ಮೇಲ್ಮನೆಗೆ ಸೋಮಣ್ಣ ಮರುಆಯ್ಕೆ ವಿಚಾರ; ಯಡಿಯೂರಪ್ಪ ವಿರೋಧಕ್ಕೆ ಸೊಪ್ಪು ಹಾಕದ ಕೋರ್ ಕಮಿಟಿ ಇತರ ನಾಯಕರು!

ಡಿಜಿಟಲ್ ಕನ್ನಡ ಟೀಮ್:

ರಾಜ್ಯ ಬಿಜೆಪಿ ನೂತನ ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರೇ ಒಂದು, ಉಳಿದ ಮುಖಂಡರೇ ಒಂದು – ಬೆಂಗಳೂರಿನಲ್ಲಿ ಭಾನುವಾರ ನಡೆದ ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಹೊರಹೊಮ್ಮಿದ ಸರಳ ಸಂದೇಶವಿದು.

ಮುಂದಿನ ತಿಂಗಳು ವಿಧಾನಸಭೆಯಿಂದ ಮೇಲ್ಮನೆ ಹಾಗೂ ರಾಜ್ಯಸಭೆಗೆ ನಡೆಯುವ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ಸಂಬಂಧ ಕರೆಯಲಾಗಿದ್ದ ಈ ಸಭೆಯಲ್ಲಿ ಯಡಿಯೂರಪ್ಪ ಅವರ ಹಳೇ ರಾಗ-ದ್ವೇಷ ತುಂಬಿದ ಅಭಿಪ್ರಾಯಗಳಿಗೆ ಬ್ರೇಕ್ ಹಾಕುವ ಧೈರ್ಯವನ್ನು ಉಳಿದ ಮುಖಂಡರು ಪ್ರದರ್ಶಿಸಿದ್ದೇ ಇಂದಿನ ಹೈಲೈಟ್. ಯಡಿಯೂರಪ್ಪ ಅವರು ಹೇಳಿದ್ದನ್ನು ಸುಮ್ಮನೆ ಕೇಳುವ ಸ್ಥಿತಿಯಲ್ಲಿ ಯಾರೂ ಇಲ್ಲ ಎಂಬುದನ್ನೂ ಈ ಸಭೆ ಪ್ರತಿಬಿಂಬಿಸಿತು.

ಯಡಿಯೂರಪ್ಪ, ವಿಧಾನಸಭೆ ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್, ಮಾಜಿ ಉಪಮುಖ್ಯಮಂತ್ರಿಗಳಾದ ಆರ್. ಅಶೋಕ್, ಕೆ.ಎಸ್. ಈಶ್ವರಪ್ಪ, ಕೇಂದ್ರ ಸಚಿವರಾದ ಅನಂತಕುಮಾರ್, ಸದಾನಂದಗೌಡ, ಮಾಜಿ ರಾಜ್ಯಾಧ್ಯಕ್ಷ ಪ್ರಹ್ಲಾದ ಜೋಷಿ ಅವರು ಪಾಲ್ಗೊಂಡಿದ್ದ ಸಭೆಯಲ್ಲಿ ಮೇಲ್ಮನೆಗೆ ಬಿಜೆಪಿ ಬೆಂಗಳೂರು ನಗರಾಧ್ಯಕ್ಷ ಸುಬ್ಬ ನರಸಿಂಹ (ಸುಬ್ಬಣ್ಣ) ಅಥವಾ ಭಾರತೀಯ ಮಜ್ದೂರ್ ಸಂಘದ ಡಿ.ಕೆ. ಸದಾಶಿವ ಅವರನ್ನು ಅಭ್ಯರ್ಥಿ ಮಾಡಬೇಕು ಎಂಬ ಅಭಿಪ್ರಾಯ ಬಂದದ್ದು ಸ್ವತಃ ಯಡಿಯೂರಪ್ಪ ಅವರಿಂದ. ಆದರೆ ಈಶ್ವರಪ್ಪ ಅವರನ್ನು ಹೊರತುಪಡಿಸಿ ಉಳಿದ ಮುಖಂಡರು ಸೋಮಣ್ಣ ಬಗ್ಗೆ ಒಲವು ತೋರಿದರು. ಈ ಹಿಂದೆ ಯಡಿಯೂರಪ್ಪ ಅವರು ಬಿಜೆಪಿ ತೊರೆದು ಕೆಜೆಪಿ ಕಟ್ಟಿದಾಗ ಅನೇಕ ಮುಖಂಡರು ಆ ಪಕ್ಷಕ್ಕೆ ವಲಸೆ ಹೋಗದಂತೆ ತಡೆದ ಸೋಮಣ್ಣನವರ ಪರ ಅವರೆಲ್ಲ ಬ್ಯಾಟಿಂಗ್ ಮಾಡಿದರು. ತಮ್ಮೊಡನೆ ಕೆಜೆಪಿಗೆ ಬರಲಿಲ್ಲ ಎಂಬ ಕಾರಣಕ್ಕೆ ವಿಧಾನಸಭೆ ಚುನಾವಣೆಯಲ್ಲಿ ಸೋಮಣ್ಣ ಅವರನ್ನು ಸೋಲಿಸಲು ಯಡಿಯೂರಪ್ಪ ಒಳತಂತ್ರ ಮಾಡಿದರೆಂಬ ಆರೋಪವಿರುವುದನ್ನು ಇಲ್ಲಿ ಸ್ಮರಿಸಬಹುದು.

