ಒಲಿಂಪಿಕ್ಸ್ ಅರ್ಹತೆ ಪಡೆಯಲು ಮೇರಿ ಕೋಮ್ ವಿಫಲ, 2 ವರ್ಷದಲ್ಲಿ ಬಾಂಗ್ಲಾ ಗಡಿ ಸೀಲ್ ಅಂದ್ರು ಸರ್ಬಾನಂದ, ದಲಿತ ಭಾಗ್ಯ ಬೇಕೆಂದ್ರು ಕಾಂಗ್ರೆಸಿಗ ರಾಜಶೇಖರನ್.. ನೀವು ತಿಳಿಬೇಕಿರೋ ಎಲ್ಲ ವಿದ್ಯಮಾನಗಳು

ಕರ್ನಾಟಕ ಪ್ರದೇಶ ಕಾಂಗ್ರೆಸ್ ಕಚೇರಿಯಲ್ಲಿ ರಾಜೀವ್ ಗಾಂಧಿ 25ನೇ ಪುಣ್ಯತಿಥಿಯ ಆಚರಣೆ

ಡಿಜಿಟಲ್ ಕನ್ನಡ ಟೀಮ್

ಲಂಡನ್ ಒಲಿಂಪಿಕ್ಸ್ ಕಂಚಿನ ಪದಕ ವಿಜೇತೆ ಮೇರಿ ಕೋಮ್, ಮುಂಬರುವ ರಿಯೋ ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ಅರ್ಹತೆ ಪಡೆಯುವಲ್ಲಿ ವಿಫಲರಾಗಿದ್ದಾರೆ. ಅಂತಾರಾಷ್ಟ್ರೀಯ ಅಮೆಚುರ್ ಬಾಕ್ಸಿಂಗ್ ಸಂಸ್ಥೆ (ಎಐಬಿಎ)ಯ ಮಹಿಳೆಯರ ವಿಶ್ವ ಬಾಕ್ಸಿಂಗ್ ಚಾಂಪಿಯನ್ ಶಿಪ್ ನ ಎರಡನೇ ಸುತ್ತಿನಲ್ಲಿ ಮೇರಿ ಕೋಮ್ ಪರಾಭವಗೊಂಡಿದ್ದಾರೆ. ಇದರೊಂದಿಗೆ ಒಲಿಂಪಿಕ್ಸ್ ಅರ್ಹತೆ ಪಡೆಯುವ ಅಂತಿಮ ಅವಕಾಶವನ್ನು ಕೈಚೆಲ್ಲಿದ್ದಾರೆ. ಶನಿವಾರ ನಡೆದ ಮಹಿಳೆಯರ 51 ಕೆ.ಜಿ ವಿಭಾಗದ ಪಂದ್ಯದಲ್ಲಿ ಜರ್ಮನಿಯ ಅಜಿಜೆ ನಿಮಾನಿ ವಿರುದ್ಧ 0-2 ಅಂತರದಲ್ಲಿ ಸೋಲನುಭವಿಸಿದರು. ಒಲಿಂಪಿಕ್ಸ್ ಗೆ ಅರ್ಹತೆ ಪಡೆಯಲು ಈ ಟೂರ್ನಿ ಕಡೇಯ ಅವಕಾಶವಾಗಿದ್ದು, ಸೆಮಿಫೈನಲ್ ಸುತ್ತಿಗೆ ಪ್ರವೇಶಿಸಿದ್ದರೂ ಪ್ರತಿಷ್ಠಿತ ಕ್ರೀಡಾಕೂಟದಲ್ಲಿ ಭಾಗವಹಿಸುವ ಅವಕಾಶ ಲಭಿಸುತ್ತಿತ್ತು. ಆದರೆ, ಮೇರಿ ಕೋಮ್ ದ್ವಿತೀಯ ಸುತ್ತಿನಲ್ಲೇ ಹೊರಬಿದ್ದಿರುವುದು ಆಘಾತ ತಂದಿದೆ.

