ನಗದು ರಹಿತ ಆರ್ಥಿಕತೆ, ಮಳೆ ನೀರು ಸಂರಕ್ಷಣೆ: ಇದು ಪ್ರಧಾನಿ ಮೋದಿ ಮನ್ ಕಿ ಬಾತ್

ಡಿಜಿಟಲ್ ಕನ್ನಡ ಟೀಮ್

ಪ್ರಧಾನಿ ನರೇಂದ್ರ ಮೋದಿ ಭಾನುವಾರ 20ನೇ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಮಾತನಾಡಿದರು. ನಗದು ರಹಿತ ಆರ್ಥಿಕತೆ ಮತ್ತು ಜಲ ಸಂಗ್ರಹಣೆ ಎರಡು ಪ್ರಮುಖ ವಿಷಯಗಳನ್ನು ಈ ಕಾರ್ಯಕ್ರಮದಲ್ಲಿ ಪ್ರಸ್ತಾಪಿಸಿದರು. ಮೋದಿ ಈ ವಿಷಯಗಳ ಬಗ್ಗೆ ತಮ್ಮ ಕಾರ್ಯಕ್ರಮದಲ್ಲಿ ಹೇಳಿದಿಷ್ಟು.

‘ಭಾರತವನ್ನು ಆಧುನಿಕರಣ, ಪಾರದರ್ಶಕತೆಯತ್ತ ಕರೆದೊಯ್ಯಬೇಕು. ದೇಶದಾದ್ಯಂತ ಈ ಎರಡು ಅಂಶಗಗಳನ್ನು ಅನುಷ್ಠಾನಗೊಳಿಸಬೇಕು. ಈ ಹಿಂದೆ ವಸ್ತು ವಿನಿಮಯದ ಮೂಲಕ ವ್ಯಾಪಾರ ನಡೆಯುವ ವ್ಯವಸ್ಥೆ ಇತ್ತು. ನಂತರ ನೋಟುಗಳು ಮತ್ತು ನಾಣ್ಯಗಳ ಪರಿಚಯವಾಯ್ತು. ಈಗ ವಿಶ್ವವೇ ನಗದು ರಹಿತ ಆರ್ಥಿಕತೆಯತ್ತ ಸಾಗುತ್ತಿದೆ. ಈ ಸಂದರ್ಭದಲ್ಲಿ ಭಾರತವೂ ಆ ವ್ಯವಸ್ಥೆಯತ್ತ ಮುಖ ಮಾಡಬೇಕು. ಇದನ್ನು ಅಳವಡಿಸಿಕೊಳ್ಳಲು ಆರಂಭದಲ್ಲಿ ಕಷ್ಟವಾಗಬಹುದು. ಒಮ್ಮೆ ಒಗ್ಗಿಕೊಂಡರೆ ನಂತರ ಎಲ್ಲವೂ ಸುಲಭವಾಗಲಿದೆ.

ಜನ ಧನ, ಆಧಾರ್ ಮತ್ತು ಮೊಬೈಲ್ (ಜೆಎಎಂ) ಮೂರು ಅಂಶಗಳು ನಗದು ರಹಿತ ಆರ್ಥಿಕತೆಯತ್ತ ಸಾಗಲು ನೆರವಾಗುತ್ತವೆ. ಸರ್ಕಾರದ ನಿಯಮಗಳನ್ನು ಪಾಲಿಸಿದರೆ, ಕಪ್ಪು ಹಣ ತಡೆಗಟ್ಟಿ ಪಾರದರ್ಶಕತೆಯನ್ನು ತರಬಹುದು. ಈ ನಿಟ್ಟಿನಲ್ಲಿ ಸರ್ಕಾರ ರುಪೇ ಕಾರ್ಡ್ ಮತ್ತು ಆನ್ ಲೈನ್ ವರ್ಗಾವಣೆ ಅವಕಾಶ ಕಲ್ಪಿಸಲಾಗಿದೆ.

ದೇಶ ಗಂಭೀರವಾಗಿ ಚಿಂತಿಸಬೇಕಿರುವ ಮತ್ತೊಂದು ವಿಷಯ ನೀರು ಸಂರಕ್ಷಣೆ. ಆರಂಭದಲ್ಲಿ ನೀರನ್ನು ನಿರ್ಲಕ್ಷಿಸಿ ನಂತರ ಪರದಾಡುವ ಪರಿಸ್ಥಿತಿಗೆ ಸಿಲುಕಬಾರದು. ಮಳೆಗಾಲ ಆಗಮಿಸುತ್ತಿದ್ದು, ನೀರಿನ ಸಂರಕ್ಷಣೆಗೆ ಎಲ್ಲ ಕ್ರಮ ಕೈಗೊಳ್ಳಬೇಕು. ನೀರನ್ನು ದುರ್ಬಳಕೆ ಹಾಗೂ ಪೋಲು ಮಾಡದೇ, ಪ್ರತಿ ಹನಿಯನ್ನು ಸಂಗ್ರಹಿಸಿ ಇಟ್ಟುಕೊಳ್ಳಬೇಕು.

ಈ ವರ್ಷ ಹಲವು ರಾಜ್ಯಗಳು ಬರ ಪರಿಸ್ಥಿತಿಗೆ ಸಿಲುಕಿವೆ. ಮುಂದಿನ ದಿನಗಳಲ್ಲಿ ಈ ಪ್ರದೇಶಗಳಲ್ಲಿ ಹೇಗೆ ಕ್ರಮ ಕೈಗೊಳ್ಳಬೇಕು ಎಂಬುದರ ಬಗ್ಗೆ ಸಂಶೋಧನೆ ನಡೆಸಿ ಉತ್ತಮ ಪರಿಹಾರ ಕಂಡುಕೊಳ್ಳುವಂತೆ ನೀತಿ ಆಯೋಗಕ್ಕೆ ಸೂಚಿಸಿದ್ದೇನೆ. ಕಳೆದ ಎರಡು ವರ್ಷಗಳಲ್ಲಿ ನಿರೀಕ್ಷಿತ ಮಳೆ ಬಾರದ ಕಾರಣ, ದೇಶವೇ ತತ್ತರಿಸಿದೆ. ಭಾರತದ ನೈರುತ್ಯ ಪ್ರದೇಶಗಳಲ್ಲಿ 2014ರಲ್ಲಿ ಶೇ. 12 ರಷ್ಟು ಹಾಗೂ ಕಳೆದ ವರ್ಷ ಶೇ. 14 ರಷ್ಟು ಮಳೆ ಪ್ರಮಾಣ ಕುಸಿದಿತ್ತು. ಇದು ಭಾರತದ ಅರ್ಧ ಕೃಷಿ ವಲಯಕ್ಕೆ ದೊಡ್ಡ ಸಮಸ್ಯೆಯಾಗಿತ್ತು.

ನೀರಿನ ಕೊರತೆ ಕೇವಲ ರೈತರಿಗೆ ಸಂಬಂಧಿಸಿದ ಸಮಸ್ಯೆಯಲ್ಲ. ಪ್ರತಿಯೊಬ್ಬರಿಗೂ ಅನ್ವಯಿಸುತ್ತದೆ. ಹಾಗಾಗಿ ಮುಂದಿನ ನಾಲ್ಕು ತಿಂಗಳಲ್ಲಿ ಬೀಳುವ ಮಳೆ ನೀರನ್ನು ರಕ್ಷಿಸಿಕೊಳ್ಳಲು ನೀರು ಸಂರಕ್ಷಣೆ ಅಭಿಯಾನವನ್ನೇ ನಡೆಸೋಣ.’

Leave a Reply