65 ಕೋಟಿ ಬಾಚಿದ ಈ ಮರಾಠಿ ಚಿತ್ರ ಮುಖ್ಯವಾಗೋದೇಕೆ ಗೊತ್ತೆ ?

ಡಿಜಿಟಲ್ ಕನ್ನಡ ಟೀಮ್

ಸದ್ಯ ಭಾರತೀಯ ಚಿತ್ರರಂಗದಲ್ಲಿ ಬಾಲಿವುಡ್ ಹಾಗೂ ಟಾಲಿವುಡ್ ಸಿನಿಮಾದ ಯಶಸ್ಸಿನ ಲೆಕ್ಕಾಚಾರ ಏನೇ ಇದ್ರು ನೂರು ಕೋಟಿ ಲೆಕ್ಕಚಾರದ್ದು. ಆದರೆ, ಸಿನಿಮಾ ಯಶಸ್ಸು ಕೇವಲ ಇದೊಂದೆ ಅಲ್ಲ ಅಂತಾ ಪ್ರಾದೇಶಿಕ ಭಾಷಾ ಸಿನಿಮಾಗಳು ಆಗಾಗ್ಗೆ ಮನವರಿಕೆ ಮಾಡುತ್ತಿರೋದನ್ನು ನೋಡಿದ್ದೇವೆ. ಅದೇ ರೀತಿ ಈಗ ‘ಸೈರಾತ್’ ಮರಾಠಿ ಚಿತ್ರವೊಂದು ಸಖತ್ ಸೌಂಡ್ ಮಾಡ್ತಾ, ಭಾರತೀಯ ಎಲ್ಲ ಸಿನಿರಸಿಕರ ಗಮನ ಸೆಳೆಯುತ್ತಿದೆ.

ಈ ಸೈರಾತ್ ಬಿಡುಗಡೆಯಾಗಿ 3 ವಾರ ಕಳೆದಿದೆ. ಈ ಅವಧಿಯಲ್ಲಿ ಚಿತ್ರ ಗಳಿಸಿರೋದು ₹ 65 ಕೋಟಿ. ಹೌದು, ಬಾಲಿವುಡ್ ನವ್ರು 100 ಕೋಟಿಗಳಲ್ಲಿ ಮಾತಾಡೊವಾಗ ಇದೇನು ಮಹಾನಾ ಅಂತಾ ಅನಿಸಬಹುದು. ಆದ್ರೆ, ನಮ್ಮಲ್ಲಿ ಪ್ರಾದೇಶಿಕ ಭಾಷೆಗಳ, ಅದರಲ್ಲೂ ಹಿಂದಿ ಚಿತ್ರಗಳ ಮಾರುಕಟ್ಟೆಯ ಅಬ್ಬರ ಹೆಚ್ಚಿರುವ ಮಹಾರಾಷ್ಟ್ರದಲ್ಲಿ ಮರಾಠಿ ಚಿತ್ರವೊಂದು 65 ಕೋಟಿ ಗಳಿಕೆ ದೊಡ್ಡ ಸಾಧನೆಯೇ ಸರಿ.

