ಮರುಬಳಕೆ ಬಾಹ್ಯಾಕಾಶ ರಾಕೆಟ್ ವಾಹನ, ಮೊದಲ ಹಂತದಲ್ಲಿ ಯಶಸ್ವಿಯಾದ ಇಸ್ರೊ ಸಂಭ್ರಮ!

ಡಿಜಿಟಲ್ ಕನ್ನಡ ಟೀಮ್

ಸೋಮವಾರ ಬೆಳಗ್ಗೆ 7ಕ್ಕೆ, ಅಯ್ಯೋ ಆಫೀಸಿಗೆ ಹೋಗಬೇಕಲ್ಲಪ್ಪಾ ಅಂತ ನಾವೆಲ್ಲ ಕಣ್ಣುಜ್ಜಿಕೊಳ್ಳುತ್ತಿರುವ ಹೊತ್ತಿನಲ್ಲಿ, ಭಾರತದ ಹೆಮ್ಮೆಯ ಬಾಹ್ಯಾಕಾಶ ಸಂಸ್ಥೆ ಇಸ್ರೊ ವಿಕ್ರಮವೊಂದನ್ನು ಸಾಧಿಸಿದೆ.

ಬಾಹ್ಯಾಕಾಶಕ್ಕೆ ಮರುಬಳಕೆ ವಾಹನವನ್ನು ಸಿದ್ಧಪಡಿಸುವ ನಿಟ್ಟಿನಲ್ಲಿ, ಅಂಥ ಪ್ರಾರಂಭಿಕ ಮಾದರಿಯೊಂದನ್ನು ಯಶಸ್ವಿಯಾಗಿ ಬಾಹ್ಯಾಕಾಶಕ್ಕೆ ಕಳುಹಿಸಿ, ಮತ್ತೆ ಅದನ್ನು ಭೂಮಿಯ ವಾತಾವರಣಕ್ಕೆ ಮರುಪ್ರವೇಶಿಸೋದರಲ್ಲಿ ಯಶಸ್ವಿಯಾಗಿ, ಬಂಗಾಳ ಕೊಲ್ಲಿಯಲ್ಲಿ ಅದನ್ನು ಇಳಿಸಿ, ‘ಮಿಷನ್ ಅಕಂಪ್ಲಿಷ್ಡ್’ ಎಂದು ಬೀಗಿದೆ!

ಏನಿದರ ಮಹತ್ವ? ಇದು ಬಾಹ್ಯಾಕಾಶ ಯಾನದ ವೆಚ್ಚವನ್ನು ಈಗಿಗಿಂತ ಹತ್ತುಪಟ್ಟು ಕಡಿಮೆಗೊಳಿಸಲಿದೆ. ಹಂಗಾದ್ರೆ ಉಳಿದೇ ಬಿಡ್ತು ದುಡ್ಡು ಅಂತ ಈಗ್ಲೇ ಕೂಗಬೇಡಿ… ಇದು ಭವಿಷ್ಯದ ತಂತ್ರಜ್ಞಾನಕ್ಕೆ ಬರೆದಿರುವ ಮುನ್ನುಡಿ. 1.75 ಟನ್ ತೂಕದ ವಾಹನದ ಒಂದು ಸಣ್ಣ ಮಾದರಿಯನ್ನಷ್ಟೇ ಪರೀಕ್ಷೆಗೆ ಒಳಪಡಿಸಿ ಅದು ಉಷ್ಣ ಇನ್ನಿತರ ಒತ್ತಡಗಳನ್ನು ತಾಳಿಕೊಳ್ಳುವ ಸಾಮರ್ಥ್ಯ ಹೊಂದಿರುವುದನ್ನು ಖಾತ್ರಿಪಡಿಸಿಕೊಳ್ಳಲಾಗಿದೆ ಅಷ್ಟೆ. ಈ ತಂತ್ರಜ್ಞಾನ ಸಂಪೂರ್ಣರೂಪ ತಾಳುವುದಕ್ಕೆ ಇನ್ನೂ ದಶಕಗಳು ಹಿಡಿಯಬಹುದು. ಆದರೆ ಈ ನಿಟ್ಟಿನಲ್ಲಿ ಅದಾಗಲೇ ಪ್ರಯೋಗಗಳನ್ನು ನಡೆಸಿರುವ ಇಲಾನ್ ಮಸ್ಕ್ ಅವರ ಸ್ಪೇಸ್ ಎಕ್ಸ್ ಹಾಗೂ ಪಾಶ್ಚಾತ್ಯ ರಾಷ್ಟ್ರಗಳ ಸರಿಸಮಾನಾಗಿ ನಾವು ಹೆಜ್ಜೆ ಇಟ್ಟಂತಾಗಿದೆ. ಅಮೆರಿಕದ ಬಳಿಯಲ್ಲೂ 2011ರಲ್ಲೇ ಮರುಬಳಕೆ ಬಾಹ್ಯಾಕಾಶ ವಾಹನವಿತ್ತು. ಆದರೆ ಸದ್ಯಕ್ಕೆ ಅಮೆರಿಕ ಮತ್ತು ರಷ್ಯಗಳಲ್ಲಿ ಇವು ಬಳಕೆಯಲ್ಲಿಲ್ಲ.

