2020ರ ಟೊಕಿಯೊ ಒಲಿಂಪಿಕ್ಸ್ ಗೆ ಉಲ್ಕೆಗಳು ತಯಾರಾಗ್ತಿವೆ!

ಡಿಜಿಟಲ್ ಕನ್ನಡ ಟೀಮ್

ಪ್ರತಿಷ್ಠಿತ ರಿಯೋ ಒಲಿಂಪಿಕ್ಸ್ ಗೆ ಹೆಚ್ಚು ಕಡಿಮೆ ಅಂದ್ರೆ 2 ತಿಂಗಳು ಮಾತ್ರ ಬಾಕಿ ಉಳಿದಿದೆ. ಆಗಸ್ಟ್ 5 ರಂದು ವರ್ಣರಂಜಿತ ಕಾರ್ಯಕ್ರಮಗಳ ಮೂಲಕ ಕ್ರೀಡಾಕೂಟಕ್ಕೆ ಅಭೂತಪೂರ್ವ ಚಾಲನೆ ದೊರೆಯಲಿದೆ. ಈ ಸಂದರ್ಭದಲ್ಲಿ 2020 ರ ಟೊಕಿಯೊ ಒಲಿಂಪಿಕ್ಸ್ ಆದಷ್ಟು ಬೇಗನೆ ಬರಲಿ ಎಂದು ಮನಸು ಹಾತೊರೆಯಲು ಆರಂಭಿಸಿದೆ. ಕಾರಣ, ಈ ಟೊಕಿಯೊ ಒಲಿಂಪಿಕ್ಸ್ ಉದ್ಘಾಟನಾ ಸಮಾರಂಭದಲ್ಲಿ ಉಲ್ಕೆಗಳು ಬಾನಂಗಳದಲ್ಲಿ ಚಿತ್ತಾರ ಮೂಡಿಸಲಿವೆ.

ಹೌದು, ಜಪಾನ್ ನ ಸ್ಟಾರ್ಟ್ ಅಪ್ ಕಂಪನಿಯೊಂದು ವಿನೂತನ ಪ್ರಯೋಗಕ್ಕೆ ಮುಂದಾಗಿದ್ದು, 2020 ರ ಟೊಕಿಯೊ ಒಲಿಂಪಿಕ್ಸ್ ನಲ್ಲಿ ಕೃತಕ ಉಲ್ಕೆಗಳ ಸೊಬಗನ್ನು ಅಭಿಮಾನಿಗಳಿಗೆ ಉಣಬಡಿಸಲು ಚಿಂತನೆ ನಡೆಸುತ್ತಿದೆ. ಸ್ಟಾರ್ ಎಎಲ್ಇ ಎಂಬ ಕಂಪನಿ, ಈ ಹೊಸ ಪರಿಕಲ್ಪನೆಯನ್ನು ಕಾರ್ಯರೂಪಕ್ಕೆ ತರುವ ಎಲ್ಲ ಪ್ರಯೋಗಗಳನ್ನು ನಡೆಸುತ್ತಿದೆ.

ಮುಂದಿನ ವರ್ಷದಿಂದ ಇದರ ಪ್ರಯೋಗಗಳು ಆರಂಭವಾಗಲಿವೆ. ಸಣ್ಣ ಸ್ಯಾಟಲೈಟ್ ಮೂಲಕ ನೂರಾರು ಕಿರಿದಾದದ ಗುಂಡುಗಳನ್ನು ಬಾಹ್ಯಾಕಾಶದಲ್ಲಿ ತೇಲಿ ಬಿಡಲಾಗುವುದು. ಇವು ವಾಯುಗೋಳ ಪ್ರವೇಶಿಸುತ್ತಿದ್ದಂತೆ ಹೊತ್ತಿ ಉರಿಯಲು ಆರಂಭಿಸುತ್ತದೆ. ಆಗ ಇವು ಉಲ್ಕೆಗಳು ಸಾಗುತ್ತಿರುವಂತೆ ಕಾಣುತ್ತವೆ. ಅಲ್ಲದೆ ವಾಯುಗೋಳದಲ್ಲಿ ತನ್ನ ಚಲಿಸುವ ವೇಗವನ್ನು ಮೂರು ಪಟ್ಟು ಹೆಚ್ಚಿಸಿಕೊಳ್ಳುತ್ತದೆ. ಈ ಗುಂಡುಗಳು ಭೂಮಿಯಿಂದ 30 ರಿಂದ 35 ಮೈಲುಗಳ ಎತ್ತರದ ಕಕ್ಷೆಯಲ್ಲಿ ಚಲಿಸುತ್ತವೆ. ಇಂತಹ 500 ರಿಂದ 100 ಸಣ್ಣ ಗುಂಡುಗಳನ್ನು ರಾತ್ರಿ ವೇಳೆ ಬಿಟ್ಟಾಗ ಬಾನಂಗಳದಲ್ಲಿ ಉಲ್ಕೆಗಳ ಸಮೂಹವೇ ಚಲಿಸುವ ಅಮೋಘ ದೃಶ್ಯ ಅಭಿಮಾನಿಗಳ ಕಣ್ತುಂಬಿಸಲಿದೆ.

ಮಾನವ ನಿರ್ಮಿತ ಉಲ್ಕೆಗಳಿಂದ ಟೊಕಿಯೊ ಒಲಿಂಪಿಕ್ಸ್ ಗೆ ವಿಭಿನ್ನ ಮನರಂಜನೆಯ ಸ್ಪರ್ಶ ನೀಡುವುದು ಈ ಪ್ರಯೋಗದ ಮುಖ್ಯ ಉದ್ದೇಶವಾಗಿದೆ. ಈ ಪ್ರಯೋಗ ಸಾಕಷ್ಟು ದುಬಾರಿಯೇ ಆಗಿದೆ. ಕಾರಣ, ಪ್ರತಿಯೊಂದು ಕಿರಿದಾದ ಗುಂಡುಗಳು ಸುಮಾರು ₹ 5.50 ಲಕ್ಷ (8,100 ಅಮೆರಿಕನ್ ಡಾಲರ್) ದಷ್ಟು ದುಬಾರಿಯಾಗಲಿವೆ. ಒಟ್ಟಿನಲ್ಲಿ ಟೊಕಿಯೊ ಒಲಿಂಪಿಕ್ಸ್ ವೇಳೆ ಅಭಿಮಾನಿಗಳು ಬಾನೆತ್ತರದಲ್ಲಿ ಕೃತಕ ಉಲ್ಕೆಗಳ ಚಲಿಸುವ ಆಕರ್ಷಣೀಯ ದೃಶ್ಯವನ್ನು ಕಣ್ತುಂಬಿಕೊಳ್ಳಲಿರುವುದು ಸಾಕಷ್ಟು ಕುತೂಹಲ ಮೂಡಿಸಿದೆ.

ಈ ಮಾನವ ನಿರ್ಮಿತ ಉಲ್ಕೆ ಹೇಗಿರುತ್ತೆ ಎಂಬುದನ್ನು ಈ ವಿಡಿಯೋದಲ್ಲಿ ನೋಡಿ.

Leave a Reply