ಸೋಮಣ್ಣ ಹಿರಿಯ ಮುಖಂಡರಿದ್ದಾರೆ. ಪಕ್ಷಕ್ಕೆ ಬದ್ದರಾಗಿದ್ದಾರೆ. ಅವರಿಗೇ ಟಿಕೆಟ್ ನೀಡಬೇಕು ಎಂದು ಜಗದೀಶ್ ಶೆಟ್ಟರ್, ಅನಂತಕುಮಾರ್, ಸದಾನಂದಗೌಡ, ಪ್ರಹ್ಲಾದ ಜೋಷಿ, ಅಶೋಕ್ ಪಟ್ಟು ಹಿಡಿದಾಗ ಯಡಿಯೂರಪ್ಪ ತಬ್ಬಿಬ್ಬುಗೊಂಡರು. ಅನಂತಕುಮಾರ್ ಕಟ್ಟಾ ಬೆಂಬಲಿಗರಾದ ಸುಬ್ಬಣ್ಣ ಅವರ ಪರ ತಾವಿದ್ದೇವೆ ಎನ್ನುವುದನ್ನು ಬಿಂಬಿಸುವ ಮೂಲಕ ಅವರಿಬ್ಬರಲ್ಲೇ ತಂದಿಡುವ ತಂತ್ರ ಯಡಿಯೂರಪ್ಪ ಅವರದು. ಇದನ್ನು ಚೆನ್ನಾಗಿಯೇ ಅರಿತಿದ್ದ ಅನಂತಕುಮಾರ್ ಪ್ರತಿತಂತ್ರವಾಗಿ ಸೋಮಣ್ಣ ಪರ ನಿಂತರು. ಅದಕ್ಕೆ ಉಳಿದವರೂ ಬೆಂಬಲ ವ್ಯಕ್ತಪಡಿಸಿದರು. ವಿಷಯ ತಾವಂದುಕೊಂಡಂತೆ ಇಲ್ಲ ಎಂಬುದನ್ನು ಅರಿತ ಯಡಿಯೂರಪ್ಪನವರು ಅದನ್ನು ಅಲ್ಲಿಗೇ ಕೈಬಿಟ್ಟರು.

