತ್ತದೆ. ‘ಸಂಪ್ರದಾಯಗಳನ್ನು ಗೌರವಿಸಬೇಕು ನಿಜ. ಆದರೆ ಯಾರನ್ನೇ ಪ್ರಾರ್ಥನೆಯಿಂದ ದೂರ ಇಡುವುದನ್ನು ಹೇಗೆ ಒಪ್ಪಲಾದೀತು? ಈ ಬಗೆಯ ಕಟ್ಟರ್ ನಿಲುವನ್ನು ನಿವಾರಿಸುವುದಕ್ಕೆ ಖಚಿತ ಮಾರ್ಗಗಳೇನೂ ಎದುರಿಗಿಲ್ಲ. ಜನರಲ್ಲಿ ಈ ಬಗ್ಗೆ ಜಾಗೃತಿ ಮೂಡಿಸಬೇಕಷ್ಟೆ. ರಾಜ್ಯದ ಎಲ್ಲ ಧಾರ್ಮಿಕ ಮುಖ್ಯಸ್ಥರೂ ಪೂಜಾಸ್ಥಳಗಳನ್ನು ಸರ್ವರಿಗೆ ತೆರೆದಿರಿಸಬೇಕೆಂದು ನಾನು ಬಯಸುತ್ತೇನೆ. ಇಷ್ಟಕ್ಕೂ ಎಲ್ಲರೂ ಮುನುಷ್ಯರೇ ಅಲ್ಲವೇ?’ ಎಂದಿದ್ದಾರೆ ರಾವತ್. ಅಲ್ಲಿಗೆ ಬಿಜೆಪಿ- ಕಾಂಗ್ರೆಸ್ ಮನಸುಗಳೆರಡೂ ಈ ವಿಚಾರದಲ್ಲಿ ಒಂದೇ ನಿಟ್ಟಿನಲ್ಲಿ ಯೋಚಿಸುತ್ತಿರೋದು ಸಮಾಧಾನದ ಸಂಗತಿ. ಮುಖ್ಯಮಂತ್ರಿ ಹರೀಶ್ ರಾವತ್ ಹೇಳಿದಂತೆ ಪ್ರತಿಬಂಧದ ಮನಸ್ಥಿತಿಯನ್ನು ಏಕಾಏಕಿ ಬದಲಿಸಲು ಸಾಧ್ಯವಿಲ್ಲ. ಹಾಗಂತ ಪ್ರಯತ್ನ ಬಿಡುವುದು ಸಲ್ಲ. ಮುಂಚೂಣಿಯಲ್ಲಿ ನಿಂತು ಇಂಥ ಪ್ರಯತ್ನಗಳಲ್ಲಿರುವ ತರುಣ್ ವಿಜಯ್ ಅಂಥವರು ಈ ಕಾರಣದಿಂದಲೇ ಮುಖ್ಯರಾಗುತ್ತಾರೆ.
  • ದೇಗುಲ ಪ್ರವೇಶದ ವೇಳೆ ಬಿಜೆಪಿಯ ತರುಣ್ ವಿಜಯ್ ಅವರ ಜತೆ ಬಿಎಸ್ಪಿ ಸ್ಥಳೀಯ ನಾಯಕ ದೌಲತ್ ಕುನ್ವಾರ್ ಸಹ ಇದ್ದರು ಎಂಬುದು ಗಮನಿಸಬೇಕಾದ ಸಂಗತಿ. ಸುಧಾರಣಾ ಪ್ರಕ್ರಿಯೆ ಯಾರೊಬ್ಬರ ಸ್ವತ್ತಲ್ಲ, ಎಲ್ಲರ ಪಾಲ್ಗೊಳ್ಳುವಿಕೆ ಇಲ್ಲಿರಬೇಕಾಗುತ್ತದೆ ಎಂಬ ಸುಂದರ ಸಂದೇಶವೂ ಇಲ್ಲಿದೆ. ಈ ಪಕ್ಷದವ ಮನುವಾದಿ, ಆ ಪಕ್ಷದವ ಟೊಳ್ಳು ಪ್ರಗತಿವಾದಿ ಎಂದು ದೂಷಿಸಿಕೊಂಡಿರುವುದರಿಂದ ಯಾವ ಸಾಧನೆ ಸಾಧ್ಯ? ಇಂಥ ಜಂಟಿ ಪ್ರಯತ್ನಗಳು, ರಾಜಕೀಯ ಸಜ್ಜನಿಕೆ ಹೆಚ್ಚಾಗಲಿ. ತರುಣ್ ವಿಜಯ್ ಅವರ ಮಾರ್ಗಕ್ಕೆ ಜಯ ದಕ್ಕಲಿ.

Leave a Reply