ಅಂತರಿಕ್ಷದ ಜಂಕ್‍ಗೆ 60 ವರ್ಷ, ಸಂಭ್ರಮಿಸುವ ಸಮಯವಲ್ಲ-ಕ್ಲೀನ್ ಮಾಡಬೇಕಲ್ಲ!

author-ananthramuನೀವು ಹೆಲ್ಮೆಟ್ ಇಲ್ಲದೆ ಮೋಟಾರ್ ಬೈಕಿನಲ್ಲಿ ಮಾಮೂಲಿ ಸ್ಪೀಡ್‍ನಲ್ಲಿ ಹೋಗುತ್ತಿದ್ದೀರಿ ಎನ್ನೋಣ. ಒಂದು ಸೊಳ್ಳೆಯೋ ಅಥವಾ ಅದಕ್ಕಿಂತ ಸ್ವಲ್ಪ ದಪ್ಪದ ಯಾವುದೋ ಕೀಟ ಬಂದು ನಿಮ್ಮ ಹಣೆಗೋ, ಕೆನ್ನೆಗೋ ಬಡಿದಾಗ ಹೊಡೆದ ಜಾಗ ಚುರುಕ್ಕೆನ್ನುತ್ತದೆ, ಸೂಜಿ ಚುಚ್ಚಿದ ತರಹ.

ಇನ್ನೊಂದು ಹಳೆ ಸಂಗತಿಯನ್ನು ಒಮ್ಮೆ ನೆನಪಿಸಿಕೊಳ್ಳಿ. ರಮಣ್ ಲಂಬಾ ಗೊತ್ತಲ್ಲ? ಭಾರತದ ಕ್ರಿಕೆಟ್ ಪಟು-ಬಲಗೈ ಬ್ಯಾಟ್ಸ್ ಮನ್. 1998ರಲ್ಲಿ ಬಾಂಗ್ಲಾ ದೇಶದ ಢಾಕಾದ ಕ್ಲಬ್ ಒಂದರ ಪರ ಕ್ರಿಕೆಟ್ ಆಡುವಾಗ ಮೆಹರಾಬ್ ಹೊಸೈನ್ ಬ್ಯಾಟಿಂಗ್‍ನಲ್ಲಿ ಹೊಡೆದ ಬಾಲು ನೇರವಾಗಿ ಷಾರ್ಟ್ ಲೆಗ್‍ನಲ್ಲಿದ್ದ ರಮಣ್ ಲಂಬಾ ತಲೆಗೆ ಹೊಡೆಯಿತು. ಆ ಹೊಡೆತಕ್ಕೆ ಲಂಬಾಗೆ ಇಂಟರ್ನಲ್ ಬ್ಲೀಡಿಂಗ್ ಆಯಿತು. ಮರುದಿನ ಲಂಬಾ ಕಣ್ಮುಚ್ಚಿದ್ದ- ‘ಇನ್ನು ಮೂರು ಬಾಲು ಬಾಕಿ ಇದೆ, ಈಗ ಹೆಲ್ಮೆಟ್ ಏಕೆ’ ಎಂದು ಉಡಾಫೆ ಮಾಡಿದ್ದ.