ಸಿದ್ರಾಮಯ್ಯ ದಲಿತರಿಗೆ ಸಿಎಂ ಭಾಗ್ಯ ಕರುಣಿಸಲಿ: ಎಂ.ವಿ ರಾಜಶೇಖರನ್

ರಾಜ್ಯದ ಜನತೆಗೆ ವಿವಿಧ ಯೋಜನೆಗಳನ್ನು ಭಾಗ್ಯಗಳಾಗಿ ಕರುಣಿಸಿದ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಪಟ್ಟವನ್ನು ಪರಮೇಶ್ವರ್ ಅವರಿಗೆ ಬಿಟ್ಟು ಕೊಡುವ ಮೂಲಕ ದಲಿತರಿಗೆ ಸಿಎಂ ಭಾಗ್ಯ ನೀಡಲಿ ಎಂದು ಕಾಂಗ್ರೆಸ್ ನ ಮಾಜಿ ಕೇಂದ್ರ ಸಚಿವ ಎಂ.ವಿ.ರಾಜಶೇಖರನ್ ಮನವಿ ಮಾಡಿದ್ದಾರೆ.

ದಲಿತರಿಗೆ ಹೆಚ್ಚಿನ ಅಧಿಕಾರ ನೀಡಬೇಕು ಎಂಬುದು ರಾಜೀವ್ ಗಾಂಧಿಯವರ ಕನಸಾಗಿತ್ತು. ಆ ಕನಸನ್ನು ಸಿದ್ಧರಾಮಯ್ಯ ನನಸು ಮಾಡಲಿ. ದಲಿತರು ಈ ನಾಡಿನ ಸಿಎಂ ಆಗಬೇಕು ಎಂಬ ಆಸೆ ಎಲ್ಲರಲ್ಲೂ ಇದೆ. ಖುದ್ದು ಅವರೇ ಪರಮೇಶ್ವರ್ ಅವರಿಗೆ ಈ ಜಾಗವನ್ನು ಬಿಟ್ಟು ಕೊಟ್ಟರೆ ನಾಡಿನ ಜನತೆಗೆ ಒಳ್ಳೆಯ ಸಂದೇಶ ರವಾನೆಯಾಗುತ್ತದೆ. ದಲಿತರಿಗೂ ಮೊಟ್ಟ ಮೊದಲ ಬಾರಿ ಆ ಖುರ್ಚಿ ಸಿಕ್ಕಂತಾಗುತ್ತದೆ. ಸಿಎಂ ಪದವಿಗಲ್ಲವಾದರೂ ಪರಮೇಶ್ವರ್ ಅವರನ್ನು ಉಪಮುಖ್ಯಮಂತ್ರಿ ಪಟ್ಟಕ್ಕಾದರೂ ತರಬಹುದು. ಸಂಪುಟ ವಿಸ್ತರಣೆ ವೇಳೆಗೆ ಈ ಪ್ರಕ್ರಿಯೆ ನಡೆದು ಹೋಗಲಿ ಎಂದರು.

ಎರಡು ವರ್ಷದಲ್ಲಿ ಬಾಂಗ್ಲಾ ಗಡಿ ಮುಚ್ಚುತ್ತೇವೆ: ಸರ್ಬಾನಂದ ಸೊನೊವಾಲ್

ಮುಂದಿನ ಎರಡು ವರ್ಷಗಳಲ್ಲಿ ಬಾಂಗ್ಲಾದೇಶದ ಗಡಿ ಪ್ರದೇಶ ಸಂಪೂರ್ಣವಾಗಿ ಮುಚ್ಚುತ್ತೇವೆ. ಆ ಮೂಲಕ ಅನಧಿಕೃತ ವಲಸಿಗರನ್ನು ತಡೆಯುತ್ತೇವೆ ಎಂದು ಅಸ್ಸಾಂ ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿ ಸರ್ಬಾನಂದ ಸೊನೊವಾಲ್ ತಿಳಿಸಿದ್ದಾರೆ. 1980 ರಲ್ಲಿ ವಲಸಿಗರ ವಿರೋಧಿ ಪ್ರತಿಭಟನೆಯ ವಿದ್ಯಾರ್ಥಿ ಚಳುವಳಿಯಲ್ಲಿ ಪ್ರಮುಖವಾಗಿ ಗುರುತಿಸಿಕೊಂಡ ಸೊನೊವಾಲ್, ಇತ್ತೀಚೆಗೆ ನಡೆದ ಅಸ್ಸಾಂ ವಿಧಾನಸಭಾ ಕ್ಷೇತ್ರದಲ್ಲಿ ಭರ್ಜರಿ ಜಯದೊಂದಿಗೆ ಅಧಿಕಾರ ಚುಕ್ಕಾಣಿ ಹಿಡಿಯಲು ಸಿದ್ಧರಾಗಿದ್ದಾರೆ. ಇಲ್ಲಿನ ಸ್ಥಳೀಯರ ಪ್ರಮುಖ ಭರವಸೆಯನ್ನು ಶೀಘ್ರವೇ ಈಡೇರಿಸುವುದಾಗಿ ತಿಳಿಸಿದ ಸರ್ಬಾನಂದ, ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರು ಈ ಗಡಿಯನ್ನು ಸಂಪೂರ್ಣವಾಗಿ ಮುಚ್ಚಲು 2 ವರ್ಷ ಕಾಲವಧಿ ಅಗತ್ಯವಿದೆ ಎಂದು ತಿಳಿಸಿದ್ದು, ಈ ಅವಧಿಯಲ್ಲಿ ಎಲ್ಲ ಕ್ರಮ ಕೈಗೊಳ್ಳಲಾಗುವುದು ಎಂದರು.

