ಮೇಲ್ಮನೆ ಚುನಾವಣೆ; ಕಾಂಗ್ರೆಸ್ಸಲ್ಲಿ ಅಭ್ಯರ್ಥಿಗಳ ಹಾರಾಟ, ಬಿಜೆಪೀಲಿ ನಾಯಕರದೇ ಗಲಾಟೆ, ಜೆಡಿಎಸ್ನಲ್ಲಿ ಗೌಡ್ರ ಮನೆದೇ ಭರಾಟೆ!

ಡಿಜಿಟಲ್ ಕನ್ನಡ ಟೀಮ್:

ಮುಂದಿನ ತಿಂಗಳು ವಿಧಾನಸಭೆಯಿಂದ ವಿಧಾನ ಪರಿಷತ್ ಹಾಗೂ ರಾಜ್ಯಸಭೆಗೆ ನಡೆಯುವ ಚುನಾವಣೆಗೆ ಅಭ್ಯರ್ಥಿಗಳನ್ನು ಅಖೈರುಗೊಳಿಸಲು ಆಡಳಿತರೂಢ ಕಾಂಗ್ರೆಸ್ ಹಾಗೂ ಪ್ರತಿಪಕ್ಷಗಳಾದ ಬಿಜೆಪಿ, ಜೆಡಿಎಸ್ ಮುಖಂಡರು ತಿಣುಕಾಡುತ್ತಿದ್ದಾರೆ.

ಕಾಂಗ್ರೆಸ್ ನಲ್ಲಿ ಅಭ್ಯರ್ಥಿಗಳ ನಡುವೆ ಪೈಪೋಟಿ ಏರ್ಪಟ್ಟಿದ್ದರೆ, ಬಿಜೆಪಿಯಲ್ಲಿ ಅಭ್ಯರ್ಥಿಗಳ ಆಯ್ಕೆ ಸಂಬಂಧ ನಾಯಕರ ನಡುವೆಯೇ ಜಟಾಪಟಿ ಶುರುವಾಗಿದೆ. ಏಕೋಪಾಧ್ಯಾಯ ಶಾಲೆಯ ಮುಖ್ಯೋಪಾಧ್ಯಾಯ ಪ್ರತಿರೂಪದ ಜೆಡಿಎಸ್ ನಲ್ಲಿ ನಾಯಕರು ಹೇಳಿದವರೇ ಅಭ್ಯರ್ಥಿಗಳಾಗಿರುವುದರಿಂದ ಪೈಪೋಟಿಗೆ ಆಸ್ಪದವೇ ಇಲ್ಲದಂತಾಗಿದೆ.

ಜೂ. 11 ರಂದು ವಿಧಾನಪರಿಷತ್ತಿನ 7 ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದ್ದು, ಮಂಗಳವಾರ ಅಧಿಸೂಚನೆ ಹೊರಬೀಳಲಿದೆ. ಕಾಂಗ್ರೆಸ್ ನಿಂದ ನಾಲ್ವರು ಮೇಲ್ಮನೆ ಪ್ರವೇಶಿಸಲು ಅವಕಾಶವಿದ್ದು, ಹಿರಿಯ ಮುಖಂಡರಾದ ಬಿ.ಎಲ್.ಶಂಕರ್, ಪ್ರೊ. ಬಿ.ಕೆ. ಚಂದ್ರಶೇಖರ್ ಸೇರಿದಂತೆ ಎರಡು ಡಜನ್ ಗೂ ಅಧಿಕ ಆಕಾಂಕ್ಷಿಗಳು ಮುಗಿ ಬಿದ್ದಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ತಲೆನೋವಾಗಿ ಪರಿಣಮಿಸಿದೆ.

ಬಸವರಾಜು, ಮಂಜುನಾಥ್, ಕೆಂಚೇಗೌಡ, ರಾಣಿ ಸತೀಶ್, ಮಲ್ಲಾಜಮ್ಮ, ಕಮಲಮ್ಮ, ಜಲಜಾ ನಾಯ್ಕ್, ರತ್ನಪ್ರಭಾ, ಮಾಜಿ ಮೇಯರ್ ರಾಮಚಂದ್ರಪ್ಪ, ಕೆ.ಪಿ. ನಂಜುಂಡಿ ಆಕಾಂಕ್ಷಿಗಳ ಪಟ್ಟಿಯಲ್ಲಿದ್ದಾರೆ.

ಇವರಲ್ಲಿ ಬಹುತೇಕರು ಮುಖ್ಯಮಂತ್ರಿಗಳಿಗೆ ಹತ್ತಿರದವರು. ಅದೇ ಕಾಲಕ್ಕೆ ಆಪ್ತರ ಮೂಲಕ ಸೋನಿಯಾ ಗಾಂಧಿ ಅವರವರೆಗೂ ದಿಲ್ಲಿ ಮುಖಂಡರ ಮೇಲೆ ಪ್ರಭಾವ ಬೀರಲು ಯತ್ನಿಸುತ್ತಿದ್ದಾರೆ.