ಇದೇ ಸಂದರ್ಭವನ್ನು ನಾವು ಅಂತರಿಕ್ಷಕ್ಕೆ ವಿಸ್ತಿರಿಸಿದರೆ ಭಯಾನಕ ದೃಶ್ಯಗಳು ನಮ್ಮ ಎದುರಿಗೆ ಬರುತ್ತವೆ. 1957ರಲ್ಲಿ, 84 ಕಿಲೋ ಗ್ರಾಂ ತೂಕದ ರಷ್ಯದ ಸ್ಪೂಟ್ನಿಕ್ ಕೃತಕ ಉಪಗ್ರಹ ಅಂತರಿಕ್ಷಕ್ಕೆ ಹಾರಿ 98 ನಿಮಿಷದಲ್ಲಿ ಭೂಮಿಯನ್ನು ಸುತ್ತಿತು. ಅಂತರಿಕ್ಷ ಯುಗದ ಮೊದಲ ಅಧ್ಯಾಯ ಪ್ರಾರಂಭವಾಯಿತು. ಹಾಗೆಯೇ ಅಂತರಿಕ್ಷದಲ್ಲಿ ಕಸದ ತೊಟ್ಟಿಯನ್ನು ಉದ್ಘಾಟನೆ ಮಾಡಿದ ಕೀರ್ತಿಯೂ ಇದರದೇ. ಸ್ಪೂಟ್ನಿಕ್‍ನ್ನು ಕಕ್ಷೆಗೆ ಬಿಟ್ಟ ರಾಕೆಟ್‍ನ ಮೊದಲ ಜಂಕ್ ಅದರಲ್ಲಿ ಸೇರಿತು. ಈಗ ಸಮಸ್ಯೆ ಎಷ್ಟು ಗಂಭೀರವಾಗಿದೆ ಎಂದರೆ ಆಕಾಶದ ಯುಗ ವಿಸ್ತರಿಸುತ್ತ ಹಲವು ದೇಶಗಳು ಬಾಹ್ಯಾಕಾಶ ಚರಿತ್ರೆಯನ್ನೇ ಬರೆದಿದೆ. ಈ ಪ್ರಕ್ರಿಯೆಯಲ್ಲಿ ನಮಗೆ ಅರಿವಿಲ್ಲದೆಯೇ ಭಾರಿ ಜಂಕನ್ನು ಕಕ್ಷೆಯಲ್ಲಿ ಬಿಟ್ಟಿದ್ದೇವೆ. ಅಮೆರಿಕದ ನಾಸಾ ಸಂಸ್ಥೆ ಅಂತರಿಕ್ಷದಲ್ಲಿ ಬೆಳೆಯುತ್ತಿರುವ ಜಂಕ್ ರಾಶಿಯನ್ನು ಕುರಿತೇ ಅಧ್ಯಯನ ಮಾಡಿ ಆತಂಕದ ಅಂಶಗಳನ್ನೇ ನಮ್ಮ ಮುಂದಿಟ್ಟಿದೆ. ಈ ಘಳಿಗೆಯಲ್ಲಿ ಹತ್ತು ಸೆಂಟಿ ಮೀಟರ್ ದಪ್ಪದ 21,000 ತುಂಡುಗಳು ಭರೆಂದು ಬರೀ ತೇಲುತ್ತಿಲ್ಲ, ಹೈಸ್ಪೀಡಿನಲ್ಲಿ ಅಂಡಲೆಯುತ್ತಿವೆ. ಒಂದಿರಿಂದ ಹತ್ತು ಸೆಂ. ಮೀಟರ್ ಜಂಕ್‍ಗಳು ಐದು ಲಕ್ಷಕ್ಕೂ ಮಿಕ್ಕಿವೆ. ಇದಕ್ಕಿಂತ ಕಡಿಮೆ ದಪ್ಪದ ಜಂಕ್‍ಗಳು ನೂರು ದಶಲಕ್ಷ. ಅದಕ್ಕಿಂತ ಕಿರಿ ಗಾತ್ರದವು ಲೆಕ್ಕವಿಲ್ಲ, ಆದರೆ ಅಪಾಯ ಒಡ್ಡುವಂತಹವೇ. ಇಲ್ಲಿ ತೇಲುತ್ತಿರುವ, ನುಗ್ಗುತ್ತಿರುವ ಬಿಡಿಬಿಡಿ ತುಂಡುಗಳು ಗಂಟೆಗೆ 28,163 ಕಿಲೋ ಮೀಟರ್ ವೇಗದಲ್ಲಿ ಸಾಗುತ್ತಿವೆ. ಸದ್ಯದಲ್ಲಿ ಹೆಚ್ಚು ಭಯಭೀತಿಗೊಂಡಿರುವುದು ಈಗ ಕಕ್ಷೆಯಲ್ಲಿರುವ ಇಂಟರ್ ನ್ಯಾಷನಲ್ ಸ್ಪೇಸ್ ಸ್ಟೇಷನ್ನಿನ ಗಗನಯಾನಿಗಳು. ಇಲ್ಲಿರುವ ಯಾತ್ರಿಗಳಿಗೆ ಸೂಯೆಜ್ ಕ್ಯಾಪ್ಸೂಲ್ ಆಶ್ರಯತಾಣವಾಗಿದೆ. ಕಳೆದ ಜುಲೈ ತಿಂಗಳಲ್ಲಿ ರಷ್ಯದ ಹಳೆಯ ನಿಷ್ಕ್ರಿಯ ಉಪಗ್ರಹ ಈ ಸ್ಪೇಸ್ ಸ್ಟೇಷನ್ ಕಡಗೆ ತೂರಿದಾಗ, ಇವರೆಲ್ಲ ಕ್ಯಾಪ್ಸೂಲ್‍ನಲ್ಲಿ ಅಡಗಿಕೊಳ್ಳಬೇಕಾಯಿತು. 56,237 ಕಿಲೋ ಮೀಟರ್ ವೇಗದಲ್ಲಿ ಈ ಮುದಿ ಉಪಗ್ರಹ ತೂರಿಬಂದರೂ ಭೂಮಿಯಲ್ಲೆ ಸ್ಪೇಸ್ ಸ್ಟೇಷನ್ನನ್ನು ನಿಯಂತ್ರಿಸಿದ್ದರಿಂದ ಇಲ್ಲಿದ್ದವರು ಬಚಾವಾದರು.