ವಿಧಾನಸಭೆಯಲ್ಲಿ ಬಿಜೆಪಿ ಸದಸ್ಯಬಲ 42. ವಿಧಾನಸಭೆಯಿಂದ ವಿಧಾನ ಪರಿಷತ್ತಿಗೆ ಒಬ್ಬ ಅಭ್ಯರ್ಥಿ ಆಯ್ಕೆಗೆ 28 ಸದಸ್ಯರ ಬೆಂಬಲ ಸಾಕು. ಬಿಜೆಪಿ ಬಳಿ ಹೆಚ್ಚುವರಿ 14 ಮತಗಳಿವೆ. ಹೀಗಾಗಿ ಎರಡವೇ ಅಭ್ಯರ್ಥಿ ಆಗಿ ಮಾಜಿ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಅವರನ್ನು ಕಣಕ್ಕಿಳಿಸುವ ಸಲಹೆ ಸಭೆಯಲ್ಲಿ ಬಂತು. ಯಡಿಯೂರಪ್ಪ ಅವರು ಲೆಹರ್ ಸಿಂಗ್ ಹೆಸರು ಬಿಟ್ಟರೂ ಕೊನೆಗೆ ಕಟ್ಟಾ ಅವರ ಬಗ್ಗೆ ಸಹಮತ ವ್ಯಕ್ತಪಡಿಸಿದರು. ಎರಡನೇ ಸ್ಥಾನ ಗೆಲ್ಲಲು ಜೆಡಿಎಸ್ ಬಳಿ ಇರುವ ಹೆಚ್ಚುವರಿ ಮತಗಳ ಸಹಕಾರ ಬೇಕು. ಅದನ್ನು ಪಡೆದುಕೊಳ್ಳುವುದಾಗಿ ಕಟ್ಟಾ ಅವರು ಈಗಾಗಲೇ ವಿಶ್ವಾಸ ವ್ಯಕ್ತಪಡಿಸಿರುವುದರಿಂದ ಅವರಿಗೇ ಟಿಕೆಟ್ ನೀಡಬೇಕು ಎಂಬ ಅಭಿಪ್ರಾಯಕ್ಕೆ ಸಹಮತ ವ್ಯಕ್ತವಾಯಿತು.

ಇನ್ನು ಉಳಿದಂತೆ ರಾಜ್ಯಸಭೆಗೆ ಕೇಂದ್ರ ಸಚಿವ ವೆಂಕಯ್ಯ ನಾಯ್ಡು ಅವರನ್ನೇ ಅಭ್ಯರ್ಥಿಯನ್ನಾಗಿ ಮಾಡಬೇಕೆಂಬ ದಿಲ್ಲಿ ಸೂಚನೆಗೆ ಯಾರೂ ಕಮಕ್-ಕಿಮಕ್ ಎನ್ನಲಿಲ್ಲ. ಕನ್ನಡ ನಾಡು-ನುಡಿ ಬಗ್ಗೆ ಯಾವತ್ತೂ ಧ್ವನಿ ಎತ್ತದ ವೆಂಕಯ್ಯ ಅವರನ್ನು ಕರ್ನಾಟಕದಿಂದ ಆರಿಸಿ ಕಳುಹಿಸಬಾರದು ಎಂದು ಸಾಮಾಜಿಕ ಜಾಲ ತಾಣಗಳಲ್ಲಿ ನಡೆದಿರುವ ಆಂದೋಲನದ ಬಗ್ಗೆ ಕವಡೆ ಕಿಮ್ಮತ್ತು ಸಿಕ್ಕಿಲ್ಲ. ಆದರೆ ವೆಂಕಯ್ಯ ವಿಚಾರದಲ್ಲಿ ವರಿಷ್ಠರ ನಿಲುವಿಗೆ ಸೊಲ್ಲೆತ್ತದ ರಾಜ್ಯ ಮುಖಂಡರು, ಸೋಮಣ್ಣ ವಿಚಾರದಲ್ಲಿ ಮಾತ್ರ ಯಡಿಯೂರಪ್ಪ ಅವರಿಗೆ ಸೆಡ್ಡು ಹೊಡೆದದ್ದು ಮಾತ್ರ ಗಮನಾರ್ಹ ಬೆಳವಣಿಗೆ. ಇದು ರಾಜ್ಯ ಬಿಜೆಪಿ ಮುಂದೆ ಸಾಗುವ ಮಾರ್ಗದ ದಿಕ್ಸೂಚಿಯೂ ಹೌದು.

Leave a Reply