ಭಾರತದ ಕಾಶಿ, ಇರಾನಿನ ಕಾಶಾನ್ ಹತ್ತಿರವಾಗುತ್ತಿವೆ ಎಂಬ ಮೋದಿ ಮಾತಿನ ಒಳಾರ್ಥವೇನು? ಓವರ್ ಟು ಗಡ್ಕರಿ..!

ಡಿಜಿಟಲ್ ಕನ್ನಡ ವಿಶೇಷ: ಎರಡು ದಿನಗಳ ಇರಾನ್ ಪ್ರವಾಸದಲ್ಲಿರುವ ಪ್ರಧಾನಿ ಮೋದಿ, ಸೋಮವಾರ ಇರಾನ್ ಅಧ್ಯಕ್ಷ ರೊಹಾನಿ ಅವರೊಂದಿಗಿನ ಭೇಟಿಯಲ್ಲಿ ಬಾಂಧವ್ಯವೃದ್ಧಿಯ ಮಾತನಾಡುತ್ತ ಕೊನೆಯಲ್ಲಿ ಭಾರತಕ್ಕೆ ಆಹ್ವಾನಿಸಿದರು. ಆ ಸಂದರ್ಭದಲ್ಲಿ ಕವಿ ಮಿರ್ಜಾ ಗಾಲಿಬ್ ನ ಪಂಕ್ತಿಗಳನ್ನು ಬಳಸಿಕೊಂಡು ಹೇಳಿದ್ದು- ‘ನಾವೊಮ್ಮೆ ಮನಸು ಮಾಡಿಯಾದ ಮೇಲೆ ಕಾಶಿಗೂ ಕಾಶಾನ್ ಗೂ ಅರ್ಧ ಹೆಜ್ಜೆಯ ಅಂತರವಷ್ಟೆ…’

ಇರಾನಿನೊಂದಿಗೆ ಭಾರತದ ಸದ್ಯದ ಆಸಕ್ತಿ ಹೀಗೆ ಮಾರ್ಗ ಬೆಸೆಯುವುದೇ ಆಗಿರುವುದರಿಂದ ಇದು ತುಂಬ ಆಸಕ್ತಿಪೂರ್ಣ ಎನಿಸುತ್ತದೆ. ಅಲ್ಲದೇ ಗಾಲಿಬ್ ಭಾರತದಲ್ಲೇ ಇದ್ದ ಪರ್ಶಿಯನ್ ಕವಿ ಹಾಗೂ ಕಾಶಾನ್ ಎಂಬುದು ಇರಾನಿನ ಐತಿಹಾಸಿಕ ಮಹತ್ವದ ಪ್ರದೇಶವೂ ಹೌದು.

ಕಾಶಿ- ಕಾಶಾನ್ ಗಿಂತ ಮೊದಲು, ಮಧ್ಯೆ ಇರುವ ಪಾಕಿಸ್ತಾನದ ತಡೆಯನ್ನು ಮೀರಿ ಅಫಘಾನಿಸ್ತಾನಕ್ಕೆ ವಹಿವಾಟು ಮಾರ್ಗ ಕಂಡುಕೊಳ್ಳುವುದು ಭಾರತದ ತುರ್ತಿನ ಕಾರ್ಯಸೂಚಿ. ಚಬಹರ್ ಬಂದರು ಒಪ್ಪಂದದ ಮೂಲಕ ಭಾರತದ ಈ ಕನಸು ನೆರವೇರುತ್ತಿದೆ. ಈ ಹಿಂದೆ ವಿದೇಶ ಸಚಿವೆ ಸುಷ್ಮಾ ಸ್ವರಾಜ್ ಟೆಹರಾನಿಗೆ ಭೇಟಿ ಕೊಟ್ಟಾಗಲೇ ಅದು ಒಂದು ಹಂತಕ್ಕೆ ಬಂದಿತ್ತು. ಅದರ ಕಾರ್ಯತಂತ್ರ ಪ್ರಾಮುಖ್ಯದ ಬಗ್ಗೆ ಈ ಹಿಂದೆ ಪ್ರಕಟಿಸಿದ್ದ ಲೇಖನವನ್ನೂ ಓದಿಕೊಳ್ಳಬಹುದು. ಈಗ ಪ್ರಧಾನಿ ಭೇಟಿ ಸಂದರ್ಭದಲ್ಲಿ ಅದನ್ನು ಸಂಪನ್ನಗೊಳಿಸಲಾಗಿದೆ.