spacejunk

ಎಲ್ಲಿದ್ದವು ಈ ಪ್ರಮಾಣದ ಜಂಕ್‍ಗಳು? ಹಳೆಯ ರಾಕೆಟ್‍ನ ಬೇರೆ ಬೇರೆ ಹಂತಗಳು, ಛಿದ್ರವಾದ ಚೂರುಗಳು, ನಿರುಪಯೋಗಿ ಕೃತಕ ಉಪಗ್ರಹಗಳು, ಉಪಗ್ರಹಗಳನ್ನು ಉರುಳಿಸಲು ಪ್ರಯೋಗಮಾಡಿದ ಕ್ಷಿಪಣಿಗಳ ಚೂರುಗಳು-ಇವೆಲ್ಲವೂ ಸೇರಿಯೇ ಜಂಕ್ ಸೃಷ್ಟಿಸಿವೆ. ಇದರಲ್ಲಿ ಆಕಾಶಯುಗದಲ್ಲಿ ಕ್ರಿಯಾಶೀಲವಾಗಿರುವ ಎಲ್ಲ ದೇಶಗಳ ಪಾಲೂ ಇದೆ. ಆದರೆ ಹೊಣೆ ನಿಗದಿಯಾಗಿಲ್ಲ. ಗುರು ಮತ್ತು ಮಂಗಳ ಗ್ರಹದ ನಡುವೆ ಇರುವ ಕ್ಷುದ್ರಗ್ರಹ ಪಟ್ಟಿಯೇ ಭೂಸಮೀಪಕ್ಕೆ ಬಂದಿದೆಯೋ ಎಂಬ ಭ್ರಮೆ ಬರುವಷ್ಟು ಜಂಕ್‍ಗಳು ಇಲ್ಲಿವೆ. ಈ ಜಂಕ್‍ನಲ್ಲಿ ಯಾವುದೋ ಒಂದು ಪೀಸ್ ನುಗ್ಗಿ ಬಂತೆಂದರೆ ಸ್ಟೀಲ್ ಗೋಡೆಯನ್ನೇ ಅವು ತೂರಿಹೋಗಬಲ್ಲವು ಅಥವಾ ಜಖಂ ಮಾಡಬಲ್ಲವು. ಅಷ್ಟೇ ಏಕೆ ಯಾವುದೋ ಕಿತ್ತುಹೋದ ಉಪಗ್ರಹದಿಂದ ಪೇಂಟ್ ಚಕ್ಕೆ ತೂರಿಬಂದರೂ ಅಪಾಯವೇ ಆ ಸ್ಪೀಡಿನಲ್ಲಿ.