ಈ ಚಿತ್ರ ಇಷ್ಟು ಪ್ರಮಾಣದಲ್ಲಿ ಯಶಸ್ಸು ಸಾಧಿಸಿದೆ ಎಂದರೆ, ಮೇಲ್ನೋಟಕ್ಕೆ ಇದೊಂದು ಕಮರ್ಶಿಯಲ್ ಚಿತ್ರ ಎನಿಸಬಹುದು. ಆದರೆ ಇದೊಂದು ಸಾಮಾಜಿಕ ಕಳಕಳಿಯ ಚಿತ್ರ ಎಂಬುದು ವಿಶೇಷ. ಇಲ್ಲಿ ಫೈಟ್, ಸ್ಟಂಟ್ ಬಳಸಿಲ್ಲ. ಚಿತ್ರದ ನೆಲೆ ನಿಂತಿರೋದೇ ನಮ್ಮ ಸಮಾಜದಲ್ಲಿ ಅಂತರ ಜಾತಿ ವಿವಾಹ ವಿಷಯ ಆಧರಿಸಿ. ಹಿಂದಿ ಸೇರಿದಂತೆ ಇತರೆ ಭಾಷೆಗಳಲ್ಲಿ ಈ ಕಥೆ ಆಧರಿಸಿ ಸಾಕಷ್ಟು ಚಿತ್ರ ಮೂಡಿಬಂದಿದ್ದು, ಯಶಸ್ಸು ಸಹ ಕಂಡಿವೆ. ಆದರೆ, ಸೈರಾತ್ ಮಾತ್ರ ಈ ಚಿತ್ರಗಳಂತೆ ಕಮರ್ಶಿಯಲ್ ಅಂಶವನ್ನು ಹೊಂದಿರದೇ, ವಾಸ್ತವಿಕ ನೆಲೆಗಟ್ಟಿನಲ್ಲಿ ನಿರ್ಮಿಸಲಾಗಿದೆ.

ಈ ಚಿತ್ರದ ಕತೆಯಲ್ಲಿ ಎರಡು ಬೇರೆ ಬೇರೆ ಜಾತಿಯ ಹುಡುಗ ಮತ್ತು ಹುಡುಗಿ ತಮ್ಮ ಪ್ರೀತಿಯನ್ನು ದಕ್ಕಿಸಿಕೊಳ್ಳುವುದಕ್ಕೆ ಅವರು ಎದುರಿಸುವ ಪರಿಸ್ಥಿತಿ, ಸವಾಲುಗಳನ್ನು ನಿಭಾಯಿಸಿ ಮದುವೆಯಾಗೋ ಪ್ರಸಂಗವನ್ನು ವಾಸ್ತವಿಕವಾಗಿ ಚಿತ್ರಿಸಲಾಗಿದೆ. ಇಲ್ಲಿ ಯಾವುದೇ ಜಾತಿ, ಧರ್ಮವನ್ನು ಗುರಿಯಾಗಿಸದೇ, ಸಮಾಜದಲ್ಲಿನ ವ್ಯವಸ್ಥೆಯ ಮೇಲೆ ಬೆಳಕು ಚೆಲ್ಲಿರುವುದು ಈ ಚಿತ್ರದ ವಿಶೇಷ.

ಇಲ್ಲಿ ನಾವು ಗಮನಿಸಬೇಕಿರೋ ಮತ್ತೊಂದು ಪ್ರಮುಖ ಅಂಶ ಎಂದರೆ, ಸಾಮಾಜಿಕ ಕಳಕಳಿಯ ಚಿತ್ರ ಕೇವಲ ಚಿತ್ರೋತ್ಸವಗಳಿಗೆ, ವಿಮರ್ಶಕರ ಪ್ರಶಂಸೆಗೆ ಅಥವಾ ರಾಜ್ಯ ಸರ್ಕಾರ ನೀಡುವ ಪ್ರಶಸ್ತಿ ಪಡೆಯುವುದಕ್ಕಾಗಿ ಮಾಡಲಾಗುತ್ತದೆ ಎಂಬ ತಪ್ಪು ಕಲ್ಪನೆ ಇದೆ. ಇಂತಹ ಸಂದರ್ಭದಲ್ಲಿ ಸೈರಾತ್ ಚಿತ್ರ, ವಿಮರ್ಶಕರ ಮೆಚ್ಚುಗೆ ಜತೆಗೆ ಇಷ್ಟು ದೊಡ್ಡ ಪ್ರಮಾಣದಲ್ಲಿ ಹಣ ಗಳಿಕೆಯನ್ನು ಮಾಡಬಹುದು ಎಂದು ಸಾಬೀತು ಪಡಿಸಿರೋದು ಪ್ರಶಂಸನೀಯ.

1 COMMENT

  1. super … and this is moves kannada dallu maduthavre so kannada dallu thobne oneddu olle kannada da moves agalle yanddu kannadaru olle uthama yagalli kannadaku all tha beist

Leave a Reply