3 ವರ್ಷಗಳ ಕಾಂಗ್ರೆಸ್ ಸರ್ಕಾರದಲ್ಲಿ ಸಾಕಷ್ಟು ಹಗರಣಗಳು ನಡೆದಿವೆ: ಶೆಟ್ಟರ್

ಮೂರು ವರ್ಷಗಳ ಕಾಂಗ್ರೆಸ್ ಅಧಿಕಾರ ಅವಧಿಯಲ್ಲಿ ಗ್ರಾಮೀಣಾಭಿವೃದ್ಧಿ, ಜವಳಿ ಮತ್ತು ಆರೋಗ್ಯ ಇಲಾಖೆಗಳಲ್ಲಿ ವ್ಯಾಪಕ ಹಗರಣಗಳು ನಡೆದಿವೆ. ಆದರೂ ಸಿದ್ದರಾಮಯ್ಯನವರು ಮಾತ್ರ ತಮ್ಮದು ಭ್ರಷ್ಟಾಚಾರ ಮುಕ್ತ ಸರ್ಕಾರ ಎಂದು ಹೇಳುತ್ತಿದ್ದಾರೆಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಜಗದೀಶ್ ಶೆಟ್ಟರ್ ಆರೋಪಿಸಿದ್ದಾರೆ.

ಸದ್ಯ ಲಭ್ಯವಿರುವ ಎಲ್ಲ ದಾಖಲೆಗಳು ಈ ಭ್ರಷ್ಟಾಚಾರವನ್ನು ಪುಷ್ಟೀಕರಿಸುತ್ತಿವೆ. ಇದನ್ನು ಪರಿಶೀಲಿಸಿದರೆ ಈ ಸರ್ಕಾರ ಸಂಪೂರ್ಣ ಭ್ರಷ್ಟ ಎಂಬುದು ಸಾಬೀತಾಗುತ್ತದೆ. ಗ್ರಾಮೀಣಾಭಿವೃದ್ದಿ ಇಲಾಖೆಯಲ್ಲಿ ಕುಡಿಯುವ ನೀರಿನ ಗುಣಮಟ್ಟವನ್ನು ಪರೀಕ್ಷಿಸುವ ಪ್ರಯೋಗಾಲಯ ಸ್ಥಾಪನೆಯಲ್ಲಿ ಅವ್ಯವಹಾರ ನಡೆದಿರುವ ಬಗ್ಗೆ ಸಚಿವ ಹೆಚ್.ಕೆ.ಪಾಟೀಲ್ ಅವರೇ ಒಪ್ಪಿಕೊಂಡಿದ್ದಾರೆ.

ಕೇಂದ್ರ ಸರ್ಕಾರ ಕೌಶಲ್ಯಾಭಿವೃದ್ಧಿಗೆ ತರಬೇತಿ ನೀಡಲು ಜವಳಿ ಇಲಾಖೆಗೆ ₹ 6.17 ಕೋಟಿ ನೀಡಿತ್ತು. ಜವಳಿ ಸಚಿವರು ಅದನ್ನು ತಮಗೆ ಬೇಕಾದ ಐಎಲ್ಎಫ್ಎಸ್ ಎಂಬ ಸಂಸ್ಥೆಯ ಜತೆ ಒಪ್ಪಂದ ಮಾಡಿಕೊಂಡು ತರಬೇತಿ ನೀಡದೆ ಹಣ ಪಾವತಿ ಮಾಡಿದ್ದಾರೆ. ಇದರಲ್ಲಿ ಸಚಿವರು ನೇರವಾಗಿ ಭಾಗಿಯಾಗಿರುವುದರಿಂದ ಜವಳಿ ಸಚಿವ ಬಾಬುರಾವ್ ಚಿಂಚನಸೂರ್ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.