ಆಕಾಶಯುಗದ ಮೊದಲ ಐವತ್ತು ವರ್ಷಗಳಲ್ಲೇ ಅಂತರಿಕ್ಷದಲ್ಲಿ ಜಂಕ್ ಸೇರಿಕೊಳ್ಳಲು ಶುರುವಾಯಿತು. ಆದರೆ 2007ರ ಹೊತ್ತಿಗೆ ಅಂತರಿಕ್ಷವೆ ಪರೀಕ್ಷಾ ತಾಣವಾಗಿ ಹೊಸ ಬಗೆಯ ಆತಂಕ ಎದುರಾಯಿತು. ಚೀನ 1998ರಿಂದಲೇ ಫೆಂಗ್ಯುನ್-1- C ಎಂಬ ಹವಾಮಾನ ಉಪಗ್ರಹವನ್ನು ಕಕ್ಷೆಗೆ ಸೇರಿಸಿತ್ತು. ಅದು ಮುದಿಯಾಯಿತು ಎಂದು ಕ್ಷಿಪಣಿ ಬಿಟ್ಟು ಅದನ್ನು ಧ್ವಂಸಮಾಡಿದಾಗ ಏಕಾಏಕಿ 2500 ಚೂರುಗಳು ಕಕ್ಷೆಯಲ್ಲಿ  ತೇಲಿದವು. ಇದಾದ ಎರಡು ವರ್ಷಗಳಲ್ಲಿ ನಿಷ್ಕ್ರಿಯವಾಗಿದ್ದ ಕಾಸ್ಮೋಸ್ ಹೆಸರಿನ ರಷ್ಯದ ಉಪಗ್ರಹವೊಂದು ಅಮೆರಿಕದ ಇರಿಡಿಯಂ ಎಂಬ ಉಪಗ್ರಹಕ್ಕೆ 790 ಕಿಲೋ ಮೀಟರ್ ಎತ್ತರದಲ್ಲಿ ಡಿಕ್ಕಿ ಹೊಡೆದಾಗ ಈ ಎರಡೂ ಉಪಗ್ರಹಗಳ ವೇಗ ಸೆಕೆಂಡಿಗೆ 11.8 ಕಿಲೋ ಮೀಟರ್ ಇತ್ತು. ಮತ್ತೆ ಸಾವಿರಾರು ಜಂಕ್‍ಗಳು ಕಕ್ಷೆಯಲ್ಲಿ ತೇಲಿದವು. ಇದು ಅಂತರಿಕ್ಷದ ಮೊದಲ ಟ್ರಾಫಿಕ್ ಜಾಂ ಎನ್ನಿಸಿತ್ತು. ಎರಡು ಉಪಗ್ರಹಗಳು ಪರಸ್ಪರ ಡಿಕ್ಕಿ ಹೊಡೆದು ಧ್ವಂಸವಾಗಿಹೋದ ಮೊದಲ ಘಟನೆ ಎಂಬುದಾಗಿ ಖ್ಯಾತಿ(?)  ಗಳಿಸಿದೆ.

ಅಂತರಿಕ್ಷ ತಂತ್ರಜ್ಞಾನದಲ್ಲಿ ಜಗತ್ತು ಎಷ್ಟು ಮುಂದುವರಿದಿದೆ ಎಂದರೆ ನಮ್ಮ ಸೌರಮಂಡಲವನ್ನೇ ದಾಟಿ ಅಂತರ ನಕ್ಷತ್ರ ವಲಯವನ್ನು (ಇಂಟರ್ ಸ್ಟೆಲ್ಲಾರ್) ವಾಯೇಜರ್ ನೌಕೆ ತಲಪಿದೆ. ಅನ್ಯಗ್ರಹಗಳ ಬುದ್ಧಿಜೀವಿಗಳನ್ನು ಹುಡುಕುವಲ್ಲಿ ಯಾರು ಮೊದಲಿಗರು ಎಂಬ ಪೈಪೋಟಿ ಸದ್ಯಕ್ಕಿದೆ. ಇಷ್ಟೆಲ್ಲ ಸಾಧನೆಯಾಗಿರುವಾಗ ಅಂತರಿಕ್ಷದ ಜಂಕನ್ನು ಗುಡಿಸಿ, ಗುಡ್ಡೆಹಾಕುವುದು ಕಷ್ಟವೆ? ಐಡಿಯಾಗಳು ಬೇಕಾದಷ್ಟಿವೆ. ಲೇಸರ್ ಬಿಟ್ಟು ಈ ಚೂರುಪಾರುಗಳನ್ನು ಕರಗಿಸಿ ಮತ್ತೆ ಉಳಿದವುಗಳನ್ನು ಭೂಮಿಯ ವಾಯುಗೋಳದಲ್ಲಿ ಮರುಪ್ರವೇಶವಾಗುವಂತೆ ಮಾಡಿದರೂ ಸಾಕು ಅಲ್ಲೇ ಭಸ್ಮವಾಗುತ್ತವೆ-ಉಲ್ಕೆಗಳು ಭಸ್ಮವಾಗುತ್ತವಲ್ಲ ಹಾಗೆ. ಇದಕ್ಕೆ ಅಂತಾರಾಷ್ಟ್ರೀಯ ಒಪ್ಪಿಗೆ ಬೇಕು. ಇದೇ ತಂತ್ರ ಬಳಸಿ ಶತ್ರು ದೇಶದ ಉಪಗ್ರಹಗಳನ್ನೆಲ್ಲ ನಾಶಮಾಡಬಹುದಲ್ಲ! ಸದ್ಯಕ್ಕೆ ಇದು ಆಗದ ಮಾತು. ಜಪಾನ್ ಒಂದು ಐಡಿಯಾ ಮಾಡಿದೆ. ಉಪಗ್ರಹಕ್ಕೆ 700 ಮೀಟರ್ ಬಲೆಯನ್ನು ಕಟ್ಟಿ ಅಂತರಿಕ್ಷದ ಕಸವನ್ನೆಲ್ಲ ಬಾಚಿಕೊಳ್ಳುವುದು. ಬಲೆಹಾಕಿ ಮೀನು ಹಿಡಿದಂತೆ! ಆ ಬಲೆಗೆ ಕಾಂತತ್ವವಿರುತ್ತದೆ. ಇದೂ ಕೂಡ ಕಾರ್ಯರೂಪಕ್ಕೆ ಬಂದಿಲ್ಲ.

