ನೀವು ಲಿಂಕ್ಡ್ ಇನ್ ಬಳಕೆದಾರರೇ? ಹಾಗಾದ್ರೆ ಇಲ್ಲಿದೆ ನಿಮಗೊಂದು ಆಘಾತಕಾರಿ ಸುದ್ದಿ

ಡಿಜಿಟಲ್ ಕನ್ನಡ ಟೀಮ್

ವೃತ್ತಿಪರರು ಬಹಳ ಇಷ್ಟಪಡುವ, ಬಳಸುವ ಸಾಮಾಜಿಕ ತಾಣ ಅಂತಂದ್ರೆ ಲಿಂಕ್ಡ್ ಇನ್. ಆ ಪೈಕಿ ನೀವೂ ಒಬ್ಬರಾಗಿದ್ದರೆ, ನಿಮಗೊಂದು ಕೆಟ್ಟ ಸುದ್ದಿ ಕಾದಿದೆ. ಅದೇನಂದ್ರೆ, 100 ಮಿಲಿಯನ್ (10 ಕೋಟಿ) ಬಳಕೆದಾರರ ವಿವರಗಳು ಸೋರಿಕೆಯಾಗಿವೆ.

ಈ ಲಿಂಕ್ಡ್ ಇನ್ ನಲ್ಲಿ 40 ಕೋಟಿ (400 ಮಿಲಿಯನ್) ಬಳಕೆದಾರರಿದ್ದಾರೆ. ಆ ಪೈಕಿ 11.7 ಕೋಟಿ ಬಳಕೆದಾರರ ವಿವರ ಸೋರಿಕೆಯಾಗಿದೆ ಎಂದು ಈ ವೆಬ್ ಸೈಟ್ ನಲ್ಲಿ ತಿಳಿಸಲಾಗಿದೆ. ಬಳಕೆದಾರರ ಲಾಗ್ ಇನ್ ವಿವರಗಳನ್ನು ಕದಿಯಲಾಗಿದ್ದು, ಆಸಕ್ತರಿಗೆ ಅದನ್ನು ಮಾರಾಟ ಮಾಡಲು ಹ್ಯಾಕರ್ ಗಳು ಮುಂದಾಗಿದ್ದಾರೆ. ‘ಪೀಸ್’ ಎಂಬ ಹೆಸರಿನ ಹ್ಯಾಕರ್ ಈಗ ಪ್ರತಿ ಬಳಕೆದಾರರ ಪಾಸ್ ವರ್ಡ್ ಅನ್ನು 2,200 ಅಮೆರಿಕನ್ ಡಾಲರ್ (₹ 1.50 ಲಕ್ಷ) ಗೆ ಹರಾಜು ಮಾಡಲು ಮುಂದಾಗಿದ್ದಾರೆ.

ಲಿಂಕ್ಡ್ ಇನ್ ಬಳಕೆದಾರರ ಮಾಹಿತಿ ಕಳ್ಳತನ ಇದೇ ಮೊದಲ ಬಾರಿಯಲ್ಲ. 2012ರಲ್ಲಿ ಸುಮಾರು 6.5 ಕೋಟಿ ಬಳಕೆದಾರರ ಪಾಸ್ ವರ್ಡ್ ಹಾಗೂ ಮಾಹಿತಿ ಕದಿಯಲಾಗಿದೆ ಎಂದು ಈ ವೆಬ್ ಸೈಟ್ ಮಾಹಿತಿ ನೀಡಿ, ತನ್ನ ಬಳಕೆದಾರರಿಗೆ ಪಾಸ್ ವರ್ಡ್ ಬದಲಿಸಲು ಕರೆ ನೀಡಿತ್ತು. ಲಿಂಕ್ಡ್ ಇನ್ ವಿಶ್ವದಾದ್ಯಂತ ಸುಮಾರು 200 ದೇಶಗಳು ಮತ್ತು ಪ್ರದೇಶಗಳಲ್ಲಿ ಬಳಕೆಯಾಗುತ್ತಿದೆ ಎಂದು ಈ ಸಂಸ್ಥೆ ತನ್ನ ವೆಬ್ ಸೈಟ್ ನಲ್ಲಿ ಮಾಹಿತಿ ನೀಡಿದೆ.

Leave a Reply