ಸಾರಾಯಿ ನಿಯಂತ್ರಣ- ಬಿಟ್ಟಿಭಾಗ್ಯಗಳ ಜಯಾ ವಚನ, ಉಗ್ರದಾಳಿಗೆ ಹುತಾತ್ಮರಾದರು ಪೋಲೀಸರು, ಇರಾನಿ- ಪ್ರಿಯಾಂಕಾ ಜಗಳ… ದಿನಾಂತ್ಯದ ಎಲ್ಲ ಸುದ್ದಿಗಳು

ಯೆಮೆನ್ ದೇಶದ ಸೇನೆ ಸೇರಲು ಸಾಲುಗಟ್ಟಿದ್ದ ಯುವಕರ ಮೇಲೆ ಐಸಿಸ್ ಉಗ್ರ ಸಂಘಟನೆಯ ಸೋಮವಾರ ಆತ್ಮಹತ್ಯೆ ಬಾಂಬ್ ದಾಳಿ ನಡೆಯಿತು. 49 ಮಂದಿ ಸತ್ತಿದ್ದಾರೆ. ವರ್ಷದ ಹಿಂದೆ ಈ ಉಗ್ರ ಹಾವಳಿಯ ಪ್ರದೇಶದಿಂದ ಭಾರತವು ತನ್ನ ನಾಗರಿಕರನ್ನೆಲ್ಲ ರಕ್ಷಿಸಿ ತಂದಿದ್ದನ್ನು ಸ್ಮರಿಸಬಹುದು.

ಜಯಾ ಪ್ರಮಾಣ, ಸಾರಾಯಿಗೆ ಕಡಿವಾಣ

ಇತ್ತೀಚಿನ ವಿಧಾನಸಭೆ ಚುನಾವಣೆಯಲ್ಲಿ ಐತಿಹಾಸಿಕ ಗೆಲುವು ದಾಖಲಿಸಿದ ಎಐಎಡಿಎಂಕೆ ಮುಖ್ಯಸ್ಥೆ ಜಯಲಲಿತಾ ಸೋಮವಾರ ಮುಖ್ಯಮಂತ್ರಿ ಹುದ್ದೆಗೆ ಪ್ರಮಾಣವಚನ ಸ್ವೀಕರಿಸಿದರು. ಪ್ರಣಾಳಿಕೆಯಲ್ಲಿ ನೀಡಿದ್ದ ಕೆಲ ಭರವಸೆಗಳ ಈಡೇರಿಕೆಯ ಯತ್ನಕ್ಕೂ ಈ ಪ್ರಮಾಣ ವಚನ ಸ್ವೀಕಾರ ಸಮಾರಂಭ ಸಾಕ್ಷಿಯಾಯಿತು. ರಾಜ್ಯದ ಸುಮಾರು 500 ಸಾರಾಯಿ ಅಂಗಡಿಗಳನ್ನು ಮುಚ್ಚುವುದಾಗಿ ಆದೇಶಿಸಿದ ಜಯಾ, ಎಲ್ಲ ಸಾರಾಯಿ ಅಂಗಡಿಗಳ ಸಮಯವನ್ನು ಎರಡು ತಾಸು ಕಡಿತಗೊಳಿಸಿದ್ದಾರೆ. ಬೆಳಗ್ಗೆ ಹತ್ತರಿಂದ ರಾತ್ರಿ ಹತ್ತರವರೆಗೆ ತೆರೆದಿರುತ್ತಿದ್ದ ಸಾರಾಯಿ ಅಂಗಡಿಗಳು ಈಗ ಮಧ್ಯಾಹ್ನ 12ರಿಂದ ಕಾರ್ಯಾರಂಭಗೊಳ್ಳುತ್ತವೆ. ಪ್ರಣಾಳಿಕೆಯಲ್ಲಿ ಹೇಳಿರುವ ಸಾರಾಯಿ ನಿಷೇಧ ಸಾಕಾರವಾಗಬೇಕಿದ್ದರೆ ರಾಜ್ಯದಲ್ಲಿ ಇನ್ನೂ 6220 ಸಾರಾಯಿ ಅಂಗಡಿಗಳನ್ನು ಮುಚ್ಚಬೇಕಿದ್ದು, ಇದನ್ನು ಹಂತ ಹಂತವಾಗಿ ಕೈಗೊಳ್ಳುವ ಭರವಸೆ ದೊರೆತಿದೆ.

