ಆದಾಯ ಹಂಚಿಕೆಯಲ್ಲಿ ರಾಜ್ಯಗಳಿಗೆ ಸಿಕ್ಕಿಲ್ಲ ಪೂರ್ಣ ಪಾಲು, ₹ 81 ಸಾವಿರ ಕೋಟಿ ಬಾಕಿ ಉಳಿಸಿಕೊಂಡಿದೆ ಕೇಂದ್ರ

ಡಿಜಿಟಲ್ ಕನ್ನಡ ಟೀಮ್

ಆಗಾಗ್ಗೆ ಕೇಂದ್ರದಿಂದ ರಾಜ್ಯಗಳಿಗೆ ಸಿಗುವ ಅನುದಾನ ಕುರಿತ ತಿಕ್ಕಾಟ ನೋಡುತ್ತಲೇ ಇರ್ತಿವಿ. ಈಗ ಮಹಾಲೇಖಪಾಲರ ವರದಿಯಲ್ಲಿ ಕಂಡು ಬಂದಿರೋ ಮಹತ್ವದ ಅಂಶ ಏನಂದ್ರೆ, ಹತ್ತು ವರ್ಷಗಳ ಕಾಲಾವಧಿಯಲ್ಲಿ ಕೇಂದ್ರ ಸರ್ಕಾರದಿಂದ ರಾಜ್ಯಗಳಿಗೆ ಸಿಗಬೇಕಿದ್ದ ಆದಾಯ ಹಂಚಿಕೆಯಲ್ಲಿನ ಪಾಲು ಪೂರ್ಣ ಪ್ರಮಾಣದಲ್ಲಿ ಸಿಕ್ಕಿಲ್ಲ. ಪ್ರತಿ ವರ್ಷವೂ ಒಂದಿಲ್ಲೊಂದು ಕಾರಣ ಹೇಳಿ ಕೇಂದ್ರ ಪಾಲು ನೀಡುವಿಕೆಯಲ್ಲಿ ಬಾಕಿ ಉಳಿಸಿಕೊಂಡಿದೆ ಅಂತ.

ಸಂವಿಧಾನದ ಅನುಚ್ಛೇದ 279 (1) ಪ್ರಕಾರ ಮಹಾಲೇಖಪಾಲರ (ಸಿಎಜಿ) ವರದಿಯಲ್ಲಿ ಕೇಂದ್ರ ಮತ್ತು ರಾಜ್ಯಗಳ ನಡುವೆ ಆದಾಯ ಹಂಚಿಕೆಯ ಕುರಿತು ವಿಶ್ಲೇಷಣೆ ನಡೆಸಿ ಪ್ರಮಾಣೀಕರಿಸಬೇಕಿದೆ. ಈಗ ಸಿಎಜಿ ವರದಿಯಲ್ಲಿ ಕಂಡು ಬಂದಿರುವ ಮಹತ್ವದ ಮಾಹಿತಿ ಅಂದರೆ, 1996-97 ಸಾಲಿನಿಂದ 2014-15 ರವರೆಗೂ ಹತ್ತು ವರ್ಷ ಕೇಂದ್ರ ಸರ್ಕಾರ ಸುಮಾರು ₹ 81 ಸಾವಿರ ಕೋಟಿ ಬಾಕಿ ಉಳಿಸಿಕೊಂಡಿದೆ. ಆ ಪೈಕಿ ಪ್ರಮುಖವಾಗಿ 2006-07ರಲ್ಲಿ ಸುಮಾರು ₹ 10 ಸಾವಿರ ಕೋಟಿ, 2014-15 ರಲ್ಲಿ ₹ 17 ಸಾವಿರ ಕೋಟಿ ಹಣವನ್ನು ಬಾಕಿ ಉಳಿಸಿಕೊಂಡಿದೆ. ಹೀಗೆ ಪ್ರತಿ ವರ್ಷವೂ ಕೇಂದ್ರ ರಾಜ್ಯಗಳಿಗೆ ನೀಡುವ ಪಾಲಿನಲ್ಲಿ ಬಾಕಿ ಉಳಿಸಿಕೊಳ್ಳುತ್ತಿದೆ.