ಜೂನ್ 10 ರಂದು ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ನಡೆಯುವ ಚುನಾವಣೆ ಪೈಕಿ ಕಾಂಗ್ರೆಸ್ ಆರಾಮವಾಗಿ ಜಯಿಸಲು ಸಾಧ್ಯವಿರುವ ಎರಡು ಸ್ಥಾನಗಳಲ್ಲಿ ಒಂದಕ್ಕೆ ಆಸ್ಕರ್ ಫರ್ನಾಂಡಿಸ್ ಹೆಸರು ಅಂತಿಮವಾಗಿದೆ. ದಲಿತರ ಪೈಕಿ ಎಡಗೈ ಸಮುದಾಯದ ಕೆ.ಬಿ. ಕೃಷ್ಣಮೂರ್ತಿ ಅವರಿಗೆ ಎರಡನೇ ಟಿಕೆಟ್ ನೀಡಲು ಚಿಂತನೆ ನಡೆದಿದೆ. ಮೂರನೇ ಸ್ಥಾನಕ್ಕೂ ಅವಕಾಶವಿದ್ದು, ಸಿದ್ದರಾಮಯ್ಯ ಆಪ್ತರಾದ ಚೆನ್ನಾರೆಡ್ಡಿ ಹೆಸರು ಕೇಳಿಬಂದಿದೆ.

ಬಿಜೆಪಿ ರಾಜ್ಯಸಭೆ ಅಭ್ಯರ್ಥಿಯಾಗಿ ಕೇಂದ್ರ ಸಚಿವ ವೆಂಕಯ್ಯನಾಯ್ಡು ಅವರ ಹೆಸರು ಕನ್ನಡಿಗರ ಅಪಸ್ವರದ ನಡುವೆಯೂ ಅಖೈರಾಗಿದೆ. ವಿಧಾನ ಪರಿಷತ್ತಿನ ಎರಡು ಸ್ಥಾನಗಳಿಗೆ ವಿ. ಸೋಮಣ್ಣ, ಆರೆಸ್ಸೆಸ್ ಬೆಂಬಲಿತ ಡಿ.ಕೆ. ಸದಾಶಿವ, ಸುಬ್ಬ ನರಸಿಂಹ, ಕಟ್ಟಾ ಸುಬ್ರಹ್ಮಣ್ಯ ನಾಯ್ಡು, ಲೆಹರ್ ಸಿಂಗ್ ಕೇಳಿ ಬಂದಿದೆ. ಸದಾಶಿವ, ಲೆಹರ್ ಸಿಂಗ್, ಸುಬ್ಬನರಸಿಂಹ ಪರ ನಿಂತಿರುವ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರು ಸೋಮಣ್ಣ ಅವರನ್ನು ವಿರೋಧಿಸಿದ್ದಾರೆ. ಆದರೆ ಉಳಿದ ನಾಯಕರು ಸೋಮಣ್ಣ ಹಾಗೂ ಸದಾಶಿವ ಅವರನ್ನು ಬೆಂಬಲಿಸಿದ್ದಾರೆ. ಎರಡನೇ ಸ್ಥಾನ ಪಡೆಯಲು ಕಟ್ಟಾ ಸುಬ್ರಹ್ಮಣ್ಯ ನಾಯ್ಡು, ಲೆಹರ್ ಸಿಂಗ್ ಗಂಭೀರ ಯತ್ನ ನಡೆಸಿದ್ದಾರೆ.

ಇನ್ನು ಉಳಿದಂತೆ ಜೆಡಿಎಸ್ ನಲ್ಲಿ ಮೇಲ್ಮನೆ ಮೊದಲ ಅಭ್ಯರ್ಥಿಯಾಗಿ ಅರಕಲಗೂಡು ಮೂಲದ ಕೆ.ವಿ. ನಾರಾಯಣಸ್ವಾಮಿ ಹೆಸರು ಬಹುತೇಕ ಅಂತಿಮಗೊಂಡಿದೆ. ರಿಯಲ್ ಎಸ್ಟೇಟ್ ಉದ್ಯಮಿ ಆಗಿರುವ ನಾರಾಯಣಸ್ವಾಮಿ ಹಿಂದೆ ಮೇಲ್ಮನೆ ಸದಸ್ಯರಾಗಿದ್ದವರು. ಕಳೆದ ಬಾರಿಯೇ ಅವರು ಮೇಲ್ಮನೆಗೆ ಹೋಗಬೇಕಿತ್ತು. ಆದರೆ ಅವರನ್ನು ಹಿಂದಿಕ್ಕಿ ಶರವಣ ಮೇಲ್ಮನೆ ಪ್ರವೇಶಿಸಿದ್ದರು. ಇನ್ನು ಎರಡನೇ ಅಭ್ಯರ್ಥಿಯಾಗಿ ಮಂಡ್ಯ ಮೂಲದ ದುಬೈ ಹೋಟೆಲ್ ಉದ್ಯಮಿ ಜಫ್ರುಲ್ಲಖಾನ್ ಹೆಸರು ಕೇಳಿ ಬಂದಿದವೆ. ಅವರು ಪಕ್ಷದ ಪ್ರಧಾನ ಕಾರ್ಯದರ್ಶಿಯೂ ಹೌದು. ಇನ್ನು ರಾಜ್ಯಸಭೆಗೆ ಮಂಗಳೂರು ಮೂಲದ ಹಡಗು ಮತ್ತು ಗಣಿ ಉದ್ಯಮಿ ಫಾರೂಕ್ ಜೆಡಿಎಸ್ ಅಭ್ಯರ್ಥಿ ಆಗುವ ಲಕ್ಷಣಗಳಿವೆ.

ರಾಜ್ಯಸಭೆಗೆ ಜೂನ್ 11 ಹಾಗೂ ಪದವೀಧರ, ಶಿಕ್ಷಕರ ಕ್ಷೇತ್ರದಿಂದ ಮೇಲ್ಮನೆ ನಾಲ್ಕು ಸ್ಥಾನಗಳಿಗೆ ಜೂನ್ 9 ರಂದು ಚುನಾವಣೆ ನಡೆಯಲಿದೆ.

Leave a Reply