ಯಾವುದೇ ಭ್ರಷ್ಟಾಚಾರ ನಡೆದಿಲ್ಲ: ಖಾದರ್

ಸರ್ಕಾರಿ ಆಸ್ಪತ್ರೆಗಳಿಗೆ ಔಷಧಿ ಖರೀದಿ ಸೇರಿದಂತೆ ಹಲವು ವಿಷಯಗಳಲ್ಲಿ ಹಗರಣ ನಡೆದಿದೆ ಎಂಬ ಬಿಜೆಪಿ ನಾಯಕರ ಆರೋಪವನ್ನು ಆರೋಗ್ಯ ಸಚಿವ ಯು.ಟಿ.ಖಾದರ್ ತಳ್ಳಿ ಹಾಕಿದ್ದಾರೆ.

ರಾಷ್ಟ್ರೀಯ ಆರೋಗ್ಯ ಮಿಷನ್ ಯೋಜನೆಯಡಿ ಪೂರ್ತಿ ಹಣವೇ ಬಂದಿಲ್ಲ. ಹಗರಣ ನಡೆಯಲು ಹೇಗೆ ಸಾಧ್ಯ? 2014-15 ರಲ್ಲಿ ಈ ಯೋಜನೆಗಾಗಿ ಔಷಧಿ ಮತ್ತು ಉಪಕರಣಗಳ ಖರೀದಿಗಾಗಿ ₹ 43.09 ಕೋಟಿ ಮಾತ್ರ ಕೇಂದ್ರ ಸರ್ಕಾರ ಬಿಡುಗಡೆ ಮಾಡಿದೆ. ವಾಸ್ತವವಾಗಿ ₹ 1463 ಕೋಟಿ ರೂ ಬಿಡುಗಡೆಯಾಗಬೇಕಿತ್ತು. ಆದರೆ ಆ ಪ್ರಮಾಣದ ಹಣವೇ ಬಿಡುಗಡೆಯಾಗಿಲ್ಲ.ಔಷಧಿಯನ್ನು ಖರೀದಿಸಲು ಒಂದು ಉನ್ನತ ಮಟ್ಟದ ಸಮಿತಿ ಇರುತ್ತದೆ. ಸಮಿತಿ ಜಿಲ್ಲೆಗಳಿಗೆ ಅಗತ್ಯವಾದ ಔಷಧಿಗಳನ್ನು ದಾಸ್ತಾನು ಮಾಡುತ್ತದೆ. ಬೆಂಗಳೂರು ಮಹಾನಗರ ಪಾಲಿಕೆಗೆ ಔಷಧಿ ಖರೀದಿಗಾಗಿ ₹ 8 ಕೋಟಿ ಬಿಡುಗಡೆ ಮಾಡಲಾಗಿದೆ. ಈ ಹಣವನ್ನು ಅವರು ಔಷಧ ನಿಯಂತ್ರಕರ ಲೆಕ್ಕಕ್ಕೆ ಜಮಾ ಮಾಡಿದ್ದಾರೆ. ಈಗಾಗಲೇ ಒಂದೂವರೆ ಕೋಟಿ ಹಣವನ್ನು ನೀಡಿ ಬಿಬಿಎಂಪಿ ಔಷಧಿ ಖರೀದಿ ಮಾಡಿದೆ. ಔಷಧಿ ಖರೀದಿಯಲ್ಲಿ ಅವ್ಯವಹಾರ ನಡೆದಿದೆ ಎಂಬ ಆರೋಪಗಳಿಗೆ ದಾಖಲೆಗಳೇ ಇಲ್ಲ ಎಂದು ಸ್ಪಷ್ಟನೆ ನೀಡಿದರು.