iran modi afghanಇಷ್ಟು ವರ್ಷಗಳ ಕಾಲ ಇರಾನ್ ಮೇಲೆ ಅಮೆರಿಕ ಪ್ರಣೀತ ಹಲವು ನಿರ್ಬಂಧಗಳಿದ್ದವು. ಈಗ ಅವು ಹಂತ- ಹಂತವಾಗಿ ತೆರವುಗೊಳ್ಳುತ್ತಲೇ, ಭಾರತ ಮತ್ತು ಇರಾನ್ ಗಳು ಈ ಅವಕಾಶ ಉಪಯೋಗಿಸಿಕೊಂಡು ತಮ್ಮ ಜಾಗತಿಕ ವಹಿವಾಟಿನ ಮಾರ್ಗಗಳನ್ನು ಸುಧಾರಿಸಿಕೊಳ್ಳಲು ಒಟ್ಟಾಗುತ್ತಿವೆ. ಹಾಗೆಂದೇ ಈ ಬಾರಿ ಪ್ರಧಾನಿ ಜತೆ ಸಾರಿಗೆ ಸಚಿವ ನಿತಿನ್ ಗಡ್ಕರಿಯವರೂ ಇರಾನಿನಲ್ಲಿದ್ದಾರೆ. ಭಾರತ -ಇರಾನ್- ಅಫಘಾನಿಸ್ತಾನ ಮಧ್ಯೆ ಸಾರಿಗೆ ವಹಿವಾಟು ಒಪ್ಪಂದಕ್ಕೂ ಸಹಿ ಬಿದ್ದಿರುವುದು ಮುಖ್ಯ ಬೆಳವಣಿಗೆ. ಟೆಹರಾನಿನಲ್ಲಿ ಪ್ರಧಾನಿ ಮೋದಿ, ಅಫ್ಘನ್ ಅಧ್ಯಕ್ಷ ಅಶ್ರಫ್ ಗಣಿಯವರನ್ನೂ ಭೇಟಿ ಮಾಡಿದ್ದಾರೆ.

ಹಳೆ ಓದು- ಮರುಓದು: ಕಾಬೂಲ್ ಉಪಾಹಾರ, ಪಾಕ್ ಭೋಜನ, ಮುಖ್ಯಾಂಶ ಹೊತ್ತಿರೋದು ಮಾತ್ರ ಈ ಆಲಿಂಗನ!

ಕಾಶಿ- ಕಾಶಾನ್ ಹೋಲಿಕೆಯನ್ನು ಕೇವಲ ರೂಪಕವಾಗಿ ಮಾತ್ರವೇ ಇಟ್ಟುಕೊಂಡು, ಇದೇ ನಿಟ್ಟಿನಲ್ಲಿ ನಿತಿನ್ ಗಡ್ಕರಿ ಪ್ರಸ್ತಾಪಿಸಿರುವ ಆಸಕ್ತಿಕರ ಅಂಶವೊಂದು ಗಮನಿಸಿದರೆ, ‘ಹತ್ತಿರವಾಗುವಿಕೆ’ ಅರ್ಥ ಮನದಟ್ಟಾಗುತ್ತದೆ. ‘ಒಪ್ಪಂದ ಮಾಡಿಕೊಳ್ಳುತ್ತಿರುವ ಇರಾನಿನ ಚಬಹರ್ ಬಂದರಿಗೂ ಗುಜರಾತಿನ ಕಚ್ ನ ಖಾಂಡ್ಲಾ ಬಂದರಿಗೂ ಇರುವ ದೂರ ದೆಹಲಿ- ಮುಂಬೈಗಳಿಗಿಂತ ಕಡಿಮೆ ಆಗಿದ್ದು ಇದು ನಮ್ಮ ಸಾಗರ ವ್ಯಾಪಾರವನ್ನು ವೃದ್ಧಿಸಲಿದೆ’ ಎಂದು ಹೊಳಹು ನೀಡಿದ್ದಾರೆ.