space Deb5

ವಾಸ್ತವವಾಗಿ ಭೂಮಿಯನ್ನು ಪರಿಭ್ರಮಿಸುವ ಉಪಗ್ರಹಗಳೆಲ್ಲ ಒಂದೇ ಎತ್ತರದಲ್ಲಿ ಪರಿಭ್ರಮಿಸುವುದಿಲ್ಲ. ಇದರಲ್ಲಿ ಮೂರು ಬೇರೆ ಬೇರೆ ನೆಲೆಗಳಿರುತ್ತವೆ. ಭೂಸಮೀಪ ಕಕ್ಷೆ-ಇದು 200ರಿಂದ 2000 ಕಿಲೋ ಮೀಟರ್ ಎತ್ತರದವರೆಗೆ ವಿಸ್ತರಿಸಿದೆ. ಇಂಟರ್ ನ್ಯಾಷನಲ್ ಸ್ಪೇಸ್ ಸ್ಟೇಷನ್ ಪರಿಭ್ರಮಿಸುತ್ತಿರುವುದು ಈ ಕಕ್ಷೆಯಲ್ಲಿ (400ಕಿಲೋ ಮೀಟರ್ ಎತ್ತರ). ಈ ಭಾಗದಲ್ಲಿ ಸಂಚಯವಾದ ಜಂಕ್‍ಗೆ ಭೂಮಿಯ ವಾಯುಗೋಳದ ಪ್ರಭಾವ ಇದ್ದೇ ಇರುತ್ತದೆ. ನೇವಿಗೇಷನ್ ಮತ್ತು ಕಮ್ಯುನಿಕೇಷನ್ ಉಪಗ್ರಹಗಳ ಕಕ್ಷೆ 10,000ರಿಂದ 20,000 ಕಿಲೋ ಮೀಟರ್ ಎತ್ತರದಲ್ಲಿರುತ್ತದೆ. ಸಾಮಾನ್ಯವಾಗ ಹವಾಮಾನ ಉಪಗ್ರಹಗಳು 36,000 ಕಿಲೋ ಮೀಟರ್ ಎತ್ತರದ ಕಕ್ಷೆಯಲ್ಲಿ ಸುತ್ತುತ್ತದೆ. ಇದರಿಂದೇನೂ ಆತಂಕವಿಲ್ಲ ಬಿಡಿ. ಸಹಸ್ರಾರು ವರ್ಷಗಳ ಕಾಲ ಅದೇ ಕಕ್ಷೆಯಲ್ಲಿರುತ್ತದೆ ನಿಷ್ಕ್ರಿಯವಾಗಿದ್ದರೂ ಕೂಡ. ಭೂಸಮೀಪ ಕಕ್ಷೆಯಲ್ಲಿರುವ ಜಂಕ್‍ನಿಂದಲೇ ಈಗ ಆತಂಕ ಒದಗಿರುವುದು. ಏಕೆಂದರೆ ಆ ಕಕ್ಷೆಯಿಂದ ಬಹುಬೇಗ ಭೂಗುರುತ್ವಾಕರ್ಷಣಕ್ಕೆ ಒಳಗಾಗುತ್ತವೆ.