ಇನ್ನು, ಜಯಾರ ಬಿಟ್ಟಿ ಭಾಗ್ಯ ಯೋಜನೆಗಳ ಅನುಷ್ಠಾನವೂ ಆರಂಭಗೊಂಡಿದೆ. ಎಲ್ಲ ಗೃಹಬಳಕೆ ವಿದ್ಯುತ್ ಗ್ರಾಹಕರಿಗೆ ಮೊದಲ 100 ಯುನಿಟ್ ಗಳಿಗೆ ಹಣವಿಲ್ಲ. ಸುಮಾರು 78 ಲಕ್ಷ ಗ್ರಾಹಕರಿಗೆ ಸಿಗಲಿರುವ ಈ ಭಾಗ್ಯದಿಂದ ರಾಜ್ಯ ಸರ್ಕಾರದ ಬೊಕ್ಕಸಕ್ಕೆ 1607 ಕೋಟಿ ರುಪಾಯಿಗಳ ಹೊರೆ ಬೀಳುತ್ತದೆ. ಅಂತೆಯೇ ಮಾರ್ಚ್ 31, 2016ರಿಂದ ಬಾಕಿಯಿರುವ, ಸಣ್ಣ ಮತ್ತು ಮಧ್ಯಮ ಹಂತದ ರೈತರ ಸಾಲಗಳು ಮನ್ನಾ ಆಗಲಿವೆ. ಇದರ ಹೊರೆ ₹5780 ಕೋಟಿಗಳು.ಅರ್ಹ ವಧುವಿಗೆ 8 ಗ್ರಾಂ ಚಿನ್ನ ಕೊಡುವ ಯೋಜನೆಯೂ ಶುರುವಾಗಿದೆ.

ಶ್ರೀನಗರದಲ್ಲಿ ಉಗ್ರದಾಳಿ, ಪೋಲೀಸರು ಹುತಾತ್ಮ

ಜಮ್ಮು-ಕಾಶ್ಮೀರದ ರಾಜಧಾನಿಯಲ್ಲಿ ರಾಜಕೀಯ ಸಂಘರ್ಷಗಳು ನಡೆದೇ ಇದ್ದರೂ ಮೂರು ವರ್ಷಗಳಲ್ಲಿ ಪ್ರಾಣಹಾನಿಯಾಗುವಂಥ ಉಗ್ರದಾಳಿಗಳು ಘಟಿಸಿರಲಿಲ್ಲ. ಆದರೆ ಸೋಮವಾರ ಹಿಜ್ಬುಲ್ ಮುಜಾಹಿದೀನ್ ಉಗ್ರರು ನಡೆಸಿದ ಎರಡು ಪ್ರತ್ಯೇಕ ದಾಳಿಗಳಲ್ಲಿ ಒಟ್ಟೂ ಮೂವರು ಪೋಲೀಸರು ಹತರಾಗಿದ್ದಾರೆ. ಪೋಲೀಸರ ರೈಫಲ್ ಗಳನ್ನೇ ಕಸಿದು ಗುಂಡಿಕ್ಕಿರುವ ಘಟನೆ ಅಸರುಕ್ಷತಾಭಾವವನ್ನು ಹೆಚ್ಚಿಸಿದೆ.