‘ಭಾರತ- ಇರಾನುಗಳು ಹೊಸ ಸ್ನೇಹಿತರೇನೂ ಅಲ್ಲ. ಇತಿಹಾಸದಿಂದಲೂ ನಮ್ಮ ಸ್ನೇಹ ಗಟ್ಟಿಯಾಗಿಯೇ ಇದೆ. ಪರಸ್ಪರ ಅಭಿವೃದ್ಧಿಗೆ ಹಾಗೂ ಉಗ್ರವಾದದ ವಿರುದ್ಧ ಹೋರಾಟಕ್ಕೆ ನಾವು ಒಟ್ಟಿಗಿರಬೇಕು’ ಎಂದೆಲ್ಲ ಪ್ರಧಾನಿ ಮೋದಿ ಅಲ್ಲಿನ ಅಧ್ಯಕ್ಷ ರೊಹಾನಿ ಭೇಟಿಯ ಸಂದರ್ಭದಲ್ಲಿ ಹೇಳಿದ್ದಾರೆ. ಆದರೆ ಇರಾನ್- ಭಾರತಗಳ ನಡುವಿನ ಬಿಸಿನೆಸ್ ಆಯಾಮದ ಸ್ಪಷ್ಟ ಚಿತ್ರಣ ಬೇಕಾದರೆ ನಿತಿನ್ ಗಡ್ಕರಿ ಮಾತುಗಳಿಗೇ ಕಿವಿಯಾಗಬೇಕು. ಮಾಧ್ಯಮಗಳೊಂದಿಗೆ ಮಾತನಾಡುತ್ತ ಅವರು ಹೇಳಿರುವ ಕೆಲವು ಅಂಶಗಳು, ಕಾಶಿ- ಕಾಶಾನ್ ಹತ್ತಿರವಾಗುತ್ತಿರುವ ರೂಪಕದ ಮಾತುಗಳನ್ನು ವಾಸ್ತವ ನೋಟದಲ್ಲಿ ಇರಿಸುತ್ತಿವೆ. ಅವರು ಹೇಳಿದ್ದು-

– ಇರಾನಿನಲ್ಲಿ ಅನಿಲ ಮತ್ತು ವಿದ್ಯುತ್ ಕಡಿಮೆ ವೆಚ್ಚಕ್ಕೆ ಸಿಗುತ್ತದೆ. ಭಾರತಕ್ಕಾದರೆ ಅನಿಲ ಇಂಧನ ಕೊರತೆ ಇದೆ. ನಾವು ಉಕ್ಕು ಮತ್ತು ಅಲ್ಯುಮಿನಿಯಂ ಘಟಕಗಳನ್ನು ಇಲ್ಲಿ ಸ್ಥಾಪಿಸಬಹುದು.

– ನಮ್ಮ ರೈತರಿಗೆ ಯೂರಿಯಾ ಅಗಾಧ ಪ್ರಮಾಣದಲ್ಲಿ ಬೇಕು. ಅನಿಲ ಇಂಧನ ವ್ಯವಸ್ಥೆ ಬಳಸಿಕೊಂಡು ಇರಾನಿನಲ್ಲಿ ರಸಗೊಬ್ಬರ ಕಂಪನಿಗಳನ್ನು ಶುರುಮಾಡುವುದರ ಬಗ್ಗೆ ಭಾರತೀಯ ಕಂಪನಿಗಳು ಮಾತುಕತೆ ನಡೆಸಿವೆ.

– ಅಫಘಾನಿಸ್ತಾನಕ್ಕೆ ಹೋಗಬೇಕಾದರೆ ನಮಗೆ ಪಾಕಿಸ್ತಾನ ಎದುರಾಗುತ್ತಿತ್ತು. ಈಗ ಇರಾನಿನ ಮೂಲಕ ತೆರೆದುಕೊಂಡಿರುವ ಹೊಸಮಾರ್ಗವು ನಮ್ಮನ್ನು ಅಫಘಾನಿಸ್ತಾನಕ್ಕಷ್ಟೇ ಅಲ್ಲದೇ, ಯುರೋಪು ಮತ್ತು ರಷ್ಯಗಳಿಗೂ ಬೆಸೆಯುತ್ತಿದೆ.

Leave a Reply