ಇಷ್ಟೆಲ್ಲ ಸಮಸ್ಯೆ ಇರುವಾಗ ನಮ್ಮಲ್ಲಿ ಟ್ರಾಫಿಕ್ ರೂಲ್ಸ್ ಗಳಿದ್ದಂತೆ ಅಂತರಿಕ್ಷಕ್ಕೂ ಇದನ್ನು ವಿಸ್ತರಿಸಬೇಕು ಎಂದು ಅಮೆರಿಕದ ನಾಸಾ ಸಂಸ್ಥೆ ಒಂದು ಸಂಹಿತೆಯನ್ನು ರೂಪಿಸಿದೆ. ಸಾಮಾನ್ಯವಾಗಿ ಆರಂಭದ ಹಂತದಲ್ಲೇ ಜಂಕ್‍ಗಳು ಹೆಚ್ಚು ಬಿಡುಗಡೆಯಾಗದಂತೆ ವ್ಯವಸ್ಥೆಗೊಳಿಸುವುದು. ಭೂಸಮೀಪ ಕಕ್ಷೆಯಲ್ಲಿ ಬಹು ದೀರ್ಘಕಾಲ ಉಪಗ್ರಹಗಳು ತಮ್ಮ ಆಯುಷ್ಯ ಮುಗಿದಮೇಲೂ ಇರುತ್ತವೆ. ಈ ಅವಧಿಯನ್ನು ಕಡಿಮೆಗೊಳಿಸುವುದು ಜವಾಬ್ದಾರಿಯಾಗಬೇಕು. ಸಿಂಗಪುರದ ಅಸ್ಟ್ರೋಸ್ಕೇಲ್ ಎನ್ನುವ ಖಾಸಗಿ ಸಂಸ್ಥೆ ಅಮೆರಿಕದಿಂದ ಮೂವತ್ತು ಬಿಲಿಯನ್ ಡಾಲರ್ ನೆರವು ಪಡೆದು, 80 ಕಿಲೋ ಗ್ರಾಂನ ಪುಟ್ಟ ಉಪಗ್ರಹಕ್ಕೆ 20 ಕಿಲೋ ಗ್ರಾಂ ತೂಕದ ‘ಕ್ಯಾಚರ್’ ಎನ್ನುವ ಪುಟ್ಟ ಉಪಗ್ರಹವನ್ನು ಜೋಡಿಸಿ, ಅಂತರಿಕ್ಷದಲ್ಲಿರುವ ಅತಿ ಸೂಕ್ಷ್ಮ ಕಣವನ್ನು ಗುಡಿಸಿ ತರುವ, ತರುವಾಗಲೇ ಉಪಗ್ರಹ ಸೇರಿ ಮರುಪ್ರವೇಶ ಮಾಡುವಾಗ ಭಸ್ಮವಾಗುವಂತೆ ನೋಡಿಕೊಳ್ಳುವ ಯೋಜನೆಯನ್ನು ಮುಂದಿಟ್ಟಿದೆ. ಈಗ ಏಮಾರಿದರೆ ಪರಿಸ್ಥಿತಿ ಕೈಮೀರುತ್ತದೆ. ಯಾವೊಂದು ದೇಶದ ರಾಕೆಟ್‍ಗಳೂ ಕಕ್ಷೆಗೆ ಸೇರುವ ಮೊದಲೇ ಜಂಕ್ ದಾಳಿಗೆ ತುತ್ತಾಗಿ ಧ್ವಂಸವಾಗುತ್ತವೆ. ಯಾರಿಗೆ ಗೊತ್ತು, ಮುಂದೆ ಈಗ ರಿಸರ್ಚ್ ಮಾಡುತ್ತಿರುವ ಕಂಪನಿಗಳೇ ಅಂತರಿಕ್ಷದ ಜಂಕನ್ನು ಗುಡಿಸಿಹಾಕುವ ಗುತ್ತಿಗೆಯನ್ನೂ ಪಡೆದಾವು. ಆಗಲೂ ಸ್ಪರ್ಧೆ ಇರುತ್ತದೆ. ಆದರೆ ಕ್ಲೀನ್‍ಮಾಡುವ ಉಪಗ್ರಹಗಳೇ ಜಂಕ್ ಆಗಬಾರದು, ಅಷ್ಟೇ.

Leave a Reply