ರತನ್ ಟಾಟಾ ಆಸಕ್ತಿ ಸೆಳೆದಿರುವ ಈ ‘ಆರ್ಟಿಫಿಷಿಯಲ್ ಇಂಟಲಿಜೆನ್ಸ್’ ಸ್ವಾರಸ್ಯವಾದರೂ ಏನು?

ಡಿಜಿಟಲ್ ಕನ್ನಡ ಟೀಮ್

 ಆರ್ಟಿಫಿಷಿಯಲ್ ಇಂಟೆಲಿಜೆನ್ಸ್!

ಮನುಷ್ಯ ಮತ್ತು ಯಂತ್ರಗಳ ನಡುವಿನ ವಿವಾಹ ಎನ್ನಬಹುದಾದಂಥ ಇಂಥದೊಂದು ತಂರ್ಜ್ಞಾನ ಅಭಿವೃದ್ಧಿಯಲ್ಲಿ ಗೂಗಲ್ – ಫೇಸ್ಬುಕ್ ನಂಥ ಸಂಸ್ಥೆಗಳು ತೊಡಗಿಸಿಕೊಂಡಿವೆ ಎಂಬುದರ ಬಗ್ಗೆ ನಿಮಗೆ ತಿಳಿದಿರಬಹುದು.

ಇದೀಗ ಈ ಕೃತಕ ಬುದ್ಧಿಮತ್ತೆ ತಂತ್ರಜ್ಞಾನಭಿವೃದ್ಧಿಯ ಸ್ಟಾರ್ಟ್ ಅಪ್ ಆಗಿರುವ ನಿಕಿ.ಎಐಗೆ ಖ್ಯಾತ ಉದ್ಯಮಿಗಳಾದ ರತನ್ ಟಾಟಾ ಮತ್ತು ಯುನಿಲೆಜರ್ ವೆಂಚರ್ಸ್ ಸಂಸ್ಥಾಪಕ ರೋನಿ ಸ್ಕ್ರ್ಯೂವಾಲಾ ಬಂಡವಾಳ ಹೂಡಿದ್ದಾರೆ. ಟಾಟಾ ಪರಿಚಯದ ಅಗತ್ಯವಿಲ್ಲ. ಇನ್ನು ರೋನಿ ಸ್ಕ್ರೂವಾಲಾ ಈ ತಲೆಮಾರಿನ ಯಶಸ್ವಿ ಉದ್ಯಮಿಗಳಲ್ಲೊಬ್ಬರು. ಯುಟಿವಿ ಸ್ಥಾಪಿಸಿ ನಂತರ ಅದನ್ನು ಡಿಸ್ನಿಗೆ ಮಾರಿದ ಸ್ಕ್ರ್ಯೂವಾಲಾ, ಚಿತ್ರ ನಿರ್ಮಾಣ ಕ್ಷೇತ್ರದಲ್ಲೂ ಪರಿಚಿತ ಹೆಸರು.

ಇವರಿಬ್ಬರೂ ನಿಕಿ.ಎಐಗೆ ರಹಸ್ಯ ಮೊತ್ತವೊಂದನ್ನು ತೊಡಗಿಸಿರುವ ಸುದ್ದಿ, ಈ ಕೃತಕ ಬುದ್ಧಿಮತ್ತೆ ಎಂಬ ತಂತ್ರಜ್ಞಾನದ ಕುರಿತೇ ನಮ್ಮ ಆಸಕ್ತಿ ಗರಿಗೆದರುವಂತೆ ಪ್ರಚೋದಿಸುತ್ತಿದೆ.

ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಅಂದರೆ..

ಇಲ್ಲಿ ಹೆಸರೇ ಹೇಳುವಂತೆ ಇದೊಂದು ಕೃತಕ ಬುದ್ಧಿ ಎಂಬ ಅರ್ಥ. ಚಿಕ್ಕದಾಗಿ ಹೇಳುವುದಾದರೆ, ಕಂಪ್ಯೂಟರ್, ಮೊಬೈಲ್ ಫೋನ್ ನಂತಹ ಯಂತ್ರೋಪಕರಣಗಳು ಮನುಷ್ಯನಂತೆ ಯೋಚಿಸುವುದೇ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್. ಇಲ್ಲಿ ಯಂತ್ರೋಪಕರಣಗಳು ಅಥವಾ ಸಾಧನಗಳು ಮನುಷ್ಯನ ಜತೆ ಸಂವಹನ ನಡೆಸಲು ಕಲ್ಪಿಸುವ ಕೃತಕ ಬುದ್ಧಿ.

ಈ ತಂತ್ರಜ್ಞಾನದಿಂದಲೇ ರೋಬೋಟ್ ನಿರ್ಮಾಣದಂತಹ ಆವಿಷ್ಕಾರ ಸಾಧ್ಯವಾಗಿರುವುದು. ಇದರ ವಿಸ್ತಾರ ಸ್ವರೂಪ ನೋಡುವುದಾದರೆ, ಭವಿಷ್ಯದಲ್ಲಿ ಮಾನವನ ಸಂಭಾಷಣೆ ಆಧರಿಸಿ ಸ್ವಯಂ ಚಾಲಿತ ಕಾರು ನಿರ್ಮಾಣದಂತಹ ಕಲ್ಪನೆಯೂ ಇದೆ.

ಈ ಆರ್ಟಿಫಿಷಿಯಲ್ ಇಂಟಲಿಜೆನ್ಸ್ ತಂತ್ರಜ್ಞಾನದ ಮೂಲಕ ಮನುಷ್ಯ ಯಂತ್ರಗಳೊಂದಿಗೆ ಸಂವಹನ ನಡೆಸಿ ತನ್ನ ಕಾರ್ಯ ಸಾಧಿಸಿಕೊಳ್ಳಬಲ್ಲ. ಮನುಷ್ಯನ ಮಾತುಗಳನ್ನು ಯಂತ್ರಗಳು ಅರಿತು ಅದಕ್ಕೆ ಸ್ಪಂದಿಸುವ ಒಂದು ಪ್ರಕ್ರಿಯೆ. ಈ ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಬಳಸಿಕೊಂಡು ಕಂಪ್ಯೂಟರ್ ಹೇಗೆ ವ್ಯಕ್ತಿಯ ಆದೇಶವನ್ನು ಪಾಲಿಸಿ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ಇಲ್ಲಿ ನೋಡಿ.

ನಿಕಿ.ಎಐ ಸ್ಟಾರ್ಟ್ ಅಪ್ ನ ಸೇವೆಗಳು..

ಮೂಲತಃ ಇದೊಂದು ಮೊಬೈಲ್ ಆ್ಯಪ್. ಆರ್ಟಿಫಿಶಿಯಲ್ ಇಂಟಲಿಜೆನ್ಸ್ ತಂತ್ರಜ್ಞಾನದ ಮೂಲಕ ಮನುಷ್ಯನ ಅಗತ್ಯಗಳನ್ನು ಪೂರೈಸುತ್ತದೆ. ಇಲ್ಲಿ ವ್ಯಕ್ತಿ ಕೇವಲ ಚಾಟ್ ಮೂಲಕ ತನ್ನ ಹಲವು ಕೆಲಸಗಳನ್ನು ಮಾಡಬಹುದು. ಸದ್ಯ ಈ ಆ್ಯಪ್ ನಲ್ಲಿ ಬಿಲ್ ಪಾವತಿ, ಕ್ಯಾಬ್ ಬುಕ್ಕಿಂಗ್, ಕ್ರಿಕೆಟ್ ಸ್ಕೋರ್, ಮೊಬೈಲ್ ರೀಚಾರ್ಜ್ ನಂತಹ ಕೆಲಸವನ್ನು ಕೇವಲ ಚಾಟ್ ಮೂಲಕವೇ ಮಾಡಿಕೊಳ್ಳಬಹುದು. ಇಲ್ಲಿ ವ್ಯಕ್ತಿ ತನಗೆ ಕ್ಯಾಬ್ ಬೇಕಿದ್ದರೆ, ಒಂದು ಸಂದೇಶ ಕಳುಹಿಸಬೇಕು. ಆ ವ್ಯಕ್ತಿ ಇರುವ ಸ್ಥಳವನ್ನು ಅರಿತು ತಕ್ಷಣವೇ ಆ್ಯಪ್ ಕ್ಯಾಬ್ ಬುಕ್ಕಿಂಗ್ ಮಾಡಲು ನೆರವಾಗುತ್ತದೆ.

ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಮೂಲಕ ಈ ಆ್ಯಪ್ ಹೇಗೆ ಕಾರ್ಯ ನಿರ್ವಹಿಸುತ್ತದೆ ಎಂದು ಇಲ್ಲಿ ನೋಡಬಹುದು.

ಸದ್ಯ ಕ್ರಿಕೆಟ್ ಸ್ಕೋರ್, ಬಿಲ್ ಪೇಮೆಂಟ್, ಕ್ಯಾಬ್ ಬುಕ್ಕಿಂಗ್ ಸೇವೆಗಳಿಗೆ ಮಾತ್ರ ಸೀಮಿತವಾಗಿರುವ ನಿಕಿ.ಎಐ ಉದ್ದಿಮೆದಾರರಿಂದ ಬಂಡವಾಳ ಪಡೆದ ನಂತರ ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಳ್ಳುವತ್ತ ಚಿಂತನೆ ನಡೆಸಿದೆ. ಮುಂದಿನ ದಿನಗಳಲ್ಲಿ ಬಸ್ ಟಿಕೆಟ್, ಡಾಕ್ಟರ್ ಸಂಪರ್ಕಿಸಲು ಅಪಾಂಯ್ಟಿಮೆಂಟ್, ಹೊಟೇಲ್ ಬುಕ್ಕಿಂಗ್ ಗಳ ಸೇವೆಯನ್ನು ನೀಡಲು ಎದುರು ನೋಡುತ್ತಿದೆ.

ಇವೆಲ್ಲ ಕೃತಕ ಬುದ್ಧಿಮತ್ತೆಯ ಸಾಧ್ಯತೆಗಳ ಹರವು ಅಷ್ಟೆ. ಮುಂದುವರಿದು ಏನನ್ನೆಲ್ಲ ಸಾಕಾರಗೊಳಿಸುವ ನಕ್ಷೆಗಳನ್ನು ತಂತ್ರಜ್ಞಾನ ಕಂಪನಿಗಳು ಹರವಿಡುತ್ತಿವೆ. ಇದು ಹೀಗೇ ಮುಂದುವರಿದು ರೋಬೊಟ್ ಗಳ ಗುಲಾಮಗಿರಿಗೆ ಮಾನವರನ್ನು ಒಳಪಡಿಸಲಿದೆ ಅಂತ ಎಚ್ಚರಿಸುತ್ತಿರೋರೂ ಇದ್ದಾರೆ. ಇದರ ಭವಿಷ್ಯ ಅಂತಂದ್ರೆ ಮತ್ತದೇ ಕ್ಲೀಷೆಯ ಮಾತು- ಕಾಲವೇ ಉತ್ತರಿಸಬೇಕಿದೆ ಎಂದು ಹೇಳಬೇಕು.

Leave a Reply