ಸ್ಮೃತಿ ಇರಾನಿ- ಪ್ರಿಯಾಂಕಾ ಚತುರ್ವೇದಿ ಟ್ವಿಟ್ಟರ್ ವಾರ್

ಕಾಂಗ್ರೆಸ್ಸಿನ ಪ್ರಿಯಾಂಕಾ ಚತುರ್ವೇದಿ ಹೀಗೊಂದು ಟ್ವೀಟ್ ಮಾಡಿದರು- ಸ್ಮೃತಿ ಇರಾನಿಯವರಿಗೆ ಆತಂಕದ ಗ್ರಹಿಕೆ ಇದೆ ಎಂದಾದಾಗ ಜಡ್ ಹಂತದ ಭದ್ರತೆ ಸಿಕ್ತು. ಆದರೆ ನಾನು ದಿನವೂ ಅತ್ಯಾಚಾರ/ಕೊಲೆ ಬೆದರಿಕೆಗಳನ್ನು ಎದುರಿಸುತ್ತಿದ್ದೇನೆ…

ನಂಗೆ ಜಡ್ ಸೆಕ್ಯುರಿಟಿ ಇಲ್ಲ ಅಂತ ಸ್ಮೃತಿ ಇರಾನಿಯವರಿಂದ ಮರುಟ್ವೀಟು.

ಪತ್ರಿಕಾ ವರದಿ ಆಧಾರದಲ್ಲಿ ಹೇಳ್ತಿದ್ದೇನೆ. ಅಂದ್ರೆ ಇರಾನಿಯವರಿಗೆ ಭದ್ರತೆ ಇಲ್ಲವಾ ಅಂತ ಟ್ವೀಟು ವಿಚಾರಣೆ ಮುಂದುವರಿಸಿದರು ಪ್ರಿಯಾಂಕಾ ಚತುರ್ವೇದಿ.

ಈ ಬಾರಿ ಇರಾನಿಗೆ ಆಕ್ರಮಣಶೀಲತೆ ಆವರಿಸಿತು. ಟ್ವೀಟು ಬರೆದರು- ಪ್ರಿಯಾಂಕಾ… ನಿಮಗೇಕೆ ನನ್ನ ಭದ್ರತೆ ಚಿಂತೆ? ಏನಾದರೂ ಆಯೋಜಿಸುತ್ತಿದ್ದೀರೇನು ಅಂತ ಕೆಣಕಿದರು. ಅರ್ಥಾತ್ ನೀವೇನಾದರೂ ತಮ್ಮ ಮೇಲೆ ದಾಳಿ ಆಯೋಜಿಸ್ತಿದೀರಾ ಎಂಬರ್ಥದಲ್ಲಿ.

ಪ್ರಿಯಾಂಕಾ ಚತುರ್ವೇದಿ ಏನ್ ಕಡಿಮೆ? ‘ಅದಕ್ಕೆಲ್ಲ ವ್ಯಯಿಸೋಕೆ ಸಮಯವಿಲ್ಲ. ಚಿಂತೆ ಮಾಡಿಕೊಳ್ಳದೇ ಯಾವುದಾದರೂ ವಿವಿ ಕ್ಯಾಂಪಸ್ಸಿನಲ್ಲಿ ಕೋಲಾಹಲ ಮಾಡಿಕೊಳ್ಳಿ’ ಅಂದ್ರು.

ಯುನಿವರ್ಸಿಟಿಯಲ್ಲಿ ಗದ್ದಲ ಎಬ್ಬಿಸೋದು ನಿಮ್ಮ ನಾಯಕ ರಾಹುಲ್ ಗಾಂಧಿಗೆ ಬಿಟ್ಟಿದ್ದು…ಓಹ್, ಪಾಪ ಅಸ್ಸಾಮಿನಲ್ಲಿ ಸೋತ್ರಲ್ಲವೇ.. ಒಳ್ಳೇದಾಗ್ಲಿ ಅಂತಂದ್ರು ಸ್ಮೃತಿ ಇರಾನಿ.

ಸೋತರೂ ಸಂಪುಟದಲ್ಲಿ ಸ್ಥಾನ ಪಡೆಯುವುದು ನಿಮ್ಮ ಆಟ. ನಿಮ್ಮ ದಿನವೂ ಅದ್ಭುತವಾಗಿರಲಿ ಅಂತ ಪ್ರಿಯಾಂಕಾ ಕುಟುಕಿದರು.