ಈ ಹಿಂದೆ ಕೃಷಿ ಮತ್ತು ಕೇಂದ್ರ ಅಬಕಾರಿ ತೆರಿಗೆಯಲ್ಲಿ ಮಾತ್ರ ರಾಜ್ಯಗಳಿಗೆ ಪಾಲು ನೀಡಬೇಕಿತ್ತು. 1996 ರಲ್ಲಿ ಸಂವಿಧಾನದ 80ನೇ ತಿದ್ದುಪಡಿಯಲ್ಲಿ ವಿಶೇಷ ಬದಲಾವಣೆ ಮಾಡಲಾಯಿತು. ಆನಂತರ ಕೇಂದ್ರ ಕಾರ್ಪೊರೇಟ್ ತೆರಿಗೆ, ಆಮದು ತೆರಿಗೆ ಮತ್ತು ಸೇವಾ ತೆರಿಗೆಗಳ ಆದಾಯದಲ್ಲೂ ರಾಜ್ಯಗಳಿಗೆ ಪಾಲು ನೀಡಬೇಕೆಂಬ ಹೊಸ ಕಾನೂನು ಜಾರಿಗೊಳಿಸಲಾಯಿತು.

ಈ ತಿದ್ದುಪಡಿಯ ಕುರಿತಂತೆ ಕೆಲವು ಗೊಂದಲಗಳು ಉಳಿದ ಪರಿಣಾಮ ಸಿಎಜಿ ಈ ಆದಾಯ ಹಂಚಿಕೆ ಕುರಿತಂತೆ ವಿಶ್ಲೇಷಣೆ ನಡೆಸಿ ಪ್ರಮಾಣೀಕರಿಸುವ ಪರಿಪಾಠವನ್ನು ಕೆಲವು ವರ್ಷಗಳ ಹಿಂದೆಯೇ ನಿಲ್ಲಿಸಿದೆ. ಆದರೆ ಈ ಕುರಿತ ಮಾಹಿತಿಯನ್ನು ವರದಿಯಲ್ಲಿ ಮಾತ್ರ ತಿಳಿಸುತ್ತಿದೆ. 1996-97 ರಿಂದ ಆದಾಯ ತೆರಿಗೆ ಮತ್ತು ಆಮದು ತೆರಿಗೆ ಹಂಚಿಕೆ ಬಗ್ಗೆ ಯಾವುದೇ ಪ್ರಮಾಣ ಪತ್ರ ನೀಡಲಾಗಿಲ್ಲ. 1999-2000 ದಿಂದ ಪರೋಕ್ಷ ತೆರಿಗೆ, 2005-06ರಿಂದ ನೇರ ತೆರಿಗೆ ಹಂಚಿಕೆ ಬಗ್ಗೆ ಯಾವುದೇ ಪ್ರಮಾಣಪತ್ರ ನೀಡಲಾಗಿಲ್ಲ. 2009 ರ ನಂತರ ಸಿಎಜಿ ಈ ಕುರಿತ ಪ್ರಮಾಣ ಪತ್ರ ನೀಡುವ ಕಾರ್ಯವನ್ನೇ ನಿಲ್ಲಿಸಿದೆ.

ಈ ಆದಾಯ ಹಂಚಿಕೆಯಲ್ಲಿ ಕೇಂದ್ರದ ಬಾಕಿ ಉಳಿಸಿಕೊಂಡಿರುವ ಪೈಕಿ ಈ ಹಿಂದಿನ ಸರ್ಕಾರಗಳ ಹೊಣೆಗಾರಿಕೆ ಹೆಚ್ಚಾಗಿರುವುದು ಮೇಲ್ನೋಟಕ್ಕೆ ಕಾಣುತ್ತದೆ. ಆದರೆ ಪ್ರಸ್ತುತ ಸರ್ಕಾರ ಈ ಬಗ್ಗೆ ಸೂಕ್ತ ನಿರ್ಧಾರ ಕೈಗೊಳ್ಳುವ ಅಗತ್ಯವಿದೆ.

Leave a Reply