ನ್ಯಾಟೋ ಮೈತ್ರಿಕೂಟದಲ್ಲಿ ಭಾರತಕ್ಕೆ ಸ್ಥಾನ ಬಹುತೇಕ ಖಚಿತ

ಭಾರತ ಜತೆಗಿನ ಸ್ನೇಹ ವೃದ್ಧಿಸುವ ಪ್ರಯತ್ನವನ್ನು ಅಮೆರಿಕ ಮುಂದುವರಿಸಿದೆ. ನ್ಯಾಟೋ (ನಾರ್ಥ್ ಅಟ್ಲಾಂಟಿಕ್ ಟ್ರೀಟಿ ಆರ್ಗನೈಸೇಷನ್) ಮೈತ್ರಿಕೂಟದಲ್ಲಿ ಭಾರತವನ್ನು ಸೇರಿಸಿಕೊಳ್ಳಲು ಶನಿವಾರ ಶ್ವೇತಭವನದಲ್ಲಿ ಒಪ್ಪಿಗೆ ಸಿಕ್ಕಿದೆ. ಇದರೊಂದಿಗೆ ರಕ್ಷಣಾ ಉಪಕರಣ ಮಾರಾಟ ಮತ್ತು ತಂತ್ರಜ್ಞಾನ ವರ್ಗಾವಣೆ ಸಂಬಂಧಿಸಿದಂತೆ ನ್ಯಾಟೊದ ಇತರ ಸದ್ಯರಿಗೆ ಸಿಗುತ್ತಿರುವ ಸ್ಥಾನಮಾನ ಭಾರತಕ್ಕೂ ಲಭಿಸಲಿದೆ. ಮುಂದಿನ ತಿಂಗಳು ಭಾರತ ಪ್ರಧಾನಿ ನರೇಂದ್ರ ಮೋದಿ ಅಮೆರಿಕ ಪ್ರವಾಸ ಕೈಗೊಳ್ಳುತ್ತಿರುವ ಬೆನ್ನಲ್ಲೇ ಅಮೆರಿಕ ಕಡೆಯಿಂದ ಈ ಸುದ್ದಿ ಬಂದಿದೆ.

ಮತ್ತೊಂದೆಡೆ ಉಗ್ರರ ವಿರುದ್ಧ ಕಾರ್ಯಾಚರಣೆ ನಡೆಸುವಲ್ಲಿ ಪಾಕಿಸ್ತಾನ ವಿಫಲವಾಗಿರುವುದಕ್ಕೆ ಅಮೆರಿಕ ಕಿಡಿಕಾರಿದೆ. ಪರಿಣಾಮ ಉಗ್ರರ ನಿಗ್ರಹಕ್ಕಾಗಿ ಪಾಕಿಸ್ತಾನಕ್ಕೆ ನೀಡುತ್ತಿದ್ದ 450 ಮಿಲಿಯನ್ ಡಾಲರ್ ಆರ್ಥಿಕ ನೆರವನ್ನು ತಡೆ ಹಿಡಿದಿದೆ. ಪಾಕಿಸ್ತಾನ ಕೆಲವು ಷರತ್ತುಗಳಿಗೆ ಒಪ್ಪಿದರೆ ಮಾತ್ರ ಈ ನೆರವು ಪಡೆಯಲಿದೆ ಎಂದು ಅಮೆರಿಕ ಸೂಚನೆ ನೀಡಿದೆ.

ಇನ್ನುಳಿದಂತೆ ನೀವು ತಿಳಿಯಬೇಕಿರೋ ಪ್ರಮುಖ ಸುದ್ದಿ ಸಾಲುಗಳು..

  • ಶಶಾಂಕ್ ಮನೋಹರ್ ರಾಜಿನಾಮೆಯಿಂದ ತೆರವಾಗಿದ್ದ ಬಿಸಿಸಿಐ ಅಧ್ಯಕ್ಷ ಸ್ಥಾನವನ್ನು ಕಾರ್ಯದರ್ಶಿ ಅನುರಾಗ್ ಠಾಕೂರ್ ತುಂಬುವುದು ಬಹುತೇಕ ಖಚಿತವಾಗಿದೆ. ಶನಿವಾರ ನಾಮಪತ್ರ ಸಲ್ಲಿಸಲು ಕೊನೆಯ ದಿನಾಂಕವಾಗಿದ್ದು, ಠಾಕೂರ್ ಪೂರ್ವ ವಲಯದಿಂದ ತಮ್ಮ ನಾಮಪತ್ರ ಸಲ್ಲಿಸಿದರು. ಇವರ ವಿರುದ್ಧ ಸ್ಪರ್ಧಿಸಲು ಮತ್ಯಾವುದೇ ಸದಸ್ಯರು ನಾಮಪತ್ರ ಸಲ್ಲಿಸದ ಹಿನ್ನೆಲೆಯಲ್ಲಿ ಠಾಕೂರ್ ಅವಿರೋಧ ಆಯ್ಕೆ ಬಹುತೇಕ ನಿಶ್ಚಿತ.
  • ಭಾರತ ಪ್ರವಾಸದಲ್ಲಿರುವ ಆಪಲ್ ಸಿಇಒ ಟಿಮ್ ಕುಕ್ ಶನಿವಾರ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದರು. ಈ ಸಂದರ್ಭದಲ್ಲಿ ಭಾರತದಲ್ಲೇ ಆಪಲ್ ಫೋನ್ ತಯಾರಿಸುವ ಬಗ್ಗೆಯೂ ಚರ್ಚಿಸಲಾಗಿದೆ ಎಂಬ ವರದಿಗಳು ಬಂದಿವೆ.
  • ಶನಿವಾರ ಸಿಬಿಎಸ್ಇ 12ನೇ ತರಗತಿ ಫಲಿತಾಂಶ ಹೊರಬಂದಿದ್ದು, ನವದೆಹಲಿಯ ಮೊಂಟ್ ಫೋರ್ಟ್ ಶಾಲೆಯ ಸುಕ್ರಿತಿ ಗುಪ್ತಾ 500 ಕ್ಕೆ 497 (ಶೇ.99.4) ಅಂಕ ಗಳಿಸಿ ಮೊದಲ ಸ್ಥಾನ ಪಡೆದಿದ್ದಾರೆ. ಈ ಬಾರಿಯೂ ಯುವತಿಯರೇ ಮೇಲುಗೈ ಸಾಧಿಸಿದ್ದಾರೆ.