ಈವರೆಗೆ ನಾವು ಹಲವು ಉಪಗ್ರಹಗಳನ್ನು ನಭಕ್ಕೇರಿಸಿದ್ದೇವಲ್ಲ? ಅಲ್ಲೆಲ್ಲ ಬಳಸಿರುವ ಲಾಂಚಿಂಗ್ ರಾಕೆಟ್ ಅಥವಾ ವಾಹನಕ್ಕಿಂತ ಇವತ್ತು ಪ್ರಯೋಗಕ್ಕೆ ಒಳಗಾಗಿದ್ದು ಹೇಗೆ ಭಿನ್ನ ಎಂಬ ಪ್ರಶ್ನೆ ಹಾಕಿಕೊಂಡಾಗ ವ್ಯತ್ಯಾಸವನ್ನು ಸ್ಪಷ್ಟವಾಗಿ ಗ್ರಹಿಸಬಹುದು. ನಾವು ಈವರೆಗೆ ಕೇಳಿದ್ದು ಪಿ ಎಸ್ ಎಲ್ ವಿ (ಪೋಲಾರ್ ಸೆಟಲೈಟ್ ಲಾಂಚ್ ವೆಹಿಕಲ್) ಮತ್ತು ಜಿ ಎಸ್ ಎಲ್ ವಿ (ಜಿಯೊಸಿಂಕ್ರನಸ್ ಸೆಟಲೈಟ್ ಲಾಂಚ್ ವೆಹಿಕಲ್). ಇವು ಉಪಗ್ರಹವನ್ನು ನಭದಲ್ಲಿ ಕೂರಿಸುತ್ತಲೇ ತಾವು ಉರಿದು ಬೂದಿಯಾಗುತ್ತವೆ. ಹೀಗಾಗಿ ಪ್ರತಿಬಾರಿ ಉಪಗ್ರಹ ಕಳುಹಿಸುವಾಗಲೂ ಹೊಸ ರಾಕೆಟ್ ಬೇಕಾಗುತ್ತದೆ. ಅದರ ನಿರ್ಮಾಣಕ್ಕೂ ಖರ್ಚು ತಗುಲುತ್ತದೆ. ಈಗ ಪ್ರಯೋಗಕ್ಕೆ ಒಳಪಡಿಸಿರುವ ಮಾದರಿ ಆರ್ ಎಲ್ ವಿ- ಟಿಡಿ (ರೀಯೂಸೆಬಲ್ ಲಾಂಚ್ ವೆಹಿಕಲ್- ಟೆಕ್ನಾಲಜಿ ಡೆಮನಾಸ್ಟ್ರೇಟರ್) ಮತ್ತೆ ಬಳಕೆಗೆ ಸಿಗುವಂತೆ ವಿನ್ಯಾಸಗೊಳಿಸಿರುವಂಥದ್ದು…

ಹಾಗೆಂದ ಮಾತ್ರಕ್ಕೆ, ಮೊದಲೇ ಹೇಳಿದಂತೆ, ಇದು ಪೂರ್ಣ ಸಿದ್ಧವಲ್ಲ. ಅಳವಡಿಸಿಕೊಂಡಿರುವ ತಂತ್ರಜ್ಞಾನಗಳು ಸೂಕ್ತವಾಗಿ ಕಾರ್ಯನಿರ್ವಹಿಸುತ್ತವೆಯೇ ಅಂತ ಪರೀಕ್ಷಿಸುವುದಕ್ಕೆ ಬಳಸಿದ ಚಿಕ್ಕ ವಾಹನ ಇದಷ್ಟೆ. ಇದನ್ನು ಬಾಹ್ಯಾಕಾಶ ಯಾನಕ್ಕೆ ಬೇಕಿರುವ ವ್ಯಾಪ್ತಿಯಲ್ಲಿ ಬೆಳೆಸಬೇಕು. ಇವತ್ತಿನ ಪರೀಕ್ಷೆಯ ಮರುಬಳಕೆ ವಾಹನವನ್ನು ಬಂಗಾಳಕೊಲ್ಲಿಯಲ್ಲಿ ಇಳಿಸಲಾಗಿದೆ, ಇಳಿಯುತ್ತಲೇ ಅದು ವಿಸರ್ಜನೆಗೊಂಡಿದೆ. ಅರ್ಥಾತ್, ಭೂ ವಾತಾವರಣದ ಮರು ಪ್ರವೇಶ ತಾಳಿಕೊಳ್ಳುವುದರಲ್ಲಿ ಯಶಸ್ವಿಯಾಗಿದ್ದೇವೆ. ಆದರೆ ವಾಹನವು ಭೂಮಿಯ ಮೇಲೆ ಕರಾರುವಾಕ್ ಆಗಿ ಇಳಿದು ದೃಢವಾಗಿ ನಿಲ್ಲುವುದೂ ಸೇರಿದಂತೆ ಹಲವು ಆಯಾಮಗಳು ಇನ್ನಷ್ಟೇ ಅಭಿವೃದ್ಧಿ ಹೊಂದಬೇಕಿವೆ.

ಇದು ಅಷ್ಟು ಸುಲಭಕ್ಕೆ ನಿಲುಕುವಂಥದ್ದೇನಲ್ಲ. ಆದರೆ ಹಾಲಿವುಡ್ ಚಿತ್ರವೊಂದರ ಬಜೆಟ್ ಗಿಂತ ಕಡಿಮೆ ವೆಚ್ಚದಲ್ಲಿ ಮಂಗಳಯಾನ ಮಾಡಿ ತೋರಿಸಿರುವ ಭಾರತ ಇಲ್ಲೂ ವಿಶ್ವಾಸ ಮೂಡಿಸಿದೆ ಎಂಬ ಅಭಿಪ್ರಾಯ ಕೇವಲ ನಮ್ಮದಲ್ಲ, ಜಗತ್ತಿನದ್ದು!

Leave a Reply