ನಮ್ಮ ಅರಿಶಿಣ, ಪಾಶ್ಚಾತ್ಯರಿಗೀಗ ವಶೀಕರಣ!

ಡಿಜಿಟಲ್ ಕನ್ನಡ ವಿಶೇಷ: ಯಾಕೋ ಗಂಟಲಲ್ಲಿ ಕಿರಿಕಿರಿ ಅಂತ ಹೇಳಿದೊಡನೆ ಅಮ್ಮಂದಿರ ಬಾಯಲ್ಲಿ ಬರುವ ಸಾಮಾನ್ಯ ಮಾತು- ‘ಹಾಲಿಗೆ ಸ್ವಲ್ಪ ಅರಿಶಿಣ ಹಾಕಿ ಕೊಡ್ತೀನಿ, ಕುಡಿ..’

ಇದೀಗ ಈ ರೆಸಿಪಿ ಅಂತಾರಾಷ್ಟ್ರೀಯವಾಗಿ ಟ್ರೆಂಡ್ ಆಗ್ತಿದೆ ಅನ್ನೋದೆ ಕೌತುಕದ ವಿಷಯ! ಕೆಪಚಿನೊ, ಲಾಟ್ಟೆ ಅಂತೆಲ್ಲ ಕಾಫಿಯನ್ನು ಭಿನ್ನ ಮಾದರಿಗಳಲ್ಲಿ ಹೀರಿಕೊಂಡಿದ್ದ ಪಾಶ್ಚಾತ್ಯರಲ್ಲೀಗ ‘ಟರ್ಮರಿಕ್ ಲಾಟ್ಟೆ’ ಭಾಳ ಫೇಮಸ್ಸು ಎನ್ನುತ್ತಿವೆ ವರದಿಗಳು! ಮತ್ತೇನಿಲ್ಲ, ಹಾಲಿಗೆ ಅರಿಶಿನ ಬೆರೆಸಿ ಕುಡಿಯುವ ನಮ್ಮ ಸಾಂಪ್ರದಾಯಿಕ ರೆಸಿಪಿ ಇದು. ಪಾಶ್ಚಾತ್ಯರ ಬಾಯಲ್ಲಿ ‘ಗೋಲ್ಡನ್ ಮಿಲ್ಕ್’ ಅಂತಲೂ ಕರೆಸಿಕೊಳ್ಳುತ್ತ ಬಹುಜನಪ್ರಿಯವಾಗುತ್ತಿದೆ. ಅಮೆರಿಕ, ಇಂಗ್ಲೆಂಡ್, ಆಸ್ಟ್ರೇಲಿಯ ಹಾಗೂ ದಕ್ಷಿಣ ಆಫ್ರಿಕಾದ ಕೆಲಭಾಗಗಳ ಕಾಫಿ ಬಾರುಗಳಲ್ಲೀಗ ಅರಿಶಿಣದ ಹಾಲಿನ ಜನಪ್ರಿಯತೆ ಹಬ್ಬಿದೆ. 2016ರಲ್ಲಿ ಇದು ಮುಖ್ಯ ಪೇಯವಾಗಿ ರೂಪುಗೊಂಡಿದೆ.

ಈ ಟ್ರೆಂಡ್ ಅನ್ನು ಪಕ್ಕಾಗೊಳಿಸಿರುವ ಮೂಲ ಎಂದರೆ ಗೂಗಲ್ ಸರ್ಚ್ ಇಂಜಿನ್ ಬಿಡುಗಡೆಗೊಳಿಸಿರುವ 2016ರ ಆಹಾರ ಹುಡುಕಾಟ ಪಟ್ಟಿ. ಅಂದರೆ, ಆಹಾರದ ವಿಷಯದಲ್ಲಿ ಗೂಗಲ್ ನಲ್ಲಿ ಜಗತ್ತು ಹೆಚ್ಚು ಹುಡುಕಾಟ ನಡೆಸಿರುವುದು ಯಾವುದಕ್ಕಾಗಿ ಎಂಬ ಶೋಧವಿದು. ಆ ಪ್ರಕಾರ ಅರಿಶಿಣವನ್ನು ಹುಡುಕಿದವರ ಸಂಖ್ಯೆ ಈ ಹಿಂದಿನ ವರ್ಷಗಳಿಗೆ (2004ರಿಂದ) ಹೋಲಿಸಿದರೆ 2016ರಲ್ಲಿ ಶೇ. 300ರಷ್ಟು ಹೆಚ್ಚಾಗಿದೆ!

turmeric

ಇಂಗ್ಲೆಂಡ್ ನ ಗಾರ್ಡಿಯನ್ ಪತ್ರಿಕೆಯ ವರದಿಯನ್ನು ಗಮನಿಸುವುದಾದರೆ- ಬಾದಾಮಿ, ಗೋಡಂಬಿ, ಎಳೆನೀರು ಇವುಗಳ ಮಿಶ್ರಣವನ್ನು ಹೊಂದಿರುವ ‘ಅರಿಶಿಣ ಲಾಟ್ಟೆ’, ಸಿಡ್ನಿ ಮತ್ತು ಸ್ಯಾನ್ ಫ್ರಾನ್ಸಿಸ್ಕೊಗಳ ಕಾಫಿ ಆಲಯಗಳಲ್ಲಿ ಕಾಫಿ ಪೇಯವನ್ನೇ ಹಿಂದಿಕ್ಕುವಷ್ಟು ತೀವ್ರತೆಯಲ್ಲಿ ಬೇಡಿಕೆ ಪಡೆಯುತ್ತಿದೆ.

ಅರಿಶಿಣದ ಉಪಯೋಗದಿಂದ ರೋಗ ನಿರೋಧಕತೆ ಹೆಚ್ಚುತ್ತದೆ, ಉತ್ತಮ ನಿದ್ರೆ ಬರುತ್ತದೆ ಎಂಬುದನ್ನೆಲ್ಲ ನಮ್ಮ ಹಿರಿಯರು ಲಾಗಾಯ್ತಿನಿಂದ ಪ್ರತಿಪಾದಿಸಿಕೊಂಡು ಬಂದಿದ್ದರು. ಅವಕ್ಕೆಲ್ಲಾ ವೈಜ್ಞಾನಿಕ ಸೂತ್ರ ಏನಿದೇರಿ ಅಂತಲೇ ಕೇಳಿಕೊಂಡು ಬರುತ್ತಿದ್ದ ಪಾಶ್ಚಾತ್ಯರು ಈಗ ಬದಲಾಗಿರುವವರಂತೆ ತೋರುತ್ತಿದ್ದಾರೆ.

ಇತ್ತ ಭಾರತದಲ್ಲಿ ಫ್ಯೂಚರ್ ಟ್ರೇಡಿಂಗ್ ನಲ್ಲಿ ಅರಿಶಿಣವು ಹೇಗೆ ವಹಿವಾಟಿಗೆ ಒಳಗಾಗುತ್ತಿದೆ ಎಂಬುದನ್ನು ಗಮನಿಸಿದಾಗಲೂ ಅದರ ಬೇಡಿಕೆ ಹೆಚ್ಚಿರುವುದು ಮನದಟ್ಟಾಗುತ್ತದೆ. ಮೇನಲ್ಲಿ 1.57 ಶೇ. ಬೆಲೆ ಹೆಚ್ಚಾಗಿ ಕ್ವಿಂಟಲ್ ಗೆ ₹8510 ರಂತೆ ಫ್ಯೂಚರ್ ಮಾರುಕಟ್ಟೆಯಲ್ಲಿ ಅರಿಶಿಣ ಏರುಗತಿ ಕಂಡಿದೆ ಎಂಬುದೂ ಗಮನಾರ್ಹವೇ.

ವಿದೇಶಿ ವಿಶ್ವವಿದ್ಯಾಲಯಗಳು ಆಗಾಗ ಪ್ರಕಟಿಸುವ ಅಧ್ಯಯನ ವರದಿಗಳಲ್ಲಿ ಅರಿಶಿಣದ ಹೆಚ್ಚುಗಾರಿಕೆ ಬಿಚ್ಚಿಕೊಂಡಿರುವುದೂ, ಸಾಮಾಜಿಕ ಮಾಧ್ಯಮ ಮತ್ತು ಇಂಟರ್ನೆಟ್ ಗಳಲ್ಲಿ ಇಂಥ ಸುದ್ದಿಗಳಿಗೆ ಹೆಚ್ಚು ಎಡತಾಕುವ ಇಂಗ್ಲಿಷ್ ಮಂದಿಗೆ ಇಷ್ಟವಾಗಿರಲಿಕ್ಕೂ ಸಾಕು. ಕ್ಯಾಲಿಫೋರ್ನಿಯಾ ವಿವಿಯ ಅಧ್ಯಯನವೊಂದು ಅರಿಶಿಣಕ್ಕೆ ಕ್ಯಾನ್ಸರ್ ಪ್ರತಿರೋಧಕ ಗುಣವಿದೆ ಎಂದು ಸಾರಿತ್ತು. ಇನ್ನೊಂದು ಅಧ್ಯಯನದ ಪ್ರಕಾರ ಅರಿಶಿಣವು ಮಿದುಳನ್ನು ಚುರುಕಾಗಿಡುತ್ತದೆ. ಹಾಗೆಂದೇ ಭಯಾನಕ ಅಲ್ಜಮೀರ್ ಕಾಯಿಲೆಗೆ ಒಳಗಾಗುತ್ತಿರುವ ಅಮೆರಿಕನ್ನರಿಗೆ ಹೋಲಿಸಿದರೆ ಭಾರತೀಯರಲ್ಲಿ ಆ ಮರೆಗುಳಿ ರೋಗ ಕಡಿಮೆ ಎಂದು ಪ್ರತಿಪಾದಿಸಲಾಗುತ್ತಿದೆ. ಚರ್ಮಕಾಂತಿಗೆ ಅರಿಶಿಣ ಒಳ್ಳೆಯದು ಎಂಬುದನ್ನು ಯಾವ ಅಧ್ಯಯನಗಳ ಗೋಜಿಲ್ಲದೆಯೇ ನಮ್ಮ ಹಿರಿಯರು ಲಾಗಾಯ್ತಿನಿಂದಲೂ ಪ್ರತಿಪಾದಿಸಿಕೊಂಡು ಬಂದಿದ್ದರು. ಬಹುಶಃ ಮದುವೆಯಂಥ ಮಂಗಳಕಾರ್ಯ ಸಂದರ್ಭದಲ್ಲಿ ಅರಿಶಿಣದ ನೀರು ಹನಿಸುವ ಸಂಪ್ರದಾಯದ ಆಶಯವೂ ಇದೇ ಇದ್ದೀತು. ಈಗ ಪಾಶ್ಚಾತ್ಯರೂ ಸಹ ಚರ್ಮಕ್ಕೆ ಅರಿಶಿಣದ ಉಪಯೋಗ ಚೆನ್ನಾಗಿರುತ್ತೆ ಅನ್ನೋಕೆ ಶುರು ಮಾಡಿದ್ದಾರೆ.

ಅಂತೂ ಕಾರಣಗಳು ಹಲವು. ಪಾಶ್ಟಾತ್ಯರಿಗೀಗ ಅರಿಶಿಣ ಪಾನೀಯದ ಮರುಳು!

Leave a Reply