ನೀವು ಸಾಮಾಜಿಕ ಜಾಲತಾಣ ಲಿಂಕ್ಡ್ ಇನ್ ಬಳಕೆದಾರರಾ? ಹಾಗಾದರೆ ಮಾಹಿತಿ ಕನ್ನದ ಆತಂಕದ ಸುದ್ದಿ ಇದೆ.

ಬಿಜೆಪಿ ಸಂಸದ ತರುಣ್ ವಿಜಯ್ ಅವರು ದಲಿತರಿಗೆ ದೇಗುಲ ಪ್ರವೇಶ ಕಲ್ಪಿಸುವ ಪ್ರಯತ್ನದಲ್ಲಿ ಘಾಸಿಗೊಂಡು ಆಸ್ಪತ್ರೆ ಸೇರಿದ್ದಾರೆ. ಉತ್ತರಾಖಂಡ ಮುಖ್ಯಮಂತ್ರಿ ಅವರನ್ನು ಸಂದರ್ಶಿಸಿ ಹೇಳಿದ ಮಾತುಗಳೇನು? ಇಡೀ ವಿದ್ಯಮಾನದಲ್ಲಿ ನಮ್ಮ ಎದೆಗಿಳಿಯಬೇಕಾದ ಆರ್ದ್ರ ನೋಟಗಳು ಇವೆ

ರತನ್ ಟಾಟಾ ಆಸಕ್ತಿ ಕುದುರಿಸಿ ಹಣ ಹೂಡುವಂತೆ ಮಾಡಿರುವ ಈ ಆರ್ಟಿಫಿಷಿಯಲ್ ಇಂಟಲಿಜೆನ್ಸ್ ತಂತ್ರಜ್ಞಾನದ ಹಕೀಕತ್ತೇನು?

ಪ್ರತಿಬಾರಿ ಉಪಗ್ರಹಗಳು ನಭಕ್ಕೆ ನೆಗೆದಾಗ ಸಂಭ್ರಮಿಸುತ್ತೇವೆ. ಆದರೆ ಅಂತರೀಕ್ಷದಲ್ಲಿ ಶೇಖರಗೊಂಡು ಸುತ್ತುತ್ತಿರುವ ತ್ಯಾಜ್ಯಗಳು ಒಡ್ಡಿರುವ ಅಪಾಯವೇನು? ಜನಪ್ರಿಯ ವಿಜ್ಞಾನ ಬರಹಗಾರ ಟಿ. ಆರ್. ಅನಂತರಾಮು ಅವರ ಸೈನ್ಸ್ ಸ್ಕೋಪ್ ಅಂಕಣ ತೆರೆದಿಟ್ಟಿರುವ ಚಿತ್ರಣ ಹೀಗಿದೆ…

ನಾಸಿರ್- ಕಲ್ಕಿ ಅಭಿನಯದ ವೇಟಿಂಗ್ ಚಿತ್ರ ವೀಕ್ಷಕರ ವೇಟ್ ಗೆ ಅರ್ಹ ಎನ್ನಿಸುವಂತಿದೆ, ಈ ನವಿರು ಟ್ರೈಲರ್ ನೋಡಿದರೆ

 

Leave a Reply