ಅಲ್ಲಿಗೆ ಇರಾನ್- ಭಾರತ ಒಪ್ಪಂದ, ಇಸ್ರೊ ಪರಾಕ್ರಮ ಇಂಥ ಸುದ್ದಿಗಳ ನಡುವೆ ಸ್ವಲ್ಪ ಭಿನ್ನ ಓದಿಗಿರಲಿ ಅಂತ ಈ ಹೆಂಗಳೆಯರ ಜಗಳ ಸ್ವಾರಸ್ಯವೂ ಸೋಮವಾರದ ಸುದ್ದಿಸಂತೆಯಲ್ಲಿ ಸೇರಿಕೊಂಡಿತು.

ದೆಹಲಿಯಲ್ಲಿ ಕರೆಂಟ್ ಕಡಿತ, ಆಪ್- ಕಂಪನಿಗಳ ಆರೋಪದಾಟ

ದೆಹಲಿಯಲ್ಲಿ ಸಿಕ್ಕಾಪಟ್ಟೆ ವಿದ್ಯುತ್ ಕಡಿತವಾಗುತ್ತಿದೆ. ಹೇಳಿಕೇಳಿ ಅಗ್ಗದ ವಿದ್ಯುತ್ ಮತ್ತು ವೈಫೈಗಳ ಭರವಸೆಯಲ್ಲಿ ಆಡಳಿತಕ್ಕೆ ಬಂದಿದ್ದ ಆಮ್ ಆದ್ಮಿ ಪಕ್ಷ ಈಗ, ವಿದ್ಯುತ್ ಕಂಪನಿಗಳನ್ನೇ ಈ ವ್ಯತ್ಯಯಕ್ಕಾಗಿ ದೂರುತ್ತಿದೆ. ಕಂಪನಿಗಳು ಹೇಳುತ್ತಿರುವ ಪ್ರಕಾರ ಹಿಂದಿನ ವರ್ಷದ ಮೇ ತಿಂಗಳಿಗೆ ಹೋಲಿಸಿದರೆ ಈ ಮೇ ತಿಂಗಳಿಗೆ ಸಾವಿರ ಮೆಗಾವ್ಯಾಟ್ ಬೇಡಿಕೆ ಹೆಚ್ಚಾಗಿದೆ. ಆದರೆ ಕೇಜ್ರಿವಾಲ್ ಸರ್ಕಾರದ ಮಂತ್ರಿಗಳ ಪ್ರಕಾರ ಬೇಡಿಕೆ ಸಮಸ್ಯೆಯೇ ಅಲ್ಲ. ಪವರ್ ಕಂಪನಿಗಳ ಅಕ್ಷಮತೆ, ವಿತರಣಾ ದೋಷಗಳೇ ಸಮಸ್ಯೆಗೆ ಕಾರಣ.

ಜಿಂಬಾಬ್ವೆ ಪ್ರವಾಸಕ್ಕೆ ಕ್ರಿಕೆಟ್ ತಂಡ ಪ್ರಕಟ

ಮುಂದಿನ ತಿಂಗಳ ಏಕದಿನ ಮತ್ತು ಟಿ20 ಸರಣಿಯ ಜಿಂಬಾಬ್ವೆ ಸರಣಿ ಪ್ರವಾಸಕ್ಕೆ ಮಹೇಂದ್ರ ಸಿಂಗ್ ಧೋನಿ ನೇತೃತ್ವ ವಹಿಸಲಿದ್ದಾರೆ. ವಿರಾಟ್ ಕೋಹ್ಲಿ, ರೋಹಿತ್ ಶರ್ಮ ಸೇರಿದಂತೆ ಪ್ರಮುಖ ಆಟಗಾರರಿಗೆ ಆಯ್ಕೆದಾರರರು ವಿರಾಮ ನೀಡಿದ್ದಾರೆ. ಇದರಿಂದಾಗಿ ಹರ್ಯಾಣಾ ಲೆಗ್ ಸ್ಪಿನ್ನರ್ ಯುಜವೇಂದ್ರ ಚಾಹಲ್, ಕರ್ನಾಟಕದ ಕರುಣಾ ನಾಯರ್ ಸೇರಿದಂತೆ ಹಲವರಿಗೆ ಅವಕಾಶ ಸಿಕ್ಕಿದೆ.

ತಂಡ ಹೀಗಿದೆ- ಎಂಎಸ್ ಧೋನಿ, ಕೆಎಲ್ ರಾಹುಲ್, ಮನೀಷ್ ಪಾಂಡೆ, ಕರುಣ್ ನಾಯರ್, ಅಂಬಟ್ಟಿ ರಾಯ್ಡು, ರಿಶಿ ಧವನ್, ಅಕ್ಸರ್ ಪಟೇಲ್, ಜಯಂತ್ ಯಾದವ್, ಜಸ್ಪೀತ್ ಬುಮ್ರಾಹ್, ಬಾರಿಂದರ್ ಸ್ರಾನ್, ಮಂದೀಪ್ ಸಿಂಗ್, ಕೇದಾರ್ ಜಾಧವ್, ಜಯದೇವ್ ಉಂದ್ಕಾತ್, ಯುಜವೇಂದ್ರ ಚಾಹಲ್.

ಪ್ರಧಾನಿ ನರೇಂದ್ರ ಮೋದಿಯವರ ಇರಾನ್ ಭೇಟಿ ಇಂದಿನ ಮುಖ್ಯಸುದ್ದಿ. ಅಮೆರಿಕ ಪ್ರಣೀತ ನಿರ್ಬಂಧ ತೆರವಾಗುತ್ತಲೇ ಭಾರತ- ಇರಾನುಗಳ ಸಂಬಂಧ ಅರಳುತ್ತಿರುವ ವಿಶ್ಲೇಷಣೆಯನ್ನು ನೀವಿಲ್ಲಿ ಓದಿ.

ಮರುಬಳಕೆಯೋಗ್ಯ ಬಾಹ್ಯಾಕಾಶ ವಾಹನದ ಪ್ರಯೋಗವನ್ನು ಇಸ್ರೊ ಯಶಸ್ವಿಗೊಳಿಸಿದೆ. ಇದರ ಮಹತ್ವ ಏನು ತಿಳಿದುಕೊಳ್ಳಿ.

ವಿಧಾನ ಪರಿಷತ್ ಮತ್ತು ರಾಜ್ಯಸಭೆಗಳ ಚುನಾವಣೆ ಹೊಸ್ತಿಲಲ್ಲಿದೆ ಕರ್ನಾಟಕ. ಮೂರೂ ಪಕ್ಷಗಳ ತೊಳಲಾಟದ ಚಿತ್ರಣ ಇಲ್ಲಿದೆ. ಬಿಜೆಪಿಯಲ್ಲಿ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳುವ ಅಧಿಕಾರವೆಲ್ಲ ಕೇವಲ ಯಡಿಯೂರಪ್ಪ ಬಳಿಯಲ್ಲಿದೆ ಅಂತ ನೀವಂದುಕೊಂಡಿದ್ರೆ ಅದು ತಪ್ಪು. ಯಾಕಂತ ಇಲ್ಲಿ ಓದಿ..

ಹಾಲಿಗೆ ಅರಿಶಿನ ಬೆರೆಸಿ ಕುಡಿಯೋದು ಅಮ್ಮನ ರೆಸಿಪಿ ಅಂತ ನೀವಂದುಕೊಂಡಿರಬಹುದು. ಆದರೆ ಟರ್ಮರಿಕ್ ಲಾಟ್ಟೆ ಎಂಬ ಹೆಸರಲ್ಲಿ ಅದು ಪಾಶ್ಚಾತ್ಯರ ಕಾಫಿ ಬಾರುಗಳಲ್ಲಿ ಕಾಫಿಗೇ ಪೈಪೋಟಿ ಕೊಡುತ್ತಿದೆ ಅನ್ನೋದು ಗೊತ್ತೇನು?

Leave a Reply