ದಾವುದ್ ಕರೆಗಳ ಪಟ್ಟಿಯಲ್ಲಿ ಮತ್ತಷ್ಟು ರಾಜಕಾರಣಿಗಳು

ಡಿಜಿಟಲ್ ಕನ್ನಡ ಟೀಮ್

ಮಹಾರಾಷ್ಟ್ರ ಬಿಜೆಪಿ ನಾಯಕ ಹಾಗೂ ಸಚಿವ ಏಕನಾಥ ಖಾಡ್ಸೆ ಭೂಗತ ಪಾತಕಿ ದಾವುದ್ ಇಬ್ರಾಹಿಂ ಜತೆಗೆ ಹಲವು ಬಾರಿ ದೂರವಾಣಿ ಸಂಪರ್ಕ ಹೊಂದಿದ್ದರು ಎಂದು ಆರೋಪಿಸಿದ್ದ ಹ್ಯಾಕರ್ ಮನೀಶ್ ಭಂಗಾಳೆ, ಈಗ ಮತ್ತೊಂದು ದೊಡ್ಡ ಆಪಾದನೆ ಮಾಡಿದ್ದಾನೆ. ಅದೇನಪ್ಪಾ ಅಂದ್ರೆ, ದಾವುದ್ ಜತೆಗೆ ಇನ್ನು ನಾಲ್ವರು ರಾಜಕಾರಣಿಗಳು ದೂರವಾಣಿ ಸಂಪರ್ಕದಲ್ಲಿದ್ದರು ಅಂಥಾ.

2015ರ ಸೆಪ್ಟೆಂಬರ್ 5 ರಿಂದ 2016ರ ಏಪ್ರಿಲ್ 6 ರವರೆಗೆ ಪಾಕಿಸ್ತಾನ ಟೆಲಿಕಮ್ಯುನಿಕೇಷನ್ ಕಂಪನಿ ಲಿಮಿಟೆಡ್ ಹ್ಯಾಕ್ ಮಾಡಿ ದಾವುದ್ ಇಬ್ರಾಹಿಂ ದೂರವಾಣಿ ಕರೆಗಳ ಮಾಹಿತಿಯನ್ನು ಸೋರಿಕೆ ಮಾಡಿರುವ ಮನೀಶ್, ಇತರೆ ರಾಜಕಾರಣಿಗಳ ಹೆಸರನ್ನು ಬಹಿರಂಗ ಪಡಿಸಿಲ್ಲ.

‘ಈ ರಾಜಕಾರಣಿಗಳ ನಿಜವಾದ ಹೆಸರು ನಿಖರವಾಗಿ ಗೊತ್ತಿಲ್ಲ. ನಾನು ಟ್ರೂಕಾಲರ್ ಮೂಲಕ ಇವರ ಹೆಸರನ್ನು ಪಡೆದಿದ್ದು, ಕೇವಲ ಏಕನಾಥ್ ಖಾಡ್ಸೆ ಅವರ ಹೆಸರು ಮಾತ್ರ ಸ್ಪಷ್ಟವಾಗಿ ಲಭಿಸಿದೆ. ಉಳಿದ ರಾಜಕಾರಣಿಗಳ ಹೆಸರು ಖಚಿತವಾಗಿ ತಿಳಿದಿಲ್ಲ. ಹೀಗಾಗಿ ಅವರ ಹೆಸರನ್ನು ಹೇಳುವುದಿಲ್ಲ.

ಅಧಿಕಾರಿಗಳಿಗೆ ಈ ಕುರಿತ ಮಾಹಿತಿಯನ್ನು ನೀಡಿದ್ದು, ಅವರು ತನಿಖೆ ನಡೆಸುತ್ತಿದ್ದಾರೆ. ಅಗತ್ಯ ಬಿದ್ದರೇ ಅವರೇ ಹೆಸರು ಬಹಿರಂಗ ಪಡಿಸುತ್ತಾರೆ. ಕಳೆದ ಏಳು ತಿಂಗಳಿನಿಂದ ಈ ಕುರಿತು ಸಾಕಷ್ಟು ಕಾರ್ಯ ನಿರ್ವಹಿಸಿದ್ದೇನೆ. ಹಲವು ಬಾರಿ ದುಬೈಗೂ ತೆರಳಿ ಮೂಲ ಮಾಹಿತಿಗಳನ್ನು ಪಡೆದಿದ್ದೇನೆ. ಅಲ್ಲಿ ಕೆಲವು ಮೂಲಗಳಿದ್ದು, ಮಾಹಿತಿ ಪಡೆದಿದ್ದೇನೆ ಎಂದು ಮಾಹಿತಿ ನೀಡಿದ್ದಾನೆ ಮನೀಶ್.

ಏಕನಾಥ್ ಖಾಡ್ಸೆ ಮೇಲಿನ ಆರೋಪದ ಬೆನ್ನಲ್ಲೇ ಸಾಲು ಸಾಲಾಗಿ ಇತರೆ ರಾಜಕಾರಣಿಗಳ ಜತೆಗಿನ ಸಂಪರ್ಕದ ಬಗ್ಗೆ ಆರೋಪ ಕೇಳಿಬಂದಿರುವುದು ಹೊಸ ಸಂಚಲನ ಮೂಡಿಸಿದೆ. ಹೀಗಾಗಿ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ತನಿಖೆ ನಡೆಸುವ ಅಗತ್ಯವಿದೆ ಎಂಬುದು ಸ್ಪಷ್ಟವಾಗಿ ಗೋಚರಿಸುತ್ತಿದೆ.